ಮಂಗಳವಾರ, ಮೇ 17, 2022
26 °C
‌ಚಿತ್ರಮಂದಿರದಲ್ಲಿ ಪ್ರೇಕ್ಷಕರ ಕೊರತೆ

ಬೀದರ್: ತೆರೆದಿದೆ ಥಿಯೇಟರ್.. ಬಾ ಪ್ರೇಕ್ಷಕ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ರಾಜ್ಯ ಸರ್ಕಾರ ಎಲ್ಲ ಚಿತ್ರಮಂದಿರಗಳಲ್ಲಿ ನೂರರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ಕಲ್ಪಿಸಿದೆ. ಆದರೆ, ನಿರೀಕ್ಷೆಯಷ್ಟು ಸಿನಿ ಪ್ರಿಯರು ಮಲ್ಟಿಪ್ಲೆಕ್ಸ್ ನತ್ತ ಹೆಜ್ಜೆ ಹಾಕುತ್ತಿಲ್ಲ. ಆದರೂ ಉತ್ತಮ ಚಿತ್ರಗಳು ಬಿಡುಗಡೆಯಾದರೆ ಪ್ರೇಕ್ಷಕರು ಬರಲಿದ್ದಾರೆ ಎನ್ನುವ ಭರವಸೆಯೊಂದಿಗೆ ಮಾಲೀಕರುಮಲ್ಟಿಪ್ಲೆಕ್ಸ್ ಆರಂಭಿಸಿದ್ದಾರೆ.

ನಗರದ ಸಪ್ನಾ ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಹಾಗೂ ತೆಲುಗು ಚಿತ್ರಗಳು ಪ್ರದರ್ಶನಕ್ಕಿವೆ. ಪ್ರತಿದಿನ ಒಂದು ಅಥವಾ ಎರಡು ಪ್ರದರ್ಶನಗಳು ಮಾತ್ರ ನಡೆಯುತ್ತಿವೆ. ಪ್ರೇಕ್ಷಕರು ಅಧಿಕ ಸಂಖ್ಯೆಯಲ್ಲಿ ಬರುತ್ತಿಲ್ಲ. ಪ್ರೇಕ್ಷಕರ ಅಭಾವದಿಂದ ಕೆಲ ಬಾರಿ ಪ್ರದರ್ಶನವೂ ರದ್ದಾಗಿದೆ.

‘ಬಹುಶಃ ಚಿತ್ರ ಪ್ರದರ್ಶನ ಆರಂಭವಾಗಿರುವ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಥಿಯೇಟರ್‌ನಲ್ಲಿ ಕೂರಲು ಪ್ರೇಕ್ಷಕರು ಹೆದರಬೇಕಿಲ್ಲ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಮಲ್ಟಿಪ್ಲೆಕ್ಸ್ ಮಾಲೀಕ ಚಂದು ಪಾಟೀಲ ಹೇಳುತ್ತಾರೆ.

‘ಪ್ರಸ್ತುತ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳೆಲ್ಲ ಹಳೆಯ ಚಿತ್ರಗಳೇ ಆಗಿವೆ. ಸಿನಿ ಪ್ರಿಯರು ಈ ಚಿತ್ರಗಳನ್ನು ಈಗಾಗಲೇ ಟಿವಿಗಳಲ್ಲಿ ನೋಡಿದ್ದಾರೆ. ದೊಡ್ಡ ಬಜೆಟಿನ ಹಾಗೂ ಸ್ಟಾರ್ಗಳ ಚಿತ್ರಗಳು ಬಿಡುಗಡೆಯಾದರೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ’ ಎನ್ನುತ್ತಾರೆ ಅವರು.

ಎರಡು ವಾರಗಳ ಹಿಂದೆ ಮಲ್ಟಿಪ್ಲೆಕ್ಸ್ ಆರಂಭವಾಗಿದೆ. ನಾಲ್ಕು ಸ್ಕ್ರೀನ್‌ನಲ್ಲಿ ಒಂದೇ ಸ್ಕ್ರೀನ್‌ ಶುರು ಮಾಡಿದ್ದೇವೆ. ಎರಡು ಕನ್ನಡ, ತೆಲುಗು ಸೇರಿ ಮೂರು ಚಿತ್ರಗಳು ಪ್ರದರ್ಶನಕ್ಕಿವೆ. ಪ್ರೇಕ್ಷಕರ ಸಂಖ್ಯೆ 50 ದಾಟಿಲ್ಲ. ಕೆಜಿಎಫ್ ಚಿತ್ರ ತಂದರೂ ಪ್ರೇಕ್ಷಕರು ಬರಲಿಲ್ಲ. ಹಿಂದಿ ಚಲನಚಿತ್ರಗಳಿಗೆ ಬೀದರ್‌ನಲ್ಲಿ ಹೆಚ್ಚು ಬೇಡಿಕೆ ಇದೆ. ಸುದೀಪ್, ದರ್ಶನ, ಯಶ್ ನಟಿಸಿರುವ ಚಿತ್ರಗಳು ಮಾತ್ರ ಸ್ವಲ್ಪ ಮಟ್ಟಿಗೆ ನಡೆಯುತ್ತಿವೆ. ಈ ತಾರೆಯರನ್ನು ಬಿಟ್ಟರೆ ಕನ್ನಡ ಚಿತ್ರಗಳನ್ನು ನೋಡಲು ಜನರೇ ಬರುತ್ತಿಲ್ಲ.

‘ಟಾಕೀಸ್‌ನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಹತ್ತು ತಿಂಗಳ ನಂತರ ಮಲ್ಟಿಪ್ಲೆಕ್ಸ್ ನಲ್ಲಿ ಮಾಸ್ಕ್‌ ಹಾಕಿಕೊಂಡು ಸಿನಿಮಾ ನೋಡಿದೆ. ಮನೆಯಲ್ಲಿ ಹೆಚ್ಚು ಸಮಯ ಕಳೆದಿದ್ದ ನನಗೆ ಹೆಚ್ಚು ಖುಷಿ ಉಂಟು ಮಾಡಿತು’ ಎಂದು ಪ್ರೇಕ್ಷಕ ಸಂತೋಷ ಹೇಳಿದರು.

ಹದಿನೈದು ವರ್ಷಗಳ ಹಿಂದೆ ಸಿನಿಮಾ ನೋಡಲು ಹಳ್ಳಿಯ ಜನ ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ನಲ್ಲಿ ಬರುತ್ತಿದ್ದರು. ಆದರೆ, ಎಲ್ಲರ ಮನೆಗಳಲ್ಲಿ ಟಿವಿಗಳು ಬಂದು ಕುಳಿತ ನಂತರ ಜಿಲ್ಲೆಯ ಬಹುತೇಕ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ತಾಲ್ಲೂಕು ಕೇಂದ್ರಗಳಲ್ಲಿರುವ ಚಿತ್ರಮಂದಿರ ಕಲ್ಯಾಣ ಮಂಟಪಗಳಾಗಿ ಪರಿವರ್ತನೆಯಾಗಿವೆ. ಪ್ರೇಕ್ಷಕರು ಬಾರದ ಕಾರಣ ಕಳೆದ ವರ್ಷ ಬೀದರ್‌ನಲ್ಲಿ ದೀಪಕ ಚಿತ್ರಮಂದಿರದ ಕಟ್ಟಡ ಕೆಡವಲಾಗಿದೆ.

ಪ್ರಸ್ತುತ ಮಲ್ಟಿಪ್ಲೆಕ್ಸ್ ನ ವಿದ್ಯುತ್‌ ಬಿಲ್‌ ಹಾಗೂ ನೌಕರರ ವೇತನ ಪಾವತಿಸುವಷ್ಟೂ ಆದಾಯ ಬರುತ್ತಿಲ್ಲ. ಏಪ್ರಿಲ್‌, ಮೇನಲ್ಲಿ ಚಿತ್ರೋದ್ಯಮ ಚೇತರಿಸಿಕೊಳ್ಳಬಹುದು. ಟಾಕೀಸ್‌ಗೆ ಹೆಚ್ಚು ಜನ ಬರಬಹುದು ಎನ್ನುವ ನಿರೀಕ್ಷೆ ಮಾಲೀಕರಿಗೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.