ಗುರುವಾರ , ಫೆಬ್ರವರಿ 9, 2023
30 °C

ಸಿನಿಮಾ ವಿಮರ್ಶೆ: ದಿಲ್‌ ಪಸಂದ್‌‘ಮುಗ್ದ’ ನಾಯಕ– ನಾಯಕಿ ಪಸಂದಾದ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರ: ದಿಲ್‌ ಪಸಂದ್‌
ನಿರ್ಮಾಣ: ರಶ್ಮಿ ಫಿಲ್ಮ್ಸ್ (ಸುಮಂತ್‌ ಕ್ರಾಂತಿ)
ನಿರ್ದೇಶನ: ಶಿವ ತೇಜಸ್‌
ಸಂಗೀತ: ಅರ್ಜುನ್‌ ಜನ್ಯ
ಛಾಯಾಗ್ರಹಣ: ಶೇಖರ್‌ ಚಂದ್ರ
ತಾರಾಗಣ: ಡಾರ್ಲಿಂಗ್‌ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ, ರಂಗಾಯಣ ರಘು, ತಬಲಾ ನಾಣಿ, ಸಾಧು ಕೋಕಿಲ

ನಾಯಕಿ ಗರ್ಭಿಣಿ ಹೌದೋ ಅಲ್ಲವೋ ಎಂದು ಪರೀಕ್ಷೆಗೊಳಗಾಗಲು 45 ದಿನ ಕಾಯಬೇಕು. ಅದಕ್ಕೂ ಮೊದಲು ಆಕೆ ನಾಯಕನೊಂದಿಗೆ ಸೇರಿದ್ದಳೋ ಇಲ್ಲವೋ ಎಂಬ ಗೊಂದಲ, ಅಲ್ಲೊಂದಿಷ್ಟು ತಿರುವುಗಳು. ಕೊನೆಗೂ ಅವರಿಬ್ಬರಿಗೆ ಬ್ರಹ್ಮಗಂಟು ಬೀಳಲು ಕನಿಷ್ಠ ಎರಡೂವರೆ ಗಂಟೆ ಕಾಯಬೇಕು. 

ಇದು ‘ದಿಲ್‌ ಪಸಂದ್‌’ ಸಿನಿಮಾದ ಬಗ್ಗೆ ಹೇಳಬಹುದಾದ ಒಂದು ಸಾಲಿನ ಕಥೆ. ನಾಯಕ ನಾಯಕಿಗೆ ‘ಏನಾದರೂ’ ಮಾಡಿದ್ದನೇ ಎಂಬ ಸ್ಪಷ್ಟನೆ ಕೇಳುತ್ತಲೇ ಮೊದಲಾರ್ಧ ಮುಗಿಯುತ್ತದೆ. ನಾಯಕ ನಾಯಕಿ ಇಷ್ಟೊಂದು ಮುಗ್ದರೇ, ಗೊಂದಲಕ್ಕೊಳಗಾಗುವ ಪೆದ್ದರೇ ಎಂಬ ತರ್ಕಗಳನ್ನೆಲ್ಲಾ ಬದಿಗಿಟ್ಟು ನೋಡುವುದಾದರೆ ಒಂದೊಳ್ಳೆಯ ಟೈಂ ಪಾಸ್‌ ಚಿತ್ರ. 

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹಿನ್ನೆಲೆ ಧ್ವನಿಯಲ್ಲಿ ಮೂಡಿಬರುವ ಟೈಟಲ್‌ ಕಾರ್ಡ್‌ ಪ್ರೇಕ್ಷಕನಿಗೆ ಲಘುವಾಗಿ ಕಚಗುಳಿ ಇಡುತ್ತಲೇ ಕೂರಿಸುತ್ತದೆ. ನಂತರ ಎಂದಿನಂತೆ ಬಿಲ್ಡಪ್‌ ಶೈಲಿಯಲ್ಲಿ ನಾಯಕನ ಪ್ರವೇಶ, ಒಂದಿಷ್ಟು ಬಡಿದಾಟಗಳು ಶುರುವಾಗುತ್ತವೆ. ಹತ್ತಾರು ಬಾರಿ ಪಬ್‌ನಲ್ಲಿ ನಾಯಕ– ನಾಯಕಿ, ನಾಯಕನ ಗೆಳೆಯರ ಸಮಾಲೋಚನಾ ಸಭೆಗಳು, ಸಂತಾಪ ಸಭೆಗಳೂ ನಡೆಯುತ್ತವೆ. ಅಂತೂ ಒಂದಿಷ್ಟು ನೋಡಿಸಿಕೊಂಡು ಹೋಗುವ ಸಹಜ ದೃಶ್ಯಗಳು ಚಿತ್ರದಲ್ಲಿವೆ. 

ಕ್ಯಾಮೆರಾ ಕಣ್ಣುಗಳು ನಾಯಕಿ ನಿಶ್ವಿಕಾ ನಾಯ್ಡು ಅವರ ಮೈಮಾಟವನ್ನು ಚೆನ್ನಾಗಿ ಸೆರೆ ಹಿಡಿದಿವೆ. ಡಾರ್ಲಿಂಗ್‌ ಕೃಷ್ಣ ಕೂಡಾ ತುಂಟ ಸಂತೋಷ್‌ ಆಗಿ ಇಷ್ಟವಾಗುತ್ತಾರೆ. ಮೇಘಾ ಶೆಟ್ಟಿ ಅವರ ಪಾತ್ರದ ಹೆಸರಿನಷ್ಟೇ ಮಿಂಚಿ ತಣ್ಣಗಾಗಿದೆ. ಇಬ್ಬರು ನಾಯಕಿಯರಿಗೂ ಚೆನ್ನಾಗಿ ಕುಡಿಸಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಮದ್ಯ, ಬಾಟಲಿ, ಬಾರ್‌ ಕೂಡಾ ಪಾತ್ರಗಳು. ಗಿರೀಶ್‌ ಶಿವಣ್ಣ, ಸಾಧು ಕೋಕಿಲ ಮತ್ತಿತರರ ಹಾಸ್ಯ ಸನ್ನಿವೇಶಗಳು ಸಮಪ್ರಮಾಣದಲ್ಲಿದ್ದು ಚೆನ್ನಾಗಿವೆ. ರಂಗಾಯಣ ರಘು, ತಬಲಾ ನಾಣಿ ಅವರು ತಮ್ಮ ಟಿಪಿಕಲ್‌ ಶೈಲಿಯಲ್ಲಿ ಗಮನ ಸೆಳೆಯುತ್ತಾರೆ. ಕೊನೆಯಲ್ಲಿ ಕೆಲವೇ ನಿಮಿಷ ಕಾಣಿಸಿಕೊಳ್ಳುವ ಅಜಯ್‌ ರಾವ್‌ ತಮ್ಮ ಶಿಸ್ತಿನ ಪಾತ್ರದಿಂದ ಜಂಟಲ್‌ಮ್ಯಾನ್‌ ಆಗಿ ಕಾಣಿಸಿಕೊಂಡು ಇಷ್ಟವಾಗುತ್ತಾರೆ. ನಾಯಕನ ಪಾತ್ರದಷ್ಟೇ ತೂಕ ಅವರ ಪಾತ್ರಕ್ಕೂ ಸಿಕ್ಕಿದೆ.

ಹೆಣ್ಣು ಹೆತ್ತವರ ಸಂಕಷ್ಟ (ತಬಲಾ ನಾಣಿ) ಮತ್ತು ಅಪ್ಪನ ಮಹತ್ವ (ರಂಗಾಯಣ ರಘು) ಎಂಬ ಹೆಸರಿನ ಭಾಷಣ, ಪ್ರಲಾಪಗಳಿಗೆ ಕತ್ತರಿ ಹಾಕಿದ್ದರೆ ಸುಮಾರು 20 ನಿಮಿಷಗಳಷ್ಟು ಪ್ರೇಕ್ಷಕರ ಸಮಯ ಉಳಿಸಬಹುದಿತ್ತು. ಸಂಗೀತ ಪರ್ವಾಗಿಲ್ಲ. ರಾಮ ರಾಮ ರಾಮ... ಹಾಡು ಗುನುಗುವಂತಿದೆ. ಪಕ್ಕಾ ವಾಣಿಜ್ಯ ದೃಷ್ಟಿಕೋನದ ವಸ್ತುವಿನ ಚಿತ್ರ. ಹಾಗಾಗಿ ಸುಮ್ಮನೆ ನೋಡೋಣ ಅನ್ನುವವರಿಗಾಗಿ ಹೇಳಿ ಮಾಡಿಸಿದ ಚಿತ್ರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು