ಗುರುವಾರ , ಏಪ್ರಿಲ್ 2, 2020
19 °C
ಸಿನಿಮಾ ವಿಮರ್ಶೆ

ಕಾಳಿದಾಸ ಕನ್ನಡ ಮೇಷ್ಟ್ರು: ಜಗ್ಗೇಶ್‌ ಹೋರಾಟ, ಪ್ರೇಕ್ಷಕರಿಗೂ ಪಾಠ

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಕಾಳಿದಾಸ ಕನ್ನಡ ಮೇಷ್ಟ್ರು

ನಿರ್ಮಾಣ: ಯು.ಆರ್. ಉದಯಕುಮಾರ್‌

ನಿರ್ದೇಶನ: ಕವಿರಾಜ್

ತಾರಾಗಣ: ಜಗ್ಗೇಶ್‌, ಮೇಘನಾ ಗಾಂವ್ಕರ್, ಅಂಬಿಕಾ, ತಬಲಾ ನಾಣಿ, ಟಿ.ಎಸ್. ನಾಗಾಭರಣ, ಸುಂದರ್, ಯತಿರಾಜ್, ಉಷಾ ಭಂಡಾರಿ.

ಇಂಗ್ಲಿಷ್‌ ಕಾನ್ವೆಂಟ್‌ ಶಾಲೆಗಳ ಅಬ್ಬರದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವುದು, ಶಿಕ್ಷಕರು ಮತ್ತು ಪೋಷಕರ ಒತ್ತಡದಿಂದ ಮಕ್ಕಳ ಮೇಲೆ ಬೀಳುತ್ತಿರುವ ಹೊರೆ ಹಾಗೂ ಶಿಕ್ಷಣ ದಂಧೆಯಂತಹ ಗಂಭೀರ ಸಮಸ್ಯೆಗಳನ್ನು ನಿರ್ದೇಶಕ ಕವಿರಾಜ್‌ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೆರೆದಿಟ್ಟಿದ್ದಾರೆ. ‘ಮಮತೆಯ ಕರೆಯೋಲೆ’ ಸಿನಿಮಾದಲ್ಲಿ ಮೊದಲ ಬಾರಿಗೆ ನಿರ್ದೇಶನದ ಪರೀಕ್ಷೆಗೆ ಇಳಿದಿದ್ದ ಗೀತ ಸಾಹಿತಿ ಕವಿರಾಜ್‌, ತಮ್ಮ ಎರಡನೇ ಸಿನಿಮಾದಲ್ಲಿ ಒಳ್ಳೆಯ ಅಂಕಗಳನ್ನೇ ಸಂಪಾದಿಸಿದ್ದಾರೆ.

ಕಾಳಿದಾಸ (ಜಗ್ಗೇಶ್) ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕ. ಕನ್ನಡದ ಮೇಲೆ ಅಪ್ಪಟ ಪ್ರೇಮ, ಇಂಗ್ಲಿಷ್‌ ಬಾರದು. ಮಧ್ಯಮ ವರ್ಗದ ಈತನಿಗೆ ತನ್ನ ಮಗನನ್ನು ಕನ್ನಡ ಶಾಲೆಯಲ್ಲೇ ಓದಿಸುವ ಆಸೆ. ಆದರೆ, ಮೇಲ್ವರ್ಗದಿಂದ ಬಂದ ಈತನ ಪತ್ನಿ ಸುಮಾಗೆ (ಮೇಘನಾ ಗಾಂವ್ಕರ್‌) ಮಗ ಕಾನ್ವೆಂಟ್‌ನಲ್ಲೇ ಓದಬೇಕೆಂಬ ಹಪಾಹಪಿ. ಕಾನ್ವೆಂಟ್‌ಗೆ ಸೇರಿಸಲು ಬೇಕಾದ ₹7 ಲಕ್ಷ  ಹೊಂದಿಸಲು ಕಾಳಿದಾಸ ಪರದಾಡುತ್ತಾನೆ. ಪತ್ನಿಯ ಹಪಾಹಪಿಯೇ ಮೇಲುಗೈ ಸಾಧಿಸುವುದರಿಂದ ವಿಧಿ ಇಲ್ಲದೆ ತನ್ನದೊಂದು ಕಿಡ್ನಿಯನ್ನೇ ಮಾರಿ ಹಣ ಹೊಂದಿಸುತ್ತಾನೆ. ಈ ನಡುವೆ ಒಂದೊಂದೆ ಮಗು ಶಾಲೆಯಿಂದ ವರ್ಗಾವಣೆ ಪತ್ರ ಪಡೆದು ಕಾನ್ವೆಂಟ್‌ ಸೇರುವಾಗ ತನ್ನ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಬೇಕಾದ ಸವಾಲು ಕಾಳಿದಾಸನ ಮುಂದಿರುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿಯುವ ಶಿಕ್ಷಣ ಅಧಿಕಾರಿ, ಕನ್ನಡ ಶಾಲೆಗೆ ಬೀಗ ಜಡಿಯಲು ದಿನಗಣನೆ ಮಾಡುವುದು ವ್ಯವಸ್ಥೆಯಲ್ಲಿನ ಕರಾಳ ಮುಖವನ್ನು ನೆನಪು ಮಾಡಿಸುತ್ತದೆ.  

ಮೊದಲಾರ್ಧ ಕಥೆಗೆ ಓಘ–ವೇಗ ಸಿಗುತ್ತಿಲ್ಲವೆನಿಸಿದರೂ ಜಗ್ಗೇಶ್‌ ಅವರ ಹಳೆಯ ಸಿನಿಮಾಗಳನ್ನು ನೆಪಿಸುವಂತೆ ಹಾಸ್ಯದ ರಸಾಯನ ಸವಿಯಲು ದಕ್ಕುತ್ತದೆ. ದ್ವಿತಿಯಾರ್ಧದಲ್ಲಿ ಚಿತ್ರದ ಕಥೆಗೆ ವೇಗ ದಕ್ಕುತ್ತದೆ. ಮೊದಲಾರ್ಧದಲ್ಲಿ ಉಕ್ಕುವ ನಗುವಿನ ಅಲೆಯ ಜಾಗವನ್ನು ದ್ವಿತಿಯಾರ್ಧ ಸಂಪೂರ್ಣ ಭಾವುಕತೆ, ಗಂಭೀರತೆ ಆವರಿಸಿಕೊಳ್ಳುತ್ತದೆ.

ಒಂದು ಸರ್ಕಾರಕ್ಕೆ, ಸಮಾಜಕ್ಕೆ, ಪ್ರೇಕ್ಷಕನಿಗೆ ಏನು ಹೇಳಬೇಕಿತ್ತೋ ಅದನ್ನು ಎರಡು ತಾಸುಗಳಲ್ಲಿ ತಾಕಿಸುವ ಪ್ರಯತ್ನದಲ್ಲಿ ಚಿತ್ರ ಯಶಸ್ಸು ಸಾಧಿಸಿದೆ. ಇಂಗ್ಲಿಷ್ ವ್ಯಾಮೋಹದಲ್ಲಿ ನಾವು ಕಳೆದುಕೊಳ್ಳುತ್ತಿರುವುದನ್ನು ಉಳಿಸಿಕೊಳ್ಳುವ ದಾರಿಯನ್ನೂ ಸೂಚ್ಯವಾಗಿ ತೋರಿಸುವ ಜತೆಗೆ, ನಿರ್ಧಾರವನ್ನು ಪ್ರೇಕ್ಷಕನಿಗೆ ಬಿಟ್ಟುಬಿಟ್ಟಿದೆ.

ಸರ್ಕಾರಿ ಶಾಲೆಯ ಬಡ ಮೇಷ್ಟ್ರರಾಗಿ, ಮಧ್ಯಮ ವರ್ಗದಲ್ಲಿನ ಅಸಹಾಯಕ ವ್ಯಕ್ತಿಗಳ ಪ್ರತಿನಿಧಿಯಾಗಿ ಜಗ್ಗೇಶ್‌ ಪಾತ್ರದಲ್ಲಿ ಜೀವಿಸಿದ್ದಾರೆ. ಮಕ್ಕಳ ಮನಸ್ಸು– ಆಸಕ್ತಿಯನ್ನು ಅರಿಯದೇ, ಅವರನ್ನು ಅಂಕ ಗಳಿಸುವ ಯಂತ್ರದಂತೆ ರೂಪಿಸಲು ತುಡಿಯುವ ಇಂಗ್ಲಿಷ್‌ ವ್ಯಾಮೋಹಿ ತಾಯಂದಿರ ಪ್ರತಿನಿಧಿಯ ಪಾತ್ರದಲ್ಲಿ ಮೇಘನಾ ಗಮನ ಸೆಳೆದಿದ್ದಾರೆ. ತಬಲಾ ನಾಣಿಯವರದು ಚಿಕ್ಕ ಪಾತ್ರವಾದರೂ ‘ಪ್ರಜ್ಞಾವಂತ ಕುಡುಕ’ನ ಪಾತ್ರಕ್ಕೆ ಅವರೇ ಸಾಟಿ ಎನ್ನುವಂತಿದೆ. ಟಿ.ಎಸ್‌.ನಾಗಭರಣ, ಅಂಬಿಕಾ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಗುರುಕಿರಣ್ ಸಂಗೀತವಿರುವ ಹಾಡುಗಳು ಕೇಳಲು ಕಿವಿಗೆ ಹಿತವಾಗಿವೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗೆ ಸಹ್ಯವಾಗಿದೆ. ಕೆ.ಎಂ. ಪ್ರಕಾಶ್ ಸಂಕಲನದಲ್ಲಿ ಇನ್ನಷ್ಟು ಜಾಣ್ಮೆ ವಹಿಸಿದ್ದರೆ ಮೊದಲಾರ್ಧದ ದೃಶ್ಯಗಳ ತೆವಳಿಕೆ ತಪ್ಪಿಸಬಹುದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು