ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟು–ಸಾವಿನ ತುರ್ತು ನಿರ್ಗಮನ!

Last Updated 25 ಫೆಬ್ರುವರಿ 2020, 8:52 IST
ಅಕ್ಷರ ಗಾತ್ರ

ಆಕರ್ಷಕ ಶೀರ್ಷಿಕೆಗಳನ್ನು ಇಟ್ಟುಕೊಂಡು ಬರುತ್ತಿರುವ ಕನ್ನಡ ಸಿನಿಮಾಗಳ ದೊಡ್ಡ ಪಟ್ಟಿಯನ್ನೇ ತಯಾರಿಸಬಹುದು. ಹೇಮಂತ್‌ಕುಮಾರ್‌ ಎಲ್‌. ನಿರ್ದೇಶನದ ‘ತುರ್ತು ನಿರ್ಗಮನ’ ಈ ಪಟ್ಟಿಗೆ ಸೇರುವ ಸಿನಿಮಾ.

ಮೃತಪಟ್ಟ ವಿಕ್ರಮ್‌ ಎಂಬಾತನಿಗೆ ಕೊನೆಯ ಮೂರು ದಿನಗಳು ಮತ್ತೆ ಜೀವಿಸಲು ಸಿಕ್ಕಿದಾಗ ಆತ ಏನೆಲ್ಲಾ ಸಂದಿಗ್ಧ ಪರಿಸ್ಥಿತಿಗೆ ಸಿಲುಕುತ್ತಾನೆ ಎನ್ನುವ ಫ್ಯಾಂಟಸಿ ಕಥೆಯನ್ನು ಅವರು ತೆರೆಯ ಮೇಲೆ ತರುತ್ತಿದ್ದಾರೆ. ಇಂತಹ ಕಥೆ ಕಟ್ಟಲು ಬಾಲ್ಯದಲ್ಲಿ ಅವರ ಅಜ್ಜಿ ಅವರಿಗೆ ಹೇಳುತ್ತಿದ್ದ ಕಾಲ್ಪನಿಕ ಕಥೆಗಳೇ ಕಾರಣವಂತೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ದುಡಿದಿರುವ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಟೀಸರ್‌ ಮತ್ತು ಎರಡು ಹಾಡುಗಳನ್ನು ತೋರಿಸಿದ ಬಳಿಕ ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಮಾತಿಗೆ ಕುಳಿತುಕೊಂಡಿತು. ‘ನಾವು ಸಾರ್ವಜನಿಕ ಸ್ಥಳಗಳು, ಬಸ್‌ಗಳು, ಕಚೇರಿಗಳಲ್ಲಿ ತುರ್ತು ನಿರ್ಗಮನದ ಫಲಕ ನೋಡಿರುತ್ತೇವೆ. ಅದರ ಬಳಕೆ ಕಡಿಮೆ. ಆದರೆ, ಅದರ ಹಿಂದಿರುವ ಇತಿಹಾಸವನ್ನು ಹುಡುಕುವ ಪ್ರಯತ್ನದಲ್ಲಿದ್ದಾಗ ಹುಟ್ಟುಕೊಂಡಿದ್ದೇ ಈ ಸಿನಿಮಾ’ ಎಂದು ಮಾಹಿತಿ ನೀಡಿದರು ಹೇಮಂತ್‌ಕುಮಾರ್.

ಸೋಂಬೇರಿ ವಿಕ್ರಮ್‌ ಪಾತ್ರಧಾರಿಯಾಗಿ ಸುನೀಲ್‌ ರಾವ್ ಬಣ್ಣ ಹಚ್ಚಿದ್ದಾರೆ. ‘ಎಕ್ಸ್‌ಕ್ಯೂಸ್‌ ಮಿ’ ಚಿತ್ರದಲ್ಲಿ ಲವರ್‌ಬಾಯ್‌ ಆಗಿ ಮಿಂಚಿ ಮರೆಯಾಗಿದ್ದ ಅವರು ಮತ್ತೆ ಈ ಚಿತ್ರದ ಮೂಲಕ ವೃತ್ತಿಬದುಕಿನ ಎರಡನೇ ಇನ್ನಿಂಗ್‌ ಆರಂಭಿಸುತ್ತಿರುವ ಖುಷಿಯಲ್ಲಿದ್ದಾರೆ.

‘ಎಲ್ಲರ ಜೀವನದ ಕಾಲಘಟ್ಟಗಳಲ್ಲೂ ನಡೆದಿರುವ ಘಟನೆಯೇ ಚಿತ್ರದಲ್ಲಿದೆ’ ಎಂದರು.

ರಾಜ್‌ ಬಿ. ಶೆಟ್ಟಿ ಟ್ಯಾಕ್ಸಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಭಾರತೀಯ ಫಿಲಾಸಫಿಯ ನೆಲೆಗಟ್ಟಿನಲ್ಲಿ ಹುಟ್ಟು ಮತ್ತು ಸಾವನ್ನು ನಿರೂಪಿಸುವ ಸಿನಿಮಾ ಇದಾಗಿದೆ. ಚಿತ್ರತಂಡ ನನ್ನನ್ನು ಒಬ್ಬ ಆ್ಯಕ್ಟರ್‌ ಆಗಿ ಪರಿಗಣಿಸಿ ಅವಕಾಶ ನೀಡಿತು. ಇಂತಹ ವಾತಾವರಣ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಪೂರಕ’ ಎಂದು ಖುಷಿ ಹಂಚಿಕೊಂಡರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ಧೀರೇಂದ್ರ ಡಾಸ್‌ ಸಂಗೀತ ನೀಡಿದ್ದಾರೆ.ಪ್ರಯಾಗ್‌ ಮುಕುಂದನ್ ಅವರ ಛಾಯಾಗ್ರಹಣವಿದೆ. ಬಿ. ಅಜಿತ್‌ ಕುಮಾರ್‌ ಸಂಕಲನ ನಿರ್ವಹಿಸಿದ್ದಾರೆ. ಭರತ್‌ಕುಮಾರ್‌ ಮತ್ತು ಹೇಮಂತ್‌ಕುಮಾರ್‌ ಬಂಡವಾಳ ಹೂಡಿದ್ದಾರೆ. ಸುಧಾರಾಣಿ, ಅಚ್ಯುತ್‌ಕುಮಾರ್‌, ಸಂಯುಕ್ತ ಹೆಗ್ಡೆ, ಹಿತಾ ಚಂದ್ರಶೇಖರ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT