ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಡೆಯೆತ್ತಲು ರೆಡಿಯಾಗಿದೆ ‘ನಾಗರಹಾವು’

Last Updated 19 ಜುಲೈ 2018, 20:24 IST
ಅಕ್ಷರ ಗಾತ್ರ

ಬೆಂಗಳೂರಿನ ಕಲಾವಿದರ ಸಂಘಕ್ಕೆ ಅಂದು ರೆಟ್ರೊ ಕಳೆ ಬಂದಿತ್ತು. ‘ಹಾಯ್‌... ಜಲೀಲಾ’, ‘ಏನಮ್ಮಾ ಓಬವ್ವಾ?’, ‘ಚಾಮಯ್ಯ ಮೇಷ್ಟ್ರು ಮತ್ತೆ ರಾಮಾಚಾರಿ ಇಲ್ಲೇ ಎಲ್ಲೋ ಇದ್ದಂಗಿದೆ ಅಲ್ವಾ?’ ಇಂಥ ಮಾತುಗಳು ಪದೆ ಪದೆ ಕೇಳಿಬರುತ್ತಿದ್ದವು. ಈ ಮಾತುಗಳನ್ನು ಹೇಳಿದರೆ ಸಾಕು ಥಟ್ಟನೇ ಒಂದು ಸಿನಿಮಾ ಹೆಸರು ಮನಸಲ್ಲಿ ಮೂಡುತ್ತದೆ.

‘ನಾಗರಹಾವು’
1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವು ಮೈಲಿಗಲ್ಲುಗಳನ್ನು ನೆಟ್ಟ ಸಿನಿಮಾ. ವಿಷ್ಣುವರ್ಧನ್, ಅಂಬರೀಶ್‌ ಅವರಂಥ ಪ್ರಭಾವಶಾಲಿ ನಟರನ್ನು ಚಿತ್ರರಂಗಕ್ಕೆ ಕೊಟ್ಟ ಸಿನಿಮಾ ಅದು. ಚಾಮಯ್ಯ ಮೇಷ್ಟ್ರು ಎಂಬ ಪಾತ್ರವೊಂದು ಜನಪದವಾಗಿಹೋಗಿದ್ದೂ ಈಗ ಇತಿಹಾಸ. ಚಿತ್ರದುರ್ಗದ ಕೋಟೆ ವಿಖ್ಯಾತಗೊಳ್ಳಲೂ ಈ ಚಿತ್ರದ ಕೊಡುಗೆ ಸಾಕಷ್ಟಿದೆ. ತರಾಸು ಅವರ ಕಾದಂಬರಿ ಆಧರಿಸಿದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿಯೂ ಜೋರು ಸದ್ದು ಮಾಡಿತ್ತು.

ಅದೆಲ್ಲ ಇತಿಹಾಸವಾಯ್ತು. ಪುಟ್ಟಣ್ಣ, ಅಶ್ವಥ್, ವಿಷ್ಣುವರ್ಧನ್ ಸೇರಿದಂತೆ ಆ ಸಿನಿಮಾ ತಂಡದಲ್ಲಿದ್ದ ಹಲವರು ಇಂದು ನಮ್ಮ ನಡುವೆ ಇಲ್ಲ. ಆದರೂ ‘ನಾಗರಹಾವು’ ಚಿತ್ರದ ಜನಪ್ರಿಯತೆ ಇನಿತೂ ಕುಗ್ಗಿಲ್ಲ. ಹೊಸ ಸಿನಿಮಾಗಳ ಭರಾಟೆಯಲ್ಲಿ ಹಿನ್ನೆಲೆಗೆ ಸರಿದಿಲ್ಲ. ಹಾಗಾದರೆ ಆ ಸಿನಿಮಾಕ್ಕೆ ಇಂದಿನ ಆಧುನಿಕ ತಂತ್ರಜ್ಞಾನದ ಪೋಷಾಕು ತೊಡಿಸಿ ಮರುಬಿಡುಗಡೆಗೊಳಿಸಿದರೆ ಹೇಗಿರುತ್ತದೆ? ಅಂದು ‘ನಾಗರಹಾವು’ ಚಿತ್ರವನ್ನು ನಿರ್ಮಿಸಿದ್ದ ಈಶ್ವರಿ ಪ್ರೊಡಕ್ಷನ್‌ ಸಂಸ್ಥೆಯೇ ಈಗ ಸಿನಿಮಾ ಸ್ಕೋಪ್‌ ಮತ್ತು 7.1 ಧ್ವನಿವಿನ್ಯಾಸದಲ್ಲಿ ಮರುಬಿಡುಗಡೆ ಮಾಡುತ್ತಿದೆ. ಇದೇ ತಿಂಗಳ 20ರಂದು ನಾಗರಹಾವು ತೆರೆಯ ಮೇಲೆ ಭುಸುಗುಟ್ಟಲಿದೆ.

ಈ ವಿಷಯವನ್ನುಹಂಚಿಕೊಳ್ಳಲಿಕ್ಕಾಗಿಯೇ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಅದಲ್ಲಿ ಅಂಬರೀಶ್, ಶಿವರಾಮ್, ಲೋಕನಾಥ್, ಜಯಂತಿ, ಲೀಲಾವತಿ, ರವಿಚಂದ್ರನ್, ಪುಟ್ಟಣ್ಣ ಕಣಗಾಲ್ ಅವರ ಪತ್ನಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್‌ ಎಲ್ಲ ಹಾಜರಿದ್ದರು.

ಹೊಸ ರೂಪದಲ್ಲಿ ರೂಪಿಸಿದ ಚಿತ್ರದ ಮೂರು ಹಾಡುಗಳನ್ನೂ ಪ್ರದರ್ಶಿಸಲಾಯಿತು. ‘ಈ ಸಿನಿಮಾ ನೋಡಿದಾಗೆಲ್ಲ ನನಗೆ ನನ್ನ ತಂದೆ ವೀರಾಸ್ವಾಮಿ, ಕಣಗಾಲ್, ತರಾಸು, ವಿಜಯಭಾಸ್ಕರ್ ಎಲ್ಲರೂ ನೆನಪಾಗುತ್ತಾರೆ. ಇಂದಿಗೂ ಈ ಚಿತ್ರ ತಾಜಾ ಆಗಿಯೇ ಉಳಿದಿದೆ ಎಂದರೆ ಅದಕ್ಕೆ ಆ ತಂಡದ ಶ್ರಮವೇ ಕಾರಣ. ಪುಟ್ಟಣ್ಣನಂಥ ನಿರ್ದೇಶಕರು ಹಿಂದೆಯೂ ಇರಲಿಲ್ಲ, ಮತ್ತೆ ಹುಟ್ಟಿಬರುವುದೂ ಸಾಧ್ಯವಿಲ್ಲ’ ಎಂದರು.

‘ಈ ಸಿನಿಮಾದ ಜತೆಗೆ ನನ್ನ ಬದುಕಿನ ಹಲವು ನೆನಪುಗಳು ಹೆಣೆದುಕೊಂಡಿವೆ’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು ಲೋಕನಾಥ್. ‘ನೂರು ದಿನ ಅಲ್ಲ, ನೂರು ವರ್ಷಗಳು ಕಳೆದರೂ ಈ ಚಿತ್ರ ಜನರ ಮನಸ್ಸಿನಲ್ಲಿ ನೆಲೆನಿಂತಿರುತ್ತದೆ’ ಎಂಬುದು ಲೀಲಾವತಿ ಅವರ ವಿಶ್ವಾಸ.

‘ನಲ್ವತ್ತೈದು ವರ್ಷಗಳ ನಂತರ ಮತ್ತೆ ಈ ಚಿತ್ರವನ್ನು, ನನ್ನ ಹಾಡನ್ನು ನೋಡುತ್ತಿದ್ದರೆ, ಇದು ಮಾಡಿದ್ದು ನಾನೇನಾ ಅನಿಸುತ್ತದೆ. ಖುಷಿಯಾಗುತ್ತದೆ. ಓಬವ್ವನ ಪಾತ್ರವನ್ನು ಮಾಡುವಂತೆ ಪುಟ್ಟಣ್ಣ, ಕಲ್ಪನಾ ಅವರಿಗೆ ಕೇಳಿದ್ದರಂತೆ. ಆದರೆ ಅವರು ಇಂಥ ತುಕುಡಾ ಪಾತ್ರ ನಾನು ಮಾಡುವುದಿಲ್ಲ ಎಂದು ನಿರಾಕರಿಸಿದರಂತೆ. ನಂತರ ನಾನು ಇದ್ದಲ್ಲಿಗೆ ಬಂದಿದ್ದು. ನಾನು ಖುಷಿಯಿಂದಲೇ ಒಪ್ಪಿಕೊಂಡೆ. ಸಣ್ಣ ಪಾತ್ರವನ್ನು ಗಮನಸೆಳೆಯುವಂತೆ ಮಾಡುವ ಸವಾಲು ನನ್ನ ಮೇಲಿತ್ತು. ಅವರ ನಿರೀಕ್ಷೆಗೂ ಮೀರಿ ಈ ಪಾತ್ರ ಚೆನ್ನಾಗಿ ಬಂತು’ ಎಂದು ‘ಕನ್ನಡ ನಾಡಿನ ವೀರ ರಮಣಿಯ..’ ಹಾಡಿನ ಸಂದರ್ಭವನ್ನು ನೆನಪಿಸಿಕೊಂಡರು.

‘ಕಲಿಯುಗ ಇರುವವರೆಗೂ ನಾಗರಹಾವು ಚಿತ್ರ ಇರುತ್ತದೆ. ವಿಷ್ಣುವರ್ಧನ್, ಅಶ್ವಥ್‌, ಪುಟ್ಟಣ್ಣ ಅವರೆಲ್ಲ ಎಲ್ಲಿಯೂ ಹೋಗಿಲ್ಲ. ಇಲ್ಲಿಯೇ ಇದ್ದಾರೆ’ ಎಂದು ಭಾವುಕರಾಗಿ ನುಡಿದರು ಭಾರತಿ ವಿಷ್ಣುವರ್ಧನ್.

‘ನಮ್ಮನ್ನೆಲ್ಲ ಹುಟ್ಟಿಸಿದ್ದು ಅಪ್ಪ– ಅಮ್ಮ ಇರಬಹುದು. ಆದರೆ ನಮಗೆಚರಿತ್ರೆಯಲ್ಲಿ ಒಂದು ಸ್ಥಾನ ಕೊಟ್ಟು, ಜನಪ್ರಿಯತೆಯನ್ನು ಕೊಟ್ಟಿದ್ದು ನಾಗರಹಾವು ಚಿತ್ರ. ನನ್ನ ಇದುವರೆಗಿನ ಸಾಧನೆಯ ಮೊದಲ ಮೆಟ್ಟಿಲು ಆ ಸಿನಿಮಾ. ಈಗ ಈ ಚಿತ್ರ ಮತ್ತೆ ಬಿಡುಗಡೆಯಾಗುತ್ತಿದೆ. ಟಿಕೆಟ್‌ ಕೊಂಡು ಮೊದಲ ಷೋ ನೋಡಬೇಕು ಎಂಬ ಆಸೆ ಇದೆ ನನಗೆ’ ಎಂದರು ಅಂಬರೀಶ್.

ಶಿವರಾಮ್‌, ದೊಡ್ಡಣ್ಣ ಅವರೂ ಪುಟ್ಟಣ್ಣನವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ಕಳೆದ ಎರಡು ವರ್ಷಗಳಿಂದ ಈ ಚಿತ್ರವನ್ನು ಮರುರೂಪಿಸಲು ಪಟ್ಟ ಶ್ರಮದ ಕುರಿತು ಹೇಳಿಕೊಂಡರು ಬಾಲಾಜಿ.

ಕಾರ್ಯಕ್ರಮ ಮುಗಿದ ಮೇಲೂ ಹಿರಿಯ ನಟರ ಹಳೆಯ ನೆನಪುಗಳ ಮೆರವಣಿಗೆ ಸಾಗುತ್ತಲೇ ಇತ್ತು. ವೇದಿಕೆಯ ಇಕ್ಕೆಲಗಳಲ್ಲಿ ಇಟ್ಟಿದ್ದ ಚಿತ್ರಗಳಲ್ಲಿ ಇವೆಲ್ಲವನ್ನೂ ಕೇಳಿಸಿಕೊಳ್ಳುತ್ತಿರುವಂತೆ ವೀರಾಸ್ವಾಮಿ ಮತ್ತು ಪುಟ್ಟಣ್ಣ ಕಣಗಾಲ್ ಅವರು ಚಿತ್ರಗಳಲ್ಲಿಯೇ ನಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT