ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಬರ್ಟ್ ಚಿತ್ರ ವಿಮರ್ಶೆ: ಒಂದೇ ಪಾತ್ರ, ಹಲವು ಛಾಯೆ

Last Updated 11 ಮಾರ್ಚ್ 2021, 10:45 IST
ಅಕ್ಷರ ಗಾತ್ರ

ಚಿತ್ರ: ರಾಬರ್ಟ್ (ಕನ್ನಡ)
ನಿರ್ಮಾಣ: ಉಮಾಪತಿ ಶ್ರೀನಿವಾಸ್ ಗೌಡ
ನಿರ್ದೇಶನ: ತರುಣ್ ಕಿಶೋರ್ ಸುಧೀರ್
ತಾರಾಗಣ: ದರ್ಶನ್, ಜಗಪತಿ ಬಾಬು, ವಿನೋದ್ ಪ್ರಭಾಕರ್, ಸೋನಾಲ್ ಮಾಂಟೆರೊ, ರವಿಶಂಕರ್, ಆಶಾ ಭಟ್, ರವಿಕಿಶನ್, ಶಿವರಾಜ್ ಕೆ.ಆರ್. ಪೇಟೆ.

***

ಹತ್ತು ಡಿಗ್ರಿ ಎಡಕ್ಕೆ, ಹತ್ತು ಡಿಗ್ರಿ ಬಲಕ್ಕೆ ಸ್ಲೋಮೋಷನ್‌ನಲ್ಲಿ ದರ್ಶನ್ ವಾಲುತ್ತಾ ಬರುವಾಗ ಮೈಗಂಟಿದ ಅವರ ಬನಿಯನ್ ಮೇಲೆ ರಕ್ತದ ಕಲೆಗಳು. ಅದಕ್ಕೂ ಮೊದಲು ಅವರಿಂದ ಏನಿಲ್ಲವೆಂದರೂ ಎರಡು ಡಜನ್ ಮಂದಿಗೆ ಮೂಳೆಮುರಿತ. ಸಿನಿಮಾ ಶುರುವಾಗಿ ನಲವತ್ತು ನಿಮಿಷ ಆದಮೇಲೆ ಈ ರೀತಿ ಅವರನ್ನು ನೋಡುವ ಅಭಿಮಾನಿಗಳಿಗೆ ಅದು ಮೊದಲ ಕ್ಲೈಮ್ಯಾಕ್ಸ್‌. ರಾವಣನ ಪೌರಾಣಿಕ ಡೈಲಾಗ್ ಹಾಗೂ ಹೊಡೆದಾಟದ ಲಯ ಅಷ್ಟು ತಡವಾಗಿ ಬರುವುದು ದರ್ಶನ್ ಸಿನಿಮಾ ‘ಟೆಂಪ್ಲೇಟ್‌’ನ ಬದಲಾದ ರೂಪವೇ ಹೌದು.

2016ರಲ್ಲಿ ತಮಿಳಿನಲ್ಲಿ ವಿಜಯ್ ನಾಯಕರಾಗಿದ್ದ ‘ತೇರಿ’ ಎಂಬ ಚಿತ್ರವನ್ನು ಅಟ್ಲಿ ನಿರ್ದೇಶಿಸಿದ್ದರು. ಬೇಕರಿ ನಡೆಸುತ್ತಾ, ಮುದ್ದು ಮಗಳ ಜತೆ ಹಾಯಾಗಿರುವ ಒಂಟಿ ತಂದೆಯ ಕಥೆಯದು. ಆಮೇಲಾಮೇಲೆ ಅವನ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಇನ್ನೊಂದು ರೋಚಕ ಕತೆಯನ್ನು ಅಡಗಿಸಿಟ್ಟು, ಅದರಲ್ಲೇ ಭಾವತೀವ್ರತೆಯನ್ನೂ, ಹೊಡೆದಾಟದ ಮಜವನ್ನೂ ಅವರು ಇಡುಕಿರಿದಿದ್ದರು. ಕ್ರಿಶ್ಚಿಯನ್ ಹೆಸರಿನ ಪಾತ್ರ ಆಮೇಲೆ ಹಿಂದೂ ಹೆಸರನ್ನು ಪಡೆದುಕೊಳ್ಳುವುದು ಅದರ ಸೂಕ್ಷ್ಮ ಅಂಶ. ಈ ಸಿನಿಮಾ ಅದರ ರೀಮೇಕ್ ಅಲ್ಲದೇ ಇದ್ದರೂ ಅದರ ಆತ್ಮದ ಪ್ರಭಾವವನ್ನು ಎರವಲು ಪಡೆದಿದೆ. ಇಲ್ಲಿ ಹಿಂದೂ ಹೆಸರಿನ ಪಾತ್ರ ಎರಡನೇ ಅರ್ಧದಲ್ಲಿ ಕ್ರಿಶ್ಚಿಯನ್ ಹೆಸರಿಗೆ ಪರಿವರ್ತನೆಯಾಗುತ್ತದೆ. ಜನಪ್ರಿಯ ಮಾದರಿಯ ಚಿತ್ರಗಳು ಕಣ್ಣು ಕೀಲಿಸಿಕೊಳ್ಳುವುದು ಇಂಥ ‘ಶೇಡ್‌’ಗಳಿಂದ.

ಇದು ದರ್ಶನ್ ಎಂದಿನ ಚಿತ್ರಗಳಿಗಿಂತ ನಿರೂಪಣೆಯ ಮಾದರಿ ಹಾಗೂ ಸ್ಟೈಲಿಷ್‌ ಆಗಿರುವುದರಿಂದ ಭಿನ್ನವಾಗಿದೆ. ಹನುಮಂತನ ವೇಷಧಾರಿಯಾಗಿ ಶ್ರೀರಾಮನ ಗೆಟಪ್ಪಿನ ಬಾಲಕನನ್ನು ಹೊತ್ತು ತರುವುದರೊಂದಿಗೆ ಚಿತ್ರ ಆರಂಭವಾಗುತ್ತದೆ. ಅಂತ್ಯದಲ್ಲೂ ಅದೇ ವೇಷ. ನಡುವೆ ಮೂರು ಗೆಟಪ್ಪುಗಳ ದರ್ಶನ್ ಹೇಗೆಲ್ಲ ಪ್ರಕಟಗೊಳ್ಳುತ್ತಾರೆ ಎನ್ನುವುದು ‘ಕಮರ್ಷಿಯಲ್ ಎಲಿಮೆಂಟ್’.

ದರ್ಶನ್ ಉಗ್ಗುತ್ತಾರೆ. ಬಾಗುತ್ತಾರೆ. ಪೆಟ್ಟು ಕೊಡುವಷ್ಟೇ ತಿನ್ನುತ್ತಾರೆ. ಮಗುವ ಪೋಷಿಸುತ್ತಾರೆ. ನಾಯಕಿಯ ಜತೆ ಕಲ್ಪನಾಗೀತೆಯಲ್ಲಿ ಸ್ಟೆಪ್ಪು ಹಾಕುತ್ತಾರೆ. ‘ಎ ಬ್ರದರ್ ಫ್ರಂ ಅನದರ್ ಮದರ್’ ಜತೆಗೆ ಅವಿನಾಭಾವ ಸಂಬಂಧ ಇಟ್ಟುಕೊಳ್ಳುತ್ತಾರೆ. ಖಳರ ಕೋಟೆಯಲ್ಲಿದ್ದು, ಅವರನ್ನೇ ಎದುರು ಹಾಕಿಕೊಳ್ಳುತ್ತಾರೆ. ಇವೆಲ್ಲವನ್ನೂ ಯಾಕೆ ಮಾಡುತ್ತಾರೆ ಎನ್ನುವುದಕ್ಕೆ ಸಿನಿಮೀಯ ನ್ಯಾಯವನ್ನು ನಿರ್ದೇಶಕರು ಒದಗಿಸಿದ್ದಾರೆ.

ಚಿತ್ರದ ವಿನ್ಯಾಸ ವರ್ಣರಂಜಿತ. ತಣ್ಣಗೆ ಶುರುವಾಗಿ, ಆಮೇಲೆ ತೀವ್ರತೆ ಪಡೆದುಕೊಳ್ಳುವ ಮಾದರಿ. ಅಲ್ಲಲ್ಲಿ ಕ್ಲೈಮ್ಯಾಕ್ಸ್‌ನ ಮರಿಗಳೆನ್ನಬಹುದಾದ ದೃಶ್ಯಗಳನ್ನು ಇಟ್ಟಿರುವುದು ಕೂಡ ಯಶಸ್ವಿ ತಂತ್ರ. ಆದರೆ, ಹೀಗೆ ಮಾಡುವಾಗಲೇ ಬೇಡದ ಜಾಗದಲ್ಲಿ ನಾಯಕ–ನಾಯಕಿ ಡಾನ್ಸ್‌ ಫ್ಲೋರ್‌ಗೆ ಇಳಿದು, ರಸಭಂಗವಾಗುತ್ತದೆ. ಕೊನೆಯಲ್ಲಿ ಹೀಗೆಯೇ ಆಗುತ್ತದೆ ಎಂದು ಮನಸ್ಸು ಹೇಳಿದ್ದನ್ನು ನಿರ್ದೇಶಕರು ಸುಳ್ಳಾಗಿಸೊಲ್ಲ.

ಹರಿಕೃಷ್ಣ ರೀರೆಕಾರ್ಡಿಂಗ್ ನಾಯಕನ ಪ್ರಭಾವಳಿಯನ್ನು ಹೆಚ್ಚಿಸಿದೆ. ಅರ್ಜುನ್ ಜನ್ಯ ಹಾಡುಗಳ ಲಯಕ್ಕೆ ಮಾಡಿರುವ ನೃತ್ಯ ಸಂಯೋಜನೆ ಆಕರ್ಷಕ. ನಾಯಕಿ ಆಶಾ ಭಟ್‌ಗೆ ನೃತ್ಯ ಬರುತ್ತದೆ ಎನ್ನುವುದನ್ನು ಉಳಿದವರು ಗಮನಿಸಬಹುದು.

ಇಡೀ ಚಿತ್ರ ದರ್ಶನ್‌ಮಯ. ನಡುಘಟ್ಟದಲ್ಲಿ ವಿನೋದ್ ಪ್ರಭಾಕರ್‌ಗೆ ಗಮನಾರ್ಹ ಸ್ಥಳಾವಕಾಶ. ಜಗಪತಿ ಬಾಬು ಕಂಠ, ರವಿಶಂಕರ್ ಅವರದು ಟೈಮಿಂಗ್‌ ಒಗ್ಗರಣೆ. ಸವಾಲಿನ ಪಾತ್ರದಲ್ಲಿ ಶಿವರಾಜ್ ಕೆ.ಆರ್. ಪೇಟೆ ಅವರ ಗಮನಸೆಳೆಯುವ ಅಭಿನಯ–ಇವು ಹೈಲೈಟ್ಸ್. ದರ್ಶನ್–ವಿನೋದ್ ನಡುವಿನ ಸಾಹಸ ಸಂಯೋಜನೆ ಬಾಯಿಬಿಟ್ಟು ನೋಡುವಂತಿದೆ.

ಒಂದೇ ಪಾತ್ರ, ಹಲವು ಛಾಯೆ–ಈ ತಂತ್ರದ ಚಿತ್ರಗಳ ಪಟ್ಟಿಗೆ ‘ರಾಬರ್ಟ್’ ಮಗದೊಂದು ಸೇರ್ಪಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT