ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲದ ‘ಸೂಜಿ’; ಕಾಣದ ‘ದಾರ’!

Last Updated 10 ಮೇ 2019, 11:41 IST
ಅಕ್ಷರ ಗಾತ್ರ

ಚಿತ್ರ: ಸೂಜಿದಾರ

ನಿರ್ಮಾಪಕರು: ಅಭಿಜಿತ್‌ ಕೋಟೆಗಾರ್‌, ಸಚ್ಚೀಂದ್ರನಾಥ್‌ ನಾಯಕ್

ನಿರ್ದೇಶಕ: ಮೌನೇಶ ಬಡಿಗೇರ್‌

ತಾರಾಗಣ: ಹರಿಪ್ರಿಯಾ, ಯಶವಂತ ಶೆಟ್ಟಿ, ಸುಚೇಂದ್ರ ಪ್ರಸಾದ್‌, ಚೈತ್ರಾ ಕೋಟೂರ್‌, ಶ್ರೇಯಾ, ಬಿರಾದಾರ್‌‌‌

‘ಯಾರು ಯಾರಿಗೋಸ್ಕರಾನೂ ಬದುಕಲ್ಲಾ ರೀ...’ –ಹರಿದು ಹೋದ ತನ್ನ ಬದುಕನ್ನು ಸೂಜಿದಾರದ ಮೂಲಕ ಹೊಲಿಯಲು ಹೊರಟ ಪದ್ಮಾ ಹೇಳುವ ಮಾತು ಇದು. ಕಾಲವೆಂಬ ಕೊನೆಯಿಲ್ಲದ ದಾರ ಬಳಸಿ ಮತ್ತೆ ಬದುಕು ಕಟ್ಟಿಕೊಳ್ಳಲು ಹೊರಟ ಆಕೆಯದು ದಣಿವರಿಯದ ಹೋರಾಟ. ಪದ್ಮಾಳ ಬದುಕಿನಂತೆ ಹರಿದುಹೋದ ಬದುಕುಗಳನ್ನು ‘ಸೂಜಿದಾರ’ದಲ್ಲಿ ದೃಶ್ಯರೂಪಕ್ಕಿಳಿಸಿದ್ದಾರೆ ನಿರ್ದೇಶಕ ಮೌನೇಶ ಬಡಿಗೇರ್‌.

ಅಸಹಾಯಕ ಹೆಣ್ಣಿನ ಕಥನದೊಂದಿಗೆ ಏಕಕಾಲಕ್ಕೆ ಹಲವು ಕಥನಗಳನ್ನು ಮೌನೇಶ್‌ ಪ್ರೇಕ್ಷಕರಿಗೆ ಉಣಬಡಿಸುತ್ತಾರೆ. ಎಲ್ಲವನ್ನೂ ಒಂದೇ ಕ್ಯಾನ್ವಾಸ್‌ ಮೇಲೆ ಹೇಳುವ ಒತ್ತಡವನ್ನು ತಮ್ಮ ಮೇಲೆ ಹೇರಿಕೊಂಡಿರುವುದು ನೇರನೋಟಕ್ಕೆ ಕಾಣುತ್ತದೆ. ಅವರ ಆ ದಣಿವು ನೋಡುಗರಿಗೂ ತಟ್ಟುತ್ತದೆ.

ನಾವು ಸೂಜಿದಾರದ ಮೂಲಕ ಹರಿದುಹೋದ ಬಟ್ಟೆಗಳನ್ನು ಹೊಲಿಯುತ್ತೇವೆ. ಆದರೆ, ಕಾಲದ ಬದಲಾವಣೆಗೆ ತಕ್ಕಂತೆ ದರ್ಜಿಯು ವಿಭಿನ್ನವಾಗಿ ಬಟ್ಟೆ ಹೊಲಿಯಬೇಕು. ಜನರ ಚರ್ಮದ ಜೊತೆಗೆ ಆ ಉಡುಪುಗಳು ಹೊಂದಿಕೊಳ್ಳಬೇಕು. ಆಗಷ್ಟೇ ಗ್ರಾಹಕರ ಪ್ರೀತಿಗಳಿಸಲು ಸಾಧ್ಯ. ಜೊತೆಗೆ, ಹೊಲಿಗೆ ವ್ಯಾಪಾರದಿಂದ ಹಣಗಳಿಸಬಹುದು. ಬಟ್ಟೆಯ ಅಳತೆ ಸರಿಯಾಗಿ ಕೂರದೆ ಇದ್ದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತದೆ. ಚಿತ್ರದ ಕೆಲವು ದೃಶ್ಯಗಳಲ್ಲಿನ ಗೊಂದಲ ನೋಡಿದಾಗ ನಿರ್ದೇಶಕರಿಗೆ ಈ ಸರಳಸೂತ್ರದ ಅರಿವು ಇಲ್ಲದಿರುವುದು ಅರಿವಾಗುತ್ತದೆ.

ಆದರೆ, ಚಿತ್ರದ ಕೆಲವು ದೃಶ್ಯಗಳು ಕಥೆ ಎನಿಸದೆ ನಿಜ ಬದುಕಿನ ದೃಶ್ಯಗಳಾಗಿ ಕಾಡುತ್ತವೆ. ಆ ಮೂಲಕ ನೋಡುಗರನ್ನು ಸಿನಿಮಾದ ಭಾಗವಾಗಿಸುವುದಕ್ಕೆ ನಿರ್ದೇಶಕರು ಪ್ರಯತ್ನಿಸಿರುವುದು ಎದ್ದುಕಾಣುತ್ತದೆ.

ಲವ್‌ ಜಿಹಾದ್‌ ಹೆಸರಿನಡಿ ನಡೆಯುತ್ತಿರುವ ಕ್ರೌರ್ಯ ಎಣಿಕೆಗೆ ಸುಲಭವಾಗಿ ದಕ್ಕುವುದಿಲ್ಲ. ಬಹುಸಂಖ್ಯಾತರ ಪ್ರಭಾವದಿಂದ ‘ಬಹುಜನ ಸಂಸ್ಕೃತಿ’ಯ ಆಶಯಕ್ಕೆ ಧಕ್ಕೆಯಾಗುತ್ತಿರುವ ಕಥನವೂ ಈ ಚಿತ್ರದಲ್ಲಿದೆ. ಕೋಮುದಳ್ಳುರಿಯ ಇನ್ನೊಂದು ಮುಖವನ್ನು ಕಾಣಿಸುವ ಈ ಸಿನಿಮಾದ ಹಾದಿಯಲ್ಲಿ ಕೊರಕಲುಗಳೂ ಇವೆ. ಪದ್ಮಾಳ ಮರೆಗುಳಿತನಕ್ಕೆ ಕಾರಣವೇನು? ಆಕೆ ಬರ್ಮನ ತೆಕ್ಕೆಗೆ ಸಿಲುಕಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ನಿರ್ದೇಶಕರು ದೃಶ್ಯದ ಮೂಲಕ ಉತ್ತರಿಸಿಲ್ಲ.

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹೊರಟ ಶಬ್ಬೀರ್‌ ಅನಾಥ. ಆತನ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗನದು ಪತ್ರಿಕೆ ಹಂಚುವ ಕೆಲಸ. ಪ್ರಾಂಶುಪಾಲರ ಮನೆಗೆ ಪತ್ರಿಕೆ ಹಂಚುವಾಗ ಅವರ ಪುತ್ರಿ ಸ್ನಾನ ಮಾಡುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಾನೆ. ಈ ಆರೋಪ ಶಬ್ಬೀರ್‌ ಮೇಲೆ ಬರುತ್ತದೆ. ಕೊನೆಗೆ, ಶಬ್ಬೀರ್‌ ಮತ್ತು ಆ ಹುಡುಗಿ ಹೇಗೆ ಮುಖಾಮುಖಿಯಾಗುತ್ತಾರೆ ಎನ್ನುವುದೇ ಈ ಚಿತ್ರದ ತಿರುಳು.

ಹರಿಪ್ರಿಯಾ ತಾವು ಪ್ರಯೋಗಾತ್ಮಕ ಪಾತ್ರಗಳಿಗೆ ಒಗ್ಗಿಕೊಳ್ಳಲು ಸಿದ್ಧ ಎನ್ನುವುದನ್ನು ನಿರೂಪಿಸಿದ್ದಾರೆ. ಯಶವಂತ ಶೆಟ್ಟಿ, ಸುಚೇಂದ್ರಪ್ರಸಾದ್‌, ಚೈತ್ರಾ ಕೋಟೂರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಭಿನ್ನಷಡ್ಜ ಸಂಗೀತ ಸಂಯೋಜನೆಯ ಎರಡು ಹಾಡು ಕೇಳಲು ಇಂಪಾಗಿವೆ. ಅಶೋಕ್‌ ವಿ. ರಾಮನ್‌ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT