ಗುರುವಾರ , ಸೆಪ್ಟೆಂಬರ್ 23, 2021
21 °C

ಸಾಹಸ ಚಿತ್ರೀಕರಣ; ಬಿಗಿ ಮಾರ್ಗಸೂಚಿ ರೂಪಿಸಿದ ವಾಣಿಜ್ಯ ಮಂಡಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಲನಚಿತ್ರ ಚಿತ್ರೀಕರಣದ ವೇಳೆ ಅವಘಡಗಳು ಸಂಭವಿಸುವುದನ್ನು ತಪ್ಪಿಸುವ ಸಲುವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾರ್ಗಸೂಚಿ ರೂಪಿಸಿದೆ. 

ಇತ್ತೀಚೆಗೆ ರಾಮನಗರ ಸಮೀಪ ಜೋಗರಪಾಳ್ಯದಲ್ಲಿ ‘ಲವ್‌ಯೂ ರಚ್ಚು’ ಚಿತ್ರೀಕರಣದ ವೇಳೆ ಸಾಹಸ ಕಲಾವಿದ ವಿವೇಕ್‌ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿ ನಿಯಮ ರೂಪಿಸಿದೆ. ಚಿತ್ರ ನಿರ್ಮಾಣದ 15 ವಿಭಾಗಗಳ ಪ್ರತಿನಿಧಿಗಳು, ನಿರ್ಮಾಪಕರು, ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಸಭೆಯಲ್ಲಿ ಈ ನಿಯಮಗಳನ್ನು ರೂಪಿಸಲಾಗಿದೆ. ಮಂಡಳಿಯ ಗೌರವಾಧ್ಯಕ್ಷ ಸಾ.ರಾ.ಗೋವಿಂದು, ಅಧ್ಯಕ್ಷ ಡಿ.ಆರ್‌. ಜೈರಾಜ್‌ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ಪ್ರಕಟಿಸಿದರು. 

ಏನೇನು ನಿಯಮ?

ಸಾಹಸ ಕಲಾವಿದರು ಸೇರಿದಂತೆ ಎಲ್ಲ ವಿಭಾಗಗಳ ಕಾರ್ಮಿಕರು ಕಡ್ಡಾಯವಾಗಿ ವಿಮಾ ಸುರಕ್ಷೆ ಮಾಡಿಸಿಕೊಂಡಿರಬೇಕು. ವಿಮಾ ಸೌಲಭ್ಯ ಇರುವ ಕಲಾವಿದರನ್ನಷ್ಟೇ ಚಿತ್ರೀಕರಣದಲ್ಲಿ ಬಳಸಿಕೊಳ್ಳಬೇಕು.

ಸಾಹಸ ದೃಶ್ಯ, ಅಪಾಯಕಾರಿ ಸನ್ನಿವೇಶಗಳ ಚಿತ್ರೀಕರಣದ ಸ್ಥಳದಲ್ಲಿ ಅಂಬುಲೆನ್ಸ್‌, ವೈದ್ಯರು, ದಾದಿಯರು ಇರಲೇಬೇಕು. ನಿರ್ಮಾಪಕರು ಈ ಸೌಲಭ್ಯ ಕಲ್ಪಿಸಿರಬೇಕು.

ಅಪಾಯಕಾರಿ ಸನ್ನಿವೇಶ ಚಿತ್ರಿಸುವಾಗ ನುರಿತ ತಂತ್ರಜ್ಞರು, ಕಲಾವಿದರನ್ನಷ್ಟೇ ಬಳಸಿಕೊಳ್ಳಬೇಕು. ಚಿತ್ರತಂಡದ ಎಲ್ಲ ಸದಸ್ಯರಿಗೂ ನಿರ್ಮಾಪಕರು ಗುಂಪು ವಿಮೆ ಮಾಡಿಸಿರಬೇಕು. 

ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಫೈಟರ್ಸ್‌, ಇತರ ವಿಭಾಗಗಳ ಸದಸ್ಯರು ತಾವು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುವುದಾಗಿ ಒಪ್ಪಿದ ಒಪ್ಪಂದ ಪತ್ರಕ್ಕೆ ಸಹಿ ಹಾಕಿ ಸಲ್ಲಿಸಬೇಕು. 

ಯಾವುದೇ ನಾಯಕ ಅಥವಾ ಕಲಾವಿದ ತನ್ನದೇ ಪರಿಕಲ್ಪನೆಯ ಸಾಹಸ ಮಾಡುವುದಿದ್ದರೂ ಅದನ್ನು ಫೈಟ್‌ ಮಾಸ್ಟರ್‌ ಮಾರ್ಗದರ್ಶನದಲ್ಲೇ ಮಾಡಿ ಚಿತ್ರೀಕರಿಸಬೇಕು. ಸಾಹಸ ದೃಶ್ಯಗಳಿಗೆ ಸಂಬಂಧಿಸಿ ಫೈಟ್‌ ಮಾಸ್ಟರ್‌ನ ಹೆಸರನ್ನು ಮಾತ್ರ ಉಲ್ಲೇಖಿಸಬೇಕು.

ಚಿತ್ರೀಕರಣದ ಸಂದರ್ಭದಲ್ಲಿ ಯಾವುದೇ ಕಾರ್ಮಿಕರಿಗೆ ತೊಂದರೆ ಆದಲ್ಲಿ ಅದಕ್ಕೆ ಆಯಾ ವಿಭಾಗದ ಮುಖ್ಯಸ್ಥರೇ ನೇರ ಹೊಣೆಯಾಗುತ್ತಾರೆ. 

ಚಿತ್ರೀಕರಣದ ಸಂದರ್ಭದಲ್ಲಿ ಸುರಕ್ಷತಾ ನಿಯಮಗಳನ್ನು ಭಾರತೀಯ ದಂಡ ಸಂಹಿತೆಯಲ್ಲೇ ಅಳವಡಿಸಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ನಿರ್ಮಾಪಕರಿಗೆ ಎಚ್ಚರಿಸಿದ್ದರು. ಈ ನಡುವೆ ವಾಣಿಜ್ಯ ಮಂಡಳಿಯಿಂದಲೂ ಸ್ವಯಂ ಮಾರ್ಗಸೂಚಿಗಳನ್ನು ರೂಪಿಸಿ ಸಲಹೆ ನೀಡುವಂತೆಯೂ ಅವರು ಸೂಚಿಸಿದ್ದರು. 

ಈ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಡಿ.ಆರ್. ಜೈರಾಜ್‌ ತಿಳಿಸಿದರು. 

ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ನಿರ್ಮಾಪಕ ಕೆ. ಮಂಜು, ಗೌರವ ಕಾರ್ಯದರ್ಶಿ ಎನ್‌.ಎಂ. ಸುರೇಶ್‌, ಸಾಹಸ ಕಲಾವಿದರಾದ ಥ್ರಿಲ್ಲರ್‌ ಮಂಜು, ಡಿಫರೆಂಟ್‌ ಡ್ಯಾನಿ, ರವಿವರ್ಮ ಇತರರು ಇದ್ದರು.

ಗುರು ದೇಶಪಾಂಡೆ ಸಂಪರ್ಕಿಸಿಲ್ಲ

ವಿವೇಕ್‌ ಸಾವಿನ ಬಳಿಕ ಚಿತ್ರತಂಡದ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಅವರ ತಾಯಿ ಜಿ. ಉಮಾ ಹೇಳಿದರು. ವಾಣಿಜ್ಯ ಮಂಡಳಿಯಲ್ಲಿ ತಮ್ಮ ಅಳಲು ತೋಡಿಕೊಂಡ ಅವರು, ‘ನಿರ್ಮಾಪಕ ಗುರು ದೇಶಪಾಂಡೆ ಅವರಾಗಲಿ ಅಥವಾ ಬೇರೆ ಯಾರೂ ಕೂಡಾ ತಮ್ಮನ್ನು ಸಂಪರ್ಕಿಸಿಲ್ಲ. ₹ 10 ಲಕ್ಷ ಪರಿಹಾರ ಕೊಡುತ್ತೇವೆ ಎಂದು ಯಾರೂ ತಮಗೆ ಹೇಳಿಲ್ಲ. ಮಗನ ಸಾವಿಗೆ ನ್ಯಾಯ ದೊರಕಬೇಕು. ಅದಕ್ಕಾಗಿ ಇಲ್ಲಿಗೆ ಬಂದಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವರಿಕೆ ಮಾಡಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು