ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಪಾತ್ರಗಳೇ ವರುಣ್ ಜೇವಾಳ

Last Updated 3 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

2000ನೇ ಇಸವಿಯಲ್ಲಿ ಬಿಡುಗಡೆಯಾದ ‘ಹ್ಯಾಂಡ್ಸ್‌ ಅಪ್‌’ ಸಿನಿಮಾದಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆದವರು ಮೆಗಾಸ್ಟಾರ್‌ ಚಿರಂಜೀವಿ ಸಹೋದರ, ನಟ ನಾಗಬಾಬು ಮಗ ವರುಣ್ ತೇಜ್‌. ಟಾಲಿವುಡ್‌ನ ಮೆಗಾ ಫ್ಯಾಮಿಲಿಯಿಂದ ಬಂದ ಈ ಕುಡಿ, ತೆಲುಗು ಸಿನಿರಂಗದಲ್ಲಿ ತನ್ನದೇ ವಿಭಿನ್ನ ಶೈಲಿಯ ನಟನೆಯ ಮೂಲಕ ಹೆಸರು ಗಳಿಸಿದ್ದಾರೆ.

ಬಹುತೇಕರು ಹೀರೊ ಇಮೇಜ್‌ಗಷ್ಟೇ ಅಂಟಿಕೊಂಡರೆ, ಈ ನಟ ಭಿನ್ನ ಪಾತ್ರಗಳಿಗೆ ತಮ್ಮನ್ನು ಒಡ್ಡಿಕೊಂಡು ಪ್ರೇಕ್ಷಕರ ಮನಗೆದ್ದವರು. ಇವರ ನಟನೆಯ ಎಲ್ಲ ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನ. ‘ಮುಕುಂದ’ ಸಿನಿಮಾ ಇವರು ನಾಯಕನಾಗಿ ಕಾಣಿಸಿಕೊಂಡ ಮೊದಲ ಚಿತ್ರ. ಎರಡನೇ ಚಿತ್ರ ‘ಕಂಚೆ’. ಇದು 2ನೇ ಮಹಾಯುದ್ಧ ಆಧರಿಸಿದೆ. ಮಹಾಯುದ್ಧ ಆಧರಿಸಿ ನಿರ್ಮಿಸಿದಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ‘ಅಂತರಿಕ್ಷಂ 9000 ಕೆಎಂಪಿಎಚ್‌’ ಸಿನಿಮಾವೂ ಥಿಯೇಟರ್‌ನಲ್ಲಿ ಸದ್ದು ಮಾಡದಿದ್ದರೂ ವರುಣ್‌ಗೆ ಹೆಸರು ತಂದುಕೊಟ್ಟಿತ್ತು. ಸಾಯಿಪಲ್ಲವಿ ಜೊತೆ ನಟಿಸಿದ್ದ ಸಿನಿಮಾ ‘ಫಿದಾ’ ಹಾಡುಗಳಿಂದಲೇ ಸಿನಿ ರಸಿಕರಮನ ಗೆದ್ದಿತ್ತು. ನಂತರ ‘ತೊಲಿ ಪ್ರೇಮ’ ಎಂಬ ಸುಂದರ ಪ್ರೇಮಕಥೆಯ ಚಿತ್ರ ಮತ್ತು ‘ಎಫ್‌ 2’ ಹಾಸ್ಯಪ್ರಧಾನಚಿತ್ರವೂ ವರುಣ್ ಅದೃಷ್ಟ ಬದಲಾಯಿಸಿದ್ದವು.

ಇತ್ತೀಚೆಗೆ ವರುಣ್ ಅಭಿನಯದ ‘ಗದ್ದಲಕೊಂಡ ಗಣೇಶ್’ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿಸದ್ದು ಮಾಡಿತ್ತು. ಹರೀಶ್ ಶಂಕರ್ ನಿರ್ದೇಶನದ ಈ ಸಿನಿಮಾ ಮೊದಲು ‘ವಾಲ್ಮೀಕಿ’ ಎಂಬ ಹೆಸರಿಟ್ಟಿದ್ದ ಕಾರಣಕ್ಕೆ ಸುದ್ದಿಯಾಗಿತ್ತು. ಅಲ್ಲದೆ, ಅದೇ ಕಾರಣಕ್ಕೆ ‘ಗದ್ದಲಕೊಂಡ ಗಣೇಶ್’ ಎಂದು ಮರುನಾಮಕರಣ ಮಾಡಲಾಗಿತ್ತು. ಇದು ತಮಿಳಿನ ‘ಜಿಗರ್‌ಥಂಡ’ ಸಿನಿಮಾದ ರಿಮೇಕ್‌. ಇದರಲ್ಲಿ ಗದ್ದಲಗೊಂಡ ಗಣೇಶ್ ಎಂಬ ರೌಡಿ ಪಾತ್ರಕ್ಕೆ ಜೀವ ತುಂಬಿದ್ದ ವರುಣ್ ತೇಜರನ್ನು ಸಿನಿಮಂದಿ,ರೌಡಿ ಪಾತ್ರದಲ್ಲೂ ಮೆಚ್ಚಿದ್ದರು. ಆದರೆ, ಅಮೆರಿಕದಲ್ಲಿನ ತೆಲುಗು ಪ್ರೇಕ್ಷಕರು ಮಾತ್ರ ಅಷ್ಟಾಗಿ ಮೆಚ್ಚಿಕೊಂಡಿಲ್ಲ ಎಂಬುದು ಮಾತ್ರ ಚಿತ್ರತಂಡಕ್ಕೆ ನೋವಿನ ಸಂಗತಿ. ಫಿದಾ ಹಾಗೂ ಎಫ್‌2 ಸಿನಿಮಾಗಳು ಅಮೆರಿಕದಲ್ಲಿ ಕೋಟಿ ಕೋಟಿ ಗಳಿಕೆ ಕಂಡಿದ್ದವು. ಆದರೆ ಅಲ್ಲಿನ ತೆಲುಗು ಪ್ರೇಕ್ಷಕರು ವರುಣ್‌ರ ಮಾಸ್‌ ಲುಕ್‌ಗೆ ಮಣೆ ಹಾಕಿಲ್ಲ ಎಂಬುದು ಚಿತ್ರವಿಮರ್ಶಕರ ವಿಶ್ಲೇಷಣೆ. ಅದೇನೆ ಇರಲಿ; ಭಿನ್ನ ಪಾತ್ರಗಳಲ್ಲೇ ನಟಿಸುವ ವರುಣ್ ಪ್ರೇಕ್ಷಕರ ಮನಗೆಲ್ಲುತ್ತಿರುವುದು ಖರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT