ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಪಟ್ಣ: ಮರೆವ ಮುನ್ನ...

ಒಂದು ಮಾತು
Last Updated 12 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಟಿ.ಕೆ. ದಯಾನಂದ್‌ ಅವರ ನಿರ್ದೇಶನದ ಮೊದಲ ಚಿತ್ರ ‘ಬೆಂಕಿಪಟ್ಣ’ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡಿತ್ತು. ಸಿನಿಮಾ ಬಿಡುಗಡೆಗೂ ಸ್ವಲ್ಪ ಮೊದಲೇ ಅವರ ಮೊದಲ ಕಥಾಸಂಕಲನ ‘ರೆಕ್ಕೆ ಹಾವು’ ಬಿಡುಗಡೆಯಾಗಿತ್ತು. ‘ರೆಕ್ಕೆ ಹಾವು’ ಸಂಕಲನ ಮತ್ತು ‘ಬೆಂಕಿಪಟ್ಣ’ ಸಿನಿಮಾದ ಕಥಾ ಜಗತ್ತು, ಪಾತ್ರಗಳಲ್ಲಿ ಸಾಮ್ಯತೆಯಿದೆ. ಶ್ರಮಿಕ ವರ್ಗದ– ಸ್ಲಂನಲ್ಲಿ ಬದುಕುವ ಜನರ ಜಗತ್ತದು.

ಕೆಳವರ್ಗದ ಜನರ ಬದುಕು ಅದರಲ್ಲಿನ ಜೀವಂತಿಕೆಯನ್ನು ಅವರ ಕತೆಗಳು ಲಘುದಾಟಿಯಲ್ಲಿ ನಿರೂಪಿಸುತ್ತದೆ. ಮತ್ತು ಕಥನಕ್ಕಿಂತ ಹೆಚ್ಚಾಗಿ ಪಾತ್ರವಿವರಣೆಗಳಲ್ಲಿಯೇ ಬೆಳೆಯುತ್ತಾ ಹೋಗುತ್ತವೆ. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ದಯಾನಂದರ ಸಿನಿಮಾದಲ್ಲಿನ ಜಗತ್ತಿಗೂ ಕತೆಗಳ ಜಗತ್ತಿಗೂ ಸಾಮ್ಯತೆಗಳಿದ್ದಂತೆಯೇ ‘ಬೆಂಕಿಪಟ್ಣ’ ಮತ್ತು ‘ರೆಕ್ಕೆ ಹಾವು’ ಇವೆರಡು ಕೃತಿಗಳ ಮಿತಿಗಳಲ್ಲಿಯೂ ಸಾಮ್ಯತೆಗಳಿವೆ.

‘ಬೆಂಕಿಪಟ್ಣ’ ಎಂಬುದು ಅದೇ ಹೆಸರಿನ ಒಂದು ಊರಿನಲ್ಲಿ ನಡೆಯುವ ಕತೆ. ಇಡೀ ಸಿನಿಮಾ ಬಡವರ ಜಗತ್ತಿನಲ್ಲಿಯೇ ನಡೆಯುತ್ತದೆ. ಹಣವಿಲ್ಲದವರ ಬದುಕಿನಲ್ಲಿನ ಮಾನವೀಯ ಸಂಬಂಧಗಳು, ಕಾರ್ಪಣ್ಯಗಳ ನಡುವಿನ ಜೀವನೋತ್ಸಾಹ, ಉಪವಾಸದ ಬದುಕಿನಲ್ಲಿನ ರಸಕ್ಷಣಗಳು ಇವುಗಳ ಜತೆಗೆ ಶ್ರೀಮಂತರ ಗೋಮುಖ ವ್ಯಾಘ್ರತೆ, ಶ­ೋಷಣೆಯ ಕ್ರೌರ್ಯಗಳು ಹೀಗೆ ಹಲವು ಎಳೆಗಳೊಂದಿಗೆ ಸಿನಿಮಾವನ್ನು ಹೆಣೆಯಲು ಯತ್ನಿಸಿದ್ದಾರೆ ದಯಾನಂದ್. ಆದರೆ ಅವರ ಕಥನ ಜಗತ್ತಿನ ಈ ಅಂಶಗಳನ್ನೆಲ್ಲ ಸಿನಿಮಾ ಆಗಿಸುವ ಪ್ರಕ್ರಿಯೆಯಲ್ಲಿ ಎಡವಿದಂತೆ ತೋರುತ್ತಾರೆ.

ಒಂದು ಒಳ್ಳೆಯ ಸಿನಿಮಾ ಆಗಬಹುದಾದ ಅನೇಕ ಅಂಶಗಳಿದ್ದೂ ಅವುಗಳ ಹೆಣಿಗೆಯಲ್ಲಿನ ವಿಫಲತೆಯಿಂದಾಗಿ ‘ಬೆಂಕಿಪಟ್ಣ’ ಸೋಲುತ್ತದೆ. ಕೆಲವು ದೃಶ್ಯಗಳಂತೂ ಕಮರ್ಷಿಯಲ್‌ ಸಿನಿಮಾದಲ್ಲಿ ಇಂಥದ್ದೊಂದು ದೃಶ್ಯ ಇರಬೇಕು ಎಂದು ಯೋಚಿಸಿ ತುರುಕಿದಂತೆ ಕಾಣುತ್ತದೆ. (ನಾಯಕ ನಾಯಕಿಯನ್ನು ಮರದ ಬಳಿ ಕರೆದುಕೊಂಡು ಹೋಗಿ ಚಪ್ಪಾಳೆ ತಟ್ಟಿ ಹಕ್ಕಿಗಳು ಹಾರುವಂತೆ ಮಾಡುವುದು. ನಾಯಕ ಗುಡ್ಡದ ಮೇಲಿಂದ ಜಿಗಿಯುವುದು..).

ಸಿನಿಮಾದ ಮೊದಲರ್ಧವನ್ನು ವಾಸ್ತವಿಕ ನೆಲೆಯಲ್ಲಿಯೇ ಕಟ್ಟಿಕೊಡುವ ನಿರ್ದೇಶಕರು ದ್ವಿತೀಯಾರ್ಧದಲ್ಲಿ ಅದನ್ನು ಸಿನಿಮೀಯವಾಗಿಸುವ ಗಡಿಬಿಡಿಗೆ ಬಿದ್ದಿರುವುದೂ ಈ ಚಿತ್ರವನ್ನು ದುರ್ಬಲವಾಗಿಸಿದೆ. ‘ಬೆಂಕಿಪಟ್ಣ’ ಭಿನ್ನ ಎನಿಸಿಕೊಳ್ಳುವುದು ಆಯ್ದುಕೊಂಡ ವಸ್ತುವಿನ ಕಾರಣದಿಂದ. ಹಾಗೆಯೇ ಸೋಲುವುದೂ ಆ ವಸ್ತುವನ್ನು ಪ್ರಸ್ತುತಪಡಿಸಿದ ರೀತಿಯಿಂದಾಗಿಯೇ. ಕೊನೆಗೂ ಸಿನಿಮಾ ಒಂದು ದೃಶ್ಯ ಮಾಧ್ಯಮ. ಅದರಲ್ಲಿ ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತಲೂ ಹೇಳಬೇಕಾಗಿರುವುದನ್ನು ಹೇಗೆ ತೋರಿಸುತ್ತೇವೆ ಎನ್ನುವುದೇ ಮುಖ್ಯ. ‘ಬೆಂಕಿಪಟ್ಣ’ ಸಿನಿಮಾ ಲೋಪವಿರುವುದೂ ಈ ನಿಟ್ಟಿನಲ್ಲಿಯೇ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT