ಪುನೀತ್ ರಾಜ್‌ಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್: ಪೊಲೀಸರಿಂದ ಆರೋಪಿ ಬಂಧನ
ಬೆಂಗಳೂರು: ದಿವಂಗತ ನಟ ಪುನೀತ್ ರಾಜ್‌ಕುಮಾರ್ ವಿರುದ್ಧ ಇನ್‌ಸ್ಟಾಗ್ರಾಮ್‌ನಲ್ಲಿ ನಿಂದನಾರ್ಹ ಪೋಸ್ಟ್ ಹಾಕಿದ್ದ ಆರೋಪಿಯೊಬ್ಬನನ್ನು ಸೈಬರ್ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರೇ ಟ್ವೀಟ್ ಮೂಲಕ ಈ ವಿಷಯ ಖಚಿತಪಡಿಸಿದ್ದಾರೆ.
ಸ್ನೇಹಿತರೊಂದಿಗೆ ಕಾರಿನಲ್ಲಿ ಮದ್ಯದ ಪಾರ್ಟಿ ಮಾಡಿದ್ದ ಆರೋಪಿ, ಕೈಯಲ್ಲಿ ಬಿಯರ್ ಬಾಟಲಿ ಹಿಡಿದಿರುವ ಫೋಟೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ. ಅದರ ಜೊತೆ ‘ರಾಜ್‌ಕುಮಾರ್‌ನಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ. ದಯವಿಟ್ಟು ಮರೆಯಬೇಡಿ. ನಾವು ಇದನ್ನು ಕುಡಿದ ನಂತರ ಆತನ ಸಮಾಧಿಯ ಮೇಲೆ ಮೂತ್ರ ವಿಸರ್ಜಿಸುತ್ತೇವೆ’ ಎಂದು ಬರೆದಿದ್ದ. ಇದರ ಸ್ಕ್ರೀನ್‌ಶಾಟ್ ತೆಗೆದಿದ್ದ ವ್ಯಕ್ತಿಯೊಬ್ಬರು ಅದನ್ನು ಅಕ್ಟೋಬರ್ 31ರಂದು ಟ್ವೀಟ್ ಮಾಡಿದ್ದರು. ಅದನ್ನು ಪೊಲೀಸ್ ಕಮಿಷನರ್ ಕಮಲ್ ಪಂತ್, ಸೈಬರ್ ಅಪರಾಧ ದಳ ಹಾಗೂ ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.
ಇದಕ್ಕೆ ಕೂಡಲೇ ಸ್ಪಂದಿಸಿದ್ದ ನಗರ ಪೊಲೀಸರು ‘ಈ ವಿಚಾರವನ್ನು ಸೈಬರ್ ಅಪರಾಧ ದಳದವರ ಗಮನಕ್ಕೆ ತರಲಾಗಿದೆ. ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮರು ಟ್ವೀಟ್ ಮಾಡಿದ್ದರು.
ಪುನೀತ್ ವಿರುದ್ಧದ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸಾಕಷ್ಟು ಮಂದಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಕೃತ ಮನಸ್ಸಿನ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅನೇಕರು ಪೊಲೀಸರಿಗೆ ಆಗ್ರಹಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಅಪರಾಧ ವಿಭಾಗದ ಪೊಲೀಸರು ಸೋಮವಾರ ಸಂಜೆ ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ... ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದ ನಂತರ ಹೃದಯ ತಪಾಸಣೆಗೆ ಮುಗಿಬಿದ್ದ ಜನ
The accused has been arrested and further legal action is being taken. https://t.co/uIEHFryfUk
— Kamal Pant, IPS (@CPBlr) November 1, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.