ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಫಿಯಾ’ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯ ಗರಿ

Last Updated 2 ನವೆಂಬರ್ 2018, 20:00 IST
ಅಕ್ಷರ ಗಾತ್ರ

ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಈಚೆಗಷ್ಟೇ ಪ್ರಕಟ ಆಗಿದೆ. ಅದರಲ್ಲಿ ‘ಸೋಫಿಯಾ’ ಕೊಂಕಣಿ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ತೆರೆಕಂಡಿದ್ದ ‘ಸೋಫಿಯಾ’ ಚಿತ್ರವನ್ನು ಹ್ಯಾರಿ ಫರ್ನಾಂಡಿಸ್‌ ನಿರ್ದೇಶಿಸಿದ್ದರೆ; ಜಾನೆಟ್‌ ‍ಪ್ರೊಡಕ್ಷನ್‌ ಈ ಸಿನಿಮಾವನ್ನು ನಿರ್ಮಿಸಿತ್ತು.

ಬಹುಭಾಷಾ ತಾರೆ ಎಸ್ತರ್‌ ನರೋನ್ಹ ‘ಸೋಫಿಯಾ’ ಚಿತ್ರದ ನಾಯಕಿ. ಅವರ ತಾಯಿ ಜಾನೆಟ್‌ ನರೋನ್ಹ ಈ ಸಿನಿಮಾದ ನಿರ್ಮಾಪಕಿ. ಎಲ್ಟನ್‌ ಮಸ್ಕರೇನಸ್‌ ಚಿತ್ರದ ನಾಯಕನಟ. ಸದ್ಯ ಕೊಂಕಣಿ ಚಿತ್ರವೊಂದರಲ್ಲಿ ಬ್ಯುಸಿ ಆಗಿರುವ ನಟಿ ಎಸ್ತರ್‌ ನರೋನ್ಹ, ಶೋ ಒಂದರ ಸಲುವಾಗಿ ಈಗ ದುಬೈನಲ್ಲಿ ಬೀಡುಬಿಟ್ಟಿದ್ದಾರೆ. ‘ಜಾನೆಟ್‌ ಪ್ರೊಡಕ್ಷನ್‌ನಿಂದ ನಿರ್ಮಾಣಗೊಂಡಿದ್ದ ಪ್ರಥಮ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರಕಿರುವುದು ತುಂಬ ಖುಷಿ ತಂದಿದೆ’ ಎನ್ನುವ ಎಸ್ತರ್‌ ಅದನ್ನು ಹಂಚಿಕೊಂಡಿದ್ದು ಹೀಗೆ:

‘ಪಾಮ್ ಜುಮೇರಾದಲ್ಲಿ ನನ್ನದೊಂದು ಶೋ ಇತ್ತು. ಅದಕ್ಕೆಂದೇ ನಾನು ಮತ್ತು ಅಮ್ಮ ಅ.25ರಂದು ದುಬೈಗೆ ಬಂದೆವು. ಆ ದಿನ ಸಂಜೆಯೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟ ಆಗಿತ್ತು. ಅದರಲ್ಲಿ ‘ಸೋಫಿಯಾ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿ ದೊರಕಿರುವ ವಿಚಾರ ಮಂಗಳೂರಿನ ನನ್ನ ಸ್ನೇಹಿತರಿಂದ ತಿಳಿಯಿತು. ಆಗ ನನಗೆ ಆದ ಸಂತಸ ಅಷ್ಟಿಷ್ಟಲ್ಲ. ಯಾಕಂದ್ರೆ ನನ್ನ ತಾಯಿ ಜಾನೆಟ್‌ ನರೋನ್ಹ ಅವರು ಪ್ರೊಡಕ್ಷನ್ ಹೌಸ್ ಶುರುಮಾಡಿದ ನಂತರ ರೂಪಿಸಿದ ಮೊದಲ ಕೊಂಕಣಿ ಚಿತ್ರ ‘ಸೋಫಿಯಾ’. ಆ ಚಿತ್ರಕ್ಕೆ ಅವಾರ್ಡ್‌ ಸಿಕ್ಕಿದ್ದು ನನಗೆ ಡಬಲ್‌ ಖುಷಿ ಕೊಟ್ಟಿತು’.

‘ಸೋಫಿಯಾ’ ಬಿಡುಗಡೆಯಾಗಿ 50 ದಿನಗಳನ್ನು ಪೂರೈಸಿದ ಚಿತ್ರ. ಸದಭಿರುಚಿಯಿಂದ ಕೂಡಿದ್ದ ಈ ಸಿನಿಮಾ ಸಾಕಷ್ಟು ಸಿನಿಪ್ರಿಯರ ಗಮನ ಸೆಳೆದಿತ್ತು. ‘ಚಿತ್ರಕ್ಕೆ ಪ್ರಶಸ್ತಿ ಬರಬಹುದು ಎಂದು ನಿರೀಕ್ಷಿಸಿದ್ದಿರಾ?’ ಎಂದರೆ, ‘ಹೌದು. ಅಂತಹದ್ದೊಂದು ಸಣ್ಣ ಆಸೆ ಇತ್ತು’ ಎನ್ನುತ್ತಾರೆ ಎಸ್ತರ್‌.

‘ಸೋಫಿಯಾ ಚಿತ್ರ ಮಾಡುವಾಗ ನೂರಾರು ಜನರು ನೂರಾರು ರೀತಿಯ ಅಭಿಪ್ರಾಯ ಮಂಡಿಸಿದರು. ಆದರೆ, ಚಿತ್ರ ಬಿಡುಗಡೆ ಆದ ನಂತರ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಿನಿಮಾ ನೋಡಿದ ಅನೇಕರು ಒಳ್ಳೆ ಸಿನಿಮಾ ಮಾಡಿದ್ದೀರಾ ಎಂಬ ಕಮೆಂಟ್ಸ್‌ ಕೊಟ್ಟರು. ಸಿನಿಮಾ 50 ದಿನಗಳ ಕಾಲ ಓಡಿತು. ವಿವಿಧೆಡೆ 400 ಶೋಗಳನ್ನು ಪೂರೈಸಿತು. ‘ಸೋಫಿಯಾ’ ಚಿತ್ರಕ್ಕೆ ಪ್ರಶಸ್ತಿ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇರಲಿಲ್ಲ. ಆದರೆ, ಮನದ ಮೂಲೆಯಲ್ಲಿ ಆಸೆಯಂತೂ ಇದ್ದೇ ಇತ್ತು. ಆ ಆಸೆ ಈಗ ಕೈಗೂಡಿದೆ. ಪ್ರಾದೇಶಿಕ ಸಿನಿಮಾ ಕೆಟಗರಿಯಲ್ಲಿ ಬ್ಯಾರಿ, ತುಳು, ಕೊಂಕಣಿ, ಕೊಡವ ಭಾಷೆಯ ಸಿನಿಮಾಗಳು ಸ್ಪರ್ಧೆಯಲ್ಲಿರುತ್ತವೆ. ಅವೆಲ್ಲವನ್ನೂ ಹಿಂದಿಕ್ಕಿ ‘ಸೋಫಿಯಾ’ ಚಿತ್ರ ಪ್ರಶಸ್ತಿಗೆ ಪಾತ್ರವಾಗಿರುವುದು ತುಂಬ ಖುಷಿ ಅನಿಸುತ್ತಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಎಸ್ತರ್‌.

‘ಸೋಫಿಯಾ’ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ. ಹಾಗಂತ, ಈ ಸಿನಿಮಾವನ್ನು ಮತ್ತೊಮ್ಮೆ ತೆರೆ ಕಾಣಿಸುವ ಯೋಜನೆ ಜಾನೆಟ್‌ ಪ್ರೊಡಕ್ಷನ್‌ಗೆ ಇಲ್ಲವಂತೆ.

‘ಸೋಫಿಯಾ’ ಚಿತ್ರವನ್ನು ರೀ–ರಿಲೀಸ್‌ ಮಾಡುವ ಯೋಚನೆ ಸದ್ಯಕ್ಕಿಲ್ಲ. ಏಕೆಂದರೆ ನಮ್ಮ ಬ್ಯಾನರ್‌ನಲ್ಲೇ ಹೊಸದೊಂದು ಕೊಂಕಣಿ ಚಿತ್ರ ಮಾಡಿದ್ದೇವೆ. ಇಡೀ ಚಿತ್ರವನ್ನು ಗೋವಾದಲ್ಲೇ ಚಿತ್ರೀಕರಿಸಲಾಗಿದೆ. ಟಾಲಿವುಡ್‌ನ ನೊಯೆಲ್‌ ಶಾನ್‌ ಚಿತ್ರ ನಾಯಕನಟ. ಜಾಕಿಶ್ರಾಫ್‌ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಾನು ನಾಯಕಿಯ ಪಾತ್ರ ನಿರ್ವಹಿಸಿದ್ದೇನೆ. ಜತೆಗೆ ಗೋವಾದ ಖ್ಯಾತ ಕಲಾವಿದರೆಲ್ಲರೂ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಶೂಟಿಂಗ್ ಮುಗಿದಿದ್ದು, ಈಗ ಪ್ರೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 2019ಕ್ಕೆ ಚಿತ್ರವನ್ನು ತೆರೆ ಕಾಣಿಸುವ ಯೋಜನೆ ಇದೆ. ನಮ್ಮ ಬ್ಯಾನರ್‌ನಲ್ಲೇ ಮತ್ತೊಂದು ಹೊಸ ಸಿನಿಮಾ ಬರುತ್ತಿರುವ ಕಾರಣ ಹಳೆ ಚಿತ್ರವನ್ನು ಮತ್ತೆ ಬಿಡುಗಡೆ ಮಾಡುವುದಿಲ್ಲ. ಏಕೆಂದರೆ, ‘ಸೋಫಿಯಾ’ ಚಿತ್ರ ಥಿಯೇಟರ್‌ನಲ್ಲಿ ಈಗಾಗಲೇ 50 ದಿನ ಓಡಿದೆ. ಜತೆಗೆ ಕರಾವಳಿ ಭಾಗದ ಹಳ್ಳಿಗಳು, ಪಟ್ಟಣ, ನಗರಗಳ ಜತೆಗೆ ದುಬೈ, ಶಾರ್ಜಾ, ಇಸ್ರೇಲ್, ಅಬುದಾಬಿ, ಯುಕೆ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹೀಗೆ ಹಲವಾರು ದೇಶಗಳಲ್ಲಿ ಒಟ್ಟು 400 ಶೋ ಮಾಡಿದ್ದೇವೆ. ಹಾಗಾಗಿ, ಕೊಂಕಣಿ ಸಿನಿಪ್ರಿಯರೆಲ್ಲರೂ ಈ ಸಿನಿಮಾ ನೋಡಿಯಾಗಿದೆ’ ಎನ್ನುತ್ತಾರೆ ಎಸ್ತರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT