ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ | ರಾಜಕಾರಣಿಗಳ ನಡೆಯಿಂದ ಜನರಲ್ಲಿ ಗೊಂದಲ: ಉಪೇಂದ್ರ

Last Updated 19 ಏಪ್ರಿಲ್ 2021, 9:39 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕಾರಣಿಗಳು ಟಿ.ವಿ ಮುಂದೆ ಹೇಳುವುದೊಂದು. ಜನರ ಮುಂದೆ ನಡೆದುಕೊಳ್ಳುವುದು ಮತ್ತೊಂದು ರೀತಿ. ಮಾಸ್ಕ್‌ ಹಾಕಿ, ಪರಸ್ಪರ ಅಂತರ ಕಾಪಾಡಿಕೊಳ್ಳಿ ಎನ್ನುವ ಅವರ ಸಭೆ, ಸಮಾರಂಭಗಳಲ್ಲೇ ಲಕ್ಷಾಂತರ ಜನರು ಸೇರುತ್ತಾರೆ. ಇದರಿಂದ ಜನರಲ್ಲಿ ಗೊಂದಲ ಉಂಟಾಗಿದೆ’ ಎಂದು ನಟ ಉಪೇಂದ್ರ ಹೇಳಿದ್ದಾರೆ.

ಸೋಮವಾರ ನಡೆದ ತಮ್ಮ ಹೊಸ ಸಿನಿಮಾ ‘ಲಗಾಮ್‌’ನ ಮುಹೂರ್ತ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗ ಕಾಲಪಕ್ವವಾಗುತ್ತಿದೆ. ರಾಜಕೀಯ ಉದ್ಯಮ ಆದಾಗ ಏನೇನಾಗುತ್ತದೆ ಎನ್ನುವುದು ಜನರಿಗೆ ಅರ್ಥವಾಗುತ್ತಿದೆ. ಇದರ ಪರಿಣಾಮ ಏನು? ಯಾರನ್ನೂ ಕೇಳಲು ಆಗದ ಪರಿಸ್ಥಿತಿ ಎದುರಾಗಿದೆ. ಆಡಳಿತ ಎಂದರೆ ಜನ. ದೇಶ ಎಂದರೆ ಜನ. ದೇಶ ಉದ್ಧಾರ ಆಗಲು ಜನ ಉದ್ಧಾರ ಆಗಬೇಕು. ಜನ ಉದ್ಧಾರ ಆಗಬೇಕು ಎಂದರೆ ಅವರು ವಿಚಾರವಂತರಾಗಬೇಕು. ಚುನಾವಣೆ ಸಂದರ್ಭದಲ್ಲೇ ತಪ್ಪು ಮಾಡಿ, ಆಮೇಲೆ ಹೋರಾಟ ಮಾಡುತ್ತೇವೆ ಎಂದರೆ ಪ್ರಯೋಜನವೇನು. ನಮಗೆ ಅಧಿಕಾರ ಸಿಕ್ಕಿದಾಗ ತಪ್ಪು ಮಾಡಿಬಿಟ್ಟು, ಆ ಮೇಲೆ ಮಾತನಾಡಿ ಪ್ರಯೋಜನವಿಲ್ಲ’ ಎಂದರು.

‘ಕೊರೊನಾ ವಿರುದ್ಧ ಹೋರಾಟಕ್ಕೆ ಮೂಲಸೌಕರ್ಯ ಅತಿ ಮುಖ್ಯವಾಗಿ ಬೇಕಿತ್ತು. ಆರೋಗ್ಯ ಹಾಗೂ ಶಿಕ್ಷಣ ವ್ಯವಸ್ಥೆ ಒಂದು ದೇಶಕ್ಕೆ ಬಹುಮುಖ್ಯ. ಇದು ಭದ್ರವಾಗಿದ್ದರೆ ದೇಶ ಅದ್ಭುತವಾಗಿರುತ್ತದೆ. ಇವತ್ತು ನಮ್ಮ ದೇಶದ ಸ್ಥಿತಿ ನೋಡಿ. ಬೆಡ್‌ ಇಲ್ಲ, ಎಲ್ಲ ಕಮರ್ಷಿಯಲ್‌ ಆಗಿದೆ. ರಾಜಕೀಯದಿಂದ ಹಣ ತೆಗೆಯಿರಿ, ಎಲ್ಲವೂ ಸರಿಯಾಗುತ್ತದೆ. ಸೋಂಕಿಗೆ ತುತ್ತಾದವರು ಮನಸ್ಸು ಗಟ್ಟಿಯಾಗಿಟ್ಟುಕೊಳ್ಳಿ. ಮನಸ್ಸಿಗೆ ಮೊದಲು ಕಾಯಿಲೆ ಬರುತ್ತದೆ, ನಂತರ ದೇಹಕ್ಕೆ. ಜನರು ಧೈರ್ಯವಾಗಿರಬೇಕು. ಹೀಗೆಂದ ಮಾತ್ರಕ್ಕೆ ಎಲ್ಲೆಂದರಲ್ಲಿ ಓಡಾಡಬೇಡಿ. ಮಾಸ್ಕ್‌ ಹಾಕಿಕೊಳ್ಳಿ, ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು’ ಎಂದರು.

‘ಪ್ರಸ್ತುತ ಸನ್ನಿವೇಶದಲ್ಲಿ ರಾಜಕಾರಣಿಗಳೇ ನಮ್ಮನ್ನು ಗೊಂದಲಕ್ಕೆ ತಳ್ಳುತ್ತಿದ್ದಾರೆ. ರಾಜಕಾರಣಿಗಳು ಸಭೆ, ಸಮಾರಂಭ ನಡೆಸುತ್ತಾರೆ. ಅಲ್ಲಿ ಲಕ್ಷಾಂತರ ಜನರು ಇರುತ್ತಾರೆ. ಇದನ್ನು ಟಿ.ವಿಯಲ್ಲಿ ನೋಡಿ, ಜನರು ಗೊಂದಲಕ್ಕೆ ಈಡಾಗುತ್ತಿದ್ದಾರೆ. ನಾಯಕರು ಮೊದಲು ಜನರಿಗೆ ಮಾದರಿಯಾಗಬೇಕು. ಇನ್ನು ಎರಡು ವರ್ಷದಲ್ಲಿ ಚುನಾವಣೆ ಬರಲಿದೆ. ಅಲ್ಲಿಯಾದರೂ ಬದಲಾಗಿ. ಮತ್ತೆ ಜಾತಿ, ಧರ್ಮ, ಪ್ರಚಾರ, ಇವರು ಗೆಲ್ಲುತ್ತಾರೆ ಎಂದು ಅವರಿಗೆ ಮತ ಹಾಕುವುದು...ಹೀಗೆ ಮಾಡದೆ ವಿಚಾರವಂತರನ್ನು ಆಯ್ಕೆ ಮಾಡಿ. ನಾವು ಒಳಗೊಳ್ಳುವ ಆಡಳಿತ ತನ್ನಿ’ ಎಂದು ಕಿವಿಮಾತು ಹೇಳಿದರು.

ಆಕ್ಸಿಜನ್‌ ಸಿಲಿಂಡರ್‌ಗೆ ಒದ್ದಾಡಿದ್ದೇನೆ: ನಟ ಸಾಧುಕೋಕಿಲ ಮಾತನಾಡಿ, ‘ಕೋವಿಡ್‌ ವಿಚಾರದಲ್ಲಿ ಜನರೇ ಎಚ್ಚರವಾಗಿರಬೇಕು. ಅಣ್ಣನ ಮಗನಿಗೆ ಕೋವಿಡ್‌ ಪಾಸಿಟಿವ್‌ ಆಗಿ, ಈಗ ನೆಗೆಟಿವ್‌ ಆಗಿದೆ. ಆದರೂ ಆತನಿಗೆ ಉಸಿರಾಟದ ಸಮಸ್ಯೆ ಎದುರಾಯಿತು. ಈ ಸಂದರ್ಭದಲ್ಲಿ ಸೆಲೆಬ್ರಿಟಿಯಾಗಿ ಒಂದೇ ಒಂದು ಆಕ್ಸಿಜನ್‌ ಸಿಲಿಂಡರ್‌ ತೆಗೆದುಕೊಳ್ಳುವುದಕ್ಕೆ ನಾನು ಒದ್ದಾಡಿದ್ದೇನೆ. ನಮಗೇ ಈ ಸ್ಥಿತಿ ಇದೆ ಎಂದರೆ ಜನರೇ ಯೋಚನೆ ಮಾಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT