ಸೋಮವಾರ, ಮಾರ್ಚ್ 30, 2020
19 °C

ಇದು ಥ್ರಿಲ್ಲರ್‌ ಜಮಾನಾ!

ರಮೇಶ್‌ ಅರವಿಂದ್‌ Updated:

ಅಕ್ಷರ ಗಾತ್ರ : | |

Prajavani

‘ಶಿವಾಜಿ ಸುರತ್ಕಲ್’ ಸಿನಿಮಾವನ್ನು ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಸ್ವೀಕರಿಸಿರುವುದು ನನಗಂತೂ ಖುಷಿ ಕೊಟ್ಟಿದೆ. ಈ ಪತ್ತೆದಾರಿ ಪ್ರಕಾರವನ್ನು ಜನರು ಸ್ವೀಕರಿಸಿರುವುದು ಆಶ್ಚರ್ಯದ ಸಂಗತಿಯಲ್ಲ. ಜನರಲ್ಲಿ ಈಗಲೂ ಪತ್ತೆದಾರಿ ಕಥೆಗಳ ಕುರಿತು ಮೋಹವಿದೆ ಎನ್ನುವುದು ನನ್ನ ನಂಬಿಕೆ.

ಚಿಕ್ಕವಯಸ್ಸಿನಲ್ಲೇ ಈ ತರಹದ ಕಥೆಗಳನ್ನು ಓದುತ್ತಿದ್ದಾಗ ನನಗೆ ಬಹಳ ಖುಷಿ ಕೊಟ್ಟ ಸರಣಿಗಳು ಹಲವು ಇವೆ. ಆರ್ಥರ್‌ ಕಾನನ್‌ ಡೈಲ್‌ ಅವರ ‘ಶೆರ್ಲಾಕ್‌ ಹೋಮ್ಸ್‌’, ಅಗಾಥಾ ಕ್ರಿಸ್ತೀ ಅವರ ‘ಹರ್‌ಕ್ಯೂಲ್‌ ಪಾಯ್‌ರಿಟ್‌’ ಎಲ್ಲವನ್ನೂ ಓದಿ ಬೆಳೆದವನು ನಾನು. ಕನ್ನಡದಲ್ಲಿ ಬರುತ್ತಿದ್ದ ಪತ್ತೆದಾರಿ ಕಥೆಗಳೂ ಬಹಳ ಮಜಾ ಕೊಡುತ್ತಿದ್ದವು.

ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ಈ ಡಿಟೆಕ್ಟಿವ್‌ ಪಾತ್ರಗಳು ತುಂಬಾ ಕುತೂಹಲ ಮೂಡಿಸುತ್ತಿದ್ದವು. ಆಗ ಒಂದು ಇಂಗ್ಲಿಷ್‌ ಫಿಲ್ಮ್‌ ನೋಡಿದ್ದೆ. ಅದರಲ್ಲಿ ಹೆಣ್ಣೊಬ್ಬಳು ಸಮುದ್ರದಲ್ಲಿ ಬಿದ್ದು ಸತ್ತಿರುತ್ತಾಳೆ. ಆದರೆ, ತಪಾಸಣೆ ಮಾಡಿದಾಗ ಅವಳ ಕರುಳಿನಲ್ಲಿ ನದಿಯ ಸ್ವಚ್ಛ ನೀರು ಇರುತ್ತದೆ. ಕರುಳಿನಲ್ಲಿ ನದಿ ನೀರಿದೆ, ಸತ್ತದ್ದು ಸಮುದ್ರದಲ್ಲಿ ಹೇಗೆ? ಸಿನಿಮಾದಲ್ಲಿ ಪತ್ತೆದಾರನೊಬ್ಬ ಅದೇ ಸುಳಿವು ತೆಗೆದುಕೊಂಡು ಕೊಲೆಗಾರ ಯಾರು ಎನ್ನುವುದನ್ನು ಕಂಡುಹಿಡಿಯತ್ತಾನೆ. ನನಗಂತೂ ಖುಷಿ. ಜನ ಹೇಗೆ ಅಷ್ಟು ಬುದ್ಧಿವಂತಿಕೆಯಿಂದ ಯೋಚಿಸ್ತಾರೆ ಎಂದು ಅಚ್ಚರಿ. ಆ ತರಹದ ವಿಷಯಗಳು ‘ಶಿವಾಜಿ ಸುರತ್ಕಲ್‌’ ಸಿನಿಮಾದಲ್ಲಿ ಬರಬೇಕೆಂದು ಬಯಸಿ ಹೆಣೆದ ಕಥೆಯೇ ‘ಕೇಸ್‌ ಆಫ್‌ ರಣಗಿರಿ ರಹಸ್ಯ.’ 

ಕನ್ನಡದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇವತ್ತು ಥ್ರಿಲ್ಲರ್‌ ಸಿನಿಮಾಗಳ, ಕಾದಂಬರಿಗಳ ಜನಪ್ರಿಯತೆಯ ಗ್ರಾಫ್‌ ಏರುತ್ತಲೇ ಇದೆ. ಈ ಗ್ರಾಫ್ ಆರಂಭದಿಂದಲೇ ಏರುಮುಖದಲ್ಲಿದೆ (ಗ್ರಾಫ್‌ ನೋಡಿ). ಬೇರೆ ಎಲ್ಲಾ  ಬಗೆಯದ್ದು –ಮ್ಯೂಸಿಕಲ್‌, ವೆಸ್ಟರ್ನ್‌, ರೊಮ್ಯಾನ್ಸ್‌ ಚಿತ್ರಗಳ ಕ್ರೇಜ್‌ ಕಡಿಮೆ ಆಗ್ತಿದೆ. ಆ್ಯಕ್ಷನ್‌ ಮತ್ತು ಕ್ರೈಮ್‌ ಚಿತ್ರ, ಪುಸ್ತಕಗಳ ಜನಪ್ರಿಯತೆ ಪರವಾಗಿಲ್ಲ ಎನ್ನುವಂತಿದೆ. ಆದರೆ ಈಗ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್ ಎಲ್ಲದರಲ್ಲೂ ಥ್ರಿಲ್ಲರ್‌ ಸಿನಿಮಾಗಳಿಗೆ ಬೇಡಿಕೆ ಏರುತ್ತಲೇ ಇದೆ. 

ಯಾಕೆ ಹೀಗೆ ಥ್ರಿಲ್ಲರ್‌ನ ಒಲವು ಏರುತ್ತಿದೆ? ಮೊದಲನೆಯದಾಗಿ ನಮ್ಮ ಮನುಷ್ಯನ ಮನಸ್ಸಿಗೆ ಒಂದು ಗುಣವಿದೆ. ಏನನ್ನಾದರೂ ನೋಡಿದರೆ ಅದಕ್ಕೊಂದು ಉತ್ತರ ಸಿಗಲೇಬೇಕು ಎನ್ನುವ ಕುತೂಹಲವದು. ಪಕ್ಕದ ಮನೆ ಹುಡುಗಿ ಯಾರ್‌ ಜೊತೆಗೋ ಓಡ್ಹೋದ್ಳು ಅಂದ್ರೆ ಸುದ್ದಿ ಕೇಳ್ಕೊಂಡು ನಾವು ಸುಮ್ಮನಿರೋಕಾಗಲ್ಲ. ಅವಳು ಯಾರು, ಯಾಕೆ ಓಡಿಹೋದಳು ಅನ್ನೋದು ತಲೆ ಕೊರೆಯೋಕೆ ಶುರುವಾಗುತ್ತೆ. ಆ ತರಹದ ಸಣ್ಣ ಪ್ರಶ್ನೆಗಳಿಂದ ಹಿಡಿದು, ಜೀವನದ ಅರ್ಥ ಏನು ಎನ್ನುವ ದೊಡ್ಡ ಪ್ರಶ್ನೆಯವರೆಗೆ ನಮ್ಮ ಮನಸ್ಸಿಗೆ ಒಂದು ತರ್ಕಬದ್ಧ ಉತ್ತರ ಬೇಕು. ಬರೀ ಪ್ರಶ್ನೆ ಉಳಿಯಬಾರದು. ಅದಕ್ಕೊಂದು ಫುಲ್‌ಸ್ಟಾಪ್‌ ಹಾಕುವ ಉತ್ತರ ಸಿಗಬೇಕು. ಉತ್ತರವನ್ನು ಮೆದುಳು ಹುಡುಕುತ್ತಲೇ ಇರುತ್ತದೆ. ಹಾಗಾಗಿಯೇ ಮಿಸ್ಟರಿ, ಥ್ರಿಲ್ಲರ್‌, ಪತ್ತೆದಾರಿ ಕಥೆಗಳು ಜನರಿಗೆ ಬಹಳ ಇಷ್ಟವಾಗುತ್ತವೆ.

ಎಲ್ಲಾ ಥ್ರಿಲ್ಲರ್‌ಗಳಲ್ಲೂ ಒಂದು ಕೊಲೆಯಾಗುತ್ತದೆ ಅಥವಾ ಏನೋ ಆಗಬಾರದ್ದು ಆಗುತ್ತದೆ. ಅದನ್ನು ಯಾರು ಹೇಗೆ ಮಾಡಿದರು, ಏಕೆ ಮಾಡಿದರು ಎನ್ನುವುದನ್ನು ನಾಯಕ ಹುಡುಕುತ್ತಾ ಹೋಗುವಾಗ ನಾವೂ ಅವನ ಜೊತೆಗೆ ಪ್ರಯಾಣ ಮಾಡುತ್ತೇವೆ. ಇದನ್ನು ಆಲ್ಫ್ರೆಡ್‌ ಹಿಚ್‌ಕಾಕ್‌ ಬಹಳ ಚೆನ್ನಾಗಿ ಹೇಳಿದ್ದಾರೆ. ‘ಒಬ್ಬ ಗೋಲ್ಡ್‌ ಕ್ಲಾಸ್‌ ಟಿಕೆಟ್‌ ತಗೊಂಡು ಆರಾಮವಾಗಿ ಪಿಕ್ಚರ್‌ ನೋಡಬೇಕೆಂದು ಬಯಸಿದಾಗ, ನೀವು ಅವನನ್ನು ಆರಾಮವಾಗಿ ಕುಳಿತುಕೊಳ್ಳಲು ಬಿಡಬಾರದು. ಆತ ಸೀಟಿನ ತುದಿಯಲ್ಲಿ ಕುಳಿತುಕೊಂಡು ನೋಡಬೇಕು. ಅದೇ ಒಬ್ಬ ನಿರ್ದೇಶಕನ ಕೆಲಸ’ ಎನ್ನುವುದು ಹಿಚ್‌ಕಾಕ್‌ ಥಿಯರಿ. 

ನಿರ್ದೇಶಕನೊಬ್ಬ ಇಂತಹ ಥ್ರಿಲ್ಲರ್‌ ಅಥವಾ ಡಿಟೆಕ್ಟಿವ್‌ ಸಿನಿಮಾ ಮಾಡಿದಾಗ, ಯಾರ ಮೇಲೆ ಅನುಮಾನ ಬರಬಾರದೋ ಅವರ ಮೇಲೆಲ್ಲ ಅನುಮಾನ ಬರಬೇಕು ಎನ್ನುವ ರೀತಿಯಲ್ಲಿ ಚಿತ್ರಕಥೆ ಬರೆಯುತ್ತಾನೆ. ಇದನ್ನು ‘ರೆಡ್‌ ಹೆರಿಂಗ್‌’ ಎನ್ನುತ್ತೇವೆ. ಬೇಕೆಂದೇ ಪ್ರೇಕ್ಷಕನನ್ನು ದಾರಿ ತಪ್ಪಿಸಲು ಚಿತ್ರಕಥೆಯಲ್ಲಿ ಕೆಲವು ವಿಷಯಗಳನ್ನು ತುರುಕುತ್ತೇವೆ. ಬೇರೆ ಯಾರೋ ಕೊಲೆಗಾರ ಎಂದು ಪ್ರೇಕ್ಷಕ ಅಂದುಕೊಳ್ಳಬೇಕು. ಆ ತರಹ ತಪ್ಪುದಾರಿಗೆ ಒಯ್ಯುವುದು. ಅದೇ ತರಹ, ಒಂದು ಸಾವು ಒಂದು ಕುಟುಂಬದಲ್ಲಿ ಬಹಳ ದುಃಖದ, ವಿಶೇಷವಾದ ಪರಿಣಾಮ ಬೀರುತ್ತದೆ.

ಡಿಟೆಕ್ಟಿವ್‌ ಪಾತ್ರಕ್ಕೆ ಕೊಲೆ ಅಂದರೆ ಒಂದು ಒಗಟು. ಅಲ್ಲಿ ಭಾವನೆಗಳಿಗಿಂತ ಹೆಚ್ಚಾಗಿ ಈ ಕೊಲೆ ಮಾಡಿದವರು ಯಾರು ಎನ್ನುವ ಕುತೂಹಲವೇ ಇರುತ್ತದೆ. ಒಂದು ಸಾವು ಅನ್ನುವುದು ಕ್ಷಮಿಸಲಾರದಂತಹದ್ದು. ಜೀವನಕ್ಕಿಂತ ದೊಡ್ಡ ವಿಷಯ ಬೇರೆ ಯಾವುದೂ ಇಲ್ಲ. ಅಂತಹ ಜೀವವನ್ನು ಒಬ್ಬ ತೆಗೆದಿದ್ದಾನೆಂದರೆ ಅದನ್ನು ಕಂಡುಹಿಡಿಯಲೇಬೇಕು ಅನ್ನೋದೇ ಪ್ರೇಕ್ಷಕರ ಆಸೆಯೂ ಆಗುತ್ತದೆ. ಹಾಗಾಗಿಯೇ ಪತ್ತೆದಾರಿ ಕಥೆ ಎಲ್ಲರಿಗೂ ಹಿಡಿಸುತ್ತದೆ.

ಪತ್ತೆದಾರಿ ಕಾದಂಬರಿ ಓದಿದಾಗ ಅದೊಂದು ಪೇಜ್‌ ಟರ್ನರ್‌ ಆಗಿರಬೇಕು ಎನ್ನುತ್ತಾರೆ. ಅಂದರೆ ಮುಂದಿನ ಪುಟದಲ್ಲಿ ಏನಾಗುತ್ತದೆ ಎನ್ನುವ ಅದಮ್ಯ ಕುತೂಹಲ ಹುಟ್ಟಿಸಬೇಕು. ಈ ರೀತಿಯ ಕುತೂಹಲ ನಿರಂತರವಾಗಿದ್ದರೆ ಆ ಪತ್ತೆದಾರಿ ಕಾದಂಬರಿ ಗೆಲ್ಲುತ್ತದೆ. ಆಗ ಆ ಡಿಟೆಕ್ಟಿವ್‌ ಪಾತ್ರವೂ ಬಹಳ ಮುಖ್ಯವಾಗುತ್ತದೆ. 

ಶೆರ್ಲಾಕ್‌ ಹೋಮ್ಸ್‌ನ ದೇಸಿ ವರಸೆ ಎಂಬಂತೆ ಶಿವಾಜಿ ಸುರತ್ಕಲ್‌ನನ್ನು ಸೃಷ್ಟಿಸಿದ್ದೇವೆ. ಒಂದು ವೇಳೆ ಹೋಮ್ಸ್‌ ಕರ್ನಾಟಕದಲ್ಲಿ ಹುಟ್ಟಿದ್ದು, ಅವನ ಮಾತೃಭಾಷೆ ಕನ್ನಡ ಆಗಿದ್ದಿದ್ದರೆ ಅವನೇ ಶಿವಾಜಿ ಸುರತ್ಕಲ್‌ ಎಂದು ಅಂದುಕೊಂಡು ನಾವು ಈ ಸಿನಿಮಾ ಶುರು ಮಾಡಿದೆವು. ಆದರೆ, ಶೆರ್ಲಾಕ್‌ ಹೋಮ್ಸ್‌ ಪಾತ್ರವನ್ನು ಸುಮಾರು 200 ಸಿನಿಮಾಗಳಲ್ಲಿ 75 ಮಂದಿ ವಿಭಿನ್ನ ನಟರು ಮಾಡಿದ್ದಾರೆ. ಅವರ ಮಧ್ಯೆ ಶಿವಾಜಿ ಸುರತ್ಕಲ್‌ ಹೇಗಿರಬೇಕು ಎನ್ನುವ ಪ್ರಶ್ನೆ ತಲೆ ತಿಂದದ್ದು ಸುಳ್ಳಲ್ಲ.

ಅದಕ್ಕೆಂದೇ ನಾಯಕ ನಟನಿಗೆ ಕೆಲವು ಮ್ಯಾನರಿಸಂಗಳನ್ನು ಹುಟ್ಟುಹಾಕಿದೆವು. ವೇಗವಾಗಿ ಯೋಚಿಸುವ ಮನುಷ್ಯ ವೇಗವಾಗಿ ನಡೆಯುತ್ತಾನೆ. ಆಂಗಿಕ ಭಾಷೆಯನ್ನು ಬದಲಾಯಿಸಿದೆವು. ಅದರ ಜೊತೆಗೆ ಶಿವಾಜಿಗೆ ಕೆಲವು ಮಾನಸಿಕ ಗೊಂದಲಗಳನ್ನು ಜೋಡಿಸಿದೆವು. ಇದರಿಂದ ಆ ಪಾತ್ರಕ್ಕೆ ಇನ್ನಷ್ಟು ಕುತೂಹಲಕರ ಆಯಾಮ ಸಿಕ್ಕಿತು.

ಸಾಮಾನ್ಯ ಪತ್ತೆದಾರ ಎನ್ನುವುದಕ್ಕಿಂತ, ಅವನಿಗೂ ಮಾನಸಿಕ ತೊಂದರೆಗಳಿವೆ. ರಾತ್ರಿ ನಿದ್ರೆ ಬರಲ್ಲ, ಡಿಪ್ರೆಶನ್‌ ಇದೆ. ನಾಲ್ಕು ವರ್ಷಗಳ ಹಿಂದೆ ಮನೆಗೆ ಬಂದಾಗ ಮನೆಯಲ್ಲಿ ಹೆಂಡತಿ ಕಾಣುತ್ತಿಲ್ಲ. ಎಲ್ಲ ಕೋಣೆ ಹುಡುಕುತ್ತಾನೆ. ಹೊರಗೆ ಬಂದು ನೋಡಿದರೆ ಬಹಳ ಪ್ರೀತಿಯಿಂದ ಸಾಕಿದ ಗುಲ್ಮಾ ಎನ್ನುವ ನಾಯಿಮರಿಯೂ ಇಲ್ಲ. 3ರಿಂದ 4 ವರ್ಷಗಳಿಂದ ಹುಡುಕಿದ ಹೆಂಡತಿ ಇದ್ದಾಳಾ, ಸತ್ತಿದ್ದಾಳಾ ಒಂದೂ ಗೊತ್ತಾಗುತ್ತಿಲ್ಲ. ಒಂದು ದಿನ ಗೊತ್ತಾಯ್ತು ಹೆಂಡತಿ ಸತ್ತಿದ್ದಾಳೆ. ಆದರೆ, ಯಾರು ಕೊಂದದ್ದು ಎನ್ನುವುದು ಗೊತ್ತಿಲ್ಲ. ರಾತ್ರಿ ನಿದ್ರೆಯಲ್ಲಿ ಹೆಂಡತಿ ಕಾಡುತ್ತಾಳೆ; ಭ್ರಮೆ ಎಂಬಂತೆ ಕಣ್ಣಿಗೆ ಕಾಣಿಸಿಕೊಳ್ಳುತ್ತಾಳೆ. ಈ ಎಲ್ಲದರ ಮಧ್ಯೆ 48 ಗಂಟೆಗಳ ಒಳಗೆ ಒಂದು ಕೊಲೆಯ ರಹಸ್ಯವನ್ನು ಭೇದಿಸಬೇಕಿದೆ. ಟೈಮ್‌ ಲಿಮಿಟ್‌, ಕಥೆ ಒಂದೇ ರೆಸಾರ್ಟ್‌ನಲ್ಲಿ ನಡೆಯುತ್ತದೆ. ಆ ಜಾಗ ರಣಗಿರಿಯೇ ಸರಿಯಿಲ್ಲ. ಅಲ್ಲಿ ಮಾಟ, ಮಂತ್ರ ನಡೀತದೆ. ‘ಆಪ್ತಮಿತ್ರ’ದಲ್ಲಿ ನಾಗವಲ್ಲಿ ಪಾತ್ರ ಇದ್ದ ಹಾಗೆಯೇ ಇಲ್ಲಿ ಮೊಗ್ಗಿನ ಜಡೆಯ ರಂಗನಾಯಕಿ ಅಂತ ಒಂದು ಕಥೆಯಿದೆ. ಇದೆಲ್ಲದರ ಮಧ್ಯೆ ಕೊಲೆಗಾರನನ್ನು ಕಂಡು ಹಿಡಿಯುವುದು ಕಷ್ಟ ಎಂದು ಪ್ರೇಕ್ಷಕನಿಗೂ ಅನ್ನಿಸಬೇಕು. ಹಾಗಿದೆ ಚಿತ್ರಕಥೆ.

‘ಶಿವಾಜಿ ಸುರತ್ಕಲ್‌’ ಗೆದ್ದಿರುವುದು ಧೈರ್ಯ ತುಂಬಿದೆ. ಶಿವಾಜಿಯ ಇನ್ನಷ್ಟು ಸಾಹಸಗಳು ಬರಲಿವೆ. ‘ರಣಗಿರಿಯ ರಹಸ್ಯ 101ನೇ ಕೇಸ್‌’ ಅಂತ ಕೊಟ್ಟಿದ್ದೆವು. ಇನ್ನು ಮುಂದೆ 105ನೇ ಕೇಸ್‌ ಮಾಡಬಹುದು ಅಥವಾ ಹಿಂದಕ್ಕೆ ಹೋಗಿ 43ನೇ ಕೇಸ್‌ ಮಾಡಬಹುದು. ‘ಸುಧಾ’ದಂತಹ ಕನ್ನಡದ ಪತ್ರಿಕೆಗಳಲ್ಲಿ ಇಂತಹ ಪತ್ತೆದಾರಿ ಕಥೆಗಳು ಸೀರಿಯಲ್‌ ಆಗಿ ಬರಬೇಕು. ಏಕೆಂದರೆ ಇದು ಥ್ರಿಲ್ಲರ್‌ ಜಮಾನಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು