ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಫೋಟೋ’ ಸಿನಿಮಾ ವಿಮರ್ಶೆ: ಲಾಕ್‌ಡೌನ್‌ ಸಂಕಷ್ಟ ಕಟ್ಟಿಕೊಟ್ಟ ಚಿತ್ರ

Published 16 ಮಾರ್ಚ್ 2024, 9:22 IST
Last Updated 16 ಮಾರ್ಚ್ 2024, 9:22 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ಫೋಟೋ (ಕನ್ನಡ)
ನಿರ್ದೇಶಕ: ಉತ್ಸವ್ ಗೋನವಾರ
ಪಾತ್ರವರ್ಗ:ವೀರೇಶ್‌ ಗೋನವಾರ, ಮಹಾದೇವ ಹಡಪದ, ಸಂಧ್ಯಾ ಅರಕೆರೆ, ಜಹಾಂಗೀರ್‌, ಗಾಯತ್ರಿ ಹೆಗ್ಗೋಡು ಮತ್ತಿತರರು

ಸಾವಿರಾರು ವಲಸೆ ಕಾರ್ಮಿಕರು ಕೋವಿಡ್‌ನ ಮೊದಲ ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ನಗರಗಳಿಂದ ತಮ್ಮೂರಿಗೆ ಮರಳುವಾಗ ಸಂಭವಿಸಿದ ದುರ್ಘಟನೆಗಳನ್ನು ದಿನಪತ್ರಿಕೆಗಳಲ್ಲಿ, ನ್ಯೂಸ್‌ ಚಾನೆಲ್‌ಗಳಲ್ಲಿ ನೋಡಿರುತ್ತೇವೆ. ಅಂತಹ ಒಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ‘ಫೋಟೋ’ ಸೆರೆಹಿಡಿದಿದ್ದಾರೆ ನಿರ್ದೇಶಕ ಉತ್ಸವ್‌ ಗೋನವಾರ. 

ಲಾಕ್‌ಡೌನ್‌ ದಿನಗಳಲ್ಲಿ ಜಗತ್ತಿನ ಒಂದು ವರ್ಗವು ಹೊಸ ಬಗೆಯ ಕಾಫಿ, ಸ್ನ್ಯಾಕ್ಸ್‌ ತಯಾರಿಯಲ್ಲಿ ಮುಳುಗಿದ್ದ ವೇಳೆಯಲ್ಲಿ ಮತ್ತೊಂದು ವರ್ಗ ಅನುಭವಿಸಿದ ಸಂಕಷ್ಟಗಳನ್ನು ಸೂಕ್ಷ್ಮವಾಗಿ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕರು. ಕಥಾಹಂದರ ಸರಳವಾಗಿದೆ. ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ಪ್ರಾಥಮಿಕ ಶಾಲೆ ಓದುತ್ತಿರುವ ಹುಡುಗ ‘ದುರ್ಗ್ಯ’(ವೀರೇಶ್‌ ಗೋನವಾರ). ತಾಯಿ ಗಂಗಮ್ಮನೊಂದಿಗೆ ವಾಸ. ತಂದೆ ಗ್ಯಾನಪ್ಪ ಬೆಂಗಳೂರಿನಲ್ಲಿ ದಿನಗೂಲಿ ಕಟ್ಟಡ ಕಾರ್ಮಿಕ. ಊರಿನಲ್ಲಿರುವ ಕೊಂಚ ಶ್ರೀಮಂತರ ಮನೆಗಳಲ್ಲಿರುವ ‘ಫೋಟೋ’ಗಳ ಮೇಲೆ ದುರ್ಗ್ಯನ ಕಣ್ಣು. ಅದರಲ್ಲಿರುವಂತೆ ವಿಧಾನಸೌಧದ ಮುಂದೊಮ್ಮೆ ಫೋಟೋ ತೆಗೆಸಿಕೊಳ್ಳುವ ಆಸೆ. ಜೊತೆಗೆ ಡಿ–ಬಾಸ್‌ ನೋಡುವ ಇಚ್ಛೆ. ಅಮ್ಮನಿಗೆ ಗಂಟುಬಿದ್ದು ಅಪ್ಪನ ಮಡಿಲು ಸೇರುತ್ತಾನೆ. ಅದೇ ಸಂದರ್ಭದಲ್ಲಿ ಕೋವಿಡ್‌ ಲಾಕ್‌ಡೌನ್‌ ಹೇರಿಕೆಯಾಗುತ್ತದೆ. ಅಪ್ಪ–ಮಗನ ಮುಂದಿನ ಪಯಣವೇ ಸಿನಿಮಾದ ಕಥಾಹಂದರ.        

ಇದು ಸಿದ್ಧಸೂತ್ರದ ಸಿನಿಮಾವಲ್ಲ. ಕಿರುಚಿತ್ರವೊಂದು ಸಿನಿಮಾವಾಗಿರುವುದರ ಎಲ್ಲ ಲಕ್ಷಣಗಳೂ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮೌನ ಅಗತ್ಯಕ್ಕಿಂತ ಅಧಿಕವಾಗಿದೆ. ಕೆಲ ದೃಶ್ಯಗಳ ಬಳಿಕ ಬರುವ ಫೇಡ್‌ಔಟ್‌ಗಳು, ಪ್ರತಿ ದೃಶ್ಯ ಕೊನೆಯಾದ ಬಳಿಕ ಚಲಿಸದೇ ಉಳಿಯುವ ಕ್ಯಾಮೆರಾ..ಹೀಗೆ ಚಿತ್ರಕಥೆಯಲ್ಲಿ ಹಲವು ಪ್ರಯೋಗಗಳನ್ನು ನಿರ್ದೇಶಕರು ಮಾಡಿದ್ದಾರೆ. ‘ಫೋಟೋ’ದಂತೆ ಇವುಗಳು ಭಾಸವಾಗುತ್ತದೆ. ರೂಪಕಗಳನ್ನು ಬಳಸಿಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಕೆಲವೊಂದು ದೃಶ್ಯಗಳನ್ನು ಸೆರೆಹಿಡಿದಿರುವ ರೀತಿ ಅದ್ಭುತವಾಗಿದೆ. ತಂದೆ–ಮಗ ನಡೆದು ಹೋಗುತ್ತಿರುವ ದೃಶ್ಯ, ಕ್ಲೈಮ್ಯಾಕ್ಸ್‌ನಲ್ಲಿ ಮಗನನ್ನು ಹೆಗಲ ಮೇಲೆ ಹೊತ್ತು ಅಪ್ಪ ಓಡುವ ಡ್ರೋನ್‌ ದೃಶ್ಯ ಚಿತ್ರದ ಮೂಲಕಥೆಯನ್ನು ಗಾಢವಾಗಿ ಹೇಳುತ್ತವೆ. ಹಿನ್ನೆಲೆ ಸಂಗೀತವಿಲ್ಲದೆ ದೃಶ್ಯಗಳು ಸಾಗುವುದು ನೋಡುಗನನ್ನು ಚಿತ್ರದೊಳಗೆ ತಲ್ಲೀನವಾಗಿಸುತ್ತದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಜನರ ಕೃತಕ, ಅಮಾನವೀಯ ನಡವಳಿಕೆಗಳನ್ನು ನಿರ್ದೇಶಕರು ಸಂಕ್ಷಿಪ್ತವಾಗಿ ತೋರಿಸಿದ್ದಾರೆ. ಉತ್ತರ ಕರ್ನಾಟಕದ ಜನರಿಗೆ ಮಾತೂ ಒಂದು ಸಂಪತ್ತು. ಹಿಂಗಿದ್ದೂ, ಚಿತ್ರದ ಪಯಣದುದ್ದಕ್ಕೂ ಪಾತ್ರಗಳು ಸಂಪೂರ್ಣ ಮೌನವಹಿಸಿರುವುದು ದೃಶ್ಯಗಳನ್ನು ಕೃತಕವಾಗಿಸಿವೆ. ಆದರೂ ಇರುವ ಕೆಲ ಸಂಭಾಷಣೆಗಳು ದಟ್ಟವಾದ ಪ್ರಭಾವ ಬೀರುವಂತಿದೆ.         

ನಟನೆಯಲ್ಲಿ ಬಾಲನಟ ವೀರೇಶ್‌ ಗೋನವಾರ ಮನಸ್ಸಿನಲ್ಲಿ ಉಳಿಯುತ್ತಾನೆ. ವಿಧಾನಸೌಧದ ಎದುರಿಗೆ ಫೋಟೋ ತೆಗೆಸಿಕೊಳ್ಳುವ ಕನಸನ್ನು ಹೊತ್ತ ಮುಗ್ಧ ಬಾಲಕನಾಗಿ ತೆರೆಯನ್ನು ಆವರಿಸಿಕೊಳ್ಳುತ್ತಾನೆ. ತಂದೆ ಪಾತ್ರದಲ್ಲಿ ಮಹಾದೇವ ಹಡಪದ ಹಾಗೂ ತಾಯಿಯಾಗಿ ಸಂಧ್ಯಾ ಅರಕೆರೆ ಹಾಗೂ ಜಹಾಂಗೀರ್‌ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಚಿತ್ರವು ಕೊಂಚ ಸಮಯ ಮನಸ್ಸಿನಲ್ಲಿ ಗಾಢವಾಗಿ ಉಳಿಯುತ್ತದೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT