ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿ ವಿಜಯ್‌ ನಟನೆಯ ‘ತಲೆದಂಡ’ ಸಿನಿಮಾ; ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಬಿಡುಗಡೆ?

ನಟ ದಿವಂಗತ ಸಂಚಾರಿ ವಿಜಯ್‌ ನಟನೆಯ ಏ.1ರಂದು ತೆರೆಗೆ
Last Updated 21 ಮಾರ್ಚ್ 2022, 7:29 IST
ಅಕ್ಷರ ಗಾತ್ರ

ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಬಾಚಿದ, ನಟ ದಿವಂಗತ ಸಂಚಾರಿ ವಿಜಯ್‌ ನಟನೆಯ ‘ತಲೆದಂಡ’ ಸಿನಿಮಾ, ರಾಜ್ಯದ ಕೆಲ ಏಕಪರದೆ ಚಿತ್ರಮಂದಿರಗಳಲ್ಲಷ್ಟೇ ಬಿಡುಗಡೆಯಾಗಲಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲೇ ಹೆಚ್ಚಿನ ಪ್ರದರ್ಶನಕ್ಕೆ ಚಿತ್ರತಂಡ ನಿರ್ಧರಿಸಿದೆ.

ಏ.1ರಂದು ಸಿನಿಮಾ ಬಿಡುಗಡೆಯಾಗಲಿದೆ. ಆದರೆ ‘ಆರ್‌.ಆರ್‌.ಆರ್‌’ ಹಾಗೂ ‘ಕೆ.ಜಿ.ಎಫ್‌–2’ ಪ್ಯಾನ್‌ ಇಂಡಿಯಾ ಬಿಜ್‌ಬಜೆಟ್‌ ಸಿನಿಮಾಗಳ ಬಿಡುಗಡೆ ಹಾಗೂ ಏಕಪರದೆ ಚಿತ್ರಮಂದಿರಗಳ ಬಾಡಿಗೆ ಸಮಸ್ಯೆ ಕಾರಣದಿಂದಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಏಕಪರದೆ ಚಿತ್ರಮಂದಿರಗಳು ಲಭ್ಯವಿದ್ದಲ್ಲಿ ಸಿನಿಮಾವನ್ನು ಅಲ್ಲಿಯೂ ಬಿಡುಗಡೆಗೊಳಿಸುವುದಾಗಿ ವಿತರಕರು ತಿಳಿಸಿದ್ದಾರೆ.

‘ಇದು ಕಮರ್ಷಿಯಲ್‌ ಸಿನಿಮಾವಲ್ಲದ ಕಾರಣ, ಲಕ್ಷಾಂತರ ರೂಪಾಯಿ ನೀಡಿ ಏಕಪರದೆ ಚಿತ್ರಮಂದಿರಗಳ ಬಾಡಿಗೆ ಕಟ್ಟಿ ಚಿತ್ರಪ್ರದರ್ಶನ ಸಾಧ್ಯವಿಲ್ಲ. ಮಲ್ಟಿಪ್ಲೆಕ್ಸ್‌ಗಳ 40 ಪರದೆಗಳಲ್ಲಷ್ಟೇ ಸದ್ಯಕ್ಕೆ ಬಿಡುಗಡೆಗೆ ನಿರ್ಧರಿಸಲಾಗಿದೆ. ಮಲ್ಟಿಪ್ಲೆಕ್ಸ್‌ ರೀತಿ ಶೇರಿಂಗ್‌ ನೀಡಿದರೆ ಏಕಪರದೆ ಚಿತ್ರಮಂದಿರಕ್ಕೂ ಸಿನಿಮಾ ನೀಡಲು ವಿತರಕರು ನಿರ್ಧರಿಸಿದ್ದಾರೆ’ ಎಂದು ಚಿತ್ರದ ನಿರ್ದೇಶಕ ಪ್ರವೀಣ್‌ ಕೃಪಾಕರ್‌ ತಿಳಿಸಿದ್ದಾರೆ.

ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಬರಲಿದೆ: ‘ಈ ಚಿತ್ರದಲ್ಲಿಸೋಲಿಗ ಬುಡಕಟ್ಟು ಜನಾಂಗಕ್ಕೆ ಸೇರಿದಅರೆಬುದ್ಧಿಮಾಂದ್ಯ ‘ಕುನ್ನ’ ಎಂಬ ಪಾತ್ರದಲ್ಲಿ ಸಂಚಾರಿ ವಿಜಯ್‌ ನಟಿಸಿದ್ದಾರೆ. ರಸ್ತೆಯೊಂದನ್ನು ಮಾಡಲು ನೂರಾರು ಮರಗಳನ್ನು ಕಡಿಯಲು ಮುಂದಾದಾಗ ಅದನ್ನು ಹೋಗಿ ತಡೆಯುತ್ತಾನೆ. ನಾವು ಈಗ ಎಚ್ಚೆತ್ತುಕೊಳ್ಳದೇ ಹೋದರೆ ಮುಂದೆ ಇಡೀ ಭೂಮಿಯ ತಲೆದಂಡ ಆಗುತ್ತದೆ. ನೀರಿಗಾಗಿ ಯುದ್ಧ ನಡೆಯುತ್ತದೆ. ವಿಜಯ್‌ ನಮ್ಮ ಜೊತೆ ಇಲ್ಲ ಎನ್ನುವುದು ಬಹಳ ದುಃಖದ ವಿಷಯ. ಈ ಪಾತ್ರಕ್ಕಾಗಿ ವಿಜಯ್‌ ಪರಕಾಯ ಪ್ರವೇಶ ಮಾಡಿದ್ದಾರೆ. ಈ ಚಿತ್ರದಲ್ಲಿನ ಪಾತ್ರಕ್ಕಾಗಿ ವಿಜಯ್‌ಗೆ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಬರಲಿದೆ ಎನ್ನುವುದು ನನ್ನ ನಂಬಿಕೆ’ ಎಂದರು ಕೃಪಾಕರ್‌.

‘ಪ್ರೀತಿಯ ಸಂಚಾರಿ ವಿಜಯ್‌, ಏಳು ಜನರಿಗೆ ಅಂಗಾಂಗ ದಾನ ಮಾಡುವ ಮೂಲಕ ನೀವಿನ್ನೂ ನಮ್ಮ ಜೊತೆ ಜೀವಂತವಾಗಿದ್ದೀರಿ. ನಮ್ಮ ಈ ‘ತಲೆದಂಡ’ ಸಿನಿಮಾವನ್ನು ನಿಮಗೆ ಅರ್ಪಿಸುತ್ತಿದ್ದೇವೆ’ ಎಂದಿದೆ ಚಿತ್ರತಂಡ.

ಗೋವಾದಲ್ಲಿ ನಡೆದ 52ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮ ವಿಭಾಗಕ್ಕೆ ‘ತಲೆದಂಡ’ ಆಯ್ಕೆಯಾಗಿತ್ತು. ಕಳೆದ ವಾರವಷ್ಟೇ ಲಂಡನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಈ ಚಿತ್ರಕ್ಕೆ ಲಭಿಸಿತ್ತು. ಈ ಸಿನಿಮಾವನ್ನು ಬೆಂಗಳೂರು ಅಂತರರಾಷ್ಟ್ರಿಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಮಾಡದೇ ಇದ್ದ ಕುರಿತೂ ಸ್ವತಃ ಸಂಚಾರಿ ವಿಜಯ್‌ ಅವರೇ ಅಸಮಾಧಾನ ಹೊರಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT