ಶನಿವಾರ, ಜನವರಿ 29, 2022
19 °C

ಚಂದನವನದ ಹಿರಿಯ ನಟ ಎಸ್‌. ಶಿವರಾಂ ಇನ್ನಿಲ್ಲ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಂದನವನದ ಹಿರಿಯ ನಟರಾಗಿದ್ದ ಎಸ್. ಶಿವರಾಂ (83) ಅವರು ಶನಿವಾರ ಮಧ್ಯಾಹ್ನ ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡುತ್ತಿದ್ದಾಗ ಶಿವರಾಂ ಕುಸಿದುಬಿದ್ದಿದ್ದರು. ಮಿದುಳು ಸಂಕುಚಿತಗೊಂಡಿರುವುದರಿಂದ ಮತ್ತು ವಯಸ್ಸಿನ ಕಾರಣದಿಂದ ಶಸ್ತ್ರಚಿಕಿತ್ಸೆ ಅಸಾಧ್ಯ ಎಂದು ವೈದ್ಯರು ಹೇಳಿದ್ದರು.

1938 ಜನವರಿ 28 ರಂದು ಬೆಂಗಳೂರಿನ ಚೂಡಸಂದ್ರದಲ್ಲಿ ಜನಿಸಿದ್ದ ಶಿವರಾಂ, ಕನ್ನಡ ಚಿತ್ರರಂಗದಲ್ಲಿ ಪೋಷಕ, ಹಾಸ್ಯ ಪಾತ್ರದಲ್ಲಿ ಸುಮಾರು 6 ದಶಕಗಳ ಕಾಲ ಜನಮನ ರಂಜಿಸಿದ್ದರು. ಅವರು ಕಿರುತೆರೆಯ ಕಾರ್ಯಕ್ರಮಗಳಲ್ಲೂ ನಟಿಸಿದ್ದರು.

1965 ರಲ್ಲಿ ಬೆರೆತ ಜೀವ ಸಿನಿಮಾ ಮೂಲಕ ಶಿವರಾಂ ಚಿತ್ರರಂಗ ಪ್ರವೇಶಿಸಿದ್ದರು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟರ ಜೊತೆ ಶಿವರಾಂ ಬಣ್ಣ ಹಚ್ಚಿದ್ದರು.

ಅಣ್ಣ ರಾಮನಾಥನ್‌ ಅವರ ಮೂಲಕ ಚಿತ್ರರಂಗದ ಪರಿಚಯ ಮಾಡಿಕೊಂಡ ಶಿವರಾಮ್‌, ನಿರ್ದೇಶಕನಾಗಿ ಅಭಿನಯಕ್ಕೆ ಇಳಿದವರು. ಸಹಾಯಕ ನಿರ್ದೇಶಕನಾಗಿದ್ದ ವೇಳೆ ಆಕಾಶವಾಣಿಯಲ್ಲೂ ಶಿವರಾಮ್‌ ಕಾರ್ಯನಿರ್ವಹಿಸಿದ್ದರು.

ಆಸ್ಪತ್ರೆಯ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಅವರ ಪಾರ್ಥಿವ ಶರೀರವನ್ನು ಬನಶಂಕರಿ ಎರಡನೇ ಹಂತದಲ್ಲಿರುವ ಅವರ ನಿವಾಸಕ್ಕೆ ಒಯ್ಯಲಾಗುವುದು. ಸಾರ್ವಜನಿಕರ ದರ್ಶನಕ್ಕೆ ಇರಿಸುವ ಬಗ್ಗೆ ಸಿದ್ಧತೆ ನಡೆದಿದೆ. ಆದರೆ ಸ್ಥಳ ಅಂತಿಮಗೊಂಡಿಲ್ಲ ಎಂದು ಶಿವರಾಂ ಅವರ ಪುತ್ರ ಲಕ್ಷ್ಮೀಶ ಮಾಹಿತಿ ನೀಡಿದರು. 

‘ತಂದೆಯವರು ಒಬ್ಬ ಸ್ವಯಂ ನಿರ್ಮಿತ ವ್ಯಕ್ತಿ. ನನ್ನ ಏಳಿಗೆಗೆ ನಾನೇ ಶಿಲ್ಪಿ ಎಂಬಂತೆ ಬಾಳಿದವರು. ಪರೋಪಕಾರಕ್ಕೇ ನಾವು ಜೀವ ತಾಳಿ ಬಂದಿದ್ದೇವೆ. ಹಾಗಾಗಿ ಒಂದು ಕ್ಷಣವನ್ನೂ ವ್ಯರ್ಥ ಮಾಡಬಾರದು ಎಂದು ಹೇಳುತ್ತಾ ಅದರಂತೆ ಬಾಳಿದವರು’ ಎಂದು ಲಕ್ಷ್ಮೀಶ ಹೇಳಿದರು.

ಇತ್ತೀಚೆಗೆ ಕೆ.ಆರ್. ರಸ್ತೆಯ ಬಳಿ ಕಾರು ಅಪಘಾತ ಸಂಭವಿಸಿತ್ತು. ಅದಾದ ನಂತರ ಆಘಾತಕ್ಕೊಳಗಾಗಿದ್ದ ಶಿವರಾಂ, ಬನಶಂಕರಿಯ ತಮ್ಮ ನಿವಾಸದ ಕೊಠಡಿ ಸೇರಿ ಏಕಾಂತದಲ್ಲಿದ್ದ ಅವರು, ಬಹಳ ಹೊತ್ತಾದರೂ ಹೊರಬಂದಿರಲಿಲ್ಲ. ಜತೆಗೆ ಕೊಠಡಿಯ ಒಳ ಭಾಗದಲ್ಲಿ ಬೀಗ ಹಾಕಿಕೊಂಡಿದ್ದರು. ಅವರು ಬೀಗ ತೆಗೆಯದೇ ಇದ್ದಾಗ, ನಕಲಿ ಕೀಲಿ ಬಳಸಿ ಕುಟುಂಬದ ಸದಸ್ಯರು ಬೀಗ ತೆರೆದು ನೋಡಿದಾಗ, ಶಿವರಾಂ ಕುಸಿದು ಬಿದ್ದ ಸ್ಥಿತಿಯಲ್ಲಿ ಇದ್ದರು. ತಲೆಗೆ ಏಟಾಗಿ, ಮೂಗಿನಿಂದ ರಕ್ತ ಸೋರುತ್ತಿತ್ತು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.‌

ಇದನ್ನೂ ಓದಿ: ದೇವರು ಏಕೆ ನೋವು ಕೊಡುತ್ತಾನೋ ತಿಳಿದಿಲ್ಲ: ಶಿವರಾಂ ಸ್ಥಿತಿಯ ಬಗ್ಗೆ ಶಿವಣ್ಣ ಬೇಸರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು