ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿ ಗಾಳ ಧಾರಾವಾಹಿಗೆ ಅಕಾಲ

Published 6 ಮೇ 2023, 23:00 IST
Last Updated 6 ಮೇ 2023, 23:00 IST
ಅಕ್ಷರ ಗಾತ್ರ

ವೆಬ್‌ಸೀರೀಸ್‌ಗಳ ಭರಾಟೆ, ಒಟಿಟಿ ಒಡ್ಡಿರುವ ಆಯ್ಕೆಗಳ ಉದ್ದನೆಯ ಪಟ್ಟಿಯಿಂದಾಗಿ ಧಾರಾವಾಹಿಗಳಿಗೆ ಮೊದಲಿನಷ್ಟು ಬೇಡಿಕೆ ಈಗಿಲ್ಲ. ಇದು ಮನರಂಜನಾ ಮಾಧ್ಯಮದ ಪಲ್ಲಟಕ್ಕೆ ನಾಂದಿಯಾದೀತೆ ಎನ್ನುವುದು ಜಿಜ್ಞಾಸೆ.

ನೆನ್ನೆ–ಮೊನ್ನೆವರೆಗೂ ಅಪ್ಪ ಅಮ್ಮನೊಟ್ಟಿಗೆ ಕೂತು ಸಂಜೆ ‘ಧಾರಾವಾಹಿ’ ನೋಡುತ್ತಾ ಕಾಫಿ ಕುಡಿಯುತ್ತಿದ್ದ ಮಗ ಈಗ ಕೆಲಸದಿಂದ ಬರುತ್ತಲೇ ಕೋಣೆ ಸೇರುತ್ತಾನೆ. ತನ್ನಿಷ್ಟದ ಹಾಡನ್ನೋ, ವೆಬ್‌ಸೀರೀಸನ್ನೋ ನೋಡಿಕೊಂಡು ತನ್ನದೇ ಲೋಕದಲ್ಲಿರುತ್ತಾನೆ. ಕಾಲೇಜು ಓದುತ್ತಿರುವ ಮಗಳಿಗೂ ಧಾರಾವಾಹಿ ಈಗ ಅಷ್ಟಕ್ಕಷ್ಟೆ. ಅವಳ ಮೊಬೈಲಲ್ಲೂ ಈಗ ಖುಷಿಗೆ ಸಾಕಷ್ಟು ಆಯ್ಕೆಗಳಿವೆ.

ಡಿಜಿಟಲ್ ಕಾಲಘಟ್ಟ ಮುಂದಿಟ್ಟಿರುವ ಮನರಂಜನೆಯ ಹೊಸ ದಾರಿಗಳಿಂದಾಗಿ ಧಾರಾವಾಹಿಯಿಂದ ದೂರವುಳಿಯುತ್ತಿರುವ ಇಂಥ ಯುವಜನರ ಪ್ರಮಾಣ ಹೆಚ್ಚಾದಂತೆ ತೋರುತ್ತಿದೆ.

ಟೀವಿಯೊಂದಿಗಿನ ನಮ್ಮ ಸಂಬಂಧವೀಗ ಬದಲಾಗುತ್ತಿದೆಯೇ? ಇದಕ್ಕೆ ಒತ್ತು ನೀಡುವಂಥ ವರದಿಯೊಂದು ಈಚೆಗೆ ಪ್ರಕಟಗೊಂಡಿದೆ. ‘ಮೀಡಿಯಾ ಪಾರ್ಟ್‌ನರ್ಸ್ ಏಷ್ಯಾ’ (ಎಂಪಿಎ) ಪ್ರಕಟಿಸಿದ ಈ ವರದಿ, ಒಟಿಟಿ ಸ್ಟ್ರೀಮಿಂಗ್ ವಿಡಿಯೊ ಮಾರುಕಟ್ಟೆ ಭಾರತದಲ್ಲಿ ಸದ್ಯ ಬೆಳವಣಿಗೆಯ ಎರಡನೇ ಹಂತದಲ್ಲಿರುವುದಾಗಿ ತಿಳಿಸಿದೆ. 2022ರಲ್ಲಿ ಮೂರು ಶತಕೋಟಿ ಡಾಲರ್ ಆದಾಯ ಮಾಡಿಕೊಂಡಿರುವ ಈ ಡಿಜಿಟಲ್ ವೇದಿಕೆ, ಮನರಂಜನಾ ಕ್ಷೇತ್ರದ ಶೇ 7–9ರಷ್ಟು ಷೇರು ಹಾಗೂ ಆದಾಯ ಪಡೆದುಕೊಂಡಿರುವುದಾಗಿ ಹೇಳಿದೆ.

ಮೇಲ್ನೋಟಕ್ಕೆ ಈ ಶೇಕಡಾವಾರು ಸಂಖ್ಯೆ ದೊಡ್ಡದಾಗಿ ಕಾಣಿಸದಿದ್ದರೂ ಅಲ್ಪಾವಧಿಯಲ್ಲಿಯೇ ಸಾಂಪ್ರದಾಯಿಕ ಮನರಂಜನಾ ಮಾಧ್ಯಮಗಳಿಗೆ ಕಠಿಣ ಸ್ಪರ್ಧೆ ಒಡ್ಡಿದೆ.

ಡಿಜಿಟಲ್ ಪರ್ವಕ್ಕೆ ನೆಪವಾದ ಕೊರೊನಾ

ಭಾರತದಲ್ಲಿ ಡಿಜಿಟಲ್ ವೇದಿಕೆ ರೂಪುಗೊಂಡು 10–15 ವರ್ಷಗಳೇ ಕಳೆದಿವೆ. 2008ರಲ್ಲಿ ಮೊಟ್ಟ ಮೊದಲ ಬಾರಿಗೆ ರಿಲಯನ್ಸ್ ಎಂಟರ್‌ಟೇನ್‌ಮೆಂಟ್‌ ‘ಬಿಗ್‌ಫ್ಲಿಕ್ಸ್’ ಎಂಬ ಹೆಸರಿನಲ್ಲಿ ಒಟಿಟಿ ಲೋಕಕ್ಕೆ ಮುನ್ನುಡಿ ಬರೆಯಿತು. ಆನಂತರ ನೆಕ್ಸ್‌ ಜಿಟಿವಿ, 2013ರಲ್ಲಿ ಡಿಟ್ಟೊ, 2015ರಲ್ಲಿ ಹಾಟ್‌ಸ್ಟಾರ್... ಹೀಗೆ ಕೆಲವು ವರ್ಷಗಳ ಅಂತರದಲ್ಲಿ ಎಣಿಕೆಗೆ ನಿಲುಕುವ ಸಂಖ್ಯೆಯಲ್ಲಿ ಹುಟ್ಟಿಕೊಂಡವು. ಕೊರೊನಾ ಕಾಲಘಟ್ಟ ಡಿಜಿಟಲ್ ಲೋಕಕ್ಕೆ ಅವಕಾಶದ ದಿಡ್ಡಿಬಾಗಿಲಾಯಿತು.

ಪ್ರಮುಖ ಒಟಿಟಿ ವೇದಿಕೆಗಳ ಗುರಿ ‘ಮಿಲೇನಿಯಲ್ಸ್’ ಅಂದರೆ, 18–35ರ ವಯೋಮಾನದವರು. ಅವರನ್ನು ಧಾರಾವಾಹಿಗಳತ್ತ ಸೆಳೆಯುವ, ಉಳಿಸಿಕೊಳ್ಳುವ ಸಮರ್ಥ ಪ್ರಯತ್ನಗಳ ಕೊರತೆ ಡಿಜಿಟಲ್ ಮನರಂಜನಾ ಉತ್ಪನ್ನಗಳತ್ತ ವಾಲಲು ಒಂದು ನೆಪವಾಗಿದೆ.

ಈ ಮಾತನ್ನು ಒಪ್ಪುತ್ತಲೇ, ಧಾರಾವಾಹಿ ನೋಡುಗರ ಸಂಖ್ಯೆ ಕೆಲ ವರ್ಷದಿಂದೀಚೆಗೆ ಕುಗ್ಗಿರುವುದನ್ನು ಅನುಮೋದಿಸುತ್ತಾರೆ ಕನ್ನಡ ಧಾರಾವಾಹಿ ನಿರ್ದೇಶಕ ಟಿ.ಎನ್. ಸೀತಾರಾಮ್.

‘ಧಾರಾವಾಹಿ ಪ್ರಸಾರಕ್ಕೆ ನಿರ್ದಿಷ್ಟ ಸಮಯವಿರುತ್ತದೆ. ಆದರೆ ಒಟಿಟಿಯಲ್ಲಿ ಅಂಥ ನಿರ್ಬಂಧವಿಲ್ಲ. ಯಾವಾಗ ಏನು ಬೇಕಾದರೂ ನೋಡಬಹುದು. ಇದು ಫಾಸ್ಟ್‌ಫುಡ್ ಯುಗ. ಎಲ್ಲಿ ಯಾವುದು ಬೇಗ ಸಿಗುತ್ತದೋ, ಎಲ್ಲಿ ಅನುಕೂಲ ಆಗುತ್ತದೋ ಅಲ್ಲಿಗೇ ಜನ ಓಡುವುದು. ಇದಕ್ಕೆ ಡಿಜಿಟಲ್ ಮನರಂಜನೆ ಒಂದು ಉದಾಹರಣೆ’ ಎನ್ನುವುದು ಅವರ ಮಾತು.

‘ಮುಂಚೆ ಧಾರಾವಾಹಿಗಳನ್ನು ಸಂಯಮದಿಂದ ಕುಳಿತು ನೋಡುತ್ತಿದ್ದರು. ಆದರೆ ಈಗ ಮನೆಯಲ್ಲಿ ಅಮ್ಮ ಅಡುಗೆ ಮಾಡುವವರೆಗೂ ಕಾಯದೆ ಆಹಾರ ಆರ್ಡರ್ ಮಾಡುತ್ತಾರೆ. ಇದೇ ಮನೋಭಾವ ಮನರಂಜನಾ ವಿಷಯದಲ್ಲೂ ಆಗಿದೆಯಷ್ಟೆ. ಹೀಗಾಗಿ ಧಾರಾವಾಹಿ ನೋಡುಗರ ಸಂಖ್ಯೆ ಅಥವಾ ಸಾಂದ್ರತೆ ಮುಂಚೆಗಿಂತ ಕಡಿಮೆಯಾಗಿದೆ. ಜೊತೆಗೆ, ಕೂಡು ಕುಟುಂಬ ವ್ಯವಸ್ಥೆ ಇದ್ದಾಗ ಧಾರಾವಾಹಿ ನೋಡುವವರ ಸಂಖ್ಯೆಯೂ ಹೆಚ್ಚಿತ್ತು. ಆದರೆ ಈಗ ಹಲವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟೀವಿ ಇರುತ್ತದೆ. ಅವರವರ ಅಭಿರುಚಿಗೆ ಆಯ್ಕೆಗಳೂ ಸಿಗುತ್ತಿರುವುದರಿಂದ ನೋಡುಗರ ಸಂಖ್ಯೆ ಚದುರಿದೆ’ ಎನ್ನುವುದು ಅವರ ವಿಶ್ಲೇಷಣೆ.

ವೈವಿಧ್ಯ ನೆಚ್ಚಿಕೊಂಡು ಒಟಿಟಿ ಕಡೆಗೆ ಹೋಗುತ್ತಾರೆ ಎನ್ನುವುದನ್ನು ಅಲ್ಲಗಳೆಯುವ ಅವರು, ‘ಇಂದಿಗೂ ಮಹಾಭಾರತದ ಕಥೆಯನ್ನು ಜನ ನೋಡುತ್ತಾರೆ. ಹಳೆಯದನ್ನೇ ಇಷ್ಟಪಡುತ್ತಾರೆ. ಆದರೆ ಅದನ್ನು ತೋರುವ ಸೌಕರ್ಯದ ಮೇಲೆ ಅವಲಂಬಿತ. ಅಂಥದ್ದೊಂದು ಸೌಕರ್ಯವನ್ನು ಒಟಿಟಿ ನೀಡುತ್ತಿದೆ. ಧಾರಾವಾಹಿಗಳು ಹೊಸತಿನ ಹೆಸರಿನಲ್ಲಿ ಏನೇನೋ ಮಾಡುತ್ತಿವೆ. ಉದಾಹರಣೆಗೆ, ಈಚೆಗೆ ಹೊಸ ವಿಷಯವೆಂದು ಹೇಳಿಕೊಂಡು ಬಂದ ಎಷ್ಟೋ ಧಾರಾವಾಹಿಗಳಲ್ಲಿ 'ಲೇಡಿ ವಿಲನ್‌'ಗಳನ್ನೇ ತಂದರು, ವಿಜೃಂಭಿಸಿದರು. ಈ ಹೊಸತುಗಳ ಹಣೆಪಟ್ಟಿ ಹೊತ್ತಿರುವವೇ ಹಳಸುತ್ತಿವೆ, ಸೋಲುತ್ತಿವೆ. ಹಳತು ಎಂದಿಗೂ ಹಳಸುವುದಿಲ್ಲ’ ಎಂದು ವಿಶ್ಲೇಷಿಸುತ್ತಾರೆ. 

ಧಾರಾವಾಹಿಯಿಂದ ಒಟಿಟಿಗೆ ವಾಲುತ್ತಿರುವ ಈ ಪರಿವರ್ತನೆ ಶಾಶ್ವತವಲ್ಲ ಎಂಬುದು ಸೀತಾರಾಮ್ ಅವರ ಅನಿಸಿಕೆ. ‘ಪ್ರತಿ ಐದು ವರ್ಷಕ್ಕೆ ವ್ಯಕ್ತಿಯ ಅಭಿರುಚಿ ಬದಲಾಗುತ್ತದೆ. ಹಾಗೆ ಧಾರಾವಾಹಿಗಳೆಡೆಗಿನ ದೃಷ್ಟಿಕೋನವೂ ಬದಲಾಗಬಹುದು’ ಎನ್ನುವ ಆಶಾವಾದ ಅವರದ್ದು.

ತಾಜಾ ಕಂಟೆಂಟ್–ಮನರಂಜನೆಯ ಮಾರುಕಟ್ಟೆ

ಸದ್ಯ ಒಟಿಟಿ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಪದ ‘ಕಂಟೆಂಟ್ ಕನ್ಸಂಪ್ಷನ್’. ಅಂದರೆ, ಮಾಹಿತಿ/ಮನರಂಜನೆಯ ಬಳಕೆ. ಇದೇ, ಒಟಿಟಿ ಯಶಸ್ಸಿನ ಕೀಲಿಕೈ ಕೂಡ. ಟೀವಿ–ಕೌಟುಂಬಿಕ ವೀಕ್ಷಣೆ, ಸಿನಿಮಾ–ಸಮುದಾಯ ವೀಕ್ಷಣೆ ಹಾಗೂ ಡಿಜಿಟಲ್–ವೈಯಕ್ತಿಕ ವೀಕ್ಷಣೆ ಎನ್ನುವ ಅಡಿಪಾಯದ ಮೇಲೆ ಮನರಂಜನಾ ಮಾಧ್ಯಮ ತನ್ನ ಉತ್ಪನ್ನಗಳನ್ನು ನೀಡುತ್ತಿದೆ.

ಜಗತ್ತಿನ ಯಾವುದೇ ಮೂಲೆಯ, ಯಾವುದೇ ಭಾಷೆ, ಯಾವುದೇ ವಿಷಯದ, ಘಟನೆಯ ತಾಜಾ ಮನರಂಜನೆ ಅಥವಾ ಮಾಹಿತಿ ಅಂಗೈಗೆ ಸಿಗಲು ಆರಂಭವಾಗಿದ್ದು ಒಟಿಟಿ ವೇದಿಕೆಗಳಿಂದ. ‘ವಾಚ್ ಹಿಸ್ಟರಿ’ ಬೆನ್ನ ಹಿಂದೆ ಹೋಗಿ ಅಭಿರುಚಿಗೆ ತಕ್ಕಂತೆ ಆಯ್ಕೆಗಳನ್ನೂ ಪದೇ ಪದೇ ಮುಂದಿಡುವ ಸೌಕರ್ಯ ಈ ಮಾಧ್ಯಮಕ್ಕೆ ನಿರಂತರವಾಗಿ ಅಂಟಿಕೊಳ್ಳುವ ಪ್ರಚೋದಕವೂ ಆಗಿದೆ.

ಇದಕ್ಕೆ ಈಚಿನ ಅಂಕಿಅಂಶವೊಂದು ಇಂಬು ನೀಡುತ್ತಿದೆ. ಕಳೆದ ಅಕ್ಟೋಬರ್‌ ವೇಳೆಗೆ ಭಾರತದಲ್ಲಿ ಸುಮಾರು 46 ಒಟಿಟಿ ಪ್ರೊವೈಡರ್‌ಗಳಿರುವ ಮಾಹಿತಿಯಿದೆ. ಸದ್ಯ ಭಾರತದಲ್ಲಿ 45 ದಶಲಕ್ಷಕ್ಕೂ ಹೆಚ್ಚು ಒಟಿಟಿ ಚಂದಾದಾರರಿದ್ದು, 2023ರ ಕೊನೆಗೆ ಇದು 50 ದಶಲಕ್ಷ ಮುಟ್ಟುವ ನಿರೀಕ್ಷೆಯಿದೆ.ಒಂದೇ ವಿಧದ ಮಾಸಲು ಕಥೆಯ, ಏಕತಾನತೆ ಸೃಷ್ಟಿಸುವಂಥ ಧಾರಾವಾಹಿಗಳು ಮೂಲೆಗುಂಪಾಗುವ ಲಕ್ಷಣದಂತೆಯೂ ಈ ಅಂಕಿಸಂಖ್ಯೆ ಕಾಣಿಸುತ್ತಿದೆ. 

ಆದರೆ ಟೀವಿ ಕಂಟೆಂಟ್‌ಗಳ ಸ್ಪರ್ಧೆಗೆ ಒಟಿಟಿ ಸಮವಲ್ಲ ಎಂಬುದು ಧಾರಾವಾಹಿ ನಿರ್ದೇಶಕಿ ಸ್ವಪ್ನಾ ಕೃಷ್ಣ ನಿಲುವು.

‘ಧಾರಾವಾಹಿಗಳ ಒಲವು ಕಡಿಮೆಯಾಗಿಲ್ಲ’

‘ಬದಲಾವಣೆ ಜಗದ ನಿಯಮ. ಟೀವಿ ಧಾರಾವಾಹಿಗೇ ಸೀಮಿತರಾದ ಜನ ಇದ್ದೇ ಇದ್ದಾರೆ. ಅವರ ಸಂಖ್ಯೆ ಬಹುಪಾಲಿದೆ. ಧಾರಾವಾಹಿಗಳಿಗಿರುವ ಆದ್ಯತೆ ಎಂದಿಗೂ ಕಡಿಮೆಯಾಗುವುದಿಲ್ಲ' ಎಂದು ಹೇಳುತ್ತಾರೆ ಸ್ವಪ್ನಾ ಕೃಷ್ಣ.

‘ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಕಥೆ ಹೆಣೆಯುವುದೇ ಧಾರಾವಾಹಿಯ ವೈಶಿಷ್ಟ್ಯ. ಟೀವಿ ಎಂದರೆ ಕೌಟುಂಬಿಕ ವಾತಾವರಣ ತಂದುಕೊಡುವಂಥದ್ದು. ಆದರೆ ಒಟಿಟಿಯಲ್ಲಿ ‘ಇಂಡಿವಿಷುಯಾಲಿಟಿ’ಗೆ ಪ್ರಾಶಸ್ತ್ಯ. ಇವರ ಪಾಲು ತುಂಬಾ ಕಡಿಮೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗುವುದಿಲ್ಲ. ವಾರದ ಕೊನೆಯಲ್ಲಿ ಧಾರಾವಾಹಿಗಳಿಗೆ ಬರುವ ರೇಟಿಂಗ್‌ಗಳೇ ಇದಕ್ಕೆ ಸಾಕ್ಷಿ’ ಎಂದು ಒಟಿಟಿ ಹಾಗೂ ಧಾರಾವಾಹಿ ನಡುವಿನ ವ್ಯತ್ಯಾಸ ಬಿಡಿಸಿಡುತ್ತಾರೆ ಸ್ವಪ್ನಾ.

‘ಒಟಿಟಿಗೆ ಕಟ್ಟುಪಾಡುಗಳಿಲ್ಲ. ಜೊತೆಗೆ, ಕಾಲಕ್ಕೆ ತಕ್ಕಂತೆ ಧಾರಾವಾಹಿ ಫಾರ್ಮುಲಾಗಳೂ ಬದಲಾಗುತ್ತಿರುತ್ತವೆ. ಒಂದು ಉದಾಹರಣೆ ನೋಡಿ: ಶೋಷಣೆಗೆ ಒಳಗಾದ ಹೆಣ್ಣಿನ ಕಥೆ ಕೇಳಲು ಈಗ ಜನರಿಗೆ ಇಷ್ಟವಿಲ್ಲ. ಆದರೆ ನಾಯಕಿ, ಕಷ್ಟ ಮೆಟ್ಟಿನಿಂತು ಸಾಧನೆ ಹಾದಿಯಲ್ಲಿ ಹೋಗುವಂಥ ಕಥೆ ಹೇಳಿದರೆ ಮೆಚ್ಚುತ್ತಾರೆ. ಇದು ಈಗಿನ ಟ್ರೆಂಡ್’ ಎನ್ನುತ್ತಲೇ, ಇದಕ್ಕೆ ‘ಸತ್ಯ’, ‘ಅಂತರಪಟ’ದಂಥ ಧಾರಾವಾಹಿಗಳ ನಿದರ್ಶನ ನೀಡುತ್ತಾರೆ.

ಧಾರಾವಾಹಿಗೆ ಬಲ ತುಂಬಲು ಒಟಿಟಿ ತಂತ್ರ!

ಅತಿ ಕಡಿಮೆ ಅವಧಿಯಲ್ಲೇ ವ್ಯಾಪಕವಾಗಿರುವ ಒಟಿಟಿ ವೇಗ ಹಾಗೂ ಡಿಜಿಟಲ್ ಕ್ರಾಂತಿಯ ಅರಿವಿರುವ ಬಹುಪಾಲು ಟೀವಿ ಚಾನೆಲ್‌ಗಳು,  ತಮ್ಮದೇ ಸ್ವಂತ ಒಟಿಟಿ ಹೊಂದುತ್ತಿರುವುದು ಇನ್ನೊಂದು ಬೆಳವಣಿಗೆ. ಆ ವೇದಿಕೆಯಲ್ಲಿಯೇ ತಮ್ಮ ಟೀವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡುವ ಧಾರಾವಾಹಿಗಳನ್ನೂ ಪ್ರಸಾರ ಮಾಡುತ್ತಿವೆ.

ಧಾರಾವಾಹಿ, ಇತರೆ ಟೀವಿ ಕಾರ್ಯಕ್ರಮಗಳಿಗೆ ವೀಕ್ಷಕರನ್ನು ಸೆಳೆಯಲೆಂದೇ ಆರಂಭಿಸಿದ ಒಟಿಟಿ ಕೂಡ ಹೆಚ್ಚಿನ ನೋಡುಗರಿಲ್ಲದೇ ಸೋತ ಒಂದು ಗಟ್ಟಿ ಉದಾಹರಣೆ ಇಂತಹ ತಂತ್ರದ ವೈಫಲ್ಯಕ್ಕೆ ಸಾಕ್ಷಿಯಂತಿದೆ.

‘ಒಟಿಟಿ ಬಂದಮೇಲೆ ಧಾರಾವಾಹಿ ವೀಕ್ಷಕರ ಸಂಖ್ಯೆ ಕುಗ್ಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಮಾರುಕಟ್ಟೆ ಸಂಶೋಧನೆ ಕೂಡ ಇದನ್ನೇ ಬೊಟ್ಟು ಮಾಡಿ ತೋರುತ್ತಿದೆ. ನೋಡುಗರನ್ನಷ್ಟೇ ಅಲ್ಲ, ಟೀವಿಗೆ ಬರುವ ಜಾಹೀರಾತು ಆದಾಯದ ಪಾಲನ್ನೂ ಒಟಿಟಿ ಕಿತ್ತುಕೊಂಡಿದೆ. ಚಾನಲ್‌ ಸರ್ವೇ ಮಾಡಿದಾಗಲೂ‌, ಧಾರಾವಾಹಿ ನೋಡುಗರ ಸಂಖ್ಯೆ ಕಡಿಮೆಯಾಗಿರುವುದು ಕಂಡುಬಂದಿದೆ. ಹೀಗಾಗಿ ಚಾನಲ್‌ಗಳು ತಮ್ಮದೇ ಒಟಿಟಿ ವೇದಿಕೆ ಹೊಂದುವುದು ಈಗ ಅವಶ್ಯವಾಗಿದೆ’ ಎಂದು ಹೇಳುತ್ತಾರೆ ಹೆಸರು ಹೇಳಲು ಇಚ್ಛಿಸದ ಚಾನಲ್‌ ಒಂದರ ಪ್ರಮುಖ ಹುದ್ದೆಯಲ್ಲಿರುವ ಸಿಬ್ಬಂದಿ.

ಟೀವಿ ಕಂಟೆಂಟ್‌ಗಳಿಗೆ ಒಟಿಟಿ ಒಡ್ಡಿರುವ ಸ್ಪರ್ಧೆ ಕುರಿತ ಅವರ ಇನ್ನಷ್ಟು ವಿವರಣೆ ಹೀಗಿದೆ: ‘ಮನರಂಜನಾ ಮಾಧ್ಯಮದಲ್ಲಿ ಎರಡು ರೀತಿಯ ಸ್ಪರ್ಧೆ ಇರುತ್ತದೆ. ಒಂದು, ಮತ್ತೊಂದು ಚಾನಲ್‌ ಮೇಲಿನ ಸ್ಪರ್ಧೆ. ಎರಡನೆಯದು, ಬೇರೆ ಭಾಷೆಗಳ ಕಂಟೆಂಟ್‌ನ ಸ್ಪರ್ಧೆ. ಇದೀಗ ಒಟಿಟಿ ಪ್ರಬಲ ಪೈಪೋಟಿಯಾಗಿ ನಿಂತಿದೆ. ಈಗ 360 ಡಿಗ್ರಿ ಸ್ಪರ್ಧೆ’.

ಬಾರ್ಕ್ ಏಜೆನ್ಸಿ ಧಾರಾವಾಹಿಗಳಿಗೆ ನೀಡುವ ಟಿಆರ್‌ಪಿ ರೇಟಿಂಗ್‌ನ ಒಟ್ಟಾರೆ ಪ್ರಮಾಣವೇ ಈಚಿನ ವರ್ಷಗಳಲ್ಲಿ ಕುಸಿತ ಕಂಡಿದೆ. ಕೆಲ ವರ್ಷಗಳ ಹಿಂದೆ ಕನ್ನಡದ ಕೆಲವು ಜನಪ್ರಿಯ ಧಾರಾವಾಹಿಗಳ ಟಿಆರ್‌ಪಿ 14 ರಿಂದ15ರವರೆಗೂ ತಲುಪುತ್ತಿತ್ತು. ಆನಂತರದ ವರ್ಷಗಳಲ್ಲಿ 11–12ಕ್ಕೆ ಇಳಿದದ್ದು ಮತ್ತೆ ಮೇಲೇರಲಿಲ್ಲ. ಈಚಿನ ಅಂಕಿ ಅಂಶವನ್ನೇ ಗಮನಿಸಿದರೆ, ಜನಪ್ರಿಯ ಧಾರಾವಾಹಿಯೊಂದರ ಗರಿಷ್ಠ ಟಿಆರ್‌ಪಿ 8 ಇದೆ. ಕ್ರಿಕೆಟ್– ಚುನಾವಣೆಯಂಥ ಕೆಲವು ತಾತ್ಕಾಲಿಕ ಕಾರಣಗಳ ಹೊರತಾಗಿಯೂ ಬಹುಪಾಲು ಧಾರಾವಾಹಿಗಳ ರೇಟಿಂಗ್ ಗಮನಾರ್ಹವಾಗಿ ಕುಗ್ಗಿರುವುದನ್ನು ಒಪ್ಪಲೇಬೇಕು.

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಒಟಿಟಿಗೆಂದೇ ರೂಪಿಸುವ ಕಂಟೆಂಟ್‌ಗಳ ಬಜೆಟ್ ಹೆಚ್ಚಿದ್ದು, ಮೇಕಿಂಗ್ ಉತ್ತಮವಾಗಿರುತ್ತದೆ. ಕ್ರಿಯಾಶೀಲತೆಗೆ ಅವಕಾಶವೂ ಹೆಚ್ಚಿರುತ್ತದೆ. ಆದರೆ ಧಾರಾವಾಹಿ ಧಾಟಿಯೇ ಬೇರೆ. ಧಾರಾವಾಹಿಯಲ್ಲಿ ವರ್ಷಕ್ಕೆ ಕನಿಷ್ಠ 260 ಎಪಿಸೋಡ್‌ಗಳು ಅವಶ್ಯ. ಅದನ್ನು ನೀಡುವ ಧಾವಂತದಲ್ಲಿ ಒಟಿಟಿ ನೀಡುವಂಥ ತೀವ್ರತೆ ಕೊಡಲು ಸಾಧ್ಯವಾಗದೇ ಇರಬಹುದು. ಆದರೆ ಈಗ ಇದಕ್ಕೆ ಎದುರಾಳಿಗಳಂತೆ ಟೀವಿ ವಾಹಿನಿಗಳು ರಿಯಾಲಿಟಿ ಶೋಗಳನ್ನು ಸನ್ನದ್ಧಗೊಳಿಸುತ್ತಿವೆ.

ಮುಂದಿನ ದಿನಗಳಲ್ಲಿ ಇಂಟರ್‌ನೆಟ್ ಬಳಕೆ ಮತ್ತಷ್ಟು ಹೆಚ್ಚಾಗುವುದರಿಂದ ಒಟ್ಟಾರೆ ಒಟಿಟಿ ಅಭಿವೃದ್ಧಿ ದರ ಕೂಡ ಶರವೇಗ ಪಡೆಯಬಹುದಾಗಿದೆ. 2022ರಿಂದ 2030ರ ಅವಧಿಯಲ್ಲಿ ಜಾಗತಿಕವಾಗಿ ವಿಡಿಯೊ ಸ್ಟ್ರೀಮಿಂಗ್ ಮಾರುಕಟ್ಟೆ ವಾರ್ಷಿಕ ಶೇ 21.3ರಷ್ಟು ಅಭಿವೃದ್ಧಿ ದರ ಹೊಂದಲಿದೆ ಎಂಬ ಅಂದಾಜು ಮಾಡಲಾಗಿದೆ. 2023ರಲ್ಲಿಯೇ ವಾರ್ಷಿಕ ಅಭಿವೃದ್ಧಿ ದರ 36% ಏರಿಕೆಯಾಗುವ ನಿರೀಕ್ಷೆಯಿದೆ.

ಹೈಬ್ರಿಡ್ ಮನರಂಜನೆಯತ್ತ...

ಬೇರೆ ಮನರಂಜನಾ ಮಾಧ್ಯಮಗಳಂತೆ ಭದ್ರತೆ ಹಾಗೂ ಪೈರಸಿ ಪ್ರಶ್ನೆ ಒಟಿಟಿಯಲ್ಲೂ ಇದೆ. ಒಟಿಟಿಗೆ ಯಾವುದೇ ಸೆನ್ಸಾರ್‌ಶಿಪ್, ಕಡಿವಾಣ ಇಲ್ಲದಿರುವುದು ದುರ್ಬಳಕೆಯ ಮಟ್ಟವನ್ನು ಹೆಚ್ಚಿಸಬಲ್ಲದು. ಒಟಿಟಿ, ಸಾಮಾಜಿಕ ಬದುಕನ್ನು, ಕೌಟುಂಬಿಕ ವಾತಾವರಣವನ್ನು ಕಸಿದುಕೊಳ್ಳುತ್ತಿದೆಯೆಂಬ ದೂಷಣೆಯೂ ಅಲ್ಲಲ್ಲಿ ಕೇಳಿಬರುತ್ತಿದೆ. 

ಇದೇ ಸಂದರ್ಭ, ಒಟಿಟಿ ಹಾಗೂ ಧಾರಾವಾಹಿ ನಡುವೆ ಸಾಮ್ಯತೆಯೂ ಕಾಣುತ್ತಿದೆ. ಒಟಿಟಿಯಲ್ಲಿ ಶೇ 40ರಷ್ಟು ಮಂದಿ ಪ್ರಾದೇಶಿಕ ಕಂಟೆಂಟ್‌ ವೀಕ್ಷಿಸುತ್ತಿರುವುದು ಇದಕ್ಕೆ ಉದಾಹರಣೆಯಂತಿದೆ.

ಹಾಗಿದ್ದರೆ ಭವಿಷ್ಯದ ಮನರಂಜನೆ ಏನಾಗಿರಬಹುದು? ಸಾಂಪ್ರದಾಯಿಕ ಮನರಂಜನಾ ಪದ್ಧತಿಗೆ ಸಡ್ಡು ಹೊಡೆದು ಒಟಿಟಿ ಏರುಗತಿಯಲ್ಲಿ ಹೋಗುವುದೇ ಅಥವಾ ಜಾಹೀರಾತು ಆದಾಯದ ಮೇಲೆ ಅವಲಂಬಿತವಾಗಿರುವ ವಾಹಿನಿಗಳು, ಟೀವಿ ಕಾರ್ಯಕ್ರಮ–ಧಾರಾವಾಹಿಗಳಿಗೆ ಒಟಿಟಿ ಬೆಂಬಲ ಪಡೆದ ‘ಹೈಬ್ರಿಡ್ ಮನರಂಜನೆ’ಯನ್ನು ಮುನ್ನೆಲೆಗೆ ತರಬಹುದೇ? ಈ ಎರಡೂ ಆಯ್ಕೆಯನ್ನು ಹೊರತುಪಡಿಸಿ, ಜನರನ್ನು ಮರಳಿ ಧಾರಾವಾಹಿಗಳತ್ತ ಸೆಳೆಯುವಂಥ ಹೊಸ ಪ್ರಯತ್ನಗಳು ನಡೆಯಬಹುದೇ? 

ಹೊಸ ಪ್ರತಿಭೆ–ತಾಜಾ ಮನರಂಜನೆಗೆ ಒತ್ತು

ಒಟಿಟಿಯ ಬಹುಆಯ್ಕೆಗಳು ಯುವಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಆ್ಯಕ್ಷನ್, ಹಾರರ್, ಡ್ರಾಮಾ, ಥ್ರಿಲ್ಲರ್, ಕಾಮಿಡಿ ಹಲವು ಜಾನರ್‌ಗಳ ತಾಜಾ ಆಯ್ಕೆಗಳು ಅಭಿರುಚಿ ತಣಿಸುವಂತಿವೆ. ಇಂಥದ್ದೊಂದು ಸಾಧ್ಯತೆ ಟೀವಿಯಲ್ಲಿದೆಯೇ ಎಂಬ ಪ್ರಶ್ನೆಯೂ ಏಳುತ್ತದೆ.

ಒಟಿಟಿ ಹೊಸ ಕಲಾವಿದರಿಗೂ ಮಣೆ ಹಾಕುತ್ತಿದೆ. ಟೀವಿಯಲ್ಲಿ ಅಸಾಧ್ಯವೆನಿಸಿದ ಹಲವು ಪ್ರಯೋಗ, ಪ್ರಯತ್ನಗಳಿಗೆ ಅವಕಾಶ ಒದಗಿಸುತ್ತಿದೆ. ಸದ್ಯ ವೆಬ್‌ ಸೀರೀಸ್‌ನಲ್ಲಿ ಇಂಥ ಪ್ರಯತ್ನಗಳು ಪ್ರತಿಫಲಿತವಾಗುತ್ತಿವೆ. ಕನ್ನಡದ ಸಿನಿಮಾ ನಿರ್ದೇಶಕಿ ರೂಪಾ ರಾವ್ ಕೂಡ ಒಟಿಟಿಗೆ ಅಂಥದ್ದೊಂದು ವೆಬ್‌ ಸೀರೀಸ್ ನಿರ್ದೇಶನ ಮಾಡುತ್ತಿದ್ದಾರೆ.

‘ಇಷ್ಟು ವರ್ಷಗಳಲ್ಲಿ ಬೇರೇನನ್ನೋ ಹುಡುಕುತ್ತಿದ್ದ ಯುವಜನತೆಗೆ ಒಟಿಟಿ ಆಕಾಶವನ್ನೇ ಎದುರಿಗಿಟ್ಟಿದೆ. ವೆಬ್‌ಸೀರೀಸ್ ನೋಡುವವರ ಸಂಖ್ಯೆ ಹೆಚ್ಚಿದೆ. ಆದರೆ ಭಾರತದಲ್ಲಿ ಒಟಿಟಿಯಲ್ಲೂ ಗಟ್ಟಿಯಾಗಿ ಇನ್ನೂ ಯಾವುದೂ ಕುಳಿತುಕೊಳ್ಳುತ್ತಿಲ್ಲ. ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಅದರಲ್ಲೂ ಕನ್ನಡದಲ್ಲಿ ಒಟಿಟಿ ಕಂಟೆಂಟ್‌ಗಳು ಪೂರ್ಣಪ್ರಮಾಣದಲ್ಲಿ ಸಿದ್ಧವಾಗಿಲ್ಲ. ಆದರೆ ಬದಲಾವಣೆಯ ಸಾಧ್ಯತೆಗಳು ಗಾಢವಾಗಿವೆ’ ಎಂದು ಹೇಳುತ್ತಾರೆ. ಆದರೆ ಆಯ್ಕೆ ಜಾಸ್ತಿಯಾದಂತೆ ಗೊಂದಲವೂ ಹೆಚ್ಚಾಗುತ್ತದೆ ಎನ್ನುವುದು ಅವರ ಅಭಿಮತ. 

ಧಾರಾವಾಹಿ ನಿರ್ದೇಶಕಿ–ನಟಿ ಸ್ವಪ್ನ ಕೃಷ್ಣ
ಧಾರಾವಾಹಿ ನಿರ್ದೇಶಕಿ–ನಟಿ ಸ್ವಪ್ನ ಕೃಷ್ಣ
ವೆಬ್‌ ಸೀರೀಸ್ ಸಾಧ್ಯತೆಗೆ ಮುಖ ಮಾಡಿರುವ ರೂಪಾ ರಾವ್
ವೆಬ್‌ ಸೀರೀಸ್ ಸಾಧ್ಯತೆಗೆ ಮುಖ ಮಾಡಿರುವ ರೂಪಾ ರಾವ್
ಧಾರಾವಾಹಿ ನಿರ್ದೇಶಕ ಟಿ.ಎನ್. ಸೀತಾರಾಂ
ಧಾರಾವಾಹಿ ನಿರ್ದೇಶಕ ಟಿ.ಎನ್. ಸೀತಾರಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT