ಮಂಗಳವಾರ, ಮಾರ್ಚ್ 21, 2023
20 °C

ಚಂದನವನ ನಂದನವನವಾದ ವರ್ಷ 2022

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಕಳೆದೆರಡು ವರ್ಷದ ಕೋವಿಡ್‌ ಕಾರ್ಮೋಡ ಸರಿದು ಚಂದನವನ ನಂದನವನವಾದ ವರ್ಷ 2022. ದೇಶವೇ ಸ್ಯಾಂಡಲ್‌ವುಡ್‌ನತ್ತ ನೋಡಿದ ಅವಧಿ ಇದು ಎಂದರೂ ಅತಿಶಯೋಕ್ತಿಯೇನಲ್ಲ! ದಕ್ಷಿಣ ಭಾರತೀಯ ಸಿನಿಮಾಗಳ ಬಗ್ಗೆ ಇದ್ದ ಒಂದು ಉಡಾಫೆಯ ನೋಟವನ್ನು ಬದಲಾಯಿಸಿದ ಶ್ರೇಯಸ್ಸು ಚಂದನವನದ್ದು. ಅದರಲ್ಲೂ ಪ್ಯಾನ್‌ ಇಂಡಿಯಾ ಸಿನಿಮಾ ಲೋಕದಲ್ಲೊಂದು ಸ್ಥಾನ ಭದ್ರಪಡಿಸಿಕೊಂಡ ವರ್ಷವಿದು. ನಟ ‌ಪುನೀತ್‌ ರಾಜ್‌ಕುಮಾರ್‌ ಅಗಲಿಕೆಯ ನೋವಿನ ನಡುವೆಯೂ ಚಂದನವನ, ಅವರ ನೆನಪಿನಲ್ಲೇ ಹಲವು ಸಂಭ್ರಮಗಳನ್ನು ಆಚರಿಸಿ ನಂದನವನವಾಯ್ತು.

ಈ ವರ್ಷದಲ್ಲಿ ಗೆದ್ದ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟೇ ಇದ್ದರೂ, ಅವುಗಳು ಜನರು ಹಾಗೂ ಬಾಕ್ಸ್‌ ಆಫೀಸ್‌ ಮೇಲೆ ಬೀರಿದ ಪರಿಣಾಮ ಬೃಹದಾಗಿದೆ. ಇವುಗಳ ಯಶಸ್ಸೇ ಇಡೀ ವರ್ಷ ಚಂದನವನಕ್ಕೆ ಕಾವು ತುಂಬಿತು.

ಫೆ.11ರಂದು ತೆರೆಕಂಡ ‘ಲವ್‌ ಮಾಕ್ಟೇಲ್‌–2’ ತನ್ನ ಹಳೆ ಛಾಪಿನ ನೆರಳಿನಲ್ಲಿ ಓಡಿತು. ವರ್ಷದ ಆರಂಭದಲ್ಲೇ(ಮಾ.17) ಗಳಿಕೆ ವಿಚಾರದಲ್ಲಿ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಕಮರ್ಷಿಯಲ್‌ ಸಿನಿಮಾ ‘ಜೇಮ್ಸ್‌’ ಬರೆದ ದಾಖಲೆ ಚಂದನವನಕ್ಕೆ ಬೂಸ್ಟರ್‌ ಡೋಸ್‌ ಆಗಿತ್ತು. ನಂತರದಲ್ಲಿ ತೆರೆಕಂಡ ಯಶ್‌ ನಟನೆಯ ‘ಕೆ.ಜಿ.ಎಫ್‌. ಚಾಪ್ಟರ್‌–2’ ನಿರೀಕ್ಷೆಯಂತೇ ಬಾಕ್ಸ್‌ ಆಫೀಸ್‌ನಲ್ಲಿ ದೂಳೆಬ್ಬಿಸಿತು. ಏ.14ರಂದು ತೆರೆಕಂಡ ಈ ಸಿನಿಮಾ ಮೊದಲ ದಿನವೇ ಭಾರತದಲ್ಲಿ ₹134.5 ಕೋಟಿ ಬಾಚಿತು. ವಿಶ್ವದಾದ್ಯಂತ 10 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ ಒಟ್ಟಾರೆ ₹1,300 ಕೋಟಿಯವರೆಗೆ ಬಾಚಿತು ಎನ್ನುತ್ತದೆ ಗಾಂಧಿನಗರ. ಇದರಲ್ಲಿ ಉತ್ತರ ಭಾರತದ ಕಲೆಕ್ಷನ್‌ ₹450 ಕೋಟಿಯವರೆಗಿತ್ತು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಇದಾದ ಬಳಿಕ ತೆರೆಗೆ ಲಗ್ಗೆ ಇಟ್ಟ(ಜೂನ್‌ 10) ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಗಳಿಕೆ ವಿಚಾರದಲ್ಲಿ ದೊಡ್ಡ ದಾಖಲೆ ಬರೆಯದೇ ಇದ್ದರೂ, ಜನರ ಮೇಲೆ ಮಾಡಿದ ಪರಿಣಾಮ ಮಾತ್ರ ಕಲೆಕ್ಷನ್‌ ಎನ್ನುವ ಮಾನದಂಡಕ್ಕಿಂತ ದೊಡ್ಡದಾಗಿತ್ತು. ಈ ಚಿತ್ರ ಗಳಿಸಿದ್ದು ಅಂದಾಜು ₹160 ಕೋಟಿ. ಇದರಲ್ಲಿ ನಿರ್ಮಾಪಕರು ₹110 ಕೋಟಿಯವರೆಗೆ ಲಾಭ ಪಡೆದಿದ್ದಾರೆ. ಜುಲೈ 28ರಂದು ವಿಶ್ವದಾದ್ಯಂತದ 3,200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಸಿನಿಮಾ ಪ್ರಚಾರ, ವಿತರಣೆ ಹಾಗೂ ಮೇಕಿಂಗ್‌ನಿಂದಾಗಿ ಗಳಿಕೆಯಲ್ಲಿ ಗೆದ್ದಿತು. ಕಥೆಯ ವಿಚಾರದಲ್ಲಿ ಜನರು ಈ ಸಿನಿಮಾಗೆ ಅಂಕ ನೀಡಲಿಲ್ಲ. ಈ ಸಿನಿಮಾ ಸುಮಾರು ₹200 ಕೋಟಿಯವರೆಗೆ ಕಲೆಕ್ಷನ್‌ ಮಾಡಿದೆ ಎನ್ನುವುದು ಗಾಂಧಿನಗರದ ಲೆಕ್ಕಾಚಾರ. ಆ.12ಕ್ಕೆ ಯೋಗರಾಜ್‌ ಭಟ್‌ ಅವರು ಆಗಸಕ್ಕೆ ಹಾರಿಸಿದ ಎರಡನೇ ಗಾಳಿಪಟ ಗಳಿಕೆ ವಿಚಾರದಲ್ಲಿ ಕೊಂಚ ಎತ್ತರಕ್ಕೆ ಹಾರಿದರೂ, ಕಥೆಯ ವಿಚಾರದಲ್ಲಿ ಪಲ್ಟಿ ಹೊಡೆದು ವಿಲವಿಲವೆಂದಿತು!

‘ಜೇಮ್ಸ್‌’ ಸಿನಿಮಾದಲ್ಲಿ ಪುನೀತ್‌ ಅವರನ್ನು ಅಭಿಮಾನಿಗಳು ಕೊಂಡಾಡಿದರೂ, ತಮ್ಮ ನೆಚ್ಚಿನ ‘ಅಪ್ಪು’ವನ್ನು ಅವರು ಕಣ್ತುಂಬಿಕೊಂಡಿದ್ದು ‘ಲಕ್ಕಿಮ್ಯಾನ್‌’ ಸಿನಿಮಾ ಹಾಗೂ ‘ಗಂಧದಗುಡಿ’ ಡಾಕ್ಯೂಫಿಲಂನಲ್ಲಿ. ಒಮ್ಮೆ ದೇವರಾಗಿ ಮತ್ತೊಮ್ಮೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಪುನೀತ್‌ ಮಗದೊಮ್ಮೆ ತೆರೆಯಲ್ಲಿ ಉಸಿರಾಡಿದರು. ‘ಅವತಾರ ಪುರುಷ’, ‘ಬೈರಾಗಿ’, ‘ಮಾನ್ಸೂನ್‌ ರಾಗ’, ತೋತಾಪುರಿ’, ‘ಗುರುಶಿಷ್ಯರು’, ‘ಬನಾರಸ್‌’, ‘ಹೆಡ್‌ಬುಷ್‌’, ‘ರೇಮೊ’, ‘ವಿಜಯಾನಂದ’, ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾಗಳು ಬೆಳ್ಳಿತೆರೆಯಲ್ಲಿ ಸದ್ದು ಮಾಡಿದವು. ‘ಹೆಡ್‌ಬುಷ್‌’ ಸಿನಿಮಾ ಸುತ್ತ ಹುಟ್ಟಿದ ವಿವಾದವೂ ಕೊಂಚ ಸದ್ದು ಮಾಡಿತು. ಇತ್ತೀಚೆಗೆ ತೆರೆಕಂಡ ನಟ ಶಿವರಾಜ್‌ಕುಮಾರ್‌ ಅವರ ‘ವೇದ’ ಸಿನಿಮಾ ಕೂಡಾ ಬಾಕ್ಸ್‌ ಆಫೀಸ್‌ನಲ್ಲಿ ಕಲೆಕ್ಷನ್‌ ಏರಿಸಿಕೊಳ್ಳುತ್ತಿದೆ. 

ರಾಷ್ಟ್ರಪ್ರಶಸ್ತಿ ವಿಜೇತ ನಟ, ದಿವಂಗತ ಸಂಚಾರಿ ವಿಜಯ್‌ ನಟನೆಯ ಸಿನಿಮಾ ‘ತಲೆದಂಡ’ ಹಾಗೂ ಸಾಗರ್‌ ಪುರಾಣಿಕ್‌ ನಿರ್ದೇಶನದ ‘ಡೊಳ್ಳು’ ಸಿನಿಮಾಗಳು ಕಥಾವಿಷಯದಲ್ಲಿ ಪ್ರೇಕ್ಷಕರಿಗೆ ಹತ್ತಿರವಾದರೂ, ಕಮರ್ಷಿಯಲ್‌ ಸಿನಿಮಾಗಳ ರೇಸ್‌ ನಡುವೆ ಸೋತವು. ‘ವ್ಹೀಲ್‌ಚೇರ್‌ ರೋಮಿಯೋ’ ಹಾಗೂ ‘ಕಂಬ್ಳಿಹುಳ’ ಸಿನಿಮಾಗಳು ಪ್ರೇಕ್ಷಕರು, ಸೆಲೆಬ್ರಿಟಿಗಳಿಂದಲೇ ವಿಮರ್ಶೆಗೊಳಪಟ್ಟು ಕೆಲಕಾಲ ಚಿತ್ರಮಂದಿರಗಳನ್ನು ಉಳಿಸಿಕೊಂಡವು.

‘ಲಕ್ಕಿವೀಕ್‌’ ಎಂದೇ ಕರೆಯಲ್ಪಡುವ ಡಿಸೆಂಬರ್‌ ಕೊನೆಯ ವಾರದಲ್ಲಿ (ಅಂದರೆ ಇಂದು;ಡಿ.30) ಒಟ್ಟು 9 ಸಿನಿಮಾಗಳು ತಮ್ಮ ಲಕ್‌ ಪರೀಕ್ಷೆಗೆ ಇಳಿದಿವೆ. ಕೋವಿಡ್‌ ಕಾರ್ಮೋಡ ಸರಿದು ಬೆಳ್ಳಿರೇಖೆಗಳನ್ನು ಕಂಡ ಕನ್ನಡ ಚಿತ್ರರಂಗಕ್ಕೆ ವರ್ಷಾಂತ್ಯದಲ್ಲಿ ಇದೀಗ ಮತ್ತೊಮ್ಮೆ ಕೋವಿಡ್‌ ಭೀತಿ ಆವರಿಸಿರುವುದಂತೂ ಅಷ್ಟೇ ಸತ್ಯ! 

‘ಕಾಂತಾರ’ದ ಅನಿರೀಕ್ಷಿತ ಯಶಸ್ಸು!

ಕರಾವಳಿಯ ದೈವದ ಸುತ್ತ ಹೆಣೆದಿರುವ ‘ಕಾಂತಾರ’ ಸಿನಿಮಾದ ಕಥೆ ಹಾಗೂ ತನ್ನನ್ನು, ಪ್ಯಾನ್‌ ಇಂಡಿಯಾ ಎಂಬ ತಕ್ಕಡಿಯಲ್ಲಿ ಇಟ್ಟು ತೂಗುವುದಕ್ಕೆ ನಟ ರಿಷಬ್‌ ಶೆಟ್ಟಿ ಆರಂಭದಲ್ಲಿ ಹಿಂದೇಟು ಹಾಕಿದ್ದರು. ಹೀಗಾಗಿಯೇ ‘ಎಲ್ಲ ಸಿನಿಮಾಗಳು ಪ್ಯಾನ್‌ ಇಂಡಿಯಾ ಆಗಲು ಸಾಧ್ಯವಿಲ್ಲ. ನನ್ನ ಕರ್ನಾಟಕದ ಮಣ್ಣು, ಸಂಸ್ಕೃತಿಯ ಕಥೆ ಕನ್ನಡದಲ್ಲೇ ಬರಬೇಕು, ಸಬ್‌ಟೈಟಲ್‌ ಕೊಡುತ್ತೇನೆ. ಹೀಗಾದಾಗ ಇತರರು ನಮ್ಮ ಭಾಷೆ ಗುರುತಿಸುತ್ತಾರೆ’ ಎಂದಿದ್ದರು ರಿಷಬ್‌. ನಂತರ ಆಗಿದ್ದು ಅನಿರೀಕ್ಷಿತವೇ! ಕನ್ನಡ ಮಣ್ಣಿನ ಘಮಲು ಎಲ್ಲೆಡೆ ಪಸರಿಸಿತು. ಕನ್ನಡದಲ್ಲಷ್ಟೇ ತೆರೆಕಂಡ ‘ಕಾಂತಾರ’ ನಂತರ ಪ್ಯಾನ್‌ ಇಂಡಿಯಾ ಸ್ವರೂಪ ಪಡೆಯಿತು. ಸುಮಾರು ₹16 ರಿಂದ ₹20 ಕೋಟಿಯಲ್ಲಿ ತೆರೆಗಪ್ಪಳಿಸಿದ ‘ಕಾಂತಾರ’, ₹450 ಕೋಟಿಯವರೆಗೂ ಬಾಚಿತು. ಇದೇ ಚಿತ್ರದ ‘ವರಾಹ ರೂಪಂ’ ಹಾಡಿನ ಕುರಿತು ಎದ್ದ ಕೃತಿಚೌರ್ಯದ ವಿವಾದವೂ ಕೊನೆಯಲ್ಲಿ ತಣ್ಣಗಾಯಿತು. ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಸಿನಿಗ್ರಾಫ್‌ ಇಲ್ಲಿಂದ ಬದಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು