ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಲ್ಲದ ಮಹಾಭಾರತದ ತುಣುಕು

ಒಂದು ಮಾತು
Last Updated 23 ಜುಲೈ 2015, 19:30 IST
ಅಕ್ಷರ ಗಾತ್ರ

‘‘ಹಾಲಿವುಡ್‌’ ಮಾದರಿಯ ಸಿನಿಮಾಗಳು ನಮ್ಮಲ್ಲಿಯೂ ಬರಬೇಕು’’
–ಇದು ನಮ್ಮ ಸಿನಿಮಾಜಗತ್ತಿನ ಪಡಸಾಲೆಯಲ್ಲಿ ಪದೇ ಪದೇ ಕೇಳಿಬರುವ ಒಂದು ಸ್ಟೇಟ್‌ಮೆಂಟ್‌.

ಹೀಗೆ ಹೇಳುವಾಗ ಇಂಗ್ಲಿಷ್‌ ಸಿನಿಮಾಗಳ ಮೈಮರೆಸುವ ದೃಶ್ಯವೈಭವವೇ ಅವರ ಮನಸ್ಸಿನಲ್ಲಿರುತ್ತದೆ ಎನ್ನವುದು ಸರ್ವವಿಧಿತ ಸಂಗತಿ.
ಇತ್ತೀಚೆಗೆ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆಯ ನಡುವೆಯೇ ಸಾಕಷ್ಟು ಗಳಿಕೆ ಕಾಣುತ್ತಿರುವ ಸಿನಿಮಾ ‘ಬಾಹುಬಲಿ’ ಈ ಮೇಲಿನ ಹೇಳಿಕೆಗೆ ಉತ್ತರರೂಪದಲ್ಲಿದೆ.

ಬಾಹುಬಲಿ ಪೂರ್ಣಪ್ರಮಾಣದಲ್ಲಿ ದೃಶ್ಯವೈಭವವನ್ನೇ ನೆಚ್ಚಿಕೊಂಡಿರುವ ಚಿತ್ರ. ತಾರ್ಕಿಕ ನೆಲೆಗಟ್ಟಿನಲ್ಲಿ ಈ ಸಿನಿಮಾದ ಬಗ್ಗೆ ಮಾತನಾಡ ಹೊರಟರೆ ಅದು ಬೇರೆಯದೇ ಚರ್ಚೆಯಾಗುತ್ತದೆ.

‘ಬಾಹುಬಲಿ’ ಚಿತ್ರವನ್ನು ವಿಮರ್ಶಿಸುವುದು ನನ್ನ ಉದ್ದೇಶವಲ್ಲ. ಬದಲಿಗೆ ರಾಜಮೌಳಿಯವರ ಈ ಸಿನಿಮಾ ನಮ್ಮ ಪುರಾಣ ಕಥನಗಳ ಫ್ಯಾಂಟಸಿಯನ್ನು ಹೇಗೆ ಬಂಡವಾಳ ಮಾಡಿಕೊಂಡಿದೆ ಎಂಬುದರ ಬಗ್ಗೆ ನನ್ನ ಕುತೂಹಲವಿದೆ.

ರಾಜಮೌಳಿ ಅವರ ಹಿಂದಿನ ಚಿತ್ರ ‘ಮಗಧೀರ’ವೂ ಫ್ಲಾಷ್‌ಬ್ಯಾಕ್‌ನಲ್ಲಿ ರಾಜರ ಆಡಳಿತದ ಕಥನವನ್ನು ಹೆಣೆದುಕೊಂಡಿತ್ತು. ಆದರೆ, ‘ಬಾಹುಬಲಿ’ ಪೂರ್ಣಪ್ರಮಾಣದ ಫ್ಯಾಂಟಸಿ ಕಥೆಯನ್ನೇ ಆಧರಿಸಿದ ಸಿನಿಮಾ. ‘ಈಗ’ ಚಿತ್ರದಲ್ಲೂ ಫ್ಯಾಂಟಸಿ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗಿತ್ತು.

ಹೀಗೆ ತಮ್ಮ ಸಿನಿಮಾಗಳಲ್ಲಿ ಪುರಾಣ ಮತ್ತು ಫ್ಯಾಂಟಸಿಯನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಮತ್ತು ಅವರ ಸಿನಿಮಾಗಳಿಗೆಲ್ಲ ಭರ್ಜರಿ ಯಶಸ್ಸು ಸಿಗುತ್ತಿರುವುದು ಕಾಕತಾಳೀಯ ಅಲ್ಲವೆಂದೇ ನನ್ನ ಭಾವನೆ. ಹಾಗೆಂದು ಪುರಾಣ ಕಾಲದ ಫ್ಯಾಂಟಸಿಯನ್ನು ಬಳಸಿಕೊಂಡ ಸಿನಿಮಾಗಳೆಲ್ಲ ಗೆದ್ದುಬಿಡುವುದಿಲ್ಲ ಎನ್ನುವುದಕ್ಕೆ ‘ಮಗಧೀರ’ವನ್ನೇ ಅನುಸರಿಸಿ ಬಂದು ಬಾಕ್ಸ್‌ ಆಫೀಸಿನಲ್ಲಿ ಮುಗ್ಗರಿಸಿ ಬಿದ್ದ ಕೆಲವು ಕನ್ನಡ ಚಿತ್ರಗಳನ್ನೇ ನಿದರ್ಶನ ತೆಗೆದುಕೊಳ್ಳಬಹುದು. ಸಿನಿಮಾ ನಿರ್ಮಾತೃಕಾರ್ಯದಲ್ಲಿ ರಾಜಮೌಳಿ ಅವರ ಕುಶಲತೆ ಮತ್ತು ಪರಿಣತಿ ಎಂಥದ್ದು ಎನ್ನುವುದರ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ.

ಆ ಚರ್ಚೆ ಅತ್ತಲಿರಲಿ. ಈಗ ಸುಮ್ಮನೇ ‘ಬಾಹುಬಲಿ’ ಸಿನಿಮಾದ ವಿಷಯಕ್ಕೆ ಬರುವ. ಈ ಚಿತ್ರದ ಕೆಲವು ಸಾಲುಗಳು ಮತ್ತು ಪಾತ್ರಗಳನ್ನು ನೋಡುತ್ತಿದ್ದಂತೆಯೇ ನಾನು ಚಿಕ್ಕಂದಿನಲ್ಲಿ ಕೇಳಿದ ಮಹಾಭಾರತದ ಕೆಲವು ಕಥನ ಮತ್ತು ಪಾತ್ರಗಳಿಗೆ ಆಶ್ಚರ್ಯಕರ ರೀತಿಯಲ್ಲಿ ಒಗ್ಗಿಕೊಳ್ಳುತ್ತಾ ಹೋದವು.

ಚಿತ್ರದ ಆರಂಭದಲ್ಲಿ ಮಹಾರಾಣಿ ಶಿವಗಾಮಿ ಶತ್ರುಗಳಿಂದ ತಪ್ಪಿಸಿಕೊಂಡು ತುಂಬಿ ಹರಿಯುತ್ತಿದ್ದ ನದಿಯಲ್ಲಿ ಕೈಯೊಂದನ್ನೇ ಮೇಲಕ್ಕೆತ್ತಿ ಅದರಲ್ಲಿ ಶಿಶುವನ್ನು ಎತ್ತಿಹಿಡಿದುಕೊಂಡು ಹೋಗುವ ದೃಶ್ಯ ವಾಸುದೇವ ಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ಯಮುನಾ ನದಿಯನ್ನು ದಾಟಿಸುವ ಕತೆಯೇ ನೆನಪಾಯಿತು.

ಶಿವಲಿಂಗಕ್ಕೆ ನಿತ್ಯಸ್ನಾನವಾಗಲೆಂದು ಅದನ್ನೇ ಕಿತ್ತು ಮಣಗಾತ್ರದ ಲಿಂಗವನ್ನು ಆರಾಮವಾಗಿ ಕಿತ್ತು, ಹೆಗಲ ಮೇಲೆ ಹೊತ್ತು ಜಲಪಾತದಡಿಯಲ್ಲಿ ತಂದು ನಿಲ್ಲಿಸುವುದು ಬಲಭೀಮನ ಬಾಲ್ಯದಾಟಗಳನ್ನೇ ನೆನಪಿಸುವುದಿಲ್ಲವೇ? ಚಿತ್ರದ ಮೊದಲ ಹಾಡಿನಲ್ಲಿ ಆವಂತಿಕಾ ಪಾತ್ರ ಚಹರೆಯಲ್ಲಿಯಷ್ಟೇ ಅಲ್ಲ, ಕಲ್ಪನೆಯಲ್ಲಿಯೂ ಗಂಧರ್ವ ಸ್ತ್ರೀಯರನ್ನು ಹೋಲುತ್ತದೆ. ತನ್ನ ಅಂಗವೈಕಲ್ಯದಿಂದಷ್ಟೇ ಅಲ್ಲ, ಅಭಿನಯದಲ್ಲಿಯೂ ಬಿಜ್ಜಳದೇವ ಶಕುನಿಯನ್ನು ನೆನಪಿಸುತ್ತಾನೆ.

ಇಂಥ ಚಿಕ್ಕಪುಟ್ಟ ಹೋಲಿಕೆಗಳನ್ನು ಬಿಟ್ಟು ಚಿತ್ರದ ಕೊನೆಯಲ್ಲಿನ ಯುದ್ಧದ ದೃಶ್ಯಗಳಿಗೆ ಬರೋಣ. ಮಾಹಿಷ್ಮತಿಯ ಮೇಲೆ ದಾಳಿ ಮಾಡುವ ಕಾಲಕೇಯ ರಾಜನ ಸೈನ್ಯ ನಮ್ಮ ಪುರಾಣಗಳಲ್ಲಿನ ಅಸುರ ಸೈನ್ಯವನ್ನೇ ಬಿಂಬಿಸುವಂತಿಲ್ಲವೇ? ಅಲ್ಲಿನ ರುದ್ರಭೀಕರ ಹೋರಾಟದ ದೃಶ್ಯಗಳೂ ಕುರುಕ್ಷೇತ್ರ ಯುದ್ಧದ ಕಲ್ಪನೆಯ ಸಾಕಾರದಂತೆಯೇ ಭಾಸವಾಗುವುದಿಲ್ಲವೇ? ಮಹಾಭಾರತದಂತೆಯೇ ಈ ಚಿತ್ರದಲ್ಲಿಯೂ ಒಳ್ಳೆಯ–ಕೆಟ್ಟ ಮನುಷ್ಯರು, ಕಪ್ಪು–ಬಿಳುಪು ಎಂಬಷ್ಟು ಸ್ಪಷ್ಟವಾಗಿ ಬಿಂಬಿಸಲಾಗಿದೆ. ಒಬ್ಬ ಮನುಷ್ಯನೊಳಗಿನ ಒಳ್ಳೆಯ–ಕೆಟ್ಟ ಗುಣಗಳ ಸಮ್ಮಿಶ್ರದ ಸಂಕೀರ್ಣತೆಯನ್ನು ತೋರಿಸುವುದರ ಬಗ್ಗೆ ನಿರ್ದೇಶಕರಿಗೆ ಯಾವುದೇ ಆಸಕ್ತಿಯಿಲ್ಲ.

ಈ ಚಿತ್ರ ಮಹಾಭಾರತಕ್ಕೆ ಅಥವಾ ಇನ್ಯಾವುದೇ ನಮ್ಮ ಪುರಾಣ ಕಥನಗಳಿಗೆ ಎಷ್ಟು ಹೋಲುತ್ತದೆ ಎಂಬುದಕ್ಕಿಂತ ಆ ಕಥನಗಳ ಫ್ಯಾಂಟಸಿಯನ್ನು ಬಳಸಿಕೊಂಡಿರುವುದು ಮುಖ್ಯವಾಗಿ ತೋರುತ್ತದೆ. ರಾಮಾಯಣ, ಮಹಾಭಾರತ ಮುಂತಾದವು ನಾವು ಕಿವಿಯಿಂದ ಕೇಳಿದ, ಹೆಚ್ಚೆಂದರೆ ಪುಸ್ತಕಗಳಲ್ಲಿ ಓದಿದ ಕಥೆಗಳು. ಈ ಮೌಖಿಕ ಪರಂಪರೆಯಲ್ಲಿಯೇ ನಮ್ಮಲ್ಲಿ ಬೆಳೆದ ಈ ಕಥನಗಳು ಭಾರತೀಯರಲ್ಲಿ ಆಳವಾಗಿ ಬೇರೂರಿವೆ. ದೃಶ್ಯರೂಪದಲ್ಲಲ್ಲ, ಕಲ್ಪನಾರೂಪದಲ್ಲಿ. ಅದರ ಪಾತ್ರಗಳು, ಯುದ್ಧದ ಸನ್ನಿವೇಶದ ಭೀಕರತೆ, ದಾರುಣತೆ ಎಲ್ಲವೂ ನಮ್ಮ ಸ್ಮೃತಿಕೋಶದಲ್ಲಿ ಸೇರಿಹೋಗಿವೆ.

‘ಬಾಹುಬಲಿ’ಯಂತಹ ಸಿನಿಮಾಗಳು ನಮ್ಮ ಮನಸ್ಸಿನಲ್ಲಿ ಅಡಗಿರುವ ಆ ಪಾತ್ರ–ಚಿತ್ರಗಳಿಗೆ ದೃಶ್ಯರೂಪ ಕೊಡುವ ಪ್ರಯತ್ನ ಮಾಡುತ್ತವೆ. ಆದ್ದರಿಂದಲೇ ತಾರ್ಕಿಕವಾಗಿ ಅಸಂಬದ್ಧ ಎನಿಸುವ ದೃಶ್ಯಗಳೂ ಕೂಡ ತೆರೆಯ ಮೇಲೆ ಕಾಣುತ್ತಿದ್ದಂತೆಯೇ ‘ವ್ಹಾ’ ಎನ್ನಿಸಿ ಮೈಮರೆತು ನೋಡುವಂತೇ ಮಾಡುತ್ತವೆ. ಇವೆಲ್ಲವೂ ಪ್ರೇಕ್ಷಕನ ಪ್ರಜ್ಞೆಯಲ್ಲಿಯೇ ನಡೆಯುವ ಕ್ರಿಯೆಗಳಲ್ಲ. ನಮಗೆ ಗೊತ್ತಿಲ್ಲದೇ ನಡೆಯುವ ಪ್ರಕ್ರಿಯೆಗಳು. ಬಾಹುಬಲಿಯ ಭರ್ಜರಿ ಯಶಸ್ಸಿನ ಹಿಂದೆ ಈ ಅಂಶಗಳು ತುಂಬ ಪ್ರಮುಖ ಪಾತ್ರ ವಹಿಸಿದೆ ಎಂದೇ ನನ್ನ ಅನಿಸಿಕೆ.

ಹಾಗಾದರೆ ಬಾಹುಬಲಿಯನ್ನು ಮಹಾಭಾರತದ ದೃಶ್ಯರೂಪ ಎನ್ನಬಹುದೇ? ಖಂಡಿತ ಸಾಧ್ಯವಿಲ್ಲ. ಯಾಕೆಂದರೆ ಬರಿಯ ದೈಹಿಕ ಪ್ರತಿರೂಪ ಮಾತ್ರದಿಂದ ಜೀವಂತಿಕೆಯನ್ನು ಪ್ರತಿನಿಧಿಸಲು ಸಾಧ್ಯವಿಲ್ಲ. ಇಲ್ಲಿಯೂ ಹಾಗೆ. ಮಹಾಭಾರತದ ಫ್ಯಾಂಟಸಿಯನ್ನು ಹೊಂದಿದ್ದರೂ ಆ ಮಹಾಕಾವ್ಯದಲ್ಲಿನ ಜೀವನ ದರ್ಶನ ಬಾಹುಬಲಿಯಲ್ಲಿ ಕಾಣುವುದಿಲ್ಲ. ಹಾಗಾಗಿ ಬಾಹುಬಲಿ ಕೇವಲ ಪುರಾಣ ಕಲ್ಪನೆಯ ಮೇಲ್ಮೈ ಅಷ್ಟನ್ನೇ ಅನುಕರಿಸಿ ನಡೆಸಿದ ಆರ್ಭಟವಾಗಿಯಷ್ಟೇ ಉಳಿಯುತ್ತದೆ. ಆದ್ದರಿಂದಲೇ ಇದನ್ನು ಆತ್ಮವಿಲ್ಲದ ಮಹಾಭಾರತದ ತುಣುಕು ಅನ್ನಬಹುದೇನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT