ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಗಣ್ಣಿನ ದಿಲೀಪ್ ಕುಮಾರ್ ರಿಯಲ್‌ ಬಾದ್‌ಷಾ!

Last Updated 10 ಜುಲೈ 2021, 19:30 IST
ಅಕ್ಷರ ಗಾತ್ರ

ಕನಸುಗಣ್ಣಿನ ದಿಲೀಪ್ ಕುಮಾರ್ ಬೆಳ್ಳಿಪರದೆಯ ತಮ್ಮ ಮೋಹಕತೆಯಿಂದ ಎಲ್ಲರನ್ನೂ ಮನರಂಜಿಸಿ, ಅಪಾರ ಪ್ರೀತಿ ಗಳಿಸಿದ್ದೇನೋ ನಿಜ. ಆದರೆ, ತೆರೆಯ ಆಚೆಗೆ ಅವರವ್ಯಕ್ತಿತ್ವ ಹಲವು ಆಯಾಮಗಳಿಂದ ಹೊಳೆದಿದ್ದು ಹೆಚ್ಚಿನ ಜನರ ಗಮನವನ್ನು ಸೆಳೆದಿಲ್ಲ. ನಟನೊಬ್ಬನು ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕಾದ ಅಗತ್ಯದ ಕುರಿತು ದಿಲೀಪ್ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ಅತ್ಯಂತ ಸಂದಿಗ್ಧ ಸಂದರ್ಭಗಳಲ್ಲಿ ಮುಖಾಮುಖಿಯಾಗಿ ನಿಂತು ಹೋರಾಡಿದ್ದಾರೆ.

ತಮ್ಮ ಐವತ್ತು ವರ್ಷಗಳ ಚಿತ್ರ ಪ್ರಯಾಣದಲ್ಲಿ ನಟನೆಯಲ್ಲಿ ಮಾತ್ರವಲ್ಲ, ಸಮಾಜದ ಬಗ್ಗೆ ನಿಜವಾದ ಕಾಳಜಿ ಹೊಂದಿ, ಗಂಭೀರ ಚಿಂತನೆಯಲ್ಲಿ ತೊಡಗಿಕೊಂಡವರು ಅವರು. ಕೃಷಿಯಿಂದ ತೊಡಗಿ ಕೈಗಾರಿಕೀಕರಣ, ರಾಜಕೀಯ, ವೈದ್ಯಕೀಯ, ಶಿಕ್ಷಣ, ಸಮಾನತೆ, ಆರ್ಥಿಕ ಸಾಮಾಜಿಕ ಸಂದಿಗ್ಧ... ಇತ್ಯಾದಿಗಳ ಬಗ್ಗೆ ಸ್ಪಷ್ಟ ನಿಲುವುಗಳನ್ನು ತಾಳಿ ಅವುಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೇಳುವ ಛಾತಿಯುಳ್ಳ ವ್ಯಕ್ತಿಯಾಗಿದ್ದವರು. ಕಲೆಯ ಬಗ್ಗೆ ಅವರಿಗಿದ್ದ ತೀವ್ರತೆ ಮತ್ತು ಅದನ್ನು ಬದುಕಿನುದ್ದಕ್ಕೂ ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿಸಿಕೊಂಡ ರೀತಿ ದಿಗ್ಭ್ರಮೆ ಹುಟ್ಟಿಸುವಂತಹದು.

ಪುಣೆಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಒಂದು ಕ್ಯಾಂಟೀನ್ ಮತ್ತು ಹಣ್ಣಿನ ಅಂಗಡಿ ನಡೆಸುತ್ತಿದ್ದ ಯೂಸುಫ್‌ ಖಾನ್, ಅಲ್ಲಿ ಶೂಟಿಂಗಿಗೆ ಬಂದಿದ್ದ ಪ್ರಸಿದ್ಧ ನಟಿ ದೇವಿಕಾರಾಣಿಯ ಕಣ್ಣಿಗೆ ಬಿದ್ದು ನಟನಾದದ್ದು ಎಲ್ಲರಿಗೂ ಗೊತ್ತಿರುವ ಕಥೆ. ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಂತೆ ಬಾಂಬೆ ಟಾಕೀಸ್ ಸ್ಟುಡಿಯೊದವರು ಮೂರು ವರ್ಷದ ಕಾಂಟ್ರಾಕ್ಟ್‌ಗೆ ಸಹಿ ಹಾಕಿಸಿಕೊಂಡಾಗ ತಿಂಗಳಿಗೆ ಸಾವಿರದ ಇನ್ನೂರು ರೂಪಾಯಿ ಸಂಬಳ ಎನ್ನುವುದನ್ನು ವರ್ಷಕ್ಕೆ ಎಂದು ತಪ್ಪು ತಿಳಿದುಕೊಂಡು ಹೋಗಲೇ ಇಲ್ಲವಂತೆ! ಮತ್ತೆ ಅದು ತಿಂಗಳಿಗೆ ಎಂದು ತಿಳಿಸಿ ಹೇಳಿದಮೇಲೆ ಒಪ್ಪಿಕೊಂಡರಂತೆ.

ಮೊದಲ ಚಿತ್ರ ‘ಜ್ವಾರ್ ಭಾಟಾ’ ಯಶಸ್ವಿಯಾಗಲಿಲ್ಲ. ಅಷ್ಟೇ ಅಲ್ಲ, ಅಂದಿನ ಪ್ರಖ್ಯಾತ ಪತ್ರಕರ್ತ ಬಾಬುರಾವ್ ಪಟೇಲ್ ‘ಫಿಲಂ ಇಂಡಿಯಾ’ ಎನ್ನುವ ಅತ್ಯಂತ ಜನಪ್ರಿಯ ಪತ್ರಿಕೆಯಲ್ಲಿ ‘ಇವನು ಸರಿಯಾಗಿ ಊಟ ಮಾಡಿ ಎಷ್ಟು ದಿನವಾಯಿತೋ? ಇವನಿಗೆ ವಿಟಮಿನ್ ಕೊಡಿಸಬೇಕು, ನಟನೆ ಇವನ ಕೈಯಲ್ಲಿ ಆಗದ ಕೆಲಸ’ ಇತ್ಯಾದಿ ಹೀನಾಯವಾಗಿ ಬರೆದಿದ್ದರು. ಅಲ್ಲಿಯವರೆಗೆ ಒಂದು ಚಿತ್ರವನ್ನೂ ನೋಡಿರದ ದಿಲೀಪ್ ಈ ಟೀಕೆಯನ್ನು ನೋಡಿ, ‘ನನಗ್ಯಾಕೆ ನಟನೆ ಬರುವುದಿಲ್ಲ’ ಎಂದು ಚಿತ್ರಗಳನ್ನು ನೋಡಲು ಶುರು ಮಾಡಿದರು. ಅದರಲ್ಲೂ ಇಂಗ್ಲಿಷಿನ ನಟರನ್ನು ಅಧ್ಯಯನ ಮಾಡಿದರು. ಜೋರಾಗಿ ಓದಿ ಓದಿ ತಮಗೆ ತಾವೇ ಧ್ವನಿ ತರಬೇತಿಯನ್ನು ನೀಡಿಕೊಂಡರು. ಪರಿಣಾಮ ಮೂರನೇ ಚಿತ್ರ ‘ಜುಗ್ನು’ ಯಶಸ್ವಿಯಾಯಿತು. ಮತ್ತೆ ನಾಲ್ಕನೇ ಚಿತ್ರ ‘ಮಿಲನ್‌’ನಲ್ಲಿ ಇದೇ ದಿಲೀಪ್ ಅಭಿನಯವನ್ನು ಅದೇ ಬಾಬುರಾವ್ ಪಟೇಲ್ ಹೊಗಳಿ ಬರೆದರು!

1970ರಲ್ಲಿ ಬಿಬಿಸಿಗೆ ಕೊಟ್ಟ ಒಂದು ಸಂದರ್ಶನದಲ್ಲಿ ದಿಲೀಪ್ ಹೀಗೆ ಹೇಳಿಕೊಂಡಿದ್ದಾರೆ: ‘ಪ್ರತಿದಿನ ದುರಂತ ದೃಶ್ಯಗಳನ್ನು ಮಾಡುತ್ತಾ ಮಾಡುತ್ತಾ ಅದು ನನ್ನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಲಾರಂಭಿಸಿತು. ಪಾತ್ರದ ಶೇಷ ನನ್ನಲ್ಲಿ ಉಳಿದುಕೊಳ್ಳಲಾರಂಭಿಸಿತು. ಕೊನೆಗೆ ಸೈಕಿಯಾಟ್ರಿಸ್ಟ್ ಆಗಿದ್ದ ನನ್ನ ಗೆಳೆಯನ ಹತ್ತಿರ ಮಾತನಾಡಿದೆ. ಆತ ಕಾಮಿಡಿ ಪಾತ್ರ ಮಾಡು ಎಂದು ಹೇಳಿದ’. ಹೌದು, ದಿಲೀಪ್ ಮಾಡಿದ ಕಾಮಿಡಿ ಪಾತ್ರಗಳೂ ಅಷ್ಟೇ ಅದ್ಭುತ.

ದುರಂತ ನಾಯಕ ಎನ್ನುವ ಪಟ್ಟ ದಿಲೀಪ್ ಅವರು ಬಯಸಿದ್ದೇನೂ ಅಲ್ಲ. ‘ಜನರಿಗೆ ಅದೇ ಇಷ್ಟ. ನಾನು ಸಾಯೋದನ್ನ ನೋಡಲು ಅವರು ಬಯಸುತ್ತಿದ್ದರು! ಹಾಗಾಗಿ ನೀನೇನು ಮಾಡಬೇಕೋ ಅದನ್ನು ಮಾಡು ಅಂತ ಹೊರಗಿನ ದಿಲೀಪ್ ಹೇಳಿಕೊಳ್ಳುತ್ತಿದ್ದ, ಒಳಗಿನ ಯೂಸುಫ್‌ ಖಾನ್ ಅದಕ್ಕೆ ಶಾಮೀಲಾಗುತ್ತಿರಲಿಲ್ಲ! ಕೊನೆಗೆ ಅದರೊಂದಿಗೆ ನಾನು ಸಂಧಾನ ಮಾಡಿಕೊಳ್ಳಲೇ ಬೇಕಾಗಿತ್ತು’ ಎಂದು ಹೇಳಿದ್ದರು.

‘ಪಠಾಣರಿಗೆ ಕಲೆ ಅಂದರೆ ದೂರ. ಅದರಲ್ಲೂ ಒಬ್ಬ ಕಲಾವಿದನಿಗೆ ‘ಇವಳು ನಿನ್ನ ತಾಯಿ. ಸತ್ತುಹೋಗಿದ್ದಾಳೆ, ಈಗ ನೀನು ಅವಳಿಗಾಗಿ ಪ್ರಲಾಪಿಸಬೇಕು’ ಎಂದು ಹೇಳುತ್ತಾರೆ. ಅಲ್ಲಿ ಮಲಗಿರುವ ವ್ಯಕ್ತಿ ಲಲಿತಾ ಪವಾರ್ ಅದೇತಾನೇ ಹೊಟ್ಟೆ ತುಂಬಾ ಊಟಮಾಡಿ ಎಲೆ ಅಡಿಕೆ ಹಾಕಿಕೊಂಡು ಮೇಕಪ್ ಮ್ಯಾನ್ ಜೊತೆ ಜಗಳವಾಡಿಕೊಂಡು ಬಂದು ಮಲಗಿದ್ದಾಳೆ. ಅವಳು ನನ್ನ ತಾಯಿ ಅಲ್ಲ, ಅವಳು ಸತ್ತಿಲ್ಲ, ಶಾಟ್ ಮುಗಿದ ಮೇಲೆ ಎದ್ದು ಹೋಗುತ್ತಾಳೆ ಅನ್ನುವುದು ನನಗೆ ಗೊತ್ತು. ಆದರೆ, ನಾನು ತಾಯಿ ಸತ್ತಂತೆ ದುಃಖಪಡಬೇಕು. ಅದಕ್ಕೆ ನನ್ನ ಒಳಗಿನಿಂದ ಅನುಭವವನ್ನು ಹೊರಗೆಳೆಯಬೇಕು. ಅದು ಖಾಲಿಯಾದರೆ ಭಯ ಉಂಟಾಗುತ್ತದೆ’ – ನಟನೆಯ ಕುರಿತು ಈ ಕಲಾವಿದ ಹೊಂದಿದ್ದ ಇಂತಹ ಒಳನೋಟಗಳೆಷ್ಟೋ.

ಭಾರತೀಯ ಕಲೆ ಕುರಿತ ದಿಲೀಪ್ ಅವರ ಮಾತು ಯೋಚಿಸುವಂತಿದೆ: ‘ನಮ್ಮ ಚಿತ್ರ ಸಾಹಿತ್ಯ, ನಮ್ಮ ನೆಲದ ಭದ್ರ ತಳಪಾಯದ ಮೇಲೆ ನಿಂತಿತ್ತು. ಬಂಕಿಮಚಂದ್ರ, ಟ್ಯಾಗೋರ್, ಪ್ರೇಮ್‌ಚಂದ್, ಇಕ್ಬಾಲ್, ಕನ್ಹಯ್ಯ ಲಾಲ್ ಕಪೂರ್, ಸಾದತ್ ಹಸನ್ ಮಾಂಟೊ ಮುಂತಾದವರ ಸೃಷ್ಟಿಗಳ ಮೂಲದ್ರವ್ಯಗಳನ್ನು ಆಧರಿಸಿ ತಯಾರಾಗುತ್ತಿತ್ತು. ನಮ್ಮ ಗಾಲಿಬ್, ಮೀರ್ ತಕಿ ಮೀರ್ ಮುಂತಾದವರ ಕಾವ್ಯದ ನೆರವಿತ್ತು. ಉದ್ಯಮೀಕರಣ ಹೆಚ್ಚಾದಂತೆ ನಮ್ಮ ಸಾಹಿತ್ಯದಲ್ಲಿ ಏನಿದೆ ಎಂದು ಪ್ರಶ್ನಿಸಲಾಗುತ್ತಿದೆ. ಪಾಶ್ಚಾತ್ಯರನ್ನು ಅನುಕರಿಸುತ್ತಾ ನಮ್ಮತನವನ್ನು ಮರೆತುಬಿಟ್ಟಿದ್ದೇವೆ. ನಾವು ತಾಂತ್ರಿಕತೆಯನ್ನು ಆಮದು ಮಾಡಿಕೊಳ್ಳಬಹುದು, ಆದರೆ ಸಾಹಿತ್ಯವನ್ನಲ್ಲ. ನಮ್ಮದನ್ನು ನಾವು ಮರೆತೆವು. ಮಳೆ ಬೀಳದೆ ಬರ ಬಂತೆಂದು, ನೆಲ ಧಾನ್ಯ ಕೊಡಲಿಲ್ಲವೆಂದು ನಾವು ಭೂಮಿಗೆ ಉಗಿಯಲಿಲ್ಲ. ರೈತನನ್ನು ‘ಜಲೀಲ್’ ಎಂದು ಕರೆಯಲಿಲ್ಲ. ಇದ್ಯಾಕೆ ಹೀಗಾಗುತ್ತಿದೆ ಎಂದು ವಿಶ್ಲೇಷಣೆ ಮಾಡಿದ್ದೇವೆಯೇ ಹೊರತು ಶಾಪ ಕೊಡಲಿಲ್ಲ’.

ದಿಲೀಪ್ ಅವರದು ಮೆಥಡ್ ಆ್ಯಕ್ಟಿಂಗ್. ಅದಕ್ಕೇ ಪಾತ್ರಗಳಿಂದ ಹೊರಗೆ ಬರುವುದು ಅವರಿಗೆ ಕಷ್ಟವಾಗುತ್ತದೆ ಎನ್ನಲಾಗುತ್ತದೆ. ನಟ ಒಬ್ಬನೇ ಆದರೂ ಅವನು ಹಲವಾರು ವ್ಯಕ್ತಿತ್ವಗಳನ್ನು ಆವಾಹಿಸಿಕೊಳ್ಳಬೇಕಾಗುತ್ತದೆ. ‘ಗಂಗಾ ಜಮುನಾ’ ಚಿತ್ರದ ಪಾತ್ರ ಮಾಡಲು ದಿಲೀಪ್ ಕುಮಾರ್ ತಮ್ಮ ತೋಟದ ಮಾಲಿಯನ್ನು ನೋಡಿ ಅಭ್ಯಾಸ ಮಾಡಿದರು. ‘ದೀದಾರ್’ ಚಿತ್ರದಲ್ಲಿ ಮೊದಲ ಬಾರಿಗೆ ಕುರುಡನ ಪಾತ್ರ ಮಾಡಬೇಕಿತ್ತು. ಅದುವರೆಗೆ ಕುರುಡನ ಪಾತ್ರ ಮಾಡಬೇಕಾದಾಗ ನಟರು ಕಣ್ಣುಮುಚ್ಚಿ ಅಭಿನಯಿಸುತ್ತಿದ್ದರು. ಅದು ದಿಲೀಪ್‌ಗೆ ಪಲಾಯನದ ದಾರಿ ಅನ್ನಿಸಿತು. ಕಣ್ಣು ತೆರೆದೇ ಅಭಿನಯಿಸಿದರೆ ಹೇಗೆ ಎಂದು ಅಶೋಕ್ ಕುಮಾರ್ ಬಳಿ ಸಲಹೆ ಕೇಳಿದರು. ಅದಕ್ಕೆ ಅವರು ಅಂಧೇರಿ ರೈಲ್ವೆ ಸ್ಟೇಷನ್ ಹತ್ತಿರ ಒಬ್ಬ ಫಕೀರ ಭಿಕ್ಷೆ ಬೇಡುತ್ತಿರುತ್ತಾನೆ. ಅವನು ಕುರುಡ. ಆದರೆ, ಕಣ್ಣು ತೆರೆದಿರುತ್ತಾನೆ. ಅವನನ್ನು ಹೋಗಿ ನೋಡು ಎಂದರು. ದಿಲೀಪ್ ಅವನ ಬಳಿಗೆ ಹೋಗಿ, ಅವನು ಹೇಗೆ ಮಾತಾಡುತ್ತಾನೆ, ನಡೆಯುತ್ತಾನೆ, ತಿರುಗುತ್ತಾನೆ ಎಲ್ಲವನ್ನೂ ಅಭ್ಯಾಸ ಮಾಡಿದರು. ಅವನೊಂದಿಗೆ ಸ್ನೇಹವನ್ನು ಮಾಡಿದರು. ಪರಿಣಾಮ ‘ದೀದಾರ್‌’ನ ಕುರುಡನ ಪಾತ್ರ ಅದ್ಭುತವಾಗಿ ಮೂಡಿಬಂತು.

‘ನನಗೆ ಕೊಟ್ಟ ಪಾತ್ರ ಮೂವತ್ತು ವರ್ಷದವನದಾಗಿದ್ದರೆ ಅಲ್ಲಿಯವರೆಗೆ ಅವನ ಬದುಕಿನ ಯಾವ ಅಂಶದ ಬಗ್ಗೆಯೂ ನನ್ನಲ್ಲಿ ಡೇಟಾ ಇರುವುದಿಲ್ಲ. ಆ ಕೊರತೆಯನ್ನು ನಾನೇ ತುಂಬಿಕೊಳ್ಳುತ್ತೇನೆ. ಅವನ ಹುಟ್ಟಿನಿಂದ ಪ್ರಾರಂಭಿಸುತ್ತೇನೆ. ಅವನ ಬದುಕಿನಲ್ಲಿ ಆಗಿರಬಹುದಾದ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳನ್ನು ಕಲ್ಪಿಸಿಕೊಳ್ಳುತ್ತೇನೆ. ಅವನ ವ್ಯಕ್ತಿತ್ವಕ್ಕೆ ರಕ್ತ ಮಾಂಸ ತುಂಬಿಕೊಳ್ಳುವ ಪ್ರಯತ್ನ ಮಾಡುತ್ತೇನೆ’ ಎಂದಿದ್ದರು ಈ ನಟ. ‘ಮೊಘಲ್ ಏ ಆಜಂ’ನಲ್ಲಿ ರಾಜಕುಮಾರ ಸಲೀಮನ ಪಾತ್ರ ಮಾಡಲು ದಿಲೀಪ್ ಕುಮಾರ್‌ಗೆ ಯಾವ ರೆಫರೆನ್ಸ್‌ಗಳೂ ಇರಲಿಲ್ಲವಂತೆ. ಒಂದು ಕಾಲದಲ್ಲಿ ಕಾಲೇಜು ಹುಡುಗಿಯರು ದಿಲೀಪ್ ಹೆಸರಿನಲ್ಲಿ ಶಪಥ ಮಾಡುತ್ತಿದ್ದರು ಎಂದರೆ ಈ ಕಲಾವಿದನ ಕುರಿತು ಯಾವ ಮಟ್ಟದ ಕ್ರೇಜ್ ಇತ್ತು ಎನ್ನುವುದನ್ನು ಊಹಿಸಿಕೊಳ್ಳಿ.

1993ರಲ್ಲಿ ಬಾಬ್ರಿ ಮಸೀದಿ ಉರುಳಿಸಿದ ಸಂದರ್ಭದಲ್ಲಿ ಮುಂಬೈನಲ್ಲಿ ದಂಗೆ ಶುರುವಾದಾಗ ಸುನಿಲ್ ದತ್ ಜೊತೆ ಅವರು ರಿಲೀಫ್ ಕ್ಯಾಂಪ್ ನಡೆಸಿದರು. ಬಾಳಾ ಠಾಕ್ರೆ ಜೊತೆ ಗೆಳೆತನವಿದ್ದರೂ ಅದನ್ನು ಗಣಿಸದೇ ಶಿವಸೇನೆ ಅಂದಿನ ದಂಗೆಗೆ ಕೊಟ್ಟ ಕುಮ್ಮಕ್ಕನ್ನು ಬಹಿರಂಗವಾಗಿ ಖಂಡಿಸಿದರು.

ಮತ್ತೆ ಬಲಪಂಥದವರು ದೀಪಾ ಮೆಹ್ತಾ ಅವರ ‘ಫೈರ್’ ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಗಲಾಟೆ ಮಾಡತೊಡಗಿದಾಗ ದೀಪಾ ಪೊಲೀಸ್ ರಕ್ಷಣೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಅದಕ್ಕೆ ಸಹ ಪಿಟಿಷನರ್ ಅರ್ಜಿದಾರನಾಗಿ ಸಹಿ ಮಾಡಿದ್ದು ದಿಲೀಪ್. ಅದರಿಂದ ಕೋಪಗೊಂಡ ಠಾಕ್ರೆ ಸೂಚನೆಯ ಮೇರೆಗೆ ಗುಂಪುಗಳು ದಿಲೀಪ್ ಅವರ ಮನೆಯ ಮುಂದೆ ಅಶ್ಲೀಲ ಪೋಸ್ಟರುಗಳನ್ನು ಹಿಡಿದು ಪ್ರತಿಭಟನೆ ಮಾಡಿದಾಗ ಅದಕ್ಕೆ ಸೊಪ್ಪು ಹಾಕದೇ ನಿಂತವರು. ‘ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನ’ ಎಂದು ಗೀತೆಯನ್ನು ಉದ್ಧರಿಸಿದ್ದರು.

1998ರಲ್ಲಿ ಪಾಕಿಸ್ತಾನವು ತನ್ನ ದೇಶದ ಅತ್ಯುನ್ನತ ಗೌರವ ನಿಶಾನ್ ಎ ಇಮ್ತಿಯಾಜ್ ನೀಡಿ ಗೌರವಿಸಿದಾಗ ದಿಲೀಪ್ ಅವರು ಅದನ್ನು ಸ್ವೀಕರಿಸಬಾರದೆಂದು ಕೆಲವರು ಪ್ರತಿಭಟಿಸಿದರು. ಅಂದಿನ ಪ್ರಧಾನ ಮಂತ್ರಿ ವಾಜಪೇಯಿ ಅವರೇ ಪ್ರಶಸ್ತಿ ಸ್ವೀಕರಿಸುವಂತೆ ಹೇಳಿ ವಿರೋಧದ ಧ್ವನಿಯನ್ನು ಅಡಗಿಸಿದರು. ಆಗ ದಿಲೀಪ್‌ ಪಾಕಿಸ್ತಾನಕ್ಕೆ ಹೋಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಬಾಳಾ ಠಾಕ್ರೆ ಪಾಕಿಸ್ತಾನದ ಪ್ರಶಸ್ತಿ ಹಿಂದಿರುಗಿಸಿ ಅಥವಾ ಭಾರತ ಬಿಟ್ಟು ತೊಲಗಿ ಎಂದು ಹೇಳಿದಾಗ, ‘ನನ್ನ ದೇಶ ಭಾರತ, ನಾನು ಇಲ್ಲಿಯೇ ಮಣ್ಣಾಗುತ್ತೇನೆ’ ಎಂದು ಮನಮುಟ್ಟುವಂತೆ ಹೇಳಿದ್ದರು. ‘ಠಾಕ್ರೆ ಆಡಿದ ಮಾತುಗಳು ನಮ್ಮ ವೈಯಕ್ತಿಕ ಘನತೆಯನ್ನು ಛಿದ್ರ ಮಾಡುತ್ತವೆ. ಮನಸ್ಸು ಕೆಡುತ್ತದೆ, ನೋವಾಗುತ್ತದೆ’ ಎಂದೂ ಬೇಸರಿಸಿಕೊಂಡಿದ್ದರು. ಆದರೆ, ಠಾಕ್ರೆಗೆ ಹೆದರಿ ತಮ್ಮ ನಿಲುವನ್ನು ಮಾತ್ರ ಬದಲಿಸಿಕೊಳ್ಳಲಿಲ್ಲ. ಅಂದಿನ ಕಾಲದಲ್ಲಿ ಹಾಗೆ ನಿಲ್ಲುವುದು ಸಣ್ಣ ಮಾತೇನಾಗಿರಲಿಲ್ಲ. ಠಾಕ್ರೆ ಗೇಲಿ ಮಾಡುವುದಕ್ಕೆಂದು ದಿಲೀಪ್ ಅವರನ್ನು ಯೂಸುಫ್ ಖಾನ್ ಎಂದೇ ಸಂಬೋಧಿಸುತ್ತಾ ಎಷ್ಟು ಕಾಟ ಕೊಟ್ಟರು. ದಿಲೀಪ್ ಮನೆ ಇದ್ದ ನರ್ಗಿಸ್ ದತ್ ರಸ್ತೆಯಲ್ಲಿ ಸಂಚಾರ ಮಾಡುವುದಿಲ್ಲ ಎಂದು ಹೇಳಿ ಹೀಯಾಳಿಸಿದರು. ಕೊನೆಗೆ ಠಾಕ್ರೆಯವರ ಮಗ, ಇಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅದೇ ನರ್ಗಿಸ್ ದತ್ ರಸ್ತೆಯಲ್ಲಿ ನಡೆದು ಬಂದು ದಿಲೀಪ್‌ಗೆ ಅಂತಿಮ ಗೌರವ ಸಲ್ಲಿಸಿ ಸರ್ಕಾರಿ ಮರ್ಯಾದೆ ಸಹಿತ ಸಂಸ್ಕಾರ ಮಾಡಿಸಿದ್ದು ನಿಜಕ್ಕೂ ಹೃದಯ ಮುಟ್ಟುವ ಸಂಗತಿ.

ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದ ಖುರ್ಷಿದ್ ಮಹಮದ್ ಕಸೂರಿ ಅವರು ತಮ್ಮ ಆತ್ಮಕಥೆ, ‘Neither a Hawk nor a Dove’ನಲ್ಲಿ, ಕಾರ್ಗಿಲ್ ಯುದ್ಧದ ಸಮಯದಲ್ಲಿ ವಾಜಪೇಯಿ ಮತ್ತು ನವಾಜ್ ಷರೀಫ್ ನಡುವೆ ಸಂಧಾನ ಏರ್ಪಡಿಸಿ ಶಾಂತಿ ಮಾತುಕತೆ ಸಾಧ್ಯವಾಗಿಸಲು ಮುಖ್ಯಪಾತ್ರ ವಹಿಸಿದ ಆಯ್ದ ಕೆಲವೇ ವ್ಯಕ್ತಿಗಳಲ್ಲಿ ದಿಲೀಪ್ ಒಬ್ಬರು ಎಂದು ಬರೆದಿದ್ದರು. ದಿಲೀಪ್ ಆ ವಿಚಾರವನ್ನು ಎಂದಿಗೂ ಪ್ರಚಾರ ಮಾಡಲಿಲ್ಲ. ಪಂಡಿತ್ ಜವಾಹರಲಾಲ್ ನೆಹರೂ ಜೊತೆ ದಿಲೀಪ್ ಅವರಿಗೆ ನಿಕಟ ಗೆಳೆತನವಿತ್ತು. ಆದರೆ, ಅದನ್ನು ತಮ್ಮ ವೈಯಕ್ತಿಕ ಕಾರಣಕ್ಕೆ ಬಳಸಿಕೊಳ್ಳಲಿಲ್ಲ.

ಪಾಶ್ಮಾಂಡಾ ಮುಸಲ್ಮಾನ ವಿದ್ಯಾರ್ಥಿಗಳಿಗೆ ಮೀಸಲಾತಿಗಾಗಿ ಹೋರಾಡಲು ಹುಟ್ಟಿಕೊಂಡ ಸಂಸ್ಥೆ ಅಖಿಲ ಭಾರತ ಮುಸ್ಲಿಂ ಒಬಿಸಿ ಸಂಸ್ಥೆ (AIMOBCO). ಅದರ ಪ್ರಧಾನ ಸದಸ್ಯರಾಗಿ ದಿಲೀಪ್ ನೂರಾರು ಸಭೆಗಳಲ್ಲಿ ಭಾಗವಹಿಸಿ, ಮೀಸಲಾತಿಗೆ ಮತ ಅಡ್ಡಿಯಾಗಬಾರದು, ಬದಲಿಗೆ ಹಿಂದುಳಿದ ಸಮುದಾಯವನ್ನು ಸುಧಾರಿಸುವ ಕಡೆಗೆ ಗಮನಕೊಡಬೇಕು ಎಂದಿದ್ದರು. ಲೆಕ್ಕವಿಲ್ಲದಷ್ಟು ವಿದ್ಯಾರ್ಥಿಗಳಿಗೆ ಫೀಸು ಕಟ್ಟಿ ನೆರವಾಗಿದ್ದರು.

ಹಿಂದಿಯ ‘ಪೈಗಾಮ್’ (1959) ಚಿತ್ರದಲ್ಲಿ ಸಹ ನಟಿಯಾಗಿ ಅಭಿನಯಿಸಿದ ದಕ್ಷಿಣದ ತಾರೆ ಬಿ. ಸರೋಜಾದೇವಿ ಅವರ ಜೊತೆ ದಿಲೀಪ್ ಒಳ್ಳೆಯ ಸ್ನೇಹ ಇಟ್ಟುಕೊಂಡಿದ್ದರು. ಸರೋಜಾದೇವಿ ಅವರ ಮದುವೆ ಸಮಾರಂಭಕ್ಕೆ ಬಂದಿದ್ದ ದಿಲೀಪ್‌, ‘ಸರೋಜಾದೇವಿ ಅವರಿಗೆ ಮುಂದೆಯೂ ಅಭಿನಯಿಸಲು ನೀವು ಬೆಂಬಲ ಕೊಡಬೇಕು’ ಎಂದು ಪತಿ ಶ್ರೀಹರ್ಷ ಅವರಿಗೆ ಸಲಹೆ ನೀಡಿದ್ದರು. ಶ್ರೀಹರ್ಷ ಅವರು, ‘ದಿಲೀಪ್ ಕುಮಾರ್ ಅವರೇ ಹೇಳಿದಮೇಲೆ ಇಲ್ಲ ಅನ್ನಲು ನಾನ್ಯಾರು’ ಎಂದು ಸರೋಜಾದೇವಿ ಅವರು ಅಭಿನಯ ಮುಂದುವರಿಸಲು ಸಂಪೂರ್ಣ ಬೆಂಬಲ ಕೊಟ್ಟರು.

ದಿಲೀಪ್ ದೇಶದ ನಂಬರ್ ಒನ್ ನಟ ಎನ್ನಿಸಿಕೊಳ್ಳಲು ಕಾರಣ ವೈಯಕ್ತಿಕವಾಗಿ ಅವರು ನಂಬಿದ್ದ ಸಿದ್ಧಾಂತ. ‘ಒಬ್ಬ ನಟ ತುಂಬಾ ಚೆನ್ನಾಗಿ ಕೆಲಸ ಮಾಡಿ ಜೊತೆಗೆ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರೆ ಸರಿ. ಒಳ್ಳೆಯ ಅಭಿನಯ ಮಾಡಿದ ನಟ ನಿಜ ಜೀವನದಲ್ಲಿ ಕೆಟ್ಟವನಾಗಿದ್ದರೆ ಆಗ ನಿಮ್ಮ ಗೌರವ, ಮರ್ಯಾದೆ, ಪ್ರಶಂಸೆ ಎಲ್ಲದಕ್ಕೆ ಕವಡೆ ಕಿಮ್ಮತ್ತಿಲ್ಲ. ನೀವು ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಜನ ನಿಮ್ಮ ಬಗ್ಗೆ ಒಳ್ಳೆಯ ಮಾತಾಡುವುದಿಲ್ಲ’ ಎನ್ನುವುದು ದಿಲೀಪ್‌ ಅವರದೇ ಮಾತು. ಅಂತಹ ಒಳ್ಳೆಯ ವ್ಯಕ್ತಿತ್ವವನ್ನು ಬಾಳಿ ಬದುಕಿದವರು ಆ ಮೇರುನಟ.

ತಾರಾಜೋಡಿಯ ಅಮರ ದಾಂಪತ್ಯ

ಸಾಯಿರಾ ಬಾನು ಅವರನ್ನು ದಿಲೀಪ್‌ ಅವರು ಮದುವೆಯಾದಾಗ, ದಿಲೀಪ್‌ ಅವರಿಗೆ 44 ವರ್ಷ ಹಾಗೂ ಸಾಯಿರಾ ಅವರಿಗೆ ಕೇವಲ 22 ವರ್ಷ. ಸಿನಿಮಾ ಜಗತ್ತಿನಲ್ಲಿ ಇವರಿಬ್ಬರದು ಅತ್ಯಂತ ಅದ್ಭುತ ಪ್ರೇಮಕಥೆ. ಅಷ್ಟೇ ಅಲ್ಲ, ಅಜರಾಮರವಾಗಿ ಉಳಿಯುವಂತಹ ದಾಂಪತ್ಯ ಗೀತೆ. 1966ರ ಅಕ್ಟೋಬರ್‌ 11ರಂದು ಈ ಜೋಡಿ ಮದುವೆಯಾಯಿತು. ಆದರೆ, ಅವರಿಗೆ ಮಕ್ಕಳಿಲ್ಲ.

ಈ ಕುರಿತು ತಮ್ಮ ಆತ್ಮಕಥೆ ‘ದಿ ಸಬ್‌ಸ್ಟೆನ್ಸ್‌ ಆ್ಯಂಡ್‌ ದಿ ಶ್ಯಾಡೊ’ದಲ್ಲಿ ಬರೆದಿರುವ ದಿಲೀಪ್‌, ‘1972ರಲ್ಲಿ ಬಾನು ಗರ್ಭಿಣಿಯಾಗಿದ್ದಳು. ಎಂಟನೇ ತಿಂಗಳಲ್ಲಿ ಆಕೆಯ ರಕ್ತದೊತ್ತಡ ಹೆಚ್ಚಾಯಿತು. ಮಗುವಿನ ಕುತ್ತಿಗೆಗೆ ಬಿಗಿದಿದ್ದ ಹೊಕ್ಕುಳ ಬಳ್ಳಿ ಬಿಡಿಸಿ ಮಗುವನ್ನು ಉಳಿಸಿಕೊಳ್ಳಲು ವೈದ್ಯರು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ’ ಎಂದು ಉಲ್ಲೇಖಿಸಿದ್ದರು.

ಈ ಘಟನೆಯ ಬಳಿಕ ಮಗು ಬೇಡವೆಂದು ಇಬ್ಬರೂ ನಿರ್ಧರಿಸಿದ್ದರು.

98ನೇ ವಯಸ್ಸಿನಲ್ಲಿ ದಿಲೀಪ್‌ ಬದುಕಿಗೆ ಗುಡ್‌ಬೈ ಹೇಳಿದ್ದಾರೆ. ಸಾಯಿರಾ ಬಾನು ಅವರಿಗೆ ಈಗ 76 ವರ್ಷ. ದಿಲೀಪ್‌ ಅವರ ಸಂಗಾತಿಯಾಗಿ 54 ವರ್ಷ ಜೊತೆ ಜೊತೆಯಾಗಿ ಹೆಜ್ಜೆ ಇರಿಸಿದವರು ಅವರು. 1952ರಲ್ಲಿ ದಿಲೀಪ್‌ ನಟನೆಯ ‘ಆನ್‌’ ಚಿತ್ರವನ್ನು ವೀಕ್ಷಿಸಿದ ನಂತರದಲ್ಲಿ ಮುಂದೊಂದು ದಿನ ಅವರ ಪತ್ನಿಯಾಗಬೇಕು ಎಂದು ಕನಸು ಕಂಡವರು ಸಾಯಿರಾ. ಆ ಕನಸನ್ನು ನನಸು ಮಾಡಿಕೊಂಡವರು ಕೂಡ.

ಸಾಯಿರಾ ಅವರ ಜೊತೆಗಿನ ಮದುವೆಗೂ ಮುನ್ನ ಹಲವು ಖ್ಯಾತ ನಟಿಯರ ಜೊತೆಗೆ ದಿಲೀಪ್‌ ಅವರ ಮದುವೆಯ ಗಾಳಿಸುದ್ದಿ ಹರಡಿತ್ತು. ಸ್ಫುರದ್ರೂಪಿಯಾಗಿದ್ದ ದಿಲೀಪ್‌ ಅವರ ಸುತ್ತ ಹಬ್ಬಿದ ಪ್ರೇಮಕಥೆಗಳು ಹಲವು. ಕಾಮಿನಿ ಕೌಶಲ್‌, ಮಧುಬಾಲಾ ಅವರ ಜೊತೆಗಿನ ಅವರ ಸಂಬಂಧ ಸಾಕಷ್ಟು ಚರ್ಚೆಯಾಗಿತ್ತು. 1981ರಲ್ಲಿ ಹೈದರಾಬಾದ್‌ನ ಆಸ್ಮಾ ಸಾಹಿಬಾ ಅವರನ್ನು ದಿಲೀಪ್‌ ಮದುವೆಯಾದರು. ಆದರೆ, ಈ ಸಂಬಂಧ ಎರಡು ವರ್ಷದಲ್ಲಿ ಕೊನೆಯಾಗಿತ್ತು. ದಿಲೀಪ್‌, ಸಾಯಿರಾ ಜೋಡಿ ಮತ್ತೆ ಒಂದಾಯಿತು. ‘ಆಸ್ಮಾ ಜತೆಗಿನ ಮದುವೆ ಸಂಬಂಧ ನಾನು ಬದುಕಿನಲ್ಲಿ ಮರೆಯಬಯಸುವ ಅತ್ಯಂತ ದೊಡ್ಡ ಕಹಿನೆನಪು’ ಎಂದು ದಿಲೀಪ್‌ ಅವರು ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ‘ನನ್ನ ದಿಲೀಪ್‌ ಕೊಹಿನೂರು ವಜ್ರ’ ಎಂದು ಸಾಯಿರಾ ಬಾರಿ ಬಾರಿ ಹೇಳಿದ್ದಾರೆ.

ಪೇಶಾವರದಿಂದ ಮುಂಬೈವರೆಗೆ...

ಚಿತ್ರ:ಪೇಶಾವರದಲ್ಲಿರುವ ದಿಲೀಪ್‌ ಕುಮಾರ್‌ ಅವರ ಪೂರ್ವಜರ ಮನೆ (ಚಿತ್ರ ಕೃಪೆ: REUTERS/Fayaz Aziz)

ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಪ್ರಮುಖ ನಗರ ಪೇಶಾವರ. ಅಲ್ಲಿಯ ಖಿಸ್ಸಾ ಖವಾನಿ ಬಜಾರ್‌ನಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ 1922ರ ಡಿಸೆಂಬರ್‌ 11ರಂದು ದಿಲೀಪ್‌ ಕುಮಾರ್‌ ಜನಿಸಿದರು. ಅವರ ಮೂಲ ಹೆಸರು ಯೂಸುಫ್‌ ಖಾನ್‌.

ಆಯಿಷಾ ಹಾಗೂ ಲಾಲಾ ಗುಲಾಂ ಸರ್ವಾರ್‌ ಖಾನ್‌ ಅವರ 12 ಮಕ್ಕಳಲ್ಲಿ ನಾಲ್ಕನೆಯವರು ಇವರು. ಬ್ರಿಟಿಷ್‌ ಆಡಳಿತದ ಆ ಅವಧಿಯಲ್ಲಿ ಪೇಶಾವರ ಭಾರತದ ಭಾಗವಾಗಿತ್ತು. ಹಣ್ಣಿನ ವ್ಯಾಪಾರಿಯಾಗಿದ್ದ ಅವರ ತಂದೆ 1930ರಲ್ಲಿ ತಮ್ಮ ಕುಟುಂಬದೊಂದಿಗೆ ಮುಂಬೈಗೆ ವಲಸೆ ಬಂದರು. ಸಿನಿಮಾ ಜಗತ್ತು ಪ್ರವೇಶಿಸುವ ಮುನ್ನ ದಿಲೀಪ್‌ ಅವರು ತಂದೆಯ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

ಕಪೂರ್‌ ಹವೇಲಿ ಎಂದು ಖ್ಯಾತಿಯಾಗಿರುವ ಬಾಲಿವುಡ್‌ನ ಖ್ಯಾತ ನಟ ರಾಜ್‌ಕಪೂರ್‌ ಅವರ ಪೂರ್ವಜರ ಮನೆಯೂ ದಿಲೀಪ್‌ ಅವರ ಪೂರ್ವಜರ ಮನೆಯ ಸಮೀಪವೇ ಇದೆ. ದಿಲೀಪ್‌ ಅವರ ಪೂರ್ವಜರ ಮನೆ ನೂರು ವರ್ಷಕ್ಕೂ ಹಳೆಯದಾಗಿದೆ. ಈ ಕಟ್ಟಡವನ್ನು 2014ರಲ್ಲಿ ಪಾಕಿಸ್ತಾನ ಸರ್ಕಾರವು ರಾಷ್ಟ್ರೀಯ ಸ್ವತ್ತು ಎಂದು ಘೋಷಿಸಿದೆ. ಅದನ್ನು ಸರ್ಕಾರದಿಂದಲೇ ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತಿದೆ.

ಯಹೂದಿ ಚಿತ್ರ: ಮೀನಾಕುಮಾರಿ ಜತೆಯಲ್ಲಿ...

ದಿಲೀಪ್‌ ಕುಮಾರ್‌ ಅವರಿಗೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಗೌರವ 'ನಿಶಾನ್‌ ಏ ಇಮ್ತಿಯಾಜ್‌' ಪುರಸ್ತಾಕವನ್ನು ಪ್ರದಾನ ಮಾಡಿದ ಪಾಕಿಸ್ತಾನದ ಆಗಿನ ಅಧ್ಯಕ್ಷ ರಫಿಕ್‌ ತರಾರ್‌ (Photo by Saeed KHAN / AFP)

ಗೆಳೆಯನಿಗೆ ಕೊನೆಯ ವಿದಾಯ...
ದಿಲೀಪ್‌ ಅವರ ಪಾರ್ಥಿವ ಶರೀರದ ಮುಂದೆ ಧರ್ಮೇಂದ್ರ ರೋದನ. ಸಾಯಿರಾ ಬಾನು ಸಹ ಚಿತ್ರದಲ್ಲಿದ್ದಾರೆ. (Photo by Kunal PATIL / POOL / AFP)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT