ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣರಳಿಸಿ ಕೂರದಿದ್ದರೆ ‘ಫೇಸ್‌ ಟು ಫೇಸ್’ ಕಥೆ ಗೊತ್ತಾಗದು!

Last Updated 15 ಮಾರ್ಚ್ 2019, 15:00 IST
ಅಕ್ಷರ ಗಾತ್ರ

ಚಿತ್ರ: ಫೇಸ್ ಟು ಫೇಸ್
ನಿರ್ಮಾಣ: ಸುಮಿತ್ರಾ ಬಿ.ಕೆ
ನಿರ್ದೇಶನ:ಸಂದೀಪ್ ಜನಾರ್ದನ್
ತಾರಾಗಣ:ರೋಹಿತ್ ಭಾನುಪ್ರಕಾಶ್,ಪೂರ್ವಿ ಜೋಷಿ,ದಿವ್ಯಾ ಉರುಡುಗ

‘ಯಾರದ್ದಾದರೂ ಮನವೊಲಿಸಲು ಸಾಧ್ಯವಿಲ್ಲ ಎಂದಾದರೆ, ಅವರನ್ನು ಗೊಂದಲಕ್ಕೆ ಈಡುಮಾಡು..!’ ಅಮೆರಿಕದ ಅಧ್ಯಕ್ಷರಾಗಿದ್ದ ಹ್ಯಾರಿ ಟ್ರೂಮನ್ ಅವರು ಈ ಮಾತು ಹೇಳಿದ್ದಂತೆ. ಸಂದೀಪ್ ಜನಾರ್ದನ್ ನಿರ್ದೇಶನದ ‘ಫೇಸ್‌ ಟು ಫೇಸ್‌’ ಸಿನಿಮಾ ನೋಡಿದಾಗ ಈ ಮಾತು ನೆನಪಿಗೆ ಬರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಈ ಚಿತ್ರದ ಕಥೆಯ ಒಂದು ಹಳಿ ಸಾಗುವುದು ಚಿಕ್ಕಮಗಳೂರಿನಲ್ಲಿ. ಇನ್ನೊಂದು ಹಳಿ ಸಾಗುವುದು ಕರಾವಳಿಯಲ್ಲಿ. ಚಿತ್ರದ ನಾಯಕ ಸಂತೋಷ್‌ಗೆ (ರೋಹಿತ್ ಭಾನುಪ್ರಕಾಶ್) ಪ್ರೀತಿ (ಪೂರ್ವಿ ಜೋಷಿ) ಎಂಬ ಯುವತಿಯ ಜೊತೆ ಪ್ರೀತಿ ಬೆಳೆಯುತ್ತದೆ. ಆದರೆ, ಆತ ಮೊದಲು ಸ್ನೇಹಾಳನ್ನು (ದಿವ್ಯಾ ಉರುಡುಗ) ಪ್ರೀತಿಸಿರುತ್ತಾನೆ. ಸ್ನೇಹಾಳಿಗೆ ನೆನಪುಗಳು ಮಾಸಿ, ಆಕೆ ಸಂತೋಷ್‌ನನ್ನು ತೊರೆದಿರುತ್ತಾಳೆ. ಆ ಸಂದರ್ಭದಲ್ಲಿ ಸಂತೋಷ್‌ಗೆ ಸಿಗುವವಳೇ ಪ್ರೀತಿ.

ಇದು ಸಿನಿಮಾ ಕಥೆಯ ಆರಂಭದಲ್ಲಿ ಸಿಗುವ ಚಿತ್ರಣ. ವೀಕ್ಷಕರನ್ನು ಒಂದಿಷ್ಟು ಕನ್‌ಫ್ಯೂಸ್‌ ಮಾಡಬೇಕು ಎಂಬ ಉದ್ದೇಶದಿಂದ ನಿರ್ದೇಶಕರು, ಚಿತ್ರದ ಕಥೆಯನ್ನು ಇದ್ದಕ್ಕಿದ್ದಂತೆ ಉಲ್ಟಾ ಮಾಡಿಬಿಡುತ್ತಾರೆ. ರೋಲರ್‌ ಕೋಸ್ಟರ್‌ ಸವಾರಿ ಮಾಡುತ್ತಿರುವವರ ತಲೆ ಕೆಳಗಾದಂತೆ ಕಥೆಯೇ ತಲೆಕೆಳಗಾಗಿ ಮುಂದಿನ ಪ್ರಯಾಣ ಆರಂಭಿಸುತ್ತದೆ. ತಲೆಕೆಳಗೆ ಮಾಡಿಕೊಂಡ ಫ್ರೇಮ್‌ನಲ್ಲಿಯೇ ಚಿತ್ರ ವೀಕ್ಷಿಸೋಣ ಎಂದು ಕುಳಿತುಕೊಂಡ ವೀಕ್ಷಕರನ್ನು ತುಸು ಹೊತ್ತಿನ ನಂತರ ಪುನಃ ನೇರವಾಗಿಸಿ ಕೂರಿಸುತ್ತಾರೆ. ಈ ಚಿತ್ರ ವೀಕ್ಷಣೆಯ ಅನುಭವವನ್ನು ರೋಲರ್‌ ಕೋಸ್ಟರ್‌ ಸವಾರಿಗೆ ಹೋಲಿಸಬಹುದಾದರೂ ಅದರಲ್ಲಿ ಸಿಗುವ ಥ್ರಿಲ್‌ ಇಲ್ಲಿ ನಿರೀಕ್ಷೆ ಮಾಡುವಂತಿಲ್ಲ!

ಚಿತ್ರದ ಕಥೆ ಸುತ್ತುವುದು ಪ್ರೀತಿ–ಪ್ರೇಮ, ತಾಯಿ ಮತ್ತು ಮಗನ ನಡುವಣ ಪ್ರೀತಿ, ಪತಿ–ಪತ್ನಿ ನಡುವಿನ ಸಂಬಂಧ ಹಾಗೂ ಒಂದು ಕೊಲೆಯ ಸುತ್ತ. ಇವೆಲ್ಲವೂ ಹಳೆಯ ಕಥಾವಸ್ತುಗಳೇ ಅಲ್ಲವೇ ಎಂಬ ಪ್ರಶ್ನೆ ಏಳಬಹುದು. ಆದರೆ, ಇವಿಷ್ಟನ್ನೂ ಸೌಮ್ಯ ದನಿಯಲ್ಲಿ ಹೇಳುವ ಯತ್ನ ಸಿನಿಮಾದಲ್ಲಿದೆ.

‘ಫೇಸ್ ಟು ಫೇಸ್‌’ನ ದ್ವಿತೀಯಾರ್ಧದ ಕೆಲವು ಸನ್ನಿವೇಶಗಳು ಬಹಳ ಸರಳವಾಗಿ ಸಾಗಿದಂತೆ ಕಾಣುತ್ತವೆ. ಆದರೆ, ಚಿತ್ರದ ಕೊನೆಯಲ್ಲಿ ‘ಅಯ್ಯೋ, ಹೀಗಾ’ ಎಂಬಂತಹ ತಿರುವುಗಳನ್ನು ನೀಡಲಾಗಿದೆ. ಹೀಗೆ, ಇಲ್ಲಿಯವರೆಗೆ ನೋಡಿದ್ದನ್ನೆಲ್ಲ ಬೇರೆಯದೇ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಾ ಎಂಬಂತಹ ಸ್ಥಿತಿ ನಿರ್ಮಾಣ ಆಗಿರುವುದಕ್ಕೆ ಕಾರಣ ಸ್ನೇಹಾ ಪಾತ್ರದಲ್ಲಿನ ಒಂದು ಮಾನಸಿಕ ಸಮಸ್ಯೆ. ಅದನ್ನು ಚಿತ್ರದ ಕೊನೆಯವರೆಗೂ ಸಸ್ಪೆನ್ಸ್‌ ಆಗಿಯೇ ಇರಿಸಲಾಗಿದೆ. ಅಂದಹಾಗೆ, ಕ್ಲೈಮ್ಯಾಕ್ಸ್ ಹಂತದಲ್ಲಿ ಕಣ್ಣರಳಿಸಿಕೊಂಡು ಇರದಿದ್ದರೆ ಚಿತ್ರ ಮುಗಿದಿದ್ದು ಹೇಗೆ ಎಂಬುದು ಗೊತ್ತಾಗದಿರಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT