ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Dhoomam Review | ‘ಧೂಮಂ’ ಸಿನಿಮಾ ವಿಮರ್ಶೆ: ಪವನ್‌ ‘ಟ್ರೇಡ್‌ ಮಾರ್ಕ್‌’ ಸಿನಿಮಾ

Published 23 ಜೂನ್ 2023, 11:35 IST
Last Updated 23 ಜೂನ್ 2023, 11:35 IST
ಅಕ್ಷರ ಗಾತ್ರ

ಸಿನಿಮಾ: ಧೂಮಂ(ಮಲಯಾಳಂ, ಕನ್ನಡದ ಡಬ್‌ ಆವೃತ್ತಿ)

ನಿರ್ದೇಶನ: ಪವನ್‌ ಕುಮಾರ್‌

ನಿರ್ಮಾಪಕ: ವಿಜಯ್‌ ಕಿರಗಂದೂರು 

ತಾರಾಗಣ: ಫಹಾದ್‌ ಫಾಸಿಲ್‌, ಅಪರ್ಣಾ ಬಾಲಮುರಳಿ, ರೋಶನ್‌ ಮ್ಯಾಥ್ಯೂ, ವಿನೀತ್‌, ಅಚ್ಯುತ್‌ ಕುಮಾರ್‌, ಅನು ಮೋಹನ್‌ ಮತ್ತಿತರರು.

‘ಲೂಸಿಯಾ’, ‘ಯುಟರ್ನ್‌’ ಮೂಲಕ ತಮ್ಮೊಳಗಿನ ನಿರ್ದೇಶನದ ಸಾಮರ್ಥ್ಯವನ್ನು ಪ್ರದರ್ಶಿಸಿರುವ ನಿರ್ದೇಶಕ ಪವನ್‌ ಕುಮಾರ್‌ ಅವರ ಮತ್ತೊಂದು ‘ಟ್ರೇಡ್‌ ಮಾರ್ಕ್‌’ ಸಿನಿಮಾ ಎಂದೇ ‘ಧೂಮಂ’ ಅನ್ನು ವಿಮರ್ಶಿಸಬಹುದು.

ಸಿನಿಮಾ ಮೂಲ ಮಲಯಾಳಂನಲ್ಲಿ ಚಿತ್ರೀಕರಣಗೊಂಡಿದ್ದು, ಬಹುತೇಕ ಕಲಾವಿದರು ಅಲ್ಲಿಯವರೇ ಆಗಿದ್ದಾರೆ. ಕನ್ನಡದಲ್ಲೂ ಡಬ್‌ ಆದ ಆವೃತ್ತಿ ಬಿಡುಗಡೆಯಾಗಿದೆ. ಚಿತ್ರಕಥೆ ದೃಷ್ಟಿಯಿಂದ ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಪಯಣ. 

ಸಿಗರೇಟ್‌, ಇ–ಸಿಗರೇಟ್‌ ಉದ್ಯಮದ ಹಿಂದಿನ ಕು‘ತಂತ್ರ’ಗಳನ್ನು ಎಳೆಯಾಗಿಟ್ಟುಕೊಂಡು, ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಧೂಮಪಾನದ ಚಟ ಹಾಗೂ ಅದರ ಪರಿಣಾಮ, ಧೂಮಪಾನದ ವಿಚಾರದಲ್ಲಿ ಸರ್ಕಾರಗಳ ಚಾಣಾಕ್ಷ ನಡೆಗಳನ್ನು ಥ್ರಿಲ್ಲರ್‌ ಕಥೆಯಾಗಿ ಹೆಣೆದಿದ್ದಾರೆ ಪವನ್‌. 

ಉದ್ಯೋಗ ಅರಸಿ ನಗರಕ್ಕೆ ಬರುವ ಅವಿನಾಶ್‌(ಫಹಾದ್ ಫಾಸಿಲ್‌) ಚಾಣಾಕ್ಷತನವು ಸಿಗರೇಟ್‌ ತಯಾರಿಕಾ ಕಂಪನಿ ‘ಐಟಿಐ’ ವ್ಯವಸ್ಥಾಪಕ ನಿರ್ದೇಶಕ ‘ಸಿದ್ಧಾರ್ಥ್‌’(ರೋಶನ್‌ ಮ್ಯಾಥ್ಯೂ) ಗಮನಸೆಳೆಯುತ್ತದೆ. ತನ್ನ ಕಂಪನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥನನ್ನಾಗಿ ಅವಿನಾಶ್‌ಗೆ ಸ್ಥಾನ ಕಲ್ಪಿಸುತ್ತಾನೆ. ಸಿಗರೇಟ್‌ ಸೇದುವ ಅಭ್ಯಾಸವಿರದ ಅವಿನಾಶ್‌ ಹಲವು ತಂತ್ರಗಳನ್ನು ಬಳಸಿ ಸಿಗರೇಟ್‌ ಮಾರಾಟ ಪ್ರಮಾಣವನ್ನು ಹೆಚ್ಚಿಸುತ್ತಾನೆ. ಈ ತಂತ್ರಗಳೇ ಅವಿನಾಶ್‌ಗೆ ಸೇಡಿನ ರೂಪದಲ್ಲಿ ಮುಳುವಾಗುತ್ತವೆ. ಈ ಸೇಡಿಗೆ ಅವಿನಾಶ್‌ ಪತ್ನಿ ದಿಯಾ(ಅಪರ್ಣಾ ಬಾಲಮುರಳಿ) ಕೂಡ ಬಲಿಪಶುವಾಗುತ್ತಾಳೆ. ಸೇಡಿನ ಹಿಂದಿರುವ ವ್ಯಕ್ತಿಯ ಹುಡುಕಾಟವೇ ಮುಂದಿನ ಕಥೆ. ಇವೆಲ್ಲವನ್ನೂ ಅನನುಕ್ರಮಣಿಕೆ(non linear) ಚಿತ್ರಕಥಾ ಚೌಕಟ್ಟಿನಲ್ಲಿ ಕುತೂಹಲಕಾರಿಯಾಗಿ ಮೂಡಿಸಿದ್ದಾರೆ ಪವನ್‌.

ಚಿತ್ರಕಥೆ ಇಡೀ ಸಿನಿಮಾದ ಜೀವಾಳ. ಚಿತ್ರ ಆರಂಭದಲ್ಲಿ ತುಸು ನಿಧಾನವಾಗಿ ಸಾಗುತ್ತದೆ. ಕಥೆ ವಿಸ್ತರಣೆಯಾದಂತೆ ವೇಗ ಪಡೆಯುತ್ತದೆ.  

ಕನ್ನಡ ಡಬ್ಬಿಂಗ್‌ನಲ್ಲಿ ಸಿನಿಮಾ ಒಂದಿಷ್ಟು ಅಂಕಗಳನ್ನು ಕಳೆದುಕೊಳ್ಳುತ್ತದೆ. ಫಹಾದ್‌ ಅವರ ನಟನೆಗೆ ಕನ್ನಡದ ಧ್ವನಿ ಪೂರ್ಣಪ್ರಮಾಣದಲ್ಲಿ ಒಗ್ಗಿಲ್ಲ. ಫಹಾದ್‌ ಅವರನ್ನು ಮಲಯಾಳಂ ಸಿನಿಮಾದಲ್ಲಿ ಹೆಚ್ಚು ಕಂಡವರಿಗೆ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಫಹಾದ್‌ ಅವರೇ ಇಡೀ ಸಿನಿಮಾ ಆವರಿಸಿಕೊಂಡಿರುವ ಕಾರಣ, ಡಬ್ಬಿಂಗ್‌ನಲ್ಲಿನ ಈ ಸಮಸ್ಯೆ ಇಡೀ ಸಿನಿಮಾವನ್ನು ಕಾಡುತ್ತದೆ. ಅದೇ ರೋಶನ್‌ ಪಾತ್ರಕ್ಕೆ ನೀಡಿದ ಧ್ವನಿ ಸೂಕ್ತವಾಗಿದೆ. ‘ಪ್ರಕಾಶ್‌’ ಎಂಬ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಅಚ್ಯುತ್‌ ಕುಮಾರ್‌ ಸಿನಿಮಾದ ದ್ವಿತೀಯಾರ್ಧ ತುಂಬಿಕೊಳ್ಳುತ್ತಾರೆ. ಅವರ ಪಾತ್ರಕ್ಕೆ ಅವರೇ ಧ್ವನಿ ನೀಡಿದ್ದಾರೆ. ನಟನೆಯಲ್ಲಿ ಫಹಾದ್‌, ಅಪರ್ಣಾ ಎಂದಿನಂತೆ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಛಾಯಾಚಿತ್ರಗ್ರಹಣವೂ ಇಲ್ಲಿ ಉಲ್ಲೇಖಾರ್ಹ.

ಮಲಯಾಳಂ ಅರ್ಥೈಸಿಕೊಳ್ಳುವ ಸಾಮರ್ಥ್ಯವುಳ್ಳವರು ಅದೇ ಭಾಷೆಯಲ್ಲಿ ಸಿನಿಮಾ ನೋಡುವುದು ಸೂಕ್ತ. ಕ್ಲೈಮ್ಯಾಕ್ಸ್‌ನಲ್ಲಿ ಚಿತ್ರದ ಎರಡನೇ ಭಾಗದ ಸುಳಿವನ್ನೂ ಪವನ್‌ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT