ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

TOXIC: ಯಶ್ 19ನೇ ಚಿತ್ರ ಟಾಕ್ಸಿಕ್ ನಿರ್ದೇಶಿಸುತ್ತಿರುವ ಗೀತು ಮೋಹನ್‌ದಾಸ್ ಯಾರು?

ಯಶ್ ಅವರ ಜೊತೆ 'ಟಾಕ್ಸಿಕ್' ಚಿತ್ರ ಹೊರಬೀಳುತ್ತಿದ್ದಂತೆಯೇ ಇನ್‌ಸ್ಟಾಗ್ರಾಂನಲ್ಲಿ ಗೀತು ಮೋಹನ್‌ದಾಸ್ ಅವರಿಗೆ ಫಾಲೋವರ್‌ಗಳ ದಂಡೇ ಹರಿದು ಬರುತ್ತಿದೆ.
Published 8 ಡಿಸೆಂಬರ್ 2023, 11:09 IST
Last Updated 8 ಡಿಸೆಂಬರ್ 2023, 11:09 IST
ಅಕ್ಷರ ಗಾತ್ರ

ಬೆಂಗಳೂರು: ಅಂತೂ ನಟ ಯಶ್ ಅವರ 19 ನೇ ಚಿತ್ರ ಘೋಷಣೆಯಾಗಿದೆ. ಟಾಕ್ಸಿಕ್ (TOXIC) ಎಂದು ಹೆಸರಿಡಲಾಗಿರುವ ಈ ಚಿತ್ರವನ್ನು ಮಲಯಾಳಂನ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ.

ಮೂಲತಃ ಗಾಯಿತ್ರಿ ದಾಸ್ ಎಂಬ ಹೆಸರಿನವರಾದ ಗೀತು ಮೋಹನ್‌ದಾಸ್, ಭಾರತೀಯ ಚಿತ್ರರಂಗದಲ್ಲಿ ಒಬ್ಬ ಪ್ರತಿಭಾವಂತ ನಿರ್ದೇಶಕಿ. ಅವರು ಯಶ್‌ಗೆ ‘ಅಕ್ಷನ್ ಕಟ್‌’ ಹೇಳುತ್ತಿರುವುದು ಕೇವಲ ಯಶ್ ಅಭಿಮಾನಿಗಳಿಗೆ ಅಷ್ಟೇ ಅಲ್ಲದೇ, ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.

ಕೊಚ್ಚಿ ಮೂಲದ 42 ವರ್ಷದ ಗೀತು ಅವರು, ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. ಆ ನಂತರ ಮಲಯಾಳಂನ ‘ಲೈಫ್ ಇಸ್ ಬ್ಯೂಟಿಫುಲ್’ ಎಂಬ ಚಿತ್ರದಲ್ಲಿ ನಾಯಕಿಯಾಗಿ ಅಭಿನಯ. ಅಲ್ಲಿಂದ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿ, ಪೋಷಕ ನಟಿಯಾಗಿ ಮಲಯಾಳಂ, ತಮಿಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು.

2009 ರಿಂದ ನಿರ್ದೇಶನದತ್ತ ಹೊರಳಿರುವ ಗೀತು, ಆ ವರ್ಷ ‘Kelkkunnundo’ ಎಂಬ ಶಾರ್ಟ್ ಫಿಲ್ಮ್ ನಿರ್ದೇಶಿಸಿದ್ದರು. ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಆ ಚಿತ್ರ ಹೆಚ್ಚು ಸದ್ದು ಮಾಡಿತ್ತು.

2014 ರಲ್ಲಿ ಹಿಂದಿಯಲ್ಲಿ ತೆರೆಗೆ ಬಂದ ‘Liar's Dice’ ಚಿತ್ರ ಗೀತು ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತು. ಈ ಚಿತ್ರ 4 ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಗಳೊಡನೆ ಎರಡು ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆಯಿತು. ನವಾಜುದ್ದೀನ್ ಸಿದ್ಧಿಕಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದರು. 2016 ರಲ್ಲಿ ಇವರ ನಿರ್ದೇಶನದ ‘Moothon’ (The elder One) ಚಿತ್ರವೂ ಕೂಡ ಸಾಕಷ್ಟು ಹೆಸರು ಮಾಡಿತು.

ಗೀತು ಅವರ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡದಿದ್ದರೂ ಅವರ ಚಿತ್ರಗಳೆಲ್ಲವೂ ಕಂಟೆಂಟ್ ಆಧಾರಿತ ಚಿತ್ರಗಳಾಗಿವೆ.

ಖ್ಯಾತ ಸಿನಿಮಾಟೋಗ್ರಾಫರ್ ರಾಜೀವ್ ರವಿ ಅವರು ಗೀತು ಅವರ ಪತಿ.

ಯಶ್ ಅವರ ಜೊತೆ 'ಟಾಕ್ಸಿಕ್' ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಇನ್‌ಸ್ಟಾಗ್ರಾಂನಲ್ಲಿ ಗೀತು ಮೋಹನ್‌ದಾಸ್ ಅವರಿಗೆ ಫಾಲೋವರ್‌ಗಳ ದಂಡೇ ಹರಿದು ಬರುತ್ತಿದೆ. ಸದ್ಯ 283K ಫಾಲೋವರ್‌ಗಳನ್ನು ಅವರು ಹೊಂದಿದ್ದಾರೆ.

ಟಾಕ್ಸಿಕ್ ಎಂತಹ ಚಿತ್ರ?

ಕನ್ನಡಕ್ಕೆ RRR ಅಂತಹ ಮಹತ್ವದ ಚಿತ್ರವನ್ನು ತಂದ ‘ಕೆವಿಎನ್ ಫ್ರೊಡಕ್ಸನ್‌’ ಟಾಕ್ಸಿಕ್ ಚಿತ್ರವನ್ನು ನಿರ್ಮಿಸುತ್ತಿದೆ. ಮೂಲಗಳ ಪ್ರಕಾರ ಯಶ್ ಅವರ ‘ Monster Mind Creations’ ಕೂಡ ಈ ಚಿತ್ರಕ್ಕೆ ಹಣ ಹೂಡುತ್ತಿದೆ ಎನ್ನಲಾಗಿದ್ದು, ಇದೊಂದು ಕಂಟೆಂಟ್ ಆಧಾರಿತ ಚಿತ್ರ. ಅಷ್ಟೇ ಅಲ್ಲದೇ ಬಿಗ್ ಬಜೆಟ್ ಚಿತ್ರವೂ ಹೌದು ಎನ್ನಲಾಗುತ್ತಿದೆ.

ಅಂದಹಾಗೇ ಟಾಕ್ಸಿಕ್ ಅಂದರೆ ವಿಷಪೂರಿತ ಎಂಬ ಅರ್ಥ. ಈ ಮೂಲಕ ಗೀತು ಹಾಗೂ ಯಶ್ ಅವರು ಭಾರತೀಯ ಅಪರಾಧ ಲೋಕದಲ್ಲಿನ ಕರಾಳ ಡ್ರಗ್ಸ್‌ ಕಥೆಯನ್ನು ಹೇಳಲು ಹೊರಟಿದ್ದಾರೆಯೇ? ಎಂಬ ಕುತೂಹಲ ಮೂಡುತ್ತಿದೆ.

ಟಾಕ್ಸಿಕ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಇನ್ನೂ ಒಂದೂವರೆ ವರ್ಷ ಕಾಯಲೇಬೇಕು. ಚಿತ್ರತಂಡ ಹೇಳಿಕೊಂಡಿರುವ ಪ್ರಕಾರ 2025 ರ ಏಪ್ರಿಲ್ 10 ರಂದು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಟಾಕ್ಸಿಕ್ ಚಿತ್ರದ ಟೈಟಲ್ ಘೋಷಣೆ ಇಲ್ಲಿ ನೋಡಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT