ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂದಿ ಆಯುವವ ಹೇಳಿದ ಕತೆಗಳು

Last Updated 24 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಕಬ್ಬನ್‌ ಪಾರ್ಕ್‌ನ ತಡೆಗೋಡೆಗಳಾಚೆ ನಿಂತ ಚಿಂದಿ ಆಯುವ ಹುಡುಗನೊಬ್ಬ ಪೇಪರ್‌ ಕಪ್‌ನಲ್ಲಿ ಚಹಾನೋ ಕಾಫಿನೋ ಕುಡಿಸುತ್ತಿದ್ದ. ಇದನ್ನು ಗಮನಿಸಿದ ಆ ಮಹಿಳೆ, ಚಿಂದಿ ಆಯುವ ಹುಡುಗನೊಬ್ಬ ಇನ್ನೇನು ಮಾಡಲು ಸಾಧ್ಯ ಎಂದು ಭಾವಿಸಿಬಿಟ್ಟರು.

‘ಆದರೆ ನಾನು ಯೋಚಿಸಿದ ರೀತಿಯೇ ಸರಿ ಇರಲಿಲ್ಲ. ಯಾಕೆಂದರೆ, ನಾವು ಸಾಮಾನ್ಯವಾಗಿ ಏನನ್ನಾದರೂ ನೋಡಿದ ತಕ್ಷಣ ಒಂದು ತೀರ್ಮಾನಕ್ಕೆ ಬಂದುಬಿಡುತ್ತೇವೆ. ಅದು ದೊಡ್ಡ ತಪ್ಪು’ ಎಂದು ಹೇಳುವಾಗ ಆ ಮಹಿಳೆಯ ಧ್ವನಿಯಲ್ಲಿ ಪಶ್ಚಾತ್ತಾಪವಿತ್ತು.

– ಮೇಲಿನ ಎರಡೂ ನಿಲುವುಗಳು, ‘ಗುಡ್‌ ಗಯ್‌, ಬ್ಯಾಡ್‌ ಗಯ್‌’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ ಇಂದು ಕೃಷ್ಣನ್‌ ಅವರದು. ಚಿಂದಿ ಆಯುವ ಹುಡುಗನನ್ನು ಮೊದಲ ಬಾರಿಗೆ ನೋಡಿದಾಗ ಅಪಾರ್ಥ ಮಾಡಿಕೊಂಡ ಇಂದು ಅವರು ಮುಂದೊಂದು ದಿನ ಜಾಕೀರ್‌ ಎಂಬ ಯುವಕನ ಬಗ್ಗೆಯೇ ಸಾಕ್ಷ್ಯಚಿತ್ರ ಮಾಡಿದ್ದರು. ಅದುವೇ ‘ಗುಡ್‌ ಗಯ್‌...’.

ನಗರದಲ್ಲಿ ನಡೆದಿರುವ ‘ಅರ್ಬನ್‌ಲೆನ್ಸ್‌ ಚಿತ್ರೋತ್ಸವ 2018’ರಲ್ಲಿ ಪ್ರದರ್ಶನಗೊಂಡಿರುವ ‘ಗುಡ್‌ ಗಯ್‌...’ಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಬೆಂಗಳೂರಿನ ಕೆಳವರ್ಗದ ಶ್ರಮಿಕರ ಕತೆಗಳನ್ನು ಚಿಂದಿ ಆಯುವ ಯುವಕನೊಬ್ಬನ ಚಟುವಟಿಕೆಗಳ ಮೂಲಕ ತೋರಿಸಿಕೊಟ್ಟಿರುವ ಇಂದು ಕೃಷ್ಣನ್‌ ತಮ್ಮ ಸಾಕ್ಷ್ಯಚಿತ್ರದ ಬಗ್ಗೆ ಹೇಳುವುದು ಹೀಗೆ...

‘ಗುಡ್‌ ಗಯ್‌ ಬ್ಯಾಡ್‌ ಗಯ್‌’ನಲ್ಲಿ ಜಾಕೀರ್‌ ಐದು ವರ್ಷಗಳ ಕತೆ ಇದೆ. ಅಂದರೆ ಈ ಸಾಕ್ಷ್ಯಚಿತ್ರದ ಹಿಂದೆ ಐದು ವರ್ಷಗಳ ಪರಿಶ್ರಮವಿದೆ. ಇದರಲ್ಲಿ ನಟನೆಯಿಲ್ಲ. ಜಾಕೀರ್‌ ಮತ್ತು ಅವನ ಕುಟುಂಬದ ದೈನಂದಿನ ಬದುಕಿನಲ್ಲಿ ನನಗೆ ಆಸಕ್ತಿಕರವಾಗಿ ಕಂಡ ಅಂಶಗಳನ್ನು ಹೆಕ್ಕಿ ಚಿತ್ರೀಕರಿಸಿಕೊಂಡಿದ್ದೇನೆ. ಒಂದು ಹಂತದಲ್ಲಿ ಜಾಕೀರ್‌ ಸ್ವತಃ ಸಿನಿಮಾ ಮಾಡುವ ಕನಸನ್ನೂ ಕಾಣುತ್ತಾನೆ ಮತ್ತು ಕೊಲೆ ಪ್ರಕರಣವೊಂದರಲ್ಲಿ ಅವನನ್ನು ಪೊಲೀಸರು ಆರೋಪಿಯನ್ನಾಗಿಸಿದ್ದೂ ಇದೆ. ಈ ಸಂಗತಿಗಳು ‘ಗುಡ್‌ ಗಯ್‌...’ನಲ್ಲಿವೆ.

‘ಆಗಲೇ ಹೇಳಿದಂತೆ ಕಣ್ಣಿಗೆ ಕಂಡದ್ದರ ಬಗ್ಗೆ ತಕ್ಷಣಕ್ಕೆ ಒಂದು ತೀರ್ಪು ಕೊಟ್ಟುಬಿಡುವ ನಮ್ಮ ಜಾಯಮಾನ ಕೆಟ್ಟದ್ದು. ಜಾಕೀರ್‌, ಮಂಗಗಳಿಗೆ ಕಾಫಿ ಕುಡಿಸುವುದನ್ನು ನೋಡಿ ಅವನ ಆರ್ಥಿಕ ಸ್ಥಿತಿಗತಿಯನ್ನು ಒಂದು ಕ್ಷಣದಲ್ಲಿ ಅಂದಾಜಿಸಿಬಿಟ್ಟಿದ್ದೆ. ಆದರೆ ನಮ್ಮ ದೃಷ್ಟಿಕೋನ ಮತ್ತು ಅವನದು ಒಂದೇ ಆಗಿರಬೇಕಾಗಿಲ್ಲವಲ್ಲ? ಅವನ ಚಟುವಟಿಕೆಗಳ ಮೂಲಕವೇ ಬೆಂಗಳೂರಿನ ಕತೆಗಳನ್ನು ಬಿಚ್ಚಿಡುತ್ತಾ ಹೋಗಿದ್ದೇನೆ. ಚಿಂದಿ ಆಯುವ ಯುವಕ ಎಂಬುದರ ಬದಲಿಗೆ ಅವನನ್ನು ತ್ಯಾಜ್ಯ ಮರುಬಳಕೆ ಮಾಡುವವನು ಎಂದೇ ಕರೆದಿದ್ದೇನೆ.

‘ಬೆಂಗಳೂರು ತನ್ನ ಹಳೆಯ ಚಾರ್ಮ್‌ಅನ್ನು ಕಳೆದುಕೊಂಡಿದೆ. ‘ಗುಡ್‌ ಗಯ್‌...’ನಲ್ಲಿ ಜಾಕೀರ್‌, ಬೆಂಗಳೂರು ನಗರಕ್ಕೆ ರೂಪಕವಾಗುತ್ತಾನೆ. ಹಾಗಾಗಿ ಇದರಲ್ಲಿ ಅವನೇ ಬೆಂಗಳೂರು.‌ ಒಮ್ಮೆ ಜಾಕೀರ್‌ ನನಗೆ ಹೇಳಿದ್ದ– ‘ಆ ಮಂಗಗಳನ್ನು ನೋಡಿ, ಅವು ಎಷ್ಟು ಸ್ವತಂತ್ರವಾಗಿವೆ. ಮನುಷ್ಯರಿಗೆ ಆ ಸ್ವಾತಂತ್ರ್ಯವಿಲ್ಲ’ ಎಂದು. ಬೆಂಗಳೂರು ವೈವಿಧ್ಯತೆಯ ಸಾಗರ.

ಎಲ್ಲರೂ ಒಟ್ಟಾಗಿ ಬಾಳುತ್ತಾರೆ. ಆದರೆ ಶ್ರೀಮಂತ ಮತ್ತು ಬಡವರ ನಡುವೆ ದೊಡ್ಡದೊಂದು ಅಂತರವಿದೆ. ಜಾಕೀರ್‌ನನ್ನು ಮೊದಲ ಬಾರಿಗೆ ನೋಡಿ ಅವನ ಬಗ್ಗೆಯೇ ಸಾಕ್ಷ್ಯಚಿತ್ರ ಮಾಡುವ ತೀರ್ಮಾನ ಮಾಡಿದ ಬಳಿಕವೂ ಕಬ್ಬನ್‌ಪಾರ್ಕ್‌ನಲ್ಲಿ ಅವನನ್ನು ಭೇಟಿಯಾಗುವುದು, ಮಾತನಾಡಿಸುವುದು ನನಗೆ ಕಷ್ಟವಾಗಲಿಲ್ಲ. ಆದರೆ ಸಮಸ್ಯೆ ಶುರುವಾಗಿದ್ದು ಚಿತ್ರೀಕರಣ ಆರಂಭವಾದ ಮೇಲೆ. ಯಾಕೆಂದರೆ, ಆರ್ಥಿಕವಾಗಿ ತೀರಾ ಹಿಂದುಳಿದ ಜಾಕೀರ್‌ನಂತಹ ಯುವಕನ ಜೀವನವನ್ನು ಚಿತ್ರವಾಗಿಸುವುದು ಸೂಕ್ಷ್ಮ ಸಂವೇದನೆಯ ಸಂಗತಿ. ಇಡೀ ಸಾಕ್ಷ್ಯಚಿತ್ರವನ್ನು ನಾನು ಐ ಫೋನ್‌ನಲ್ಲಿ ಚಿತ್ರೀಕರಿಸಿದ್ದೇನೆ. ಎಡಿಟಿಂಗ್‌ ಮಾಡಿದವರು ಅಭ್ರೋ ಬ್ಯಾನರ್ಜಿ.

‘ಬೆಂಗಳೂರಿಗರಲ್ಲಿ ನನ್ನದೊಂದು ಮನವಿ– ರಸ್ತೆಯಲ್ಲಿ ಚಿಂದಿ ಆಯುವ ಮಂದಿ ಕಣ್ಣಿಗೆ ಬಿದ್ದ ತಕ್ಷಣ ಏನೋ ಒಂದು ತೀರ್ಮಾನಕ್ಕೆ ಬರಬೇಡಿ. ನಾನು ಅವರ ಬದುಕನ್ನು ಕಣ್ಣಾರೆ ಕಂಡಿದ್ದೇನೆ. ಅವರನ್ನೂ ಗೌರವ ಮತ್ತು ಮಾನವೀಯತೆಯಿಂದ ನೋಡಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT