ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ | ನ್ಯಾಯಾಲಯದಲ್ಲೇ ಹೋರಾಟ: ನಟ ರಕ್ಷಿತ್‌ ಶೆಟ್ಟಿ

ನಟ ರಕ್ಷಿತ್‌ ಶೆಟ್ಟಿ ವಿಚಾರಣೆಗೆ ಹಾಜರು, ಪೊಲೀಸರ ಎದುರು ಹೇಳಿಕೆ ದಾಖಲು
Published 2 ಆಗಸ್ಟ್ 2024, 15:40 IST
Last Updated 2 ಆಗಸ್ಟ್ 2024, 15:40 IST
ಅಕ್ಷರ ಗಾತ್ರ

ಬೆಂಗಳೂರು: ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಅಡಿ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಸಂಬಂಧ ನಟ, ನಿರ್ಮಾಪಕ ರಕ್ಷಿತ್‌ ಶೆಟ್ಟಿ ಅವರು ಶುಕ್ರವಾರ ವಿಚಾರಣೆಗೆ ಹಾಜರಾಗಿ, ತಮ್ಮ ಹೇಳಿಕೆ ದಾಖಲಿಸಿದರು.

ಪರಂವಃ ಸ್ಟುಡಿಯೋಸ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ರಕ್ಷಿತ್ ಶೆಟ್ಟಿ ವಿರುದ್ಧ ಎಂಆರ್‌ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾರ್ ಅವರು ಜುಲೈ 15ರಂದು ದೂರು ನೀಡಿದ್ದರು. ಆ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ರಕ್ಷಿತ್‌ ಶೆಟ್ಟಿ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದರು.

‘ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಯಿತು. ಹಕ್ಕು ಸ್ವಾಮ್ಯ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿ ವಿವರಣೆ ಪಡೆದುಕೊಳ್ಳಲಾಗಿದೆ. 15 ದಿನಗಳ ಒಳಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ರಕ್ಷಿತ್‌ ಶೆಟ್ಟಿ ಅವರಿಗೆ ಸೂಚನೆ ನೀಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ನ್ಯಾಯ ಎಲ್ಲಿದೆ’ ಚಿತ್ರದ ‘ನ್ಯಾಯ ಎಲ್ಲಿದೆ..’ ಹಾಡು ಮತ್ತು ‘ಗಾಳಿ ಮಾತು’ ಚಿತ್ರದ ‘ಒಮ್ಮೆ ನಿನ್ನನ್ನು’ ಹಾಡನ್ನು ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಅನಧಿಕೃತವಾಗಿ ಬಳಕೆ ಮಾಡಲಾಗಿದೆ. ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕು ಅನ್ನು ಖರೀದಿ ಮಾಡದೇ ಹಾಡುಗಳ ಬಳಕೆಯಾಗಿದೆ’ ಎಂಬ ಆರೋಪ ಎಂಆರ್‌ಟಿ ಮ್ಯೂಸಿಕ್ ಕಂಪನಿಯ ದೂರಿನಲ್ಲಿದೆ.

‘ಜನವರಿಯಲ್ಲಿ ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾದ ಹಿನ್ನೆಲೆಯಲ್ಲಿ ಕನ್ನಡದ ನಾಲ್ಕು ಹಳೇ ಹಾಡುಗಳನ್ನು ಬಳಕೆ ಮಾಡಿಕೊಳ್ಳುವ ಅವಶ್ಯ ಇತ್ತು. ಒಂದು ಸಂಸ್ಥೆಯ ಎರಡು ಹಾಡು ಬಳಕೆಗೆ ಅನುಮತಿ ಕೇಳಿದ್ದೆವು. ಅವರಿಗೆ ಹಣ ಸಹ ಪಾವತಿಸಿ ಅನುಮತಿಯಂತೆ ಹಾಡು ಬಳಕೆ ಮಾಡಿಕೊಳ್ಳಲಾಗಿತ್ತು. ಇನ್ನೊಂದು ಕಂಪನಿಗೆ ಸೇರಿದ ಮತ್ತೆರಡು ಹಾಡು ಬಳಸಿಕೊಳ್ಳಲು ಅನುಮತಿ ಕೇಳುವಂತೆ ವ್ಯವಸ್ಥಾಪಕ ರಾಜೇಶ್ ಅವರಿಗೆ ಸೂಚನೆ ನೀಡಿದ್ದೆ. ಅವರು ಅನುಮತಿ ಕೇಳಿದ್ದರು. ಎರಡು ಬಾರಿ ಮಾತುಕತೆ ಸಹ ನಡೆದಿತ್ತು. ಆದರೆ, ಕಂಪನಿಯವರು ಹೆಚ್ಚಿನ ಹಣಕ್ಕೆ ಬೇಡಿಕೆ ಸಲ್ಲಿಸಿದ್ದರು. ಸಿನಿಮಾ ಬಿಡುಗಡೆಯಾಗಿ ಆರು ತಿಂಗಳು ಕಳೆದ ಮೇಲೆ ದೂರು ನೀಡಿದ್ದಾರೆ’ ಎಂದು ರಕ್ಷಿತ್‌ ಶೆಟ್ಟಿ ಹೇಳಿದರು.

‘ಒಂದು ಹಾಡು ಹಿನ್ನೆಲೆ ರೂಪದಲ್ಲಿ ಆರು ಸೆಕೆಂಡ್‌ ಅಷ್ಟೇ ಟಿ.ವಿ ಪರೆದೆಯಲ್ಲಿ ಬರುತ್ತದೆ. ಇನ್ನೊಂದು ಹಾಡು ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಹಾಡುವ ಸಂದರ್ಭ. ಎರಡೂ ಸಂದರ್ಭಗಳೂ ಹಕ್ಕು ಸ್ವಾಮ್ಯ ಉಲ್ಲಂಘನೆ ವ್ಯಾಪ್ತಿಗೆ ಬರುವುದಿಲ್ಲ. ನಾಲ್ಕು ಕಂಪನಿಗಳು ಸಿನಿಮಾ ತೆರೆಗೆ ಬಂದ ಮೇಲೆ ಇದೇ ರೀತಿ ಪ್ರಕರಣ ದಾಖಲಿಸುವ ಕೆಲಸ ಮಾಡುತ್ತಿವೆ’ ಎಂದು ಆಕ್ರೋಶ ಹೊರಹಾಕಿದರು.

‘ಸಂಧಾನಕ್ಕೆ ಒಪ್ಪುವ ಪ್ರಶ್ನೆಯೇ ಇಲ್ಲ. ನ್ಯಾಯಾಲಯದಲ್ಲೇ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.

‘ಹಳೇ ಹಾಡುಗಳನ್ನು ರಿಮೇಕ್‌ ಮಾಡಿ ಯೂಬ್ಯೂಟ್‌ಗೆ ಅಪ್‌ಲೋಡ್‌ ಮಾಡಿ ಹಣ ಸಂಪಾದನೆ ಮಾಡಿದ್ದರೆ ತಪ್ಪು. ಸಿನಿಮಾದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಕನ್ನಡದ ಹಾಡುಗಳನ್ನು ಬಳಕೆ ಮಾಡಿಕೊಳ್ಳುವುದೇ ತಪ್ಪೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT