ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೆಬ್‌ ಸಿರೀಸ್‌ನಲ್ಲಿ ಜೊತೆಗೂಡಲಿರುವ ಪೇಸ್–ಭೂಪತಿ

Last Updated 6 ಜುಲೈ 2021, 12:04 IST
ಅಕ್ಷರ ಗಾತ್ರ

ಮುಂಬೈ: ಭಾರತದ ಟೆನಿಸ್ ದಿಗ್ಗಜರಾದ ಲಿಯಾಂಡರ್ ಪೇಸ್‌ ಮತ್ತು ಮಹೇಶ್ ಭೂಪತಿ ಅವರು ವೆಬ್‌ಸಿರೀಸ್‌ ಒಂದರಲ್ಲಿ ಜೊತೆಯಾಗಲಿದ್ದಾರೆ. ಇವರಿಬ್ಬರು ಆಟಗಾರರಾಗಿ ಖ್ಯಾತಿ ಗಳಿಸಿದ ಪಯಣ ಮತ್ತು ಆಸಕ್ತಿದಾಯಕ ಕಥೆಗಳನ್ನು ಈ ಸರಣಿಯು ಒಳಗೊಂಡಿರಲಿದೆ.

ನಿರ್ದೇಶಕ ದಂಪತಿ ಅಶ್ವಿನಿ ಅಯ್ಯರ್ ತಿವಾರಿ ಮತ್ತು ನಿತೇಶ್ ತಿವಾರಿ ಈ ಸಿರೀಸ್‌ಅನ್ನು ನಿರ್ದೇಶಿಸಲಿದ್ದು, ಪೇಸ್ ಮತ್ತು ಭೂಪತಿ ತಮ್ಮ ಬಾಂಧವ್ಯ ಮತ್ತು ಟೆನಿಸ್‌ ಪಯಣದ ಕುರಿತು ನಿರೂಪಣೆ ಮಾಡಲಿದ್ದಾರೆ.

ಭೂಪತಿ ಮತ್ತು ಪೇಸ್ 1999ರ ವಿಂಬಲ್ಡನ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎನಿಸಿಕೊಂಡಿತ್ತು. ಈ ಸಂಭ್ರಮದ 22ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಪೇಸ್ ಅವರು ಟ್ರೋಫಿ ಹಿಡಿದ ಚಿತ್ರವನ್ನು ಭಾನುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಅವರಿಬ್ಬರು ಮತ್ತೆ ಒಂದಾಗುವ ಕುರಿತು ಊಹಾಪೋಹಗಳು ಗರಿಗೆದರಿದ್ದವು.

‘ಅಂದು ಯುವಕರಾಗಿದ್ದ ನಾವು ಭಾರತ ದೇಶವನ್ನು ಹೆಮ್ಮೆ ಪಡುವಂತೆ ಮಾಡುವ ಕನಸು ಕಂಡಿದ್ದೆವು‘ ಎಂದು ಪೇಸ್ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಭೂಪತಿ ‘ಹೌದು. ಆ ಗಳಿಗೆ ವಿಶೇಷವಾದದ್ದು, ಮತ್ತೊಂದು ಅಧ್ಯಾಯ ಬರೆಯುವ ಸಮಯವಿದು ಎಂದು ನಿಮಗನಿಸುವುದಿಲ್ಲವೇ‘ ಎಂದಿದ್ದರು.

‘ಭಾರತ ಎಕ್ಸ್‌ಪ್ರೆಸ್‌‘ ಎಂದು ಕರೆಯಲಾಗುತ್ತಿದ್ದ ಈ ಜೋಡಿಯು, 1994ರಿಂದ 2006ರವರೆಗೆ ಜೊತೆಯಾಗಿ ಆಡಿದ್ದರು. ಬಳಿಕ ಬೇರೆಯಾಗಿದ್ದ ಅವರು 2008ರಿಂದ 2011ರವರೆಗೆ ಮತ್ತೆ ಒಂದಾಗಿ ಕಣಕ್ಕಿಳಿದಿದ್ದರು. ಅವರಿಬ್ಬರ ನಡುವೆ ತಲೆದೋರಿದ್ದ ವೈಮನಸ್ಸು ಕೂಡ ಸುದ್ದಿ ಮಾಡಿತ್ತು. ಆದರೆ ಅದೆಲ್ಲವನ್ನೂ ಈಗ ಅವರು ಮರೆತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT