ಶನಿವಾರ, ಜನವರಿ 18, 2020
20 °C

ಒಂಟೆ ಮೇಲೆ ಥ್ರಿಲ್ಲಿಂಗ್‌ ಫೈಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕನ ಎಂಟ್ರಿಯ ಹಾಡಿಗೆ ಅಥವಾ ಸಿನಿಮಾದ ಮುಖ್ಯ ಹಾಡೊಂದಕ್ಕೆ ದುಬಾರಿ ಹಣ ವ್ಯಯಿಸುವ ಕಾಲವೊಂದಿತ್ತು. ಜೊತೆಗೆ, ವಿದೇಶಕ್ಕೆ ತೆರಳಿ ಅಲ್ಲಿನ ಅಪರೂಪದ ಸ್ಥಳಗಳಲ್ಲಿ ಶೂಟಿಂಗ್‌ ನಡೆಸಲಾಗುತ್ತಿತ್ತು. ಈಗ ಸಿನಿಮಾದ ಟ್ರೆಂಡ್‌ ಬದಲಾಗಿದೆ. ಸಾಹಸ ದೃಶ್ಯಗಳು, ಕ್ಲೈಮ್ಯಾಕ್ಸ್‌ ದೃಶ್ಯಗಳಿಗೆ ಹಣದ ಹೊಳೆಯನ್ನೇ ಹರಿಸಲಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ನಟ ವಿಕ್ರಮ್‌ ರವಿಚಂದ್ರನ್‌ ನಾಯಕನಾಗಿರುವ ‘ತ್ರಿವಿಕ್ರಮ’ ಚಿತ್ರ.

‘ರೋಸ್‌’, ‘ಮಾಸ್ ಲೀಡರ್‌’ ಚಿತ್ರಗಳಿಗೆ ಆ್ಯಕ್ಷನ್‌ ಕಟ್ ಹೇಳಿರುವ ಸಹನಾಮೂರ್ತಿ ಅವರೇ ಈ ಚಿತ್ರ ನಿರ್ದೇಶಿಸಿದ್ದಾರೆ. 

ಬೈಕ್‍ಗಳ ಮೇಲೆ, ನೀರಿನೊಳಗೆ, ಆಕಾಶದಲ್ಲಿ, ಕುದುರೆ, ಆನೆಗಳ ಮೇಲೆ, ಸಮುದ್ರದಲ್ಲಿ –ಹೀಗೆ ಸಿನಿಮಾಗಳಲ್ಲಿ ವಿವಿಧ ಬಗೆಯ ಸಾಹಸ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ, ಮೊದಲ ಬಾರಿಗೆ ‘ತ್ರಿವಿಕ್ರಮ’ ಚಿತ್ರದಲ್ಲಿ ಒಂಟೆಗಳ ಮೇಲೆ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಅಲ್ಲದೇ, ಒಂಟೆಗಳನ್ನು ಬಳಸಿ ಚೇಸಿಂಗ್‌ ದೃಶ್ಯಗಳನ್ನೂ ಚಿತ್ರೀಕರಣ ಮಾಡಿರುವುದು ಈ ಚಿತ್ರದ ವಿಶೇಷ.

‘ಸೈರಾ ನರಸಿಂಹರೆಡ್ಡಿ’, ‘ದಬಾಂಗ್’, ‘ಬಾಡಿಗಾರ್ಡ್’, ‘ಪೊಕಿರಿ’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಾಹಸ ನಿರ್ದೇಶಿಸಿರುವ ವಿಜಿ ಮಾಸ್ಟರ್ ಅವರೇ ಈ ಚಿತ್ರದ ಒಂಟೆ ಮೇಲಿನ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

ನಟ ವಿಕ್ರಮ್ ಹಾಗೂ ಖಳನಟರು ಒಂಟೆಗಳ ಮೇಲೆ ಗಂಟೆಗಟ್ಟಲೆ ಕೂತು ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಈ ದೃಶ್ಯಗಳ ಶೂಟಿಂಗ್‌ಗಾಗಿಯೇ ಎರಡು ವಾರಗಳ ಕಾಲ ನಾಯಕಿ ಆಕಾಂಕ್ಷಾ ಶರ್ಮಾ, ಹಾಸ್ಯನಟ ಸಾಧುಕೋಕಿಲ, ಬಾಲಿವುಡ್‌ ನಟ ರೋಹಿತ್ ರಾಯ್ ಸೇರಿದಂತೆ ಚಿತ್ರತಂಡ ರಾಜಸ್ಥಾನದಲ್ಲಿ ಬೀಡುಬಿಟ್ಟಿತ್ತು. ಸೋಮಣ್ಣ (ರಾಮ್ಕೋ) ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರತಿಕ್ರಿಯಿಸಿ (+)