ಬುಧವಾರ, ಜನವರಿ 22, 2020
16 °C

ರಣಂ ಕಥನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೈತರು ಬೆಳೆದ ಫಸಲಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಸೂಕ್ತ ಮಾರುಕಟ್ಟೆ ಸೌಲಭ್ಯವೂ ಇಲ್ಲ. ಸರ್ಕಾರಗಳು ಬದಲಾದರೂ ಸಮಸ್ಯೆಗಳು ಪರಿಹಾರ ಕಂಡಿಲ್ಲ. ಅವರ ಬದುಕು ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಿದೆ. ಇದರ ಸುತ್ತವೇ ‘ರಣಂ’ ಚಿತ್ರದ ಕಥೆ ಹೆಣೆಯಲಾಗಿದೆಯಂತೆ.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. ವಿ. ಸಮುದ್ರ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಹದಿನಾಲ್ಕು ಚಿತ್ರಗಳಿಗೆ ಕೆಲಸ ಮಾಡಿರುವ ಅವರಿಗೆ ಇದು ಮೊದಲ ಚಿತ್ರ.

ಚಿತ್ರದಲ್ಲಿ ನಟ ಚೇತನ್ ಅವರದು ಸ್ವಾತಂತ್ರ್ಯ ಹೋರಾಟಗಾರನ ಪಾತ್ರವಂತೆ. ‘ನಾನು ದೈನಂದಿನ ಬದುಕಿನಲ್ಲಿ ರೈತರ ಪರವಾಗಿ ಹೋರಾಟ ಮಾಡುತ್ತೇನೆ. ರೀಲ್‌ ಲೈಫ್‌ನಲ್ಲೂ ಅಂತಹದ್ದೇ ಪಾತ್ರ ಸಿಕ್ಕಿರುವುದು ಖುಷಿಕೊಟ್ಟಿದೆ’ ಎಂದು ಹೇಳಿಕೊಂಡರು.

ಸಮಾಜದಲ್ಲಿ ರೈತರ ಬಗ್ಗೆ ತಾತ್ಸಾರ ಮುಂದುವರಿದಿದೆ. ಅವರ ಸಮಸ್ಯೆಗಳ ಪರಿಹಾರಕ್ಕೆ ಯಾರೊಬ್ಬರೂ ಮುಂದಾಗುವುದಿಲ್ಲ. ಈ ನಡುವೆಯೇ ಅನ್ನದಾತರ ಸಂಕಷ್ಟ ಅರಿತುಕೊಂಡು ಯುವಕರ ಪಡೆಯೊಂದು ಅವರ ಪರವಾಗಿ ಹೋರಾಟಕ್ಕೆ ಇಳಿಯುವುದೇ ಈ ಚಿತ್ರದ ಕಥಾಹಂದರ.

ಬೆಂಗಳೂರು, ಚಿಂತಾಮಣಿ, ಮಡಿಕೇರಿ, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಗಿದೆ. 

ನಟ ಚಿರಂಜೀವಿ ಸರ್ಜಾ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಆಗಿ ಬಣ್ಣ ಹಚ್ಚಿದ್ದಾರೆ. ನಟಿ ವರಲಕ್ಷ್ಮಿ ಶರತ್‍ಕುಮಾರ್ ಅವರದು ಸಿಬಿಐ ಅಧಿಕಾರಿಯ ಪಾತ್ರ. ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಹಾಸನದ ದಂತ ವೈದ್ಯೆ ಡಾ.ನೀತು ಗೌಡ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

ಆರ್. ಶ್ರೀನಿವಾಸ್‌ ಬಂಡವಾಳ ಹೂಡಿದ್ದಾರೆ. ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ. ರವಿಶಂಕರ್‌ ಸಂಗೀತ ಸಂಯೋಜಿಸಿದ್ದಾರೆ. ಮನೋಚಿತ್ರ, ಪ್ರೀತಿ ಶರ್ಮ, ಹರೀಶ್, ಪ್ರವೀಣ್, ಶ್ರೀಕಾಂತ್, ಅಭಿರಾಮ್‌ ತಾರಾಗಣದಲ್ಲಿದ್ದಾರೆ. ಇದೇ ವೇಳೆ ಚಿತ್ರದ ಆಡಿಯೊ ಬಿಡುಗಡೆ ಮಾಡಲಾಯಿತು.

ಪ್ರತಿಕ್ರಿಯಿಸಿ (+)