ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

 ‘ರಾಚಯ್ಯ’ನಾಗುತ್ತಾರಾ ವಿಜಯ್‌?

Published : 27 ಸೆಪ್ಟೆಂಬರ್ 2024, 0:54 IST
Last Updated : 27 ಸೆಪ್ಟೆಂಬರ್ 2024, 0:54 IST
ಫಾಲೋ ಮಾಡಿ
Comments

‘ಭೀಮ’ದ ಯಶಸ್ಸಿನ ಬಳಿಕ ದುನಿಯಾ ವಿಜಯ್ ಬ್ಯುಸಿಯಾಗಿದ್ದಾರೆ. ‘ಭೀಮ’ ಚಿತ್ರ ತೆರೆಗೆ ಬರುವ ಮೊದಲೇ ಅವರ 29ನೇ ಸಿನಿಮಾ ಸೆಟ್ಟೇರಿತ್ತು. ‘ಕಾಟೇರ’ ಚಿತ್ರದ ಬರಹಗಾರ ಹಾಗೂ ನಿರ್ದೇಶಕ ಜಡೇಶ್‌ ಹಂಪಿ ಈ ಚಿತ್ರಕ್ಕೆ ಆ್ಯಕ್ಷನ್‌–ಕಟ್‌ ಹೇಳುತ್ತಿದ್ದಾರೆ. ಚಿತ್ರದ ಶೇಕಡ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.

‘ಚಿತ್ರದಲ್ಲಿ ವಿಜಯ್‌ ಪಾತ್ರದ ಹೆಸರು ರಾಚಯ್ಯ. ಹೀಗಾಗಿ ಇದೇ ಶೀರ್ಷಿಕೆ ಎಂಬ ಸುದ್ದಿ ಹರಿದಾಡಿದೆ. ಆದರೆ ಇದರ ಜೊತೆಗೆ ಬೇರೆ ಮೂರು ಶೀರ್ಷಿಕೆಗಳನ್ನು ಆಲೋಚಿಸಿದ್ದೇವೆ. ಯಾವ ಶೀರ್ಷಿಕೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಸದ್ಯ ಚಿತ್ರೀಕರಣದ ಮೇಲೆ ಗಮನ ಹರಿಸಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಜಡೇಶ್‌.

‘ಕಾಲಘಟ್ಟದಲ್ಲಿ ನಡೆಯುವ ಕಥೆ. ಆಗಿನ ಕಾಲದ ರೀತಿಯ ಹಳ್ಳಿಗಳು ಈಗ ಸಿಗುವುದಿಲ್ಲ. ಹೀಗಾಗಿ ಬಹುತೇಕ ಸೆಟ್‌ನಲ್ಲಿಯೇ ಚಿತ್ರೀಕರಣ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತ ಸೆಟ್‌ ಹಾಕಿ ಶೇಕಡ 60ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಇನ್ನೂ 40 ದಿನದ ಚಿತ್ರೀಕರಣ ಬಾಯಿ ಇದೆ. ಉಮಾಶ್ರೀ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವರ್ಷದೊಳಗೆ ಚಿತ್ರೀಕರಣ ಮುಗಿಸುವ ಯೋಜನೆಯಿದೆ. ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್‌ ಕುಮಾರ್‌, ಬಿ.ಸುರೇಶ್‌ ಮೊದಲಾದವರ ಡೇಟ್‌ ಹೊಂದಿಸಿ ಚಿತ್ರೀಕರಣ ಮಾಡಬೇಕಿದೆ’ ಎಂದು ಜಡೇಶ್‌ ಮಾಹಿತಿ ನೀಡಿದರು. 

‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎಂಬ ಟ್ಯಾಗ್‌ಲೈನ್‌ ಹೊಂದಿರುವ ಚಿತ್ರ ಜಾತಿ ವ್ಯವಸ್ಥೆಯ ಕುರಿತಾದ ಕಥೆ ಹೊಂದಿದೆ ಎನ್ನುತ್ತಿವೆ ಚಿತ್ರತಂಡ ಮೂಲಗಳು. ‘ಸಾರಥಿ’ ಸಿನಿಮಾದ ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್‍ ಬಂಡವಾಳ ಹೂಡುತ್ತಿದ್ದಾರೆ. ದುನಿಯಾ ವಿಜಯ್ ಅವರ ಮಗಳು ಮೋನಿಕಾ ಈ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ವಿಜಯ್‌ಗೆ ರಚಿತಾ ರಾಮ್‌ ಜೋಡಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT