ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಗಾರುಡಿಗ ವಾಜಿದ್‌ ನೆನಪು

Last Updated 1 ಜೂನ್ 2020, 10:19 IST
ಅಕ್ಷರ ಗಾತ್ರ

ಸಂಗೀತ ನಿರ್ದೇಶಕ ವಾಜಿದ್‌ ಖಾನ್ ಹಿಂದಿ ಚಿತ್ರರಂಗದ ‘ಸ್ಮೈಲಿಂಗ್ ಮನ್’ ಎಂದೇ ಪ್ರಸಿದ್ಧರಾದವರು. ಅವರ ಅಪ್ಪ, ಅಜ್ಜ ಎಲ್ಲರೂ ಸಂಗೀತ ಒಲಿಸಿಕೊಂಡವರೇ. ಅಪ್ಪ ಉಸ್ತಾದ್‌ ಶರಾಫತ್‌ ಅಲಿಖಾನ್‌ ಪ್ರಸಿದ್ಧ ತಬಲ ವಾದಕರಾಗಿದ್ದರು. ಬಾಲಿವುಡ್‌ ಸಿನಿಮಾಗಳಿಗೆ ಹಲವು ದಶಕಗಳ ಕಾಲ ತಬಲ ನುಡಿಸಿದ ಹೆಗ್ಗಳಿಕೆ ಅವರದು. ಮುಂಬೈನಲ್ಲಿ ಸೋಮವಾರ 42ನೇ ವಯಸ್ಸಿಗೆ ತನ್ನ ಸಂಗೀತ ಯಾತ್ರೆಯ ಪಯಣ ಮುಗಿಸಿದ ವಾಜಿದ್‌ ಬಿಟೌನ್‌ ಕಂಡ ಅಪರೂಪದ ಸಂಗೀತ ನಿರ್ದೇಶಕ. ಜೊತೆಗೆ, ಗಾಯಕ ಕೂಡ ಹೌದು.

ಸಂಗೀತ ಕುಟುಂಬದಲ್ಲಿ ಹುಟ್ಟಿ, ಸಂಗೀತದೊಂದಿಗೆ ಬೆಳೆದು, ಸಿನಿಮಾಗಳಿಗೆ ಸಂಗೀತ ನೀಡುತ್ತಿರುವ ಕಾಲದಲ್ಲೇ ತೀರಿಕೊಂಡ ವಾಜಿದ್‌ ಬಿಟ್ಟು ಹೋಗಿರುವ ನೆನಪುಗಳಿಗೆ ಲೆಕ್ಕವಿಲ್ಲ. ಅವರ ಸಹೋದರ ಸಾಜಿದ್‌ ಖಾನ್‌ ಕೂಡ ಸಂಗೀತ ನಿರ್ದೇಶಕರಾಗಿದ್ದಾರೆ. ಬಾಲಿವುಡ್‌ನಲ್ಲಿ ಈ ಜೋಡಿ ‘ಸಾಜಿದ್‌–ವಾಜಿದ್’‌ ಎಂದೇ ಚಿರಪರಿಚಿತ.

ಈ ಜೋಡಿ ಮೊದಲಿಗೆ ಸಂಗೀತ ಸಂಯೋಜಿಸಿದ ಚಿತ್ರ ಸಲ್ಮಾನ್‌ಖಾನ್‌ ನಟನೆಯ ‘ಪ್ಯಾರ್‌ ಕಿಯಾ ತೋ ಡರ್‌ನಾ ಕ್ಯಾ’. ಇದು ತೆರೆ ಕಂಡಿದ್ದು 1998ರಲ್ಲಿ. ಇದರ ಯಶಸ್ಸಿನ ಬಳಿಕ ಇಬ್ಬರೂ ಹಿಂದಿರುಗಿ ನೋಡಿದ್ದೇ ಇಲ್ಲ. ಆ ನಂತರ ಸಲ್ಲು ನಟನೆಯ ‘ಹಲೋ ಬ್ರದರ್‌’ ಚಿತ್ರಕ್ಕೂ ಸಂಗೀತ ಸಂಯೋಜಿಸಿದರು. ‘ದಬಾಂಗ್’, ‘ಚೋರಿ ಚೋರಿ’, ‘ಮುಜ್‌ಸೇ ಶಾದಿ ಕರೋಗಿ’, ‘ತೇರೆ ನಾಮ್‌’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿದರು. ಸಲ್ಲು ನಟನೆಯ ಹಲವು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ ಶ್ರೇಯ ಈ ಜೋಡಿಗೆ ಸಲ್ಲುತ್ತದೆ. ‘ಮುಜ್‌ಸೇ ಶಾದಿ ಕರೋಗಿ’ ಮತ್ತು ‘ತೇರೆ ನಾಮ್‌’ ಚಿತ್ರಗಳ ಆಲ್ಬಂ ಅತಿಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿ ದಾಖಲೆ ಸೃಷ್ಟಿಸಿತು. ಇದು ಸಾಜಿದ್–‌ವಾಜಿದ್‌ ಅವರ ಪ್ರತಿಭೆಗೆ ಕನ್ನಡಿ ಹಿಡಿಯಿತು.

ವಾಜಿದ್‌ ಅವರ ಸಂಗೀತದಲ್ಲಿ ಪಾಶ್ಚಾತ್ಯದ ಸ್ಪರ್ಶವಿತ್ತು. ಅದರೊಟ್ಟಿಗೆ ಹದವಾಗಿ ಕ್ಲಾಸಿಕ್‌ ಸಂಗೀತ ಬೆರೆಸಿ ಕೇಳುಗರಿಗೆ ಇಂಪಾದ ಸಂಗೀತ ನೀಡುವ ಕಲೆ ಕರಗತವಾಗಿತ್ತು. ಆ ಪ್ರಯೋಗದಲ್ಲಿ ಅವರು ಯಶಸ್ಸು ಕಂಡರು.

‘ದಬಾಂಗ್‌’, ‘ರೌಡಿ ರಾಥೋರ್‌‌’, ‘ಹೌಸ್‌ಫುಲ್‌ 2’, ‘ತೇರಿ ಮೇರಿ ಕಹಾನಿ’, ‘ಚಶ್ಮೆ ಬಡ್ಡೂರ್’, ‘ಮೇನ್‌ ತೇರಾ ಹೀರೊ’, ‘ದಾವತ್-ಇ-ಇಶ್ಕ್’ ನಂತಹ ಸೂಪರ್‌ಹಿಟ್‌ ಸಿನಿಮಾಗಳಿಗೆ ಈ ಜೋಡಿ ಸಂಗೀತ ಸಂಯೋಜಿಸಿದೆ. ಐಪಿಎಲ್‌ ಸೀಸನ್‌ 4ರ ‘ಧೂಮ್‌ ಧೂಮ್‌ ಧೂಮ್‌ ದಡಕ್‌...’ ಥೀಮ್‌ ಸಾಂಗ್‌ ಸಂಯೋಜಿಸಿದ್ದೂ ಈ ಜೋಡಿಯೇ. 2012ರ ‘ಸರಿಗಮಪ’ ಮತ್ತು ‘ಸರಿಗಮಪ ಸಿಂಗಿಂಗ್‌ ಸೂಪರ್‌ ಸ್ಟಾರ್’ ರಿಯಾಲಿಟಿ ಶೋನ ಮೆಂಟರ್‌ ಆಗಿ ಕೆಲಸ ಮಾಡಿದ್ದಾರೆ.

ವಾಜಿದ್‌ ಕೋವಿಡ್‌ 19 ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮುಂಬೈನಲ್ಲಿ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT