ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ನೋಡಿದ ಸಿನಿಮಾ ‘ಉದ್ದಿಶ್ಯ’: ಭೂತದಿಂದ ಬಿಡಿಸು ತಂದೆಯೇ... ಆಮೆನ್!

Last Updated 31 ಆಗಸ್ಟ್ 2018, 12:19 IST
ಅಕ್ಷರ ಗಾತ್ರ

ಸಿನಿಮಾ: ಉದ್ದಿಶ್ಯ
ನಿರ್ಮಾಣ / ನಿರ್ದೇಶನ: ಹೇಮಂತ್ ಕೃಷ್ಣಪ್ಪ
ತಾರಾಗಣ:ಹೇಮಂತ್, ಅರ್ಚನಾ ಗಾಯಕ್ವಾಡ್, ಅಕ್ಷತಾ, ಅನಂತವೇಲು

ಕುಕ್ಕರ್ ವಿಷಲ್‌ ಹೊಡೆಯುತ್ತದೆ. ತಕ್ಷಣವೇ ಅಮ್ಮ, ಮಗಳಿಗೆ ‘ಊಟ ರೆಡಿಯಾಯ್ತು. ಬಾ’ ಎಂದು ಕರೆದು ಹಾಗೆಯೇ ಕುಕ್ಕರ್‌ ಎತ್ತಿ ತಂದು ಮುಚ್ಚಳ ತೆಗೆದು ಅನ್ನ ಬಡಿಸುತ್ತಾಳೆ.

ಕುಕ್ಕರ್ ವಿಷಲ್ ಹೊಡೆದ ಮೇಲೆ ಕನಿಷ್ಠ ಹತ್ತು ನಿಮಿಷವಾದರೂ ಬೇಕಲ್ಲವೇ ಆವಿ ಆರಲು? ಮನಸಲ್ಲಿ ಏಳುವ ಇಂಥ ತರ್ಕದ ಪ್ರಶ್ನೆಗಳಿಗೆಲ್ಲ ಗಮನಗೊಡುತ್ತ ಹೋದರೆ ‘ಉದ್ದಿಶ್ಯ’ ಸಿನಿಮಾ ನೋಡುವುದು ಕಷ್ಟವಾಗುತ್ತದೆ. ಎಲ್ಲ ತರ್ಕಗಳನ್ನೂ ಗಂಟುಮೂಟೆ ಕಟ್ಟಿ ಇಟ್ಟುಕೊಂಡೇನೋಡುತ್ತೇನೆ ಎಂದರೂ ಸಲೀಸಾಗಿ ನೋಡಿಸಿಕೊಂಡು ಹೋಗುವ ಗುಣ ಇದಕ್ಕಿಲ್ಲ. ಈ ಸಿನಿಮಾ, ಒಂದೇ ಸೀಟಿ ಹಾಕಿದ ಕುಕ್ಕರ್‌ ಅನ್ನು ಒಲೆಯ ಮೇಲಿಂದ ತೆಗೆದು ಬಲವಂತವಾಗಿ ಆವಿಯನ್ನು ಹೊರಗೆ ಹಾಕಿ ಮುಚ್ಚಳ ತೆಗೆದು ಬಡಿಸಿದ ಅರೆಬೆಂದ ಅಕ್ಕಿಯ ಹಾಗೆಯೇ ಇದೆ.

ಮಾಟ, ಮಂತ್ರ, ದುಷ್ಟಶಕ್ತಿಗಳನ್ನು ಒಲಿಸಿಕೊಂಡು ಅಮರನಾಗುವ ರಕ್ಕಸಗುಣದ ಮನುಷ್ಯ, ಅದಕ್ಕಾಗಿ ಅವನು ಹಸುಗೂಸುಗಳನ್ನು ಬಲಿಕೊಡುವುದು, ಹೆಣ್ಣುಮಕ್ಕಳನ್ನು ಕದ್ದುತಂದು ಅವರ ಮೇಲೆ ಅತ್ಯಾಚಾರ ಮಾಡುವುದು, ಕೊನೆಗೆ ತನ್ನ ಉದ್ದೇಶ ಈಡೇರದೆ ಸತ್ತುಹೋಗಿ ಪ್ರೇತವಾಗಿ ಕಾಡುವುದು... ಹೀಗೆ ಈಗಾಗಲೇ ನೂರು ಸಾವಿರ ಸಲ ನೋಡಿರುವ ಹಳೆಯ ಮೌಢ್ಯಾಧಾರಿತ ವೃತ್ತದಿಂದ ಆಚೆ ಜಿಗಿಯುವ, ಹೊಸದೇನನ್ನೋ ಹೇಳುವ ಉದ್ದೇಶವೇ ‘ಉದ್ದಿಶ್ಯ’ ಚಿತ್ರಕ್ಕೆ ಇಲ್ಲ. ಹಳೆಯದನ್ನೇ ಹೊಸ ರೀತಿಯಲ್ಲಿ ಹೇಳುವ ಕೌಶಲವೂ ನಿರ್ದೇಶಕರಿಗಿಲ್ಲ.

ಈ ಸಿನಿಮಾ ಆರಂಭವಾಗುವುದು ಮೈಸೂರಿನ ಪ್ರಾಣಿಸಂಗ್ರಹಾಲಯದಲ್ಲಿ ಮಧ್ಯರಾತ್ರಿ ಒಮ್ಮಿಂದೊಮ್ಮೆಲೇ ಎಲ್ಲ ಪ್ರಾಣಿ ಪಕ್ಷಿಗಳು ವಿಕಾರವಾಗಿ ಕಿರುಚಿಕೊಳ್ಳುವ ದೃಶ್ಯದಿಂದ. ದೃಶ್ಯ ಮುಗಿದಾಗ ಪ್ರಾಣಿಗಳ ಚೀರುವಿಕೆ ಕೊನೆಗೊಳ್ಳುತ್ತದೆ; ಪಾತ್ರಗಳ ಚೀರುವಿಕೆ ಶುರುವಾಗುತ್ತದೆ. ಕೆಟ್ಟ ಧ್ವನಿಗ್ರಹಣ, ಕಳಪೆ ನಟನೆ, ಕಣ್ಣಿಗೆ ಪ್ರಯಾಸವನ್ನುಂಟು ಮಾಡುವ ಛಾಯಾಗ್ರಹಣ, ಎಲ್ಲೆಲ್ಲಿಂದಲೋ ಎತ್ತಿ ತಂದು ಸುರಿದಂತಿರುವ ಹಿನ್ನೆಲೆ ಸಂಗೀತ... ಹೀಗೆ ಈ ಚಿತ್ರ ಹದಗೆಡಲು ಎಲ್ಲ ವಿಭಾಗಗಳ ಕೊಡುಗೆಯೂ ಗಣನೀಯ ಪ್ರಮಾಣದಲ್ಲಿದೆ.

ಅನುರಾಧಾಳನ್ನು ಕಾಡುವ ‘ಕ್ರಿಸ್ಟೋಫರ್‌’ನ ಪ್ರೇತವನ್ನು ಫಾದರ್ಬಂಧಿಸಿ ತ್ರಿಶಂಕು ಸ್ಥಿತಿಯಲ್ಲಿ ಇರಿಸುತ್ತಾರೆ. ಆದರೆ ಅವರಿಗೇ ಚಳ್ಳೆಹಣ್ಣು ತಿನ್ನಿಸಿದ ಪ್ರೇತ, ದಿಗ್ಬಂಧನದಿಂದ ಬಿಡಿಸಿಕೊಂಡು ಸಿಓಡಿ ಅಧಿಕಾರಿ ಆದಿತ್ಯನ ದೇಹದಲ್ಲಿ ಸೇರಿಕೊಳ್ಳುವುದರೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ. ಅಂದರೆ ಇನ್ನೊಂದು ಕಥೆ ಶುರುವಾಗುತ್ತಿದೆಯೇ ಎಂಬ ಅನುಮಾನವೇ ಪ್ರೇತಕಾಟಕ್ಕಿಂತ ಹೆಚ್ಚು ಭೀತಿ ಹುಟ್ಟಿಸುತ್ತದೆ.

ಇಡೀ ಚಿತ್ರವನ್ನು ಸಹಿಸಿಕೊಂಡು ಹೊರಬಂದಾಗ ನಮ್ಮ ಮನಸ್ಸಿನೊಳಗೂ ಪ್ರಾರ್ಥನೆಯೊಂದು ರಿಂಗಣಿಸುತ್ತಿರುತ್ತದೆ;‘ಇಂಥ ಮೌಢ್ಯ ಪ್ರತಿಪಾದಕ, ಕಳಪೆ ಸಿನಿಮಾಗಳ ಭೂತದಿಂದ ಚಿತ್ರರಂಗವನ್ನು– ಪ್ರೇಕ್ಷಕರನ್ನು ಕಾಪಾಡು ತಂದೆಯೇ... ಅಮೆನ್!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT