ಗುರುವಾರ , ಏಪ್ರಿಲ್ 22, 2021
24 °C

ವಸಿಷ್ಠ ಸಿಂಹನ 'ಕಾಲಚಕ್ರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ವಸಿಷ್ಠ ಸಿಂಹ ಅವರ ಬತ್ತಳಿಕೆಯಲ್ಲಿರುವ ಭಿನ್ನವಾದ ಚಿತ್ರ ‘ಕಾಲಚಕ್ರ’. ಮಾಡೆಲ್‌ ಆಗಿದ್ದ ಅವರು ಬಣ್ಣದಲೋಕ ಪ್ರವೇಶಿಸಿದ್ದು, ‘ರಾಜಾಹುಲಿ’ ಚಿತ್ರದ ಮೂಲಕ. ಈಗ ಅವರು 25 ವರ್ಷದ ಯುವಕನಾಗಿ ಹಾಗೂ 60 ವರ್ಷದ ವೃದ್ಧನಾಗಿ ‘ಕಾಲಚಕ್ರ’ದ ಕಥೆ ಹೇಳಲು ಸಿದ್ಧರಾಗಿದ್ದಾರೆ. ಇಲ್ಲಿಯವರೆಗೆ ಅವರು ನಟಿಸಿರುವ ಚಿತ್ರಗಳಲ್ಲಿ ಖಳನಟನಾಗಿಯೇ ಅಬ್ಬರಿಸಿರುವುದು ಹೆಚ್ಚು. ಈ ಸಿನಿಮಾ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 

ಈ ಚಿತ್ರದ ಹುಟ್ಟಿನ ಹಿಂದೆ ರೋಚಕ ಕಥೆಯೊಂದಿದೆ. ಒಮ್ಮೆ ಸಿನಿಮಾದ ನಿರ್ದೇಶಕ ಸುಮಂತ್‌ ಕ್ರಾಂತಿ ಬೆಂಗಳೂರಿನ ಪೊಲೀಸ್‌ ಆಯುಕ್ತರ ಕಚೇರಿಗೆ ಹೋಗಿದ್ದರಂತೆ. ಅಲ್ಲಿನ ಸಿಬ್ಬಂದಿ ಕಚೇರಿಯ ಸ್ವಚ್ಛತೆಯಲ್ಲಿ ತೊಡಗಿದ್ದರು. ನೈಜ ಘಟನೆಯೊಂದರ ಬಗ್ಗೆ ಅವರು ಸಂಭಾಷಣೆಯಲ್ಲಿ ತೊಡಗಿದ್ದರಂತೆ. ಆ ಸಂಭಾಷಣೆಯೇ ಕಾಲಚಕ್ರದ ರೂಪ ಪಡೆದಿದೆ.

ಸಾಫ್ಟ್‌ವೇರ್ ಎಂಜಿನಿಯರ್‌ ಕುಟುಂಬವೊಂದರಲ್ಲಿ ನಡೆಯುವ ಕಥೆ ಇದು. ಸೈಕಲಾಜಿಕಲ್‌ ಹಿನ್ನೆಲೆಯೂ ಇದೆ ಎಂಬುದು ಚಿತ್ರತಂಡದ ವಿವರಣೆ.

ಚಿತ್ರದ ಬಗ್ಗೆ ಸುಮಂತ್‌ ವಿವರಿಸಿರುವುದು ಹೀಗೆ: ‘ಸತ್ಯ ಘಟನೆ ಆಧಾರಿತ ಸಿನಿಮಾ ಇದು. ಚಿತ್ರಕಥೆ ಸಿದ್ಧಪಡಿಸಿದಾಗ ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡಬೇಕೆಂದು ಯೋಚಿಸಿದೆ. ನಟನೆಯಲ್ಲಿ ರಾಕ್ಷಸಗುಣ ಇರುವ ನಟ ಬೇಕಿತ್ತು. ನನಗೆ ತಕ್ಷಣಕ್ಕೆ ಹೊಳೆದಿದ್ದು ವಸಿಷ್ಠ ಸಿಂಹ’.

‘ಕಥೆಯ ಬಗ್ಗೆ ಅವರೊಟ್ಟಿಗೆ ಚರ್ಚಿಸಿದೆ. ನಾನೇ ಈ ಪಾತ್ರ ಮಾಡುವುದಾಗಿ ಅವರೂ ಒಪ್ಪಿದರು. ಚಿತ್ರದಲ್ಲಿ ವಸಿಷ್ಠ ಸಿಂಹ ಮೂರು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ, ಎರಡು ಗೆಟಪ್‌ ಅನ್ನು ರಿವೀಲ್‌ ಮಾಡಲಾಗಿದೆ. ಸಾಂಗ್‌ ಟೀಸರ್ ಬಿಡುಗಡೆಯಾಗಿದೆ. ಶೀಘ್ರವೇ, ಟೀಸರ್‌ ಮತ್ತು ಟ್ರೇಲರ್‌ ಬಿಡುಗಡೆ ಮಾಡಲಾಗುವುದು’ ಎಂದು ಮಾಹಿತಿ ನೀಡುತ್ತಾರೆ.

ಬೆಂಗಳೂರು ಮತ್ತು ಮಂಗಳೂರಿನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಡಿಸೆಂಬರ್‌ನಲ್ಲಿ ಜನರ ಮುಂದೆ ಬರುವ ಯೋಚನೆ ಚಿತ್ರತಂಡದ್ದು. ಕೊಡಗು ಮೂಲದ ರಕ್ಷಾ ನಾಯಕಿಯಾಗಿದ್ದಾರೆ. ಈ ಚಿತ್ರದ ಮೂಲಕ ಅವರು ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಮೂರು ಹಾಡುಗಳಿಗೆ ಗುರುಕಿರಣ್‌ ಸಂಗೀತ ಸಂಯೋಜಿಸಿದ್ದಾರೆ. ರಶ್ಮಿ ಕೆ. ಬಂಡವಾಳ ಹೂಡಿದ್ದಾರೆ. ಎಲ್‌.ಎಂ. ಸೂರಿ ಅವರ ಛಾಯಾಗ್ರಹಣವಿದೆ. ಆವಿಕಾ ರಾಠೋಡ್‌, ರಾಜ್‌ ದಿಲೀಪ್‌ ಶೆಟ್ಟಿ, ಸುಚೇಂದ್ರಪ್ರಸಾದ್, ಹನುಮಂತೇಗೌಡ ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ: ನೆಮ್ಮದಿ ಅರಸಿದ ಸಿಂಹ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.