ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೈನ್‌ಮ್ಯಾನ್‌’ ಸಿನಿಮಾ ವಿಮರ್ಶೆ: ಸೋಲಿಸಬೇಡ ಗೆಲಿಸಯ್ಯ...

Published 22 ಮಾರ್ಚ್ 2024, 9:53 IST
Last Updated 22 ಮಾರ್ಚ್ 2024, 9:53 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ಲೈನ್‌ಮ್ಯಾನ್‌(ಕನ್ನಡ)
ನಿರ್ದೇಶಕ:ರಘು ಶಾಸ್ತ್ರಿ
ಪಾತ್ರವರ್ಗ:ತ್ರಿಗುಣ್, ಕಾಜಲ್ ಕುಂದರ್, ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಕಮಲ ಮತ್ತಿತರರು

ಬಹಿರಂಗದ ಕತ್ತಲೆ ಬೆಳಕಿನೊಂದಿಗೆ ಅಂತರಂಗದ ಮಬ್ಬು ಬೆಳಕಿನ ಸಂಘರ್ಷದ ಕಥನ ‘ಲೈನ್‌ಮ್ಯಾನ್’. ಭಿನ್ನ ಆಲೋಚನೆ ಹಾಗೂ ಪ್ರಯತ್ನದ ಸಿನಿಮಾಗಳ ಪಟ್ಟಿಯಲ್ಲಿ ನಿಲ್ಲುವ ಈ ಸಿನಿಮಾ, ಮಾನವೀಯತೆಯ ಪರಿಧಿಯಲ್ಲಿ ಸಕಲ ಜೀವರಾಶಿಯೊಂದಿಗೆ ಪ್ರಕೃತಿಯೂ ಸೇರಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತದೆ.

ನಾವೇ ಸೃಜಿಸಿಕೊಂಡ ಸವಲತ್ತುಗಳ ಗೈರುಹಾಜರಿ ನಮ್ಮನ್ನು ಯಾವೆಲ್ಲ ಬಗೆಯಲ್ಲಿ ಕ್ಷೋಭೆಗೊಳಮಾಡುತ್ತದೆ ಎನ್ನುವುದು ಸಿನಿಮಾದ ಕಥೆ. ಪಕ್ಷಿಯೊಂದರ ಮೊಟ್ಟೆಗಳನ್ನು ಉಳಿಸಿಕೊಳ್ಳುವ ಸವಾಲಿನಲ್ಲಿ ಊರು ಗೆಲ್ಲುತ್ತದೆಯೋ ಸೋಲುತ್ತದೆಯೋ ಎನ್ನುವ ಕೌತುಕದೊಂದಿಗೆ ಕಥೆ ಹಬ್ಬಿಕೊಳ್ಳುತ್ತದೆ. ಬಹಿರಂಗ ಕತ್ತಲಾದಾಗ ಅಂತರಂಗ ಬೆಳಕಾಗುವುದು ಸಹಜ. ಈ ಪ್ರಕೃತಿಸಹಜ ವಿದ್ಯಮಾನದಿಂದ ನಾವು ಎಷ್ಟು ದೂರ ಹೋಗಿದ್ದೇವೆ, ಅದರ ಪರಿಣಾಮಗಳೇನು ಎನ್ನುವುದನ್ನು ನೆನಪಿಸುತ್ತ, ಆತ್ಮಾವಲೋಕನಕ್ಕೆ ಒತ್ತಾಯಿಸುವಲ್ಲಿ ಸಿನಿಮಾದ ಗೆಲುವಿದೆ.

ಊರೊಂದರ ನೈತಿಕತೆಗೆ ಪ್ರಕೃತಿ ಒಡ್ಡಿದ ಸವಾಲನ್ನು ಅಲ್ಲಿನ ಜನ ಹೇಗೆ ನಿರ್ವಹಿಸುತ್ತಾರೆ ಎನ್ನುವುದು ಚಿತ್ರಕಥೆಯಲ್ಲಿರುವ ಕೌತುಕ. ತಾಯ್ತನದ ಆಯಾಮವೂ ಕಥೆಯಲ್ಲಿದೆ. ಊರಿಗೇ ತಾಯಿಯಂತಿರುವ, ಸಾವಿರಾರು ಹೆರಿಗೆಗಳನ್ನು ಮಾಡಿಸಿರುವ ಸೂಲಗಿತ್ತಿಯೊಬ್ಬಳ ನೂರನೇ ವರ್ಷದ ಹುಟ್ಟುಹಬ್ಬ ಊರಿನ ಸಂಭ್ರಮವಾಗುತ್ತದೆ. ಇನ್ನೊಂದು ಕಡೆಗೆ ಪಕ್ಷಿಯೊಂದರ ತಾಯ್ತನದ ಹಕ್ಕಿನ ಪ್ರಶ್ನೆಯಿದೆ. ತಾಯಿಯಾಗಲು ಪತ್ನಿಗೆ ಸಮಸ್ಯೆಯಿರುವುದನ್ನು ಮುಚ್ಚಿಟ್ಟು, ತನ್ನನ್ನೇ ದುರ್ಬಲನನ್ನಾಗಿ ಬಿಂಬಿಸಿಕೊಳ್ಳುವ ಗಂಡಿನೊಳಗೂ ತಾಯ್ತನವಿದೆ. ತಾಯ್ತನದ ಸಂಭ್ರಮ ಮತ್ತು ಸಂಘರ್ಷಗಳನ್ನು ಘನತೆಯಿಂದ ಕಟ್ಟಿಕೊಡುವ ನಿರ್ದೇಶಕರ ಪ್ರಯತ್ನ ಪ್ರಾಮಾಣಿಕವಾಗಿದೆ. ಸಮಸ್ಯೆಯಿರುವುದು ಕೆಲವು ಪಾತ್ರಗಳ ಪರಿಕಲ್ಪನೆಯಲ್ಲಿ. ಮನರಂಜನೆ ಹೆಸರಿನಲ್ಲಿ ರೂಪುಗೊಂಡಿರುವ ಈ ಪಾತ್ರಗಳು, ಸಿನಿಮಾದ ಗಾಂಭೀರ್ಯವನ್ನು ತೆಳುಮಾಡುವಂತಿವೆ. ಪರಿಸರ ಹೋರಾಟಗಾರ ಗುಬ್ಬಚ್ಚಿ ಲವರ್‌ ಪಾತ್ರಕ್ಕಂತೂ ಸ್ಪಷ್ಟ ತಾತ್ವಿಕತೆಯಿಲ್ಲದೆ, ಅವಕಾಶವಾದಿಯಂತೆ ವಿದೂಷಕನಂತೆ ಚಿತ್ರಣಗೊಂಡಿದೆ.

ಸೂಲಗಿತ್ತಿಯಾಗಿ ಬಿ. ಜಯಶ್ರೀ ಹಾಗೂ ಲೈನ್‌ಮ್ಯಾನ್‌ ಪಾತ್ರದಲ್ಲಿ ತ್ರಿಗುಣ್‌, ಹೆಂಡತಿಯನ್ನು ಪ್ರೀತಿಸುವ ಗಂಡನ ಪಾತ್ರದಲ್ಲಿ ಮೈಕೊ ನಾಗರಾಜ್‌ ಪಾತ್ರ ನಿರ್ವಹಣೆ ಸೊಗಸಾಗಿದೆ. ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆಯ ಗೀತೆಗಳು ಗಮನಸೆಳೆಯುವಂತಿದ್ದರೂ, ಹಿನ್ನೆಲೆ ಸಂಗೀತ ಅಬ್ಬರದಿಂದ ಕೂಡಿದೆ. ಜನಪದರ ‘ಸಿದ್ದಯ್ಯ ಸ್ವಾಮಿ ಬನ್ನಿ...’ ಗೀತೆಯನ್ನು ಊರಿನ ಚಿತ್ರಣ ಕಟ್ಟಿಕೊಡಲು ಬಳಸಿಕೊಂಡಿರುವ ಕ್ರಮ ಚೆನ್ನಾಗಿದೆ.

‘ರನ್‌ ಆ್ಯಂಟನಿ’ ಸಿನಿಮಾದಲ್ಲಿ ಪ್ರೇಮ ಹಾಗೂ ಮಾನವೀಯತೆಯೊಂದಿಗೆ ಭಯೋತ್ಪಾದನೆಯ ಮುಖಾಮುಖಿಯನ್ನು ಚಿತ್ರಿಸಿದ್ದ ರಘು ಶಾಸ್ತ್ರಿ ಅವರ ಭಿನ್ನ ಕಥನಗಳ ನಿರೂಪಣೆಯ ಹಂಬಲ ‘ಲೈನ್‌ಮ್ಯಾನ್‌’ನಲ್ಲೂ ಸ್ಪಷ್ಟವಾಗಿದೆ. ಚಂದಕವಾಡಿ ಗ್ರಾಮದ ವಿದ್ಯುತ್ ಸ್ಥಾವರವನ್ನು ನಮ್ಮ ಎದೆಗೂಡನ್ನಾಗಿಸುವುದು ಅವರಿಗೆ ಸಾಧ್ಯವಾಗಿದೆ. ಚಿತ್ರಕಥೆಯನ್ನು ಮತ್ತಷ್ಟು ನೇರ್ಪುಗೊಳಿಸುವ ಸಂಯಮವನ್ನು ರೂಢಿಸಿಕೊಂಡಲ್ಲಿ ನಿರ್ದೇಶಕರು ಕನ್ನಡ ಚಿತ್ರರಂಗಕ್ಕೂ ಲೈನ್‌ಮ್ಯಾನ್‌ ಆಗಬಲ್ಲ ಸಾಧ್ಯತೆಯಿದೆ.

ಸಿನಿಮಾದ ಕೊನೆಯ ದೃಶ್ಯ ಕಾವ್ಯಾತ್ಮಕವಾಗಿದೆ. ಮೊಟ್ಟೆಯೊಂದಿಗೆ ಆಧುನಿಕತೆಯ ಹೆಸರಿನಲ್ಲಿ ನಮ್ಮ ಮನಸ್ಸು–ಯೋಚನೆಗಳಲ್ಲಿ ಮೈದಳೆದ ಮೊಟ್ಟೆಗಳೂ ಒಡೆದುಕೊಳ್ಳುತ್ತವೆ; ಕೋಶದಿಂದ ಹೊರಬರುವ ಮರಿಗಳು ಜೀವಕಾರುಣ್ಯದ ರೂಪಕಗಳಂತೆ ಕಾಣಿಸುತ್ತವೆ. ಇದೊಂದು ದೃಶ್ಯ ಸಾಕು, ಸಿನಿಮಾದ ಅರೆಕೊರೆಗಳನ್ನು ಸಹಿಸಿಕೊಳ್ಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT