ಸೋಮವಾರ, ಸೆಪ್ಟೆಂಬರ್ 27, 2021
23 °C

ವಿಶಿಷ್ಟ ಅಭಿಮಾನಿಯ ಪಾದ ಮುಟ್ಟಿದ ಸೂಪರ್‌ ಸ್ಟಾರ್‌ ರಜನಿಕಾಂತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್‌ ಅವರು ತಮ್ಮ ಸರಳ ವ್ಯಕ್ತಿತ್ವಕ್ಕೆ ಹೆಸರುವಾಸಿ. ರಜನಿ ದರ್ಶನವಾದರೆ ಸಾಕು, ತಮ್ಮ ಜೀವನ ಧನ್ಯ ಎಂಬ ಮನೋಭಾವ ಅವರ ಅಭಿಮಾನಿಗಳದ್ದು. ಒಟ್ಟಿನಲ್ಲಿ, ರಜನಿಕಾಂತ್‌ ಮತ್ತು ಅಭಿಮಾನಗಳ ನಡುವಿನ ಸಂಬಂಧ ತುಂಬ ಅನನ್ಯವಾದದ್ದು ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ, ರಜನಿ ಅವರಿಗೆ ಈಗ ವಿಶಿಷ್ಟ ಅಭಿಮಾನಿಯೊಬ್ಬ ಸಿಕ್ಕಿದ್ದಾನೆ. ಕೆಲ ದಿನಗಳ ಹಿಂದೆ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್‌ ಅವರನ್ನು ಭೇಟಿಯಾಗಿ ನೆರೆ ಪರಿಹಾರ ನೀಡಿ ಸುದ್ದಿಯಾಗಿದ್ದ ಅಂಗವಿಕಲ ಪ್ರಣವ್‌ ಎಂಬಾತನೇ ರಜನಿ ಅವರಿಗೆ ಸಿಕ್ಕಿರುವ ವಿಶಿಷ್ಟ ಅಭಿಮಾನಿ. 

ವಿಶ್ವ ಅಂಗವಿಕಲರ ದಿನಾಚರಣೆಗೆ ಒಂದು ದಿನ ಮುಂಚಿತ ಇರುವಾಗಲೇ ರಜನಿ ಅವರನ್ನು ಚೆನೈನ ಪೋಯಿಸ್‌ ಗಾರ್ಡನ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಸೆಲ್ಫಿ ತೆಗೆಸಿಕೊಂಡಿದ್ದಾನೆ. ಆ ವೇಳೆ ರಜನಿ ಅವರು ಪ್ರಣವ್‌ನ ಪಾದ ಸ್ಪರ್ಶಿಸಿದ್ದಾರೆ. 

ಕೇರಳದ ಪಾಲ್ಘಾಟ್‌ನ ಪ್ರಣವ್‌ಗೆ ಎರಡು ಕೈಗಳಿಲ್ಲ. ಆದರೂ, 21 ವರ್ಷದ ಈ ಅಂಗವಿಕಲ ಹಲವು ಕಲೆಗಳನ್ನು ಕರಗತ ಮಾಡಿಕೊಂಡಿದ್ದಾನೆ. ಚಿತ್ರಕಲೆಯಲ್ಲಿ ನೈಪುಣ್ಯತೆ ಹೊಂದಿರುವ ಈತ ರಜನಿಕಾಂತ್‌ರ ಬಹುದೊಡ್ಡ ಅಭಿಮಾನಿಯಂತೆ. 

ತಮ್ಮ ವಿಶಿಷ್ಟ ಅಭಿಮಾನಿಯ ಬಗ್ಗೆ ತಿಳಿದ ರಜನಿ ಪ್ರಣವ್‌ ಮತ್ತು ಅವನ ಕುಟುಂಬಕ್ಕೆ ಟಿಕೆಟ್‌ ಬುಕ್‌ ಮಾಡಿಸಿ, ಚೆನೈನ ತಮ್ಮ ಮನೆಗೆ ಆಹ್ವಾನಿಸಿದ್ದಾರೆ.

ಡಿಸೆಂಬರ್ 2 ರಂದು ತಮ್ಮ ಅಭಿಮಾನಿಯನ್ನು ಭೇಟಿಯಾದ ರಜನಿ ಅವನ ಪಾದ ಸ್ಪರ್ಶಿಸುವ ಮೂಲಕ ತಮ್ಮ ಸರಳತೆ ಮೆರೆದಿದ್ದಾರೆ. ಅಭಿಮಾನಿ ಪ್ರಣವ್‌ ತಾನೇ ಖುದ್ದಾಗಿ ಬಿಡಿಸಿದ ರಜನಿ ಅವರ ಭಾವ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾನೆ. ಆ ನಂತರ ಪ್ರಣವ್‌ ತನ್ನ ಎರಡು ಪಾದಗಳ ನಡುವೆ ಮೊಬೈಲ್‌ ಇಟ್ಟುಕೊಂಡು ರಜನಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ. 

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ತಮ್ಮ ಅಭಿಮಾನಿಯ ಪಾದ ಸ್ಪರ್ಶಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಆ ಮೂಲಕ ರಜನಿ ಅವರ ಸರಳತೆ ಜಗತ್ತಿನ ಮುಂದೆ ಮತ್ತೊಮ್ಮೆ ಸಾಬೀತಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು