*ಶಿಕ್ಷಣ ಹಾಗೂ ಏಳು ಸಿನಿಮಾಗಳ ಪಯಣ ಹೇಗಿತ್ತು?
ಪ್ರೇಮ್ ಅವರು ನಿರ್ದೇಶಿಸಿದ ‘ಏಕ್ ಲವ್ ಯಾ’ ಸಿನಿಮಾದಲ್ಲಿ ಅಭಿನಯಿಸುವಾಗ ನನಗೆ 17 ವರ್ಷ. ಆ ಸಿನಿಮಾ 2022ರಲ್ಲಿ ಬಿಡುಗಡೆಯಾದಾಗ 18 ವರ್ಷ. ಆಗ ನಾನಿನ್ನೂ ಪದವಿ ಓದುತ್ತಿದ್ದೆ. ಇದೀಗ ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದೇನೆ. ಶಿಕ್ಷಣದ ಜೊತೆಗೆ ಸಿನಿಮಾ ಪಯಣವೂ ಮುಂದುವರಿದಿದೆ. ಆರಂಭದಲ್ಲಿ ಶಿಕ್ಷಣದ ಜೊತೆಗೆ ಸಿನಿಮಾ ಮಾಡುವುದು ಕಷ್ಟ ಆಗುತ್ತಿತ್ತು. ಪರೀಕ್ಷೆಯ ಸಂದರ್ಭದಲ್ಲಿ ಅತ್ತಿದ್ದೂ ಇದೆ. ಕ್ರಮೇಣ ಇದಕ್ಕೆ ಹೊಂದಿಕೊಂಡೆ. ಕುಟುಂಬದ ಬೆಂಬಲ ಈ ಪಯಣದಲ್ಲಿ ಮುಖ್ಯವಾಗಿತ್ತು. ಹೀಗಾಗಿಯೇ ‘ಏಕ್ ಲವ್ ಯಾ’ ಬಳಿಕ ಆರು ಸಿನಿಮಾಗಳನ್ನು ಮಾಡಿದೆ. ಮುಂದೆ ಸಿನಿಮಾವೇ ನನ್ನ ಪಯಣ. 2025ರಿಂದ ಸಿನಿಮಾದತ್ತಲೇ ನನ್ನ ಚಿತ್ತವಿರಲಿದೆ.
ಯುಐ’ಲೋಕದಲ್ಲಿ ರೀಷ್ಮಾ ಪಾತ್ರವೇನು?
ಪಾತ್ರದ ಬಗ್ಗೆ ಕಿಂಚಿತ್ತೂ ಮಾಹಿತಿಯನ್ನು ನೀಡಬಾರದು ಎಂದು ನಿರ್ದೇಶಕರು ಹೇಳಿದ್ದಾರೆ. ಚಿತ್ರದಲ್ಲಿ ನನ್ನ ತೆರೆ ಅವಧಿ ನನಗೆ ಮುಖ್ಯವಾಗುವುದಿಲ್ಲ. ಉಪೇಂದ್ರ ಅವರು ನಿರ್ದೇಶಕರಾಗಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಾನು ಸಿನಿಪಯಣ ಆರಂಭಿಸಿದ ಸಣ್ಣ ಅವಧಿಯಲ್ಲೇ ಉಪೇಂದ್ರ ಅವರ ಜೊತೆ ಕೆಲಸ ಮಾಡುವ ಅವಕಾಶ ದೊರಕಿದೆ. ನನ್ನ ನಟನೆಯ ಮೇಲೆ ನಂಬಿಕೆಯಿಟ್ಟು ಪಾತ್ರ ನೀಡಿರುವುದೇ ಖುಷಿ. ಈ ಬಗ್ಗೆ ನನಗೆ ಹೆಮ್ಮೆ ಇದೆ. ನಟನೆ ಮತ್ತು ನಿರ್ದೇಶನದ ವಿಚಾರದಲ್ಲಿ ಅವರಿಂದ ಬಹಳಷ್ಟು ಕಲಿತಿದ್ದೇನೆ. ಉಪೇಂದ್ರ ಅವರು 24x7 ಭಿನ್ನವಾಗಿ ಯೋಚಿಸುತ್ತಲೇ ಇರುತ್ತಾರೆ. ಅವರ ಯೋಚನೆಗೆ ತಕ್ಕ ನಟನೆ ಮಾಡುವ ಜವಾಬ್ದಾರಿ ನಮ್ಮ ಮೇಲೆ ಇತ್ತು.
ಟ್ರೋಲ್..’ ಹಾಡಿನ ಗುಟ್ಟೇನು?
‘ಚೀಪ್..ಚೀಪ್’ ಲಿರಿಕಲ್ ಹಾಡು ರಿಲೀಸ್ ಆದಾಗ, ‘ಟ್ರೋಲ್’ ಹಾಡು ಬಿಡುಗಡೆಯಾಗಲಿದೆ ಎಂದು ನಾನೂ ನಿರೀಕ್ಷೆ ಮಾಡಿರಲಿಲ್ಲ. ಒಂದೂ ದೃಶ್ಯಗಳನ್ನು ತೋರಿಸದೆ ನೇರವಾಗಿ ಸಿನಿಮಾವನ್ನು ಪ್ರೇಕ್ಷಕರಿಗೆ ತೋರಿಸಬೇಕು ಎನ್ನುವ ಆಸೆ ಉಪೇಂದ್ರ ಅವರಿಗೆ ಇತ್ತು. ಮೊದಲು ಆಡಿಯೊ ಟೀಸರ್ ಒಂದನ್ನು ಬಿಡುಗಡೆ ಮಾಡಿ ಉಪೇಂದ್ರ ಅವರು ಎಲ್ಲರ ತಲೆಕೆಡಿಸಿದರು. ನಂತರ ಏಕಾಏಕಿ ‘ಟ್ರೋಲ್’ ಹಾಡು ರಿಲೀಸ್ ಆಯಿತು. ಆರಂಭದಲ್ಲಿ ಎಲ್ಲರೂ ಹಾಡಿನ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದರು. ಆದರೆ ಕೇಳುತ್ತಾ ಕೇಳುತ್ತಾ ಎಲ್ಲರೂ ಹೊಗಳಲು ಆರಂಭಿಸಿದರು. ಅದು ವೈರಲ್ ಕೂಡಾ ಆಯಿತು. ಅದರೊಳಗೆ ಹಲವು ಅರ್ಥಗಳಿವೆ. ಆ ಹಾಡಿನ ಪ್ರತಿ ಫ್ರೇಮ್‌ನಲ್ಲೂ ವಿಷಯಗಳು ಹಲವಾರು ಇವೆ. ಈ ಹಾಡು ಸಿನಿಮಾದಲ್ಲಿ ಏಕೆ ಬರುತ್ತದೆ, ಎಲ್ಲಿ ಬರುತ್ತದೆ, ಅದರ ಅವಶ್ಯವೇನಿತ್ತು ಎನ್ನುವುದು ಸಿನಿಮಾ ನೋಡಿದಾಗ ತಿಳಿಯುತ್ತದೆ. ಆ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ಕೆಲವೆಡೆ ಸಾಹಿತ್ಯ ಬೇರೆಯೇ ಇತ್ತು. ನಾಲ್ಕೈದು ದಿನಗಳ ಅಂತರದಲ್ಲಿ ಆ ಸಂದರ್ಭದಲ್ಲಿ ವೈರಲ್ ಆಗಿದ್ದ ‘ನಾನು ನಂದಿನಿ...’, ‘ಬೆಳ್ಳುಳ್ಳಿ ಕಬಾಬ್..’ ಹೀಗೆ ಹಲವು ವಾಕ್ಯಗಳನ್ನು ಸೇರಿಸಿ ಹಾಡು ಸಿದ್ಧಪಡಿಸಲಾಗಿತ್ತು. ‘ಟ್ರೋಲ್..’ ಹಾಡಿನ ವಿಡಿಯೊ ನೋಡಿದಾಗಲೇ ಇದು ನನಗೆ ಗೊತ್ತಾಗಿದ್ದು. ಇದು ಉಪೇಂದ್ರ ಅವರ ಕೆಲಸದ ಶೈಲಿ ಹಾಗೂ ಅವರ ನಡೆಯನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಎಲ್ಲರಿಗೂ ಶಾಕ್ ನೀಡಿ ಹೊಸತನ್ನು ತಯಾರಿಸುವ ಕೈಚಳಕ ಅವರಲ್ಲಿದೆ.
ಉಪೇಂದ್ರ ಅವರ ಯಾವ ಸಿನಿಮಾ ನಿಮಗೆ ಇಷ್ಟ?
ಅವರು ನಿರ್ದೇಶಿಸಿದ ಸಿನಿಮಾಗಳು ರಿಲೀಸ್ ಆದಾಗ ನಾನಿನ್ನೂ ವಿದ್ಯಾರ್ಥಿನಿಯಾಗಿದ್ದೆ. ಸಿನಿಮಾ ರಂಗಕ್ಕೆ ಬಂದ ಮೇಲೆ ಅವರ ಸಿನಿಮಾಗಳನ್ನು ನೋಡಿದ್ದೇನೆ. ಒಂದೇ ಬಾರಿ ಅವುಗಳು ಅರ್ಥವಾಗುವುದು ಬಹಳ ಕಷ್ಟ. ‘ಯುಐ’ ನಮ್ಮ ತಲೆಯಲ್ಲಿರುವ ಹುಳ ತೆಗೆಯುವ ಸಿನಿಮಾ ಎಂದು ಉಪೇಂದ್ರ ಅವರು ಹೇಳಿದ್ದಾರೆ. ನನ್ನ ತಲೆಯೊಳಗೆ ಅದೆಷ್ಟು ಹುಳಗಳು ಇದ್ದಾವೆ ಎನ್ನುವುದನ್ನು ನೋಡಬೇಕು. ನಮ್ಮ ತಲೆಯಲ್ಲಿ ಎಷ್ಟು ಹುಳಗಳು ಇದ್ದಾವೆ ಅಷ್ಟು ಬಾರಿ ಈ ಸಿನಿಮಾ ನೋಡಬೇಕು. ಉಪೇಂದ್ರ ಅವರು ನಿರ್ದೇಶಿಸಿದ್ದ ‘ಓಂ’ ನನ್ನ ನೆಚ್ಚಿನ ಸಿನಿಮಾ.
ಹೊಸ ಪ್ರಾಜೆಕ್ಟ್‌ಗಳು...
ಪ್ರೇಮ್ ಅವರು ನಿರ್ದೇಶಿಸುತ್ತಿರುವ, ಧ್ರುವ ಸರ್ಜಾ ಅವರ ‘ಕೆಡಿ’ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಇದರಲ್ಲಿ ಒಂದು ವಿದೇಶದಲ್ಲಿ ಚಿತ್ರೀಕರಣಗೊಳ್ಳಲಿದೆ. ಈ ಸಿನಿಮಾದಲ್ಲಿ ನಟನೆಯ ಸಾಮರ್ಥ್ಯ ಪ್ರದರ್ಶಿಸಲು ಹೆಚ್ಚಿನ ಅವಕಾಶ ದೊರೆತಿದೆ. ಇದರ ಮೇಲೆ ನನಗೆ ನಂಬಿಕೆಯೂ ಹೆಚ್ಚು ಇದೆ. ಧನಂಜಯ ಅವರ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಹಾಡಿನ ಚಿತ್ರೀಕರಣ ನಡೆದಿದೆ. ತೆಲುಗು, ತಮಿಳಿನಿಂದಲೂ ಅವಕಾಶಗಳು ಬರುತ್ತಿವೆ. ಯಾವುದನ್ನೂ ಒಪ್ಪಿಕೊಂಡಿಲ್ಲ. ಕನ್ನಡ ನನ್ನ ಆದ್ಯತೆ. ಕನ್ನಡದಲ್ಲೂ ಕಥೆ ಕೇಳುತ್ತಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.