ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಗನಾ ನಟನೆಯ ಎಮರ್ಜೆನ್ಸಿ ಚಿತ್ರಕ್ಕೆ ಸಿಗದ CBFC ಪ್ರಮಾಣ ಪತ್ರ: HCಗೆ ಝೀ ಅರ್ಜಿ

Published 3 ಸೆಪ್ಟೆಂಬರ್ 2024, 15:56 IST
Last Updated 3 ಸೆಪ್ಟೆಂಬರ್ 2024, 15:56 IST
ಅಕ್ಷರ ಗಾತ್ರ

ಮುಂಬೈ: ತುರ್ತು ಪರಿಸ್ಥಿತಿ ಆಧಾರಿತ ಕಂಗನಾ ರನೌತ್ ನಟನೆಯ ಎಮರ್ಜೆನ್ಸಿ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಪ್ರಮಾಣಪತ್ರ ನೀಡದಿರುವುದನ್ನು ಪ್ರಶ್ನಿಸಿ ಝೀ ಎಂಟರ್‌ಟೈನ್ಮೆಂಟ್‌ ಸಂಸ್ಥೆಯು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಎಮರ್ಜೆನ್ಸಿ ಚಿತ್ರವನ್ನು ಝೀ ಎಂಟರ್‌ಟೈನ್ಮೆಂಟ್‌ ನಿರ್ಮಾಣ ಮಾಡಿದೆ. ಸಂಸ್ಥೆಯ ಅರ್ಜಿಯನ್ನು ಬುಧವಾರ ವಿಚಾರಣೆಗೆ ಪರಿಗಣಿಸುವುದಾಗಿ ಹೈಕೋರ್ಟ್ ಹೇಳಿದೆ. 

ಸೆ. 6ರಂದು ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಚಿತ್ರದಲ್ಲಿ ಸಿಖ್ಖರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಹಾಗೂ ಸಿಖ್ ಸಮುದಾಯದ ಕುರಿತು ದ್ವೇಷ ಮೂಡಿಸುವಂತ ಸನ್ನಿವೇಶಗಳನ್ನು ಚಿತ್ರ ಹೊಂದಿದೆ ಎಂದು ಶಿರೋಮಣಿ ಅಕಾಲಿದಳ ಆಕ್ಷೇಪ ವ್ಯಕ್ತಪಡಿಸಿತ್ತು. ಜತೆಗೆ ಪ್ರಮಾಣಪತ್ರ ವಿತರಿಸದಂತೆ ಸಿಬಿಎಫ್‌ಸಿಗೆ ಮನವಿ ಮಾಡಿತ್ತು. 

‘ಸಿನಿಮಾದಲ್ಲಿ ಸಿಖ್‌ ಸಮುದಾಯವನ್ನು ‘ಭಯೋತ್ಪಾದಕರು’, ‘ದೇಶ ವಿರೋಧಿಗಳು’ ಎಂದು ಬಿಂಬಿಸಲಾಗಿದ್ದು, ಸಮುದಾಯದ ಘನತೆಗೆ ಹಾನಿ ಉಂಟುಮಾಡಲಿದೆ’ ಎಂದು ಆರೋಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಹೈಕೋರ್ಟ್‌ ನ್ಯಾಯಮೂರ್ತಿ ಸಚ್‌ದೇವ ನೇತೃತ್ವದ ಪೀಠ ಚಿತ್ರತಂಡಕ್ಕೆ ನೋಟಿಸ್ ಜಾರಿಗೊಳಿಸಿದೆ.

‘ಕೆಲವೊಮ್ಮೆ ಚಿತ್ರದ ಟ್ರೇಲರ್‌ನಲ್ಲಿ ವಾಸ್ತವವನ್ನು ಬಿಂಬಿಸುವುದಿಲ್ಲ. ಆದರೆ, ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ ಪ್ರಪಂಚದಾದ್ಯಂತ ಕೋವಿಡ್‌ ಲಾಕ್‌ಡೌನ್ ಸಮಯದಲ್ಲಿ ಸಿಖ್ ಸಮುದಾಯವು ಜನರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿತ್ತು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಎಮರ್ಜೆನ್ಸಿ’ ಸಿನಿಮಾ ಪ್ರದರ್ಶನಕ್ಕೆ ರಾಜ್ಯದಲ್ಲಿ ನಿಷೇಧ ಹೇರುವ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ಅವರು ಸಿಖ್‌ ಸಮುದಾಯಕ್ಕೆ ಭರವಸೆ ನೀಡಿದ್ದಾರೆ’ ಎಂದು ಸರ್ಕಾರದ ಸಲಹೆಗಾರ ಮೊಹಮ್ಮದ್‌ ಅಲಿ ಶಬ್ಬೀರ್‌ ಈಚೆಗೆ ತಿಳಿಸಿದ್ದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಾಧಾರಿತವಾದ 'ಎಮರ್ಜೆನ್ಸಿ'ಗೆ ಕಥೆ ಬರೆದು ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ಕಂಗನಾ, ಇಂದಿರಾ ಅವರ ಪಾತ್ರವನ್ನೂ ನಿಭಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT