ನಟಿ ಸನ್ನಿ ಲಿಯೋನ್ ವಿರುದ್ಧ ವಂಚನೆ ಪ್ರಕರಣ, ಕೇರಳ ಪೋಲೀಸರಿಂದ ವಿಚಾರಣೆ

ತಿರುವನಂತಪುರ: ಸುಮಾರು ₹ 29 ಲಕ್ಷ ಹಣವನ್ನು ಸ್ವೀಕರಿಸಿಯೂ 2019ರಲ್ಲಿ ಕೊಚ್ಚಿಯಲ್ಲಿ ನಡೆದ ಪ್ರೇಮಿಗಳ ದಿನದ ಸಮಾರಂಭದಲ್ಲಿ ಪಾಲ್ಗೊಳ್ಳಲು ನಟಿ ವಿಫಲರಾಗಿದ್ದಾರೆ ಎಂದು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದರ ದೂರಿನ ಮೇರೆಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಪೂವರ್ ರೆಸಾರ್ಟ್ನಲ್ಲಿದ್ದ ಸನ್ನಿ ಲಿಯೋನ್ ಅವರನ್ನು ಶನಿವಾರ ವಿಚಾರಣೆಗೊಳಪಡಿಸಿದ್ದು, ಆಕೆಯ ಹೇಳಿಕೆಯನ್ನು ಕೊಚ್ಚಿ ಅಪರಾಧ ವಿಭಾಗ ಘಟಕವು ದಾಖಲಿಸಿಕೊಂಡಿದೆ.
'ದೂರಿನ ಆಧಾರದ ಮೇಲೆ ನಟಿಯ ವಿರುದ್ಧ ಐಪಿಸಿಯ ಸೆಕ್ಷನ್ 420 ರ ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ ಮತ್ತು ನಾವಿನ್ನೂ ಸತ್ಯವನ್ನು ಪರಿಶೀಲಿಸಿಲ್ಲ' ಎಂದು ಪೊಲೀಸ್ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ.
ತಾವು ಆಯೋಜಿಸಿದ್ದ ಸಮಾರಂಭಕ್ಕೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಸನ್ನಿ ಲಿಯೋನ್ ಹಾಜರಾಗಲಿಲ್ಲ ಎಂದು ಸಂಘಟಕರು ಸಮರ್ಥಿಸಿಕೊಂಡಿದ್ದರೆ, ಲಿಯೋನ್ ತಾನು ಎರಡು ಬಾರಿ ಬಂದಿದ್ದೇನೆ. ಆದರೆ ಕಾರ್ಯಕ್ರಮವೇ ನಡೆದಿಲ್ಲ ಎಂದು ಹೇಳಿದ್ದಾರೆ.
ಸಮಾರಂಭವನ್ನು ಹಲವಾರು ಬಾರಿ ಮುಂದೂಡುವಂತಾದರೂ, ಅಂತಿಮವಾಗಿ ಕೊಚ್ಚಿ ಬಳಿಯ ಅಂಗಮಲ್ಲಿಯ ಆಡ್ಲಕ್ಸ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಸಂಘಟಕರು ಹಲವಾರು ಬಾರಿ ಕಾರ್ಯಕ್ರಮವನ್ನು ಮರು ನಿಗದಿಪಡಿಸಿದ್ದಾರೆ ಮತ್ತು ಅದು ನನ್ನಿಂದ ಉಂಟಾದ ಅನಾನುಕೂಲತೆಯಿಂದಾಗಿ ಅಲ್ಲ ಎಂದು ಸನ್ನಿಲಿಯೋನ್ ತಿಳಿಸಿರುವುದಾಗಿ ವರದಿಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.