ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ನಮನ

ಹೊನ್ನಪ್ಪ ಭಾಗವತರ್
Last Updated 8 ಜನವರಿ 2015, 19:30 IST
ಅಕ್ಷರ ಗಾತ್ರ

ಸಂಗೀತ, ರಂಗಭೂಮಿ, ಚಲನಚಿತ್ರ ಈ ಮೂರೂ ಪ್ರಕಾರಗಳಲ್ಲಿ ಮಹತ್ತರ ಸಾಧನೆ ಮಾಡಿರುವ ಹೊನ್ನಪ್ಪ ಭಾಗವತರ್ ಅವರ ಜನ್ಮ ಶತಮಾನೋತ್ಸವದ ವರ್ಷ ಇದು. ಹೊನ್ನಪ್ಪ ಭಾಗವತರ್ ಅವರು ಜನಿಸಿದ್ದು 1915ರ ಜನವರಿ 14ರಂದು. ತಂದೆ ಚಿಕ್ಕಲಿಂಗಪ್ಪ ಮತ್ತು ತಾಯಿ ಕಲ್ಲಮ್ಮ. ನಾಗಮಂಗಲ ತಾಲ್ಲೂಕು ಚೌಡಸಂದ್ರ ತಂದೆಯ ಊರು.

ಆದರೆ ಹೊನ್ನಪ್ಪನವರು ಐದು ವರ್ಷದ ಬಾಲಕನಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಹೀಗಾಗಿ ತಾಯಿಯ ತವರು ಮನೆ ಮೋಟಗಾನಹಳ್ಳಿಯಲ್ಲಿ ಅವರ ಬಾಲ್ಯ ಕಳೆಯಿತು. ಅಲ್ಲಿನ ಸಾಂಸ್ಕೃತಿಕ ವಾತಾವರಣದಿಂದ ರಂಗಭೂಮಿಯ ಕಡೆ ಆಸಕ್ತಿ ಉಂಟಾಯಿತು. ಕಡು ಬಡತನದ ಬದುಕಿನಲ್ಲಿ ಶಿಕ್ಷಣಕ್ಕೆ ಅವಕಾಶವೇ ಇರಲಿಲ್ಲ. ಆದರೆ  ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದಾಗ ಹೊನ್ನಪ್ಪನವರು ಅಕ್ಷರ ಕಲಿತರು, ಅದರ ಜೊತೆಗೆ  ಸಂಗೀತವನ್ನೂ ಕಲಿತರು.

1928ರಲ್ಲಿ ಬೆಂಗಳೂರಿಗೆ ಬಂದ ಹೊನ್ನಪ್ಪನವರು ಅಣ್ಣನೊಡನೆ ಕುಲಕುಸುಬಾದ ಮಗ್ಗದ ಕೆಲಸದಲ್ಲಿ ತೊಡಗಿಸಿಕೊಂಡರು. ಒಮ್ಮೆ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸಂಬಂಧ ಮೂರ್ತಿ ಭಾಗವತರು ಹೊನ್ನಪ್ಪನವರ ಕಂಠಸಿರಿ ಕೇಳಿ ಆಕರ್ಷಿತರಾದರು. ಅವರಿಗೆ ಸಂಗೀತ ಕಛೇರಿಯಲ್ಲಿ ಜೊತೆ ನೀಡುವ ಅವಕಾಶ ಹೊನ್ನಪ್ಪನವರಿಗೆ ದೊರಕಿತು. ಕ್ರಮೇಣ ಸ್ವತಂತ್ರ ಕಛೇರಿಯ ಅವಕಾಶಗಳೂ ದೊರಕಲು ಆರಂಭಿಸಿದವು.

1937ರಲ್ಲಿ ಸೇಲಂನಲ್ಲಿ ತ್ಯಾಗರಾಜರ ಆರಾಧನೆ ಜರುಗಿತು. ಅಲ್ಲಿ ಹೊನ್ನಪ್ಪನವರು ಸಂಗೀತ ಕಛೇರಿ ನೀಡಿದರು. ಇವರಿಗೆ ಪಾಲ್ಗಟ್ ಮಣಿ ಅಯ್ಯರ್ ಅವರು ಮೃದಂಗವನ್ನು ನುಡಿಸಿದ್ದರು. ಅವರು ಹೊನ್ನಪ್ಪನವರ ಹಾಡುಗಾರಿಕೆಯಿಂದ ಆಕರ್ಷಿತರಾಗಿದ್ದರು.

ಮಣಿಯವರಿಗೆ ಚಿತ್ರರಂಗದ ಸಂಪರ್ಕ ಕೂಡ ಇದ್ದಿತು. ಅವರ ಆಸಕ್ತಿಯ ಫಲವಾಗಿ ಮದರಾಸಿನ ಶಂಕರ್ ಫಿಲಂನವರ ‘ಅಂಬಿಕಾ ಪತಿ’ ಚಿತ್ರದಲ್ಲಿ ಅವಕಾಶ ದೊರಕಿತು. ಇದರಲ್ಲಿ ತ್ಯಾಗರಾಜ ಭಾಗವತರ್ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರು. ಹೊನ್ನಪ್ಪನವರದು ಅವರಿಗೆ ಸರಿಸಮನಾದ ಪಾತ್ರ. ತಮಿಳಿನಲ್ಲಿ ಅಪಾರವಾದ ಬೇಡಿಕೆ ಇದ್ದಾಗಲೂ ಹೊನ್ನಪ್ಪನವರು ಕನ್ನಡದ ಮೇಲಿನ ಪ್ರೀತಿಯಿಂದ  ಗುಬ್ಬಿ ವೀರಣ್ಣನವರ ‘ಸುಭದ್ರಾ’ ಚಿತ್ರದಲ್ಲಿ ಅರ್ಜುನನ ಪಾತ್ರ ವಹಿಸಿದರು. ಜಯಮ್ಮನವರು ಸುಭದ್ರೆಯ ಪಾತ್ರದಲ್ಲಿದ್ದರು. ಈ ಚಿತ್ರದಲ್ಲಿ ಪದ್ಮನಾಭ ಶಾಸ್ತ್ರಿಗಳ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ 22 ಗೀತೆಗಳು ಒಂದಕ್ಕಿಂತ ಒಂದು ಸೊಗಸಾಗಿದ್ದವು. ಕನ್ನಡ ಚಿತ್ರರಂಗಕ್ಕೆ ಈ ಚಿತ್ರ ಚೇತರಿಕೆ ನೀಡಿತು.

1944ರಲ್ಲಿ ಹೊನ್ನಪ್ಪನವರ ಜೀವನದಲ್ಲಿ ಇನ್ನೊಂದು ತಿರುವು ಲಭಿಸಿತು. ತ್ಯಾಗರಾಜ ಭಾಗವತರ್ ಅವರು ಲಕ್ಷ್ಮಿಕಾಂತನ್ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಮಾನವಾಗಿ ಜೈಲಿಗೆ ಕಳುಹಿಸಲ್ಪಟ್ಟರು. ಆಗ ಅವರು ಬಹು ಬೇಡಿಕೆಯ ಕಲಾವಿದರಾಗಿದ್ದರು.

ಜೈಲಿಗೆ ತೆರಳುವಾಗ ಅವರ ಕೈಯಲ್ಲಿ 12 ಚಿತ್ರಗಳಿದ್ದವು. ತಮಿಳಿನಲ್ಲಿ ಅವರಂತೆ ಗಾಯನ ಮತ್ತು ಅಭಿನಯ ಎರಡನ್ನೂ ಬಲ್ಲ ಬೇರೆ ಕಲಾವಿದರಿರಲಿಲ್ಲ. ಹೀಗಾಗಿ ಆ ಎಲ್ಲಾ ಅವಕಾಶಗಳೂ ಹೊನ್ನಪ್ಪನವರಿಗೆ ದೊರೆತವು. ಅವರನ್ನು ಹೊನ್ನಪ್ಪ ಭಾಗವತರ್ ಎಂದೇ ಕರೆಯಲಾಯಿತು.

ಈ ಹೆಸರೇ ಮುಂದೆ ಖಾಯಂ ಆಗಿ ಬಿಟ್ಟಿತು. ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಎನ್ನಿಸಿಕೊಂಡಿದ್ದರೂ ಹೊನ್ನಪ್ಪನವರ ಹೃದಯ ಕನ್ನಡ ಚಿತ್ರರಂಗದ ಕುರಿತು ಮಿಡಿಯುತ್ತಿತ್ತು. ಬೊಮ್ಮನ್‌ ಡಿ. ವಿರಾನಿಯವರ ಸಹಯೋಗದಲ್ಲಿ ‘ಭಕ್ತ ಕುಂಬಾರ’ ಚಿತ್ರವನ್ನು ನಿರ್ಮಿಸಿದರು. ಭಕ್ತಿಭಾವವನ್ನು ಸಂಯಮದಿಂದ ಮೂಡಿಸಿದ ಈ ಚಿತ್ರ ಸಂಪೂರ್ಣ ಕನ್ನಡ ವಾದ್ಯವೃಂದವನ್ನು ಬಳಸಿದ ಕಾರಣದಿಂದಲೂ ಮುಖ್ಯವಾದದ್ದಾಗಿತ್ತು.

ಹೊನ್ನಪ್ಪ ಭಾತವತರ್ ನಿರ್ಮಿಸಿದ ಬಹಳ ಮುಖ್ಯವಾದ ಚಿತ್ರ ‘ಮಹಾಕವಿ ಕಾಳಿದಾಸ’. ಚಿತ್ರದ ಸಂಗೀತದ ಬಗ್ಗೆ ಹೊನ್ನಪ್ಪನವರಿಗೆ ಕೆಲವು ಖಚಿತ ನಿಲುವುಗಳಿದ್ದಿದ್ದರಿಂದ ತಾವೇ ಸಂಗೀತ ನೀಡಿದರು.  ಈ ಚಿತ್ರದಲ್ಲಿ ಅವರು ಕರ್ನಾಟಕೀ ಸಂಗೀತದ ನವರಸ ರಂಜಿನಿ, ಶುದ್ಧ ಧನ್ಯಾಸಿಯಂತಹ ಅಪರೂಪದ ರಾಗಗಳನ್ನು ಬಳಸಿರುವುದಲ್ಲದೆ ವೀಣೆ, ಕೊಳಲು, ಮೃದಂಗ ಮೊದಲಾದ ಸಾಂಪ್ರದಾಯಿಕ ವಾದನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಈ ಚಿತ್ರದಲ್ಲಿನ ಅರಮನೆ, ದರ್ಬಾರ್, ಅಂತಃಪುರ ಮೊದಲಾದ ಸನ್ನಿವೇಶಗಳಿಗೆ ಚಿತ್ರೀಕರಣ ನಡೆಯುತ್ತಿದ್ದ ವಾಹಿನಿ ಸ್ಟುಡಿಯೊದ ಬಿ. ನಾಗೀರೆಡ್ಡಿಯವರು ತಮ್ಮ ‘ಚಂದ್ರಹಾರ’ ಚಿತ್ರದ ಸೆಟ್ ಬಿಟ್ಟು ಕೊಟ್ಟಿದ್ದರು. ಇದೆಲ್ಲವೂ ಸೇರಿ ‘ಮಹಾಕವಿ ಕಾಳಿದಾಸ’ ವಸ್ತು ಮತ್ತು ವಿನ್ಯಾಸಗಳೆರಡಲ್ಲಿಯೂ ಮೈಲುಗಲ್ಲು ಎನ್ನಿಸಿಕೊಂಡಿತು. 

ಹೊನ್ನಪ್ಪ ಭಾಗವತರ್ ಅಭಿನಯಿಸಿದ ಚಿತ್ರಗಳಲ್ಲಿ ‘ಜಗಜ್ಯೋತಿ ಬಸವೇಶ್ವರ’ ಮುಖ್ಯವಾದದ್ದು. ಈ ಚಿತ್ರದಲ್ಲಿ ಅವರು ಬಸವೇಶ್ವರರ ಪಾತ್ರವನ್ನು ವಹಿಸಿದ್ದರು. ಬಿಜ್ಜಳನಾಗಿದ್ದವರು ರಾಜಕುಮಾರ್. ಸರಳ ವ್ಯಕ್ತಿಚಿತ್ರಕ್ಕೆ ಮಹತ್ವವನ್ನು ನೀಡದೆ ಕಲ್ಯಾಣ ಕ್ರಾಂತಿಯ ಹಲವು ನೆಲೆಗಳನ್ನು ಹಿಡಿದು ಸಾರ್ವಕಾಲಿಕ ನೆಲೆಯಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಸಿಂಗ್ ಠಾಕೂರರು ನಿರ್ದೇಶಿಸಿದ ಇನ್ನೊಂದು ಚಾರಿತ್ರಿಕ ನೆಲೆಯ ಚಿತ್ರ ‘ಕೈವಾರ ಮಹಾತ್ಮೆ’ಯಲ್ಲಿಯೂ ಹೊನ್ನಪ್ಪ ಭಾಗವತರ್ ಮುಖ್ಯಪಾತ್ರವನ್ನು ನಿರ್ವಹಿಸಿದರು. ಗುಬ್ಬಿ ವೀರಣ್ಣನವರ ‘ಗುಣಸಾಗರಿ’ ಅವರು ನಾಯಕನ ಗೆಶ್ಚರ್‌ಗಳನ್ನು ವಿಭಿನ್ನವಾಗಿ ಮೂಡಿಸಿದ ಚಿತ್ರ. ‘ಪಂಚರತ್ನ’ ಅವರು ನಾಯಕನಾಗಿ ಅಭಿನಯಿಸಿದ ಇನ್ನೊಂದು ಮುಖ್ಯವಾದ ಚಿತ್ರ. ಇದರ ವಸ್ತು ವಿವಾದದಿಂದ ಕೂಡಿದ್ದರಿಂದ ಹೊನ್ನಪ್ಪನವರ ವೃತ್ತಿ ಜೀವನವೂ ತೊಡಕುಗಳನ್ನು ಅನುಭವಿಸಬೇಕಾಯಿತು.

ಮುಂದೆ ಹೊನ್ನಪ್ಪನವರು ರಂಗಭೂಮಿಯಲ್ಲೇ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡರು. ಅಲ್ಲಿಯೂ ಹಲವು ತೊಂದರೆಗಳು ಉಂಟಾಗಿ ಈ ರಂಗವನ್ನು ಕೂಡ ಬಿಟ್ಟು ಸಂಗೀತ ಕ್ಷೇತ್ರದಲ್ಲಿ  ತೊಡಗಿಸಿಕೊಂಡರು. ಹಲವಾರು ಪ್ರಯೋಗಗಳನ್ನು ಮಾಡಿದರು.

ವಾಗ್ಗೇಯಕಾರರಾಗಿ ಕೀರ್ತನೆಗಳನ್ನು ರಚಿಸಿದರು. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿಯೂ ಅವರು ಕೀರ್ತನೆಗಳನ್ನು ರಚಿಸಿರುವುದು ವಿಶೇಷ. ಬಹಳ ಕಾಲದ ನಂತರ ಹೊನ್ನಪ್ಪ ಭಾಗವತರ್ ಅವರು ಎಂ.ಕೆ. ಇಂದಿರಾ ಅವರ ಕಾದಂಬರಿಯನ್ನು ಆಧರಿಸಿದ ‘ಸದಾನಂದ’ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿದರು. ಬದುಕಿದ್ದಾಗಲೇ ದಂತಕತೆ ಎನ್ನಿಸಿಕೊಂಡಿದ್ದ ಹೊನ್ನಪ್ಪ ಭಾಗವತರ್ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡಮಿ ಫೆಲೋಶಿಪ್ ದೊರಕಿತ್ತು. ಈ ಗೌರವವನ್ನು ಪಡೆದ ಮೊದಲ ಕನ್ನಡಿಗರು ಎಂಬ ಹೆಗ್ಗಳಿಕೆ ಅವರದು.

1959ರಲ್ಲಿ ಕನ್ನಡ ಚಲನಚಿತ್ರ ಅಭಿಮಾನಿಗಳಿಂದ ‘ಉತ್ತಮ ನಟ’ ಎಂಬ ಗೌರವವನ್ನು ಪಡೆದಿದ್ದ ಅವರ ‘ಮಹಾಕವಿ ಕಾಳಿದಾಸ’ ಮತ್ತು ‘ಜಗಜ್ಯೋತಿ ಬಸವೇಶ್ವರ’ ಚಿತ್ರಗಳು ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದವು. 1991ರ ಅಕ್ಟೋಬರ್ ಒಂದರಂದು ಹೊನ್ನಪ್ಪ ಭಾಗವತರ್ ನಮ್ಮನ್ನು ಅಗಲಿದರು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT