ಮಂಗಳವಾರ, ಆಗಸ್ಟ್ 3, 2021
22 °C

ಸದ್ದು ಮಾಡುತ್ತಿರುವ ತಮಿಳು ಚಿತ್ರ ‘ಮಾಸ್ಟರ್‌' ಪೋಸ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಳಪತಿ ವಿಜಯ್‌ ಮತ್ತು ವಿಜಯ್‌ ಸೇತುಪತಿ ಅಭಿನಯದ ಬಹು ನಿರೀಕ್ಷಿತ ‘ಮಾಸ್ಟರ್‌’ ತಮಿಳು ಚಿತ್ರದ ಎರಡನೇ ಪೋಸ್ಟರ್‌ ಸಂಕ್ರಾಂತಿಯಂದು ಬಿಡುಗಡೆಯಾಗಿದೆ.

ವಿದ್ಯಾರ್ಥಿಗಳ ಗುಂಪಿನ ಮಧ್ಯೆ ಕಪ್ಪು ಬಟ್ಟೆ, ಕನ್ನಡಕ ಧರಿಸಿರುವ ವಿಜಯ್‌, ತುಟಿಯ ಮೇಲೆ ತೋರು ಬೆರಳು ಇಟ್ಟು ಸದ್ದು ಮಾಡದಂತೆ ಗದರಿಸುತ್ತಿರುವ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಚಿತ್ರದ ನಿರ್ದೇಶಕ ಲೋಕೇಶ್‌ ಕನಕರಾಜ್‌ ಈ ಪೋಸ್ಟರ್‌ ಹಂಚಿಕೊಂಡ ಕೆಲವು ಹೊತ್ತಿನಲ್ಲಿಯೇ ಸಾವಿರಾರು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಮೊದಲ ಬಾರಿಗೆ ವಿಜಯ್‌ ಮತ್ತು ವಿಜಯ್‌ ಸೇತುಪತಿ ಈ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. 

ಶಿವಮೊಗ್ಗದ ಜೈಲು ಮತ್ತು ಚೆನ್ನೈನಲ್ಲಿ ಭಾಗಶಃ ಶೂಟಿಂಗ್‌ ಮುಗಿಸಿರುವ ಚಿತ್ರತಂಡ 2020ರ ದೀಪಾವಳಿ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿದೆ. ವಿಜಯ್‌ ಕಾಲೇಜು ಪ್ರಾಧ್ಯಾಪಕರಾಗಿ ಮತ್ತು ಸೇತುಪತಿ ಲೋಕಲ್‌ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಜನಿಕಾಂತ್ ನಟಿಸಿದ ‘ಪೆಟ್ಟಾ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಮಾಳವಿಕಾ ಮೋಹನನ್‌ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಅನಿರುದ್ಧ ಸಂಗೀತ, ಸತ್ಯನ್‌ ಸೂರ್ಯನ್‌ ಕ್ಯಾಮೆರಾ ಕೈಚಳಕ ಸಿನಿಮಾಕ್ಕಿದೆ.

ವಿಜಯ್‌ ದ್ವಿಪಾತ್ರದಲ್ಲಿ ನಟಿಸಿದ್ದ ಅಟ್ಲೀ ನಿರ್ದೇಶನದ ‘ಬಿಗಿಲ್‌’ ಭಾರಿ ಯಶಸ್ಸು ಗಳಿಸಿದೆ. ಬಾಲಿವುಡ್‌ ನಟ ಜಾಕಿ ಶ್ರಾಫ್‌ ಮತ್ತು ನಯನತಾರಾ ತಾರಾಗಣದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ₹300 ಕೋಟಿ ಗಳಿಸಿತ್ತು. 2019ರಲ್ಲಿ ಕಾಲಿವುಡ್‌ನಲ್ಲಿ ಅತೀ ಹೆಚ್ಚು ಹಣ ಗಳಿಸಿದ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.   

‘ಮಾಸ್ಟರ್‌’ ನಂತರ ನಿರ್ದೇಶಕ ವೆಟ್ರಿಮಾರನ್‌ ಮುಂದಿನ ಚಿತ್ರದಲ್ಲಿ ಅಭಿನಯಿಸಲು ವಿಜಯ್‌ ಸಮ್ಮತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಎಲ್ಲವೂ ಎಣಿಕೆಯಂತೆ ನಡೆದರೆ ಮೊದಲ ಬಾರಿಗೆ ಈ ಜೋಡಿ ಒಟ್ಟಿಗೆ ಕೆಲಸ ಮಾಡಲಿದೆ. ತುಪಾಕಿ, ಖತ್ತಿ ಮತ್ತು ಸರ್ಕಾರ್‌ ಚಿತ್ರಗಳ ಯಶಸ್ಸಿನ ನಂತರ ನಿರ್ದೇಶಕ ಎ.ಆರ್‌. ಮುರುಗದಾಸ್‌ ಮತ್ತು ವಿಜಯ್‌ ಒಟ್ಟಿಗೆ ಮತ್ತೊಂದು ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ‘ಮಾಸ್ಟರ್‌’ ಚಿತ್ರದ ನಿರ್ದೇಶಕ ಲೋಕೇಶ್‌ ಕನಕರಾಜ್‌ ನಿರ್ದೇಶನದ ಮಾನಗರಂ ಮತ್ತು ಕೈದಿ ಭರ್ಜರಿ ಯಶಸ್ಸು ಕಂಡಿವೆ.

ಇದನ್ನೂ ಓದಿ: ದಳಪತಿ ವಿಜಯ್‌ ಸಿನಿಮಾದಲ್ಲಿ ಸೇತುಪತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು