ಢಾಯಿ ಕಿಲೊ ಕೆ ಹಾಥ್‌ ಮೆ ಕಮಲ್‌

ಶನಿವಾರ, ಮೇ 25, 2019
33 °C

ಢಾಯಿ ಕಿಲೊ ಕೆ ಹಾಥ್‌ ಮೆ ಕಮಲ್‌

Published:
Updated:
Prajavani

‘ಯೇ ಢಾಯಿ ಕಿಲೋ ಕಾ ಹಾಥ್‌ ಅಗರ್‌ ಪಡ್ತಾಹೈ ನಾ.. ತೊ ಆದ್ಮಿ ಉಟ್ತಾ ನಹಿ, ಉಠ್‌ಜಾತಾ ಹೈ’ ಹೀಗೆ ಕೈನ ಸಂಭಾಷಣೆಯಿಂದಲೇ ಗುರುತಿಸಿಕೊಂಡಿರುವ ಸನ್ನಿ ಡಿಯೋಲ್ ಇದೀಗ ಕಮಲ ಹಿಡಿದಿದ್ದಾರೆ. ನಟನೆಯ ಇನ್ನಿಂಗ್ಸ್‌ ಕೊನೆಯಾಯಿತೇ ಎಂಬ ಪ್ರಶ್ನೆ ಮೂಡಿದಾಗಲೇ ‘ಯಮಲಾ’, ‘ಪಗಲಾ’, ‘ದಿವಾನಾ’ ಚಿತ್ರದ ಮೂಲಕ ಅಪ್ಪ ಧರ್ಮೇಂದ್ರ ಹಾಗೂ ತಮ್ಮ ಬಾಬಿ ಜೊತೆಗೆ ಹಿರಿತೆರೆ ಮೇಲೆ ಕಾಣಿಸಿಕೊಂಡಿದ್ದರು. ನಂತರ ‘ಘಾಯಲ್‌ ಅಗೇನ್‌’ ಬಂದಿತು. 2016ರಲ್ಲಿ. ಅದಾದ ನಂತರ ಮತ್ತೆ ಅವರು ಬೆಳ್ಳಿತೆರೆಯತ್ತ ಬರಲಿಲ್ಲ.

ಅದ್ಯಾಕೋ ಆ ಚಿತ್ರ ಹೇಳಿಕೊಳ್ಳುವಷ್ಟು ‘ಧಮಾಕಾ’ ಮಾಡಲಿಲ್ಲ. ಆಮೇಲೆ ಸುದ್ದಿಯಾಗಿದ್ದು ಬಾಬಿ ಡಿಯೋಲ್ ಮಗನ ಆಡಿಷನ್‌ನಿಂದ. ಇನ್ನೇನು ಮಕ್ಕಳು ಪ್ರವರ್ಧಮಾನಕ್ಕೆ ಬರುವ ದಿನಗಳು ಬಂದವು. ನಾವಿನ್ನು ಹಿಂದೆ ಸರಿಯಬೇಕಿದೆ ಎಂಬರ್ಥದ ಮಾತುಗಳನ್ನೂ ಸನ್ನಿ ಆಡಿದ್ದರು.

‘ಬೇತಾಬ್‌’ ಎಂಬ ಚಿತ್ರದಿಂದ ಧರ್ಮೇಂದ್ರ ಮಗ ಎಂಬ ವರ್ಚಸ್ಸಿನೊಂದಿಗೆ ಬಂದ ಸನ್ನಿ ಡಿಯೋಲ್‌ ಬಾಲಿವುಡ್‌ನಲ್ಲಿ ತಮ್ಮದೊಂದು ಹೆಗ್ಗುರುತನ್ನು ಉಳಿಸಿದವರು. ‘ದಾಮಿನಿ’, ‘ಘಾಯಲ್‌’ ಮುಂತಾದ ಚಿತ್ರಗಳಲ್ಲಿನ ಆ್ಯಂಗ್ರಿ ಯಂಗ್ ಮ್ಯಾನ್‌ ಲುಕ್‌ ಸಹ ನೀಡಿದರು. 85ರ ದಶಕದಲ್ಲಿ ಚಾಕ್ಲೇಟ್‌ ಬಾಯ್‌ನಂತಹ ಹೀರೊಗಳಿದ್ದ ಕಾಲದಲ್ಲಿ ಮಸ್ಕುಲರ್ ಮ್ಯಾನ್‌ ಆಗಿ ಮಿಂಚಿದರು ಸನ್ನಿ. ಘಾಯಲ್‌, ಘಾತಕ್‌ ಒಂದು ಕಾಲದ ಯುವಜನರನ್ನು ಹಿಡಿದಿಟ್ಟಿತು. ಅದಾದ ನಂತರದ ಚಿತ್ರಗಳಾದ ‘ಬಾರ್ಡರ್‌’, ‘ಗದರ್‌’ ಇವೆರಡೂ ಸಹಸ್ರಮಾನದ ಯುವಜನರು ಮರೆಯದ ಚಿತ್ರಗಳು. 

ದೇಶಭಕ್ತಿ ಮತ್ತು ಅಚಲ ಪ್ರೀತಿ ಇವೆರಡನ್ನೂ ಜೀವಾಳವಾಗಿರಿಸಿಕೊಂಡ ಹಲವು ಚಿತ್ರಗಳು ಅಜಯ್ ಡಿಯೋಲ್ ಎಂಬ ಯುವಕನನ್ನು ಬಾಲಿವುಡ್‌ ಸನ್ನಿಯಾಗಿಸಿದ್ದು ಸುಳ್ಳಲ್ಲ. ಈಗ ಸನ್ನಿ ಡಿಯೋಲ್ ಇನ್ನೊಂದು ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

ಅಪ್ಪನಂತೆ ರಾಜಕೀಯ ಕಣಕ್ಕೆ ಇಳಿದಿದ್ದಾರೆ. ಗುರುದಾಸ್‌ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ಹಿಂದೆ ಧರ್ಮೇಂದ್ರ ಸಹ ರಾಜಕೀಯಕ್ಕೆ ಇಳಿದಿದ್ದರು. ಕುಟುಂಬದಲ್ಲಿ ಹೇಮಾಮಾಲಿನಿ ಸಹ ಸಂಸದೆ. ಇದೀಗ ಜನರಿಗೆ ಸನ್ನಿ ಮೈ ನಿಕಲಾ ಗಡ್ಡಿ ಲೇಕರ್‌ ಅಂತ ಪಾರ್ಲಿಮೆಂಟ್‌ ಹೌಸ್‌ನತ್ತ ನಡೆದಿದ್ದಾರೆ. ಜನರು ಈ ‘ಆಗ್‌ ಕಾ ಗೋಲಾ’ಕೈಗೆ ಕಮಲವನ್ನಿಡುವರೋ ಅಥವಾ ಕೈಕೊಡುವರೋ ಎಂಬುದು ಗೊತ್ತಾಗಲು ಹೆಚ್ಚು ದಿನ ಕಾಯಬೇಕಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !