ಶನಿವಾರ, ಜುಲೈ 31, 2021
27 °C

ಸಮಯವಿದೆ, ಸಂದರ್ಭವಿಲ್ಲ!: ಅದಿತಿ ಪ್ರಭುದೇವ ಮನದ ಮಾತು

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯಲ್ಲಿರುವ ನಟಿ ಅದಿತಿ ಪ್ರಭುದೇವ ಅವರಿಗೆ ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಅವಕಾಶಗಳು ಇತ್ತೀಚಿನ ವರ್ಷಗಳಲ್ಲಿ ಶ್ಯಾನೆ ಹೆಚ್ಚಾಗುತ್ತಿವೆ. ಸದ್ಯ ಅವರ ಕೈಯಲ್ಲಿ ಐದು ಚಿತ್ರಗಳಿವೆ. ಅವರು ನಾಯಕಿಯಾಗಿ ನಟಿಸಿರುವ ‘ಒಂಬತ್ತನೆ ದಿಕ್ಕು’ ಚಿತ್ರ ಇತ್ತೀಚೆಗಷ್ಟೇ ಸೆನ್ಸಾರ್‌ ಆಗಿದ್ದು, ಬಿಡುಗಡೆಗೆ ಸಜ್ಜಾಗಿದೆ.

ಇದಲ್ಲದೆ, ಜಗ್ಗೇಶ್‌ ನಾಯಕನಾಗಿ ನಟಿಸುತ್ತಿರುವ ‘ತೋತಾಪುರಿ’ ಚಿತ್ರಕ್ಕೂ ಅದಿತಿಯೇ ನಾಯಕಿ. ಈ ಚಿತ್ರದ ಮೊದಲ ಭಾಗ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್‌ ಕೂಡ ಆಗಿದೆ. ಇನ್ನು ಎರಡನೇ ಭಾಗದ ಚಿತ್ರದ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದೆ. ‘ತೋತಾಪುರಿ ಶೂಟಿಂಗ್‌ ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಶೂಟಿಂಗ್‌ ವೇಳೆ ಸಾಕಷ್ಟು ಎಂಜಾಯ್‌ ಮಾಡಿದ್ದೇವೆ. ಹಾಗೆಯೇ ವೃತ್ತಿ ಬದುಕಿನಲ್ಲಿ ಕಲಿಯಬೇಕಾದದ್ದನ್ನು ಕಲಿಯುವ ಅವಕಾಶವೂ ಸಿಕ್ಕಿತ್ತು’ ಎಂದು ಅದಿತಿ ‘ಸಿನಿಮಾ ಪುರವಣಿ’ಯೊಂದಿಗೆ ಮಾತಿಗಾರಂಭಿಸಿದರು.

ಇನ್ನು ‘ಓಲ್ಡ್‌ ಮಾಂಕ್’‌, ‘ದಿಲ್‌ಮಾರ್’ ಹಾಗೂ‌ ಸಾಹುರಾಜ್‌ ಸಿಂಧೆ ಅವರ ನಿರ್ದೇಶನದ ‘ಚಾಂಪಿಯನ್’‌ ಸಿನಿಮಾದಲ್ಲೂ ಅದಿತಿ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರಗಳ ಚಿತ್ರೀಕರಣವನ್ನು ಶುರು ಮಾಡಲು ಚಿತ್ರತಂಡಗಳು ದಿನಗಣನೆ ಮಾಡುತ್ತಿವೆ. ಇದಲ್ಲದೇ ಇನ್ನು ನಾಲ್ಕು ಹೊಸ ಚಿತ್ರಗಳನ್ನು ಒಪ್ಪಿಕೊಳ್ಳಲು ಸಜ್ಜಾಗಿರುವ ಅದಿತಿ, ನಿರ್ಮಾಪಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರಂತೆ.

ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದ ಅದಿತಿ, ಕೊರೊನಾ ಲಾಕ್‌ಡೌನ್‌ ಶುರುವಾದಾಗಿನಿಂದ ಮನೆ ಬಿಟ್ಟು ಆಚೆ ಕಾಲು ತೆಗೆದಿಟ್ಟಿಲ್ಲವಂತೆ. ‘ಕೊರೊನಾ ಲಾಕ್‌ಡೌನ್‌ ಸಮಯ ನಿಜಕ್ಕೂ ಎಲ್ಲರಿಗೂ ಸವಾಲಿನ ಅವಧಿ. ದುಡಿಮೆಯ ಒಂದಿಷ್ಟು ಭಾಗವನ್ನು ಉಳಿತಾಯ ಮಾಡಿದ್ದವರ ಜೀವನ ಸರಾಗವಾಗಿ ಸಾಗುತ್ತಿರಬಹುದು. ಆದರೆ, ದೈನಂದಿನ ದುಡಿಮೆಯನ್ನೇ ನಂಬಿಕೊಂಡು ಆಯಾ ದಿನದ ಬದುಕು ಸಾಗಿಸುತ್ತಿದ್ದವರಿಗೆ ನಿಜಕ್ಕೂ ಕಠಿಣ ಸನ್ನಿವೇಶ ಎದುರಾಗಿದೆ’ ಎಂದು ಮಾತು ವಿಸ್ತರಿಸಿದರು.

‘ಜಿದ್ದಿಗೆ ಬಿದ್ದವರಂತೆ, ಒಬ್ಬರಿಗೊಬ್ಬರು ಪೈಪೋಟಿಗೆ ಇಳಿದವರಂತೆ ಕೆಲಸ ಮಾಡುತ್ತಿದ್ದೆವು. ವಾರಕ್ಕೊಂದು ದಿನವು ಬಿಡುವು ತೆಗೆದುಕೊಳ್ಳದಷ್ಟು; ನಮ್ಮ ಮನಸು, ದೇಹಕ್ಕೆ ಒಂದಿಷ್ಟು ವಿಶ್ರಾಂತಿಯನ್ನು ನೀಡದಷ್ಟು ದುಡಿಮೆಗೆ ಅಂಟಿಕೊಂಡಿದ್ದೆವು. ಮೂರುನಾಲ್ಕು ವರ್ಷಗಳಿಂದ ನಾನೂ ಸಹ ಶನಿವಾರ, ಭಾನುವಾರವೂ ವಿಶ್ರಾಂತಿ ತೆಗೆದುಕೊಳ್ಳದೆ ಸಿನಿಮಾ ಶೂಟಿಂಗ್‌ಗೆ ಡೇಟ್‌ ಕೊಡುತ್ತಿದ್ದೆ. ಅಪ್ಪ– ಅಮ್ಮ, ಸ್ನೇಹಿತೆಯರೊಟ್ಟಿಗೆ ಸಮಯ ಕಳೆಯಲು ಸಮಯವಿಲ್ಲವೆನ್ನುತ್ತಿದ್ದೆ. ಈಗ ಸಮಯವಿದೆ, ಸಂದರ್ಭವಿಲ್ಲ! ನಮ್ಮ ಮನಸಿನ ಮಾತು ಕೇಳುವಷ್ಟು ಪುರುಷೊತ್ತು ಇಲ್ಲದಷ್ಟು ವೇಗವಾಗಿ ಹುಚ್ಚು ಕುದುರೆಯಂತೆ ಓಡುತ್ತಿದ್ದ ಬದುಕಿನ ಬಂಡಿಗೆ ನಿಜಕ್ಕೂ ಲಗಾಮು ಬಿದ್ದಿದೆ. ಜೀವನದಲ್ಲಿ ‘ಓವರ್‌ ಆ್ಯಕ್ಟಿಂಗ್‌ ಮಾಡಬೇಡಿ’ ಎಂದು ಕೊರೊನಾ ಎಚ್ಚರಿಕೆ ಕೊಡುತ್ತಿರುವಂತಿದೆ. ನಮ್ಮ ಒಳಗಿನ ದನಿಯನ್ನು ಆಲಿಸಲು ಕಿವಿಕೊಡಬೇಕಾದ ಕಾಲ ಖಂಡಿತ ಇದಾಗಿದೆ’ ಎನ್ನುವ ಮಾತು ಸೇರಿಸಿದರು.

‘ಕೊರೊನಾ ಕಾಲ ಮನುಷ್ಯ ತಾನು ಯಾವುದಕ್ಕೆ ಆದ್ಯತೆ ನೀಡಬೇಕೆನ್ನುವುದನ್ನು ಪುನರಾವಲೋಕನ ಅಥವಾ ಪುನರ್‌ಮನನ ಮಾಡಿಕೊಳ್ಳುವಂತೆ ಮಾಡಿದೆ. ಈಗ ಒಂದರ್ಥದಲ್ಲಿ ನನ್ನ ಲೈಫು ತುಂಬಾ ಸೊಗಸಾಗಿದೆ. ಬಾಲ್ಯ, ಶಾಲಾ‌– ಕಾಲೇಜು ದಿನಗಳನ್ನು ನೆನಪಿಸಿಕೊಂಡು, ನನ್ನ ಇಷ್ಟದ ಹವ್ಯಾಸ ಪೇಂಟಿಂಗ್ ಮತ್ತೆ ಶುರುಮಾಡಿದ್ದೇನೆ. ಪುಸ್ತಕಗಳನ್ನು ಓದಲು ಸಾಕಷ್ಟು ಸಮಯವೂ ಸಿಗುತ್ತಿದೆ. ಈ ಅವಧಿಯಲ್ಲಿ ಹಲವು ‍ಪುಸ್ತಕಗಳನ್ನು ಓದಿದೆ. ಇನ್ನೂ ಓದುತ್ತಲೇ ಇದ್ದೇನೆ. ಹಳೆಯ ಚಿತ್ರಗಳನ್ನು ನೋಡುವ ಜತೆಗೆ ವೆಬ್‌ ಸರಣಿಗಳನ್ನು ವೀಕ್ಷಿಸುತ್ತಿದ್ದೇನೆ. ಬದಲಾಗುತ್ತಿರುವ ನಿರೂಪಣಾ ತಂತ್ರ, ವೆಬ್‌ ಸರಣಿ ನಿರ್ಮಾಣ ಶೈಲಿಯನ್ನು ಗಂಭೀರವಾಗಿ ಗಮನಿಸುತ್ತಿದ್ದೇನೆ’ ಎನ್ನಲು ಅದಿತಿ ಮರೆಯಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು