ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತರ’ ಹುಡುಕುತ್ತಾ ವಿಕ್ರಾಂತ್‌ ರೋಣ! ಕಿಚ್ಚ ಸುದೀಪ್ ಸಂದರ್ಶನ

Last Updated 22 ಜುಲೈ 2022, 7:39 IST
ಅಕ್ಷರ ಗಾತ್ರ

‘ವಿಕ್ರಾಂತ್‌ ರೋಣ’ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಅಭಿನಯ ಚಕ್ರವರ್ತಿ ಸುದೀಪ್‌ ‘ಉತ್ತರ’ದತ್ತಲೂ ಚಿತ್ತ ಹರಿಸಿದ್ದಾರೆ. ಕಿಚ್ಚನಿಗೆ ಮತ್ತೆ ಗ್ರೇ ಶೇಡ್‌ ಪಾತ್ರಗಳ ನೆನಪು ಕಾಡಿದೆ. ಸಿನಿಮಾ ಪುರವಣಿಯೊಂದಿಗೆ ಮಾತಿಗಿಳಿಯುತ್ತಾ ಕಾಲ್ಪನಿಕ ಲೋಕದಲ್ಲಿ ನಡೆದು ವಿಕ್ರಾಂತ್‌ ರೋಣನ ಲೋಕವನ್ನು ಪರಿಚಯಿಸಿದ್ದಾರೆ.

‘ವಿಕ್ರಾಂತ್‌ ರೋಣ’ ಸುದೀಪ್‌ ಸಿನಿಜೀವನದ ಹೊಸ ಅಧ್ಯಾಯವೇ?

ಹಾಗೇನಿಲ್ಲ. ‘ವಿಕ್ರಾಂತ್‌ ರೋಣ’ ಸಿನಿಮಾವನ್ನು ನಾನು ಒತ್ತಡವಾಗಿ ತೆಗೆದುಕೊಳ್ಳುವುದಿಲ್ಲ. ಬಜೆಟ್‌ ಇಷ್ಟಾಗಿದೆ, ಹೇಗೆ ಇದನ್ನು ಕ್ಯಾರಿ ಮಾಡಲಿ ಎಂದು ಯೋಚಿಸುವುದಿಲ್ಲ. ನಾಳೆ ನಾನು ಇದಕ್ಕಿಂತ ಕಡಿಮೆ ಬಜೆಟ್‌ ಇರುವ ಸಿನಿಮಾ ಮಾಡಬಹುದು. ಚಿತ್ರಕಥೆ ಏನನ್ನು ಬಯಸುತ್ತದೆಯೋ ಅಂಥ ಪಾತ್ರವನ್ನು ಮಾಡಲು ನಾನು ಸಿದ್ಧನಿದ್ದೇನೆ. ಮುಂದೆ ವಿಕ್ರಾಂತ್‌ ರೋಣದ ಬಜೆಟ್‌ಗಿಂತ ಮತ್ತಷ್ಟು ಹೆಚ್ಚು ಬಜೆಟ್‌ನ ಸಿನಿಮಾಗಳನ್ನೇ ಮಾಡಬೇಕು ಎನ್ನುವ ಬಾಲಿಶ ಯೋಚನೆಗಳು ನನ್ನ ತಲೆಯಲ್ಲಿಲ್ಲ. ಬಜೆಟ್‌ಗಿಂತ ದೊಡ್ಡದು ಹೊಸ ಹೊಸ ಕಲ್ಪನೆಗಳು, ಕಥೆಗಳು. ಮುಂದಿನ ಐಡಿಯಾ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದೇನೇ ಹೊರತು ಬಜೆಟ್‌ ಬಗ್ಗೆ ಅಲ್ಲ.

ಈ ಸಿನಿಮಾದ ಕಾಲ್ಪನಿಕ ಲೋಕ ಸೃಷ್ಟಿಯಾದ ಕುರಿತು...

‘ವಿಕ್ರಾಂತ್‌ ರೋಣ’ ಎನ್ನುವುದು ಒಂದು ಪುಟ್ಟ ಕಥೆ. ಅನೂಪ್‌ ಜೊತೆ ಕುಳಿತು ‘ಬಿಲ್ಲಾ ರಂಗ ಬಾಷಾ’ ಕಥೆ ಸಿದ್ಧಪಡಿಸುತ್ತಿರುವಾಗ, ಒಂದು ಹಂತದಲ್ಲಿ ಸ್ಕ್ರೀನ್‌ಪ್ಲೇ ಮುಂದೆ ಹೋಗುತ್ತನೇ ಇರಲಿಲ್ಲ. ಈ ನಡುವೆ ‘ವಿಕ್ರಾಂತ್‌ ರೋಣ’ದ ಕಥೆಯ ಎಳೆಯನ್ನು ಅನೂಪ್‌ ಹೇಳಿದ್ದರು. ಮೊದಲು ನಾನು ಈ ಸಿನಿಮಾವನ್ನು ಕೇವಲ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದೆ. ಆದರೆ ನಂತರದಲ್ಲಿ ನಾವೇ ಇದನ್ನು ಮಾಡಿದರೆ ಹೇಗೆ? ಎಂದು ಕೇಳಿದ್ದೆ. ಮೊದಲುಒಂದು ನಿರ್ದಿಷ್ಟ ಬಜೆಟ್‌ನಲ್ಲಿ (₹9 ಕೋಟಿ) ಆಗಬೇಕಿದ್ದ ಸಿನಿಮಾ ಇದು. ನಾನು ‘ಇಂಡಿಯಾನ ಜೋನ್ಸ್‌’, ‘ಜುಮಾಂಜಿ’ಯಂಥ ಸಿನಿಮಾಗಳ ಫ್ಯಾನ್‌. ಆ ಕಾಲದ ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ.

ಕಥೆ ಕೇಳಿದ ಬಳಿಕ ಇದನ್ನು ಬೃಹತ್‌ ಗಾತ್ರದಲ್ಲೇ ತೆರೆ ಮೇಲೆ ತರುವ ನಿರ್ಧಾರವನ್ನು ನಾನೇ ಮಾಡಿದೆ. ಅನೂಪ್‌ ಒಬ್ಬ ಉತ್ತಮ ವಿದ್ಯಾರ್ಥಿ. ಅವರು ಕಲಿಯುತ್ತಾರೆ. ಇಂಥ ಬಜೆಟ್‌ ಸಿನಿಮಾ ಮಾಡಿ ಅವರಿಗೆ ಅನುಭವವಿರಲಿಲ್ಲ. ಹಾಗೆಂದು ದುಡ್ಡಿದೆ ಎಂದು ವ್ಯರ್ಥ ಮಾಡಲಿಲ್ಲ. ಒಂದು ಉತ್ತಮವಾದ ತಂಡ ಕಟ್ಟಿದರು. ಜಾಕ್‌ ಮಂಜು ಬೆನ್ನುಲುಬಾಗಿ ನಿಂತಾಗ ಇಂಥ ತಂಡ ಈ ವಿಕ್ರಾಂತ್‌ ರೋಣ ಪ್ರಪಂಚ ಸೃಷ್ಟಿಸಿತು. ಹೀಗೆ ಆರಂಭವಾದ ಪಯಣ, ನನ್ನ ಸಿನಿ ಜೀವನದ ಅತಿ ದೊಡ್ಡ ಬಜೆಟ್‌ ಸಿನಿಮಾವಾಗಿ ಮುಂದಿದೆ.

ಚಿತ್ರದಲ್ಲಿ ಸುದೀಪ್‌ ದ್ವಿಪಾತ್ರದಲ್ಲಿದ್ದಾರೆಯೇ?

ಪೂರ್ಣ ಚಿತ್ರಕಥೆ ಬಿಟ್ಟುಕೊಡಲು ಸಾಧ್ಯವಿಲ್ಲ, ಆದರೆ ಒಂದಂತೂ ಹೇಳಬಲ್ಲೆ, ಚಿತ್ರದಲ್ಲಿ ದ್ವಿಪಾತ್ರವಂತೂ ಇಲ್ಲ. ವಿಕ್ರಾಂತ್‌ ರೋಣ ಎನ್ನುವುದು ಪಾತ್ರವೊಂದರ ಹೆಸರು. ಚಿತ್ರದಲ್ಲಿ ಪಾತ್ರದ ಮೇಲೆ ಕಥೆ ನಿಂತಿಲ್ಲ. ಪಾತ್ರದಿಂದಾಗಿ ಕಥೆ ಮುಂದುವರಿಯುತ್ತದೆ ಅಷ್ಟೇ. ಮೇಕಿಂಗ್‌, ತಾಂತ್ರಿಕತೆ, ಪ್ರಸ್ತುತಿ, ನಿರೂಪಣೆಯ ಶೈಲಿಯಿಂದ ಚಿತ್ರ ಭಿನ್ನವಾಗಿ ಮೂಡಿಬಂದಿದೆ. ಅನೂಪ್‌ ಅದ್ಭುತವಾಗಿ ಇದನ್ನು ಹೆಣೆದಿದ್ದಾರೆ. ಈ ರೀತಿ ಪ್ರಪಂಚನ್ನು ಸೃಷ್ಟಿಸಿ, ವಿಕ್ರಾಂತ್‌ ರೋಣನನ್ನು ಅಲ್ಲಿ ಕುಳ್ಳಿರಿಸಿದಾಗ ವಿಭಿನ್ನವಾದ ಒಂದು ಲೋಕವೇ ಸೃಷ್ಟಿಯಾಗುತ್ತದೆ.

ಅನೂಪ್‌ ಇಷ್ಟು ದೊಡ್ಡ ಬಜೆಟ್‌ಗೆ ಒಪ್ಪಿದರೇ?

ದುಡ್ಡಿದೆ ಎಂದು ನಾವು ಖರ್ಚು ಮಾಡಿಲ್ಲ. ಸಿನಿಮಾದ ಐಡಿಯಾಗೆ ನಾವು ಹಣ ಹೂಡಿದ್ದೇವೆ. ಅನೂಪ್‌ ಐಡಿಯಾ ಮೇಲೆ ಸಿನಿಮಾ ಬಜೆಟ್‌ ನೂರು ಕೋಟಿ ದಾಟಿತು. ನಾವು ನೂರು ಕೋಟಿ ರೂಪಾಯಿ ನೀಡಿ ಖರ್ಚು ಮಾಡಿ ಎಂದಿಲ್ಲ.

ಜಾಕ್ವೆಲಿನ್‌ಗೆ ಕನ್ನಡ ಕಲಿಸಿ, ಮೊದಲ ರೀಲ್ಸ್ ಮಾಡಿದ ಅನುಭವ?

ನಾನು ಅಹಂನಿಂದ ಜಾಕ್ವೆಲಿನ್‌ಗೆ ಕನ್ನಡ ಹೇಳಿಕೊಟ್ಟಿಲ್ಲ. ಪ್ರೀತಿಯಿಂದ ಹೇಳಿಕೊಟ್ಟಿದ್ದೇನೆ. ಭಾಷೆ ಕಲಿಯುವ ಹಾಗೂ ಕಲಿಯದೇ ಇರುವ ವಿಚಾರದಲ್ಲಿ ಎಲ್ಲರಿಗೂ ಅವರದೇ ಆದ ಅಧಿಕಾರವಿದೆ. ನಾನು ಎಲ್ಲ ಭಾಷೆಗಳನ್ನು ಗೌರವಿಸುತ್ತೇನೆ. ನಾವು ಕನ್ನಡಿಗರಾಗಿ ಕನ್ನಡವನ್ನು ಮೊದಲು ಚೆನ್ನಾಗಿ ಬಳಸಿಕೊಳ್ಳೋಣ. ನಾನು ಸಿನಿಮಾ ಮಾಡಿ ಪ್ರೇಕ್ಷಕರನ್ನು ಮನರಂಜಿಸಲು ಹುಟ್ಟಿದವನೇ ಹೊರತಾಗಿ ರೀಲ್ಸ್‌ ಮಾಡಿ ಮನರಂಜನೆ ನೀಡುವುದಕ್ಕಲ್ಲ. ಹೀಗೆಂದು ರೀಲ್ಸ್‌ ಮಾಡುವುದು ಕೆಟ್ಟದೆಂದು ಹೇಳುವುದಿಲ್ಲ. ರೀಲ್ಸ್‌ ಮಾಡಿ ಜನರು ಖುಷಿಪಡುವುದನ್ನು ನೋಡಿದ್ದೇನೆ. ಆದರೆ ನನಗೆ ರೀಲ್ಸ್‌ ಮಾಡುವುದು ಕಂಫರ್ಟ್‌ ಆಗಿರಲಿಲ್ಲ. ರೀಲ್ಸ್‌ ಮಾಡಲು ನಾನು ಜಾನಿ ಮಾಸ್ಟರ್ ಅವರನ್ನೇ ಕರೆಸಿಕೊಂಡಿದ್ದೆ.

ಅಮಿತಾಬ್‌ ಬಚ್ಚನ್‌ ಅವರು ನಿಮಗೆ ಶುಭಹಾರೈಸಿದ ಕ್ಷಣ ಹೇಗಿತ್ತು?

ಅದೊಂದು ಸಂಭ್ರಮದ ಹಾಗೂ ಹೆಮ್ಮೆಯ ಕ್ಷಣ. ಅವರು ಕನ್ನಡ ಚಿತ್ರವೊಂದನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಖುಷಿ ಇದೆ. ಎಲ್ಲರೂ ಚಿತ್ರಕ್ಕೆ ಸ್ಪಂದಿಸುತ್ತಿದ್ದಾರೆ. ಇದೇ ನನ್ನ 26 ವರ್ಷದ ಸಿನಿಪಯಣದ ಸಂಪಾದನೆ. ಎಲ್ಲೇ ಹೋದರೂ ಗೌರವವಿದೆ. ನಾನೂ ಇದೇ ಅಭ್ಯಾಸವಿಟ್ಟುಕೊಂಡಿದ್ದೇನೆ. ಪ್ರತಿ ಸಿನಿಮಾಗೂ ಹಾರೈಸುತ್ತೇನೆ. ಬೆಳೆಯಬೇಕು, ಬಿಡಬೇಕು ಎನ್ನುವುದು ಅವರ ಕೈಯಲ್ಲಿರುವುದು. ನಾವು ಸ್ಪಂದಿಸೋಣ ಅಷ್ಟೇ. ಅವರ ಮನಸ್ಸನ್ನು ಸ್ಪರ್ಶಿಸೋಣ. ನಾವೂ ಶುಭಕೋರುತ್ತಿದ್ದೇವೆ ಎನ್ನುವುದು ಅವರಿಗೂ ತಿಳಿಯಲಿ. ನಾವು ಪ್ರತಿಯೊಬ್ಬರನ್ನೂ ಪರಸ್ಪರ ಗೌರವಿಸಿ, ಅವರ ಸಂಭ್ರಮದಲ್ಲಿ ಭಾಗಿಯಾಗಬೇಕು.

ಬಾಲಿವುಡ್‌ ಇತ್ತೀಚೆಗೆ ದಕ್ಷಿಣದತ್ತ ದಾಪುಗಾಲು ಇಡುತ್ತಿದೆ ಅಲ್ಲವೇ...

ಮೊದಲಿನಿಂದಲೂ ಬಾಲಿವುಡ್‌ ಕಲಾವಿದರೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇತ್ತೀಚೆಗೆ ಈ ಪ್ರಮಾಣ ಹೆಚ್ಚಾಗಿದೆ ಅಷ್ಟೇ. ನಾನು ಇದನ್ನು ಉತ್ತಮ ಬೆಳವಣಿಗೆಯಾಗಿ ನೋಡುತ್ತೇನೆ. ಉತ್ತಮವಾದ ಸಹಯೋಗವಿದು. ಪರಸ್ಪರ ಗೌರವಿಸುವ ಗುಣ ಹೆಚ್ಚಾಗಿದೆ. ಒಬ್ಬರ ಸಿನಿಮಾವನ್ನು ಇನ್ನೊಬ್ಬರು ಶ್ಲಾಘಿಸುವುದು, ಸಿನಿಮಾ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವುದೂ ಹೆಚ್ಚಾಗಿದೆ.

ಸಲ್ಮಾನ್‌ ಖಾನ್‌ಗೆ ಆ್ಯಕ್ಷನ್‌ ಕಟ್‌ ಹೇಳುವ ಯೋಚನೆ ಯಾವ ಹಂತದಲ್ಲಿದೆ? ಆ ಕಡೆ ಮತ್ತೆ ಯಾವಾಗ ಹೆಜ್ಜೆ?

ಸಲ್ಮಾನ್‌ ಖಾನ್ ಅವರು ನನಗೇನೂ ಹೊಸಬರಲ್ಲ. ನಮ್ಮ ಸ್ನೇಹ ಮೊದಲಿನಿಂದಲೂ ಇದೆ. ಸಿನಿಮಾ ಕುರಿತು ಚರ್ಚೆಗಳು ನಡೆದಿವೆ. ಸದ್ಯ ಅವರೂ ಅವರ ಪ್ರೊಜೆಕ್ಟ್ಸ್‌ನಲ್ಲಿ ತಲ್ಲೀನರಾಗಿದ್ದಾರೆ. ನಾನೂ ಕೂಡಾ. ಸಮಯ ಕೂಡಿಬಂದಾಗ ಎಲ್ಲವೂ ಆಗುತ್ತದೆ. ಸದ್ಯಕ್ಕೆ ಪ್ರಾಥಮಿಕ ಹಂತದ ಚರ್ಚೆ ನಡೆದಿದೆಯಷ್ಟೆ. ಹೆಚ್ಚಿನ ಬೆಳವಣಿಗೆ ಈ ವಿಚಾರದಲ್ಲಿ ಆಗಿಲ್ಲ.

‘ರಣ್‌’, ‘ರಕ್ತಚರಿತ್ರ’ದಂಥ ಗ್ರೇ ಶೇಡ್‌ ಹೊಂದಿರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ನಾನೂ ಇಷ್ಟಪಡುತ್ತೇನೆ. ಐ ಲವ್‌ ಮೈಸೆಲ್ಫ್‌ ಇನ್‌ ದಾಟ್‌ ರೋಲ್ಸ್‌. ಆಯಾ ನಿರ್ದೇಶಕರು ನನ್ನನ್ನು ಹೇಗೆ ನೋಡಿದ್ದಾರೋ ಆ ರೀತಿಯ ಪಾತ್ರಗಳನ್ನು ನೀಡಿದ್ದಾರೆ. ಬೇರೆ ಬೇರೆ ಕಥೆಗಳನ್ನು ನನಗಾಗಿ ಬರೆಯುತ್ತಿದ್ದಾರೆ. ಜನರು ಹಾಗೂ ನಾನೂ ಬಯಸುತ್ತಿರುವುದು ಆದಷ್ಟು ಬೇಗ ಆಗುತ್ತದೆ. ಉತ್ತರದ ಕಡೆಗೊಂದು ಪಯಣ ಇದೆ...ಹೆಚ್ಚಿನ ಮಾಹಿತಿ ಸಮಯ ಬಂದಾಗ ನೀಡುತ್ತೇನೆ.

ಮುಂದಿನ ಸಿನಿಮಾಗಳು?

‘ಬಿಲ್ಲ ರಂಗ ಬಾಷಾ’ ಮುಂದಿನ ಪ್ರೊಜೆಕ್ಟ್‌. ಕಥೆಯೆಲ್ಲ ಸಿದ್ಧವಿದೆ. ಸೆಟ್‌ ನಿರ್ಮಾಣ, ಬಜೆಟ್‌, ಚಿತ್ರತಂಡ ಹೀಗೆ ಸಿದ್ಧತೆಗೇ ಹಲವು ತಿಂಗಳು ಬೇಕು. ಇದೊಂದು ಬಿಗ್‌ಬಜೆಟ್‌ ಸಿನಿಮಾ. ಇದರ ನಡುವೆ ಬೇರೆಯ ಸಿನಿಮಾಗಳನ್ನೂ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT