ಭಾನುವಾರ, ಸೆಪ್ಟೆಂಬರ್ 19, 2021
28 °C

ಬಿಡುಗಡೆ ಗೊಂದಲದಲ್ಲಿ ಕನ್ನಡದ ಬಿಗ್‌ಬಜೆಟ್‌ ಚಿತ್ರಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುನಿಯಾ ವಿಜಯ್‌ ನಟನೆಯ ‘ಸಲಗ’, ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ–2’ ಮುಂತಾದ ಬಿಗ್‌ಬಜೆಟ್‌ ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಡಲು ಸಜ್ಜಾಗಿವೆ. ಆದರೆ ಚಿತ್ರಮಂದಿರಗಳಲ್ಲಿ ಶೇ 100 ಪ್ರೇಕ್ಷಕರ ಭರ್ತಿಗೆ ಸರ್ಕಾರ ಇನ್ನೂ ಆದೇಶ ಹೊರಡಿಸದೇ ಇರುವುದು ಚಿತ್ರಗಳ ಬಿಡುಗಡೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಆ.20ರಂದು ‘ಸಲಗ’ ಹಾಗೂ ‘ನಿನ್ನ ಸನಿಹಕೆ’, ಗಣೇಶ ಚತುರ್ಥಿಗೆ(ಸೆ.10) ‘ಭಜರಂಗಿ–2’, ಸೆ.24ಕ್ಕೆ ಡಾಲಿ ಧನಂಜಯ್‌ ನಟನೆಯ ‘ಬಡವ ರಾಸ್ಕಲ್‌’ ಚಿತ್ರವು ಬಿಡುಗಡೆಯಾಗಲಿದೆ. ಪ್ರಸ್ತುತ ರಾಜ್ಯದ ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಪ್ರೇಕ್ಷಕರಿಗಷ್ಟೇ ಅವಕಾಶವಿದ್ದು, ನೆರೆ ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರ್ಕಾರವು ಈ ನಿರ್ಬಂಧವನ್ನು ಮತ್ತಷ್ಟು ಸಡಿಲಿಸುವ ಕುರಿತು ಇನ್ನೂ ನಿರ್ಧರಿಸಿಲ್ಲ. ಹೊಸ ಸಚಿವ ಸಂಪುಟ ರಚನೆಯಾಗಿರುವುದರಿಂದ ಸರ್ಕಾರವು ಹೊಸ ಕೋವಿಡ್‌ ಕಾರ್ಯಪಡೆಯನ್ನು ರಚಿಸಬೇಕಷ್ಟೇ. ಇಲ್ಲಿ ಚರ್ಚೆಯಾದ ಬಳಿಕವಷ್ಟೇ ಪ್ರೇಕ್ಷಕರ ಸಂಖ್ಯೆಯ ಕುರಿತು ಮುಖ್ಯಮಂತ್ರಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ವಾರದ ಹಿಂದೆ ಚಿತ್ರಮಂದಿರಗಳಲ್ಲಿ ಶೇ.100 ಆಸನಗಳ ಭರ್ತಿಗೆ ಅವಕಾಶ ನೀಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು.

‘ಶನಿವಾರ ಅಥವಾ ಸೋಮವಾರ ಶಿವರಾಜ್‌ಕುಮಾರ್‌ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಶೇ 100 ಆಸನಗಳ ಭರ್ತಿಗೆ ಅವಕಾಶ ಕೋರಿ ಮನವಿ ಸಲ್ಲಿಸಲಿದ್ದೇವೆ. ಆ.20ಕ್ಕೆ ‘ಸಲಗ’ ಬಿಡುಗಡೆಯಾಗಲಿದೆ ಎಂದು ನಾವು ಘೋಷಿಸಿದ್ದೆವು. ಸರ್ಕಾರವು ಪ್ರೇಕ್ಷಕರ ಸಂಖ್ಯೆ ನಿರ್ಬಂಧ ಸಡಿಲಿಸದೇ ಹೋದರೆ ಸಿನಿಮಾ ಬಿಡುಗಡೆಯೂ ಮುಂದಕ್ಕೆ ಹೋಗಲಿದೆ. ಶೇ 50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡಿದರೆ, ನಮಗೆ ನಷ್ಟವಾಗಲಿದೆ. ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ಬಳಿಕ ಮುಂದಿನ ನಿರ್ಧಾರ ತಿಳಿಸುತ್ತೇವೆ’ ಎಂದು ‘ಸಲಗ’ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು