ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರಿಸಿದ ಒಡೆಯ: ಸಿದ್ಧಭಿತ್ತಿಯ ಮೇಲೆ ದರ್ಶನ್ ಕತ್ತಿ

Last Updated 12 ಡಿಸೆಂಬರ್ 2019, 12:58 IST
ಅಕ್ಷರ ಗಾತ್ರ

ಚಿತ್ರ: ಒಡೆಯ
ನಿರ್ಮಾಣ: ಸಂದೇಶ್ ನಾಗರಾಜ್
ನಿರ್ದೇಶನ: ಎಂ.ಡಿ. ಶ್ರೀಧರ್
ತಾರಾಗಣ: ದರ್ಶನ್, ಸನಾ ತಿಮ್ಮಯ್ಯ, ದೇವರಾಜ್, ಚಿಕ್ಕಣ್ಣ, ರವಿಶಂಕರ್, ಯಶಸ್ ಸೂರ್ಯ, ಪಂಕಜ್, ಸಾಧು ಕೋಕಿಲ, ಶರತ್ ಲೋಹಿತಾಶ್ವ.

ತಮಿಳು ಕಮರ್ಷಿಯಲ್ ಚಿತ್ರಗಳಿಗೆ ಜನಪ್ರಿಯವಾದ ಭಿತ್ತಿಯೊಂದು ಇದೆ. ಐದು ವರ್ಷಗಳ ಹಿಂದೆ ಶಿವ ನಿರ್ದೇಶಿಸಿ, ಅಜಿತ್ ನಾಯಕರಾಗಿದ್ದ ‘ವೀರಂ’ ಅಂಥದ್ದೇ ಸಿನಿಮಾ. ಅದನ್ನು ನಿರ್ದೇಶಕ ಎಂ.ಡಿ. ಶ್ರೀಧರ್ ಚಾಚೂತಪ್ಪದೆ ಒಪ್ಪಿಸಿದ್ದಾರೆ.

ಬಿಲ್ಡಪ್‌ಗಳೊಂದಿಗೆ ನಾಯಕನ ಪ್ರವೇಶ, ಒಂದು ಹೊಗಳುಗೀತೆ, ಹೊಡೆದಾಟ, ಉಘೇ ಉಘೇ, ಕಚಗುಳಿಗೆಂದು ಮೂವರು ಕಾಮಿಡಿ ಕಿಲಾಡಿಗಳು, ಭಾವತೀವ್ರತೆಗಾಗಿ ತುಂಬು ಕುಟುಂಬ, ಸೊಗಸುಗಾತಿ ನಾಯಕಿ, ಅವಳ ಪ್ರೀತಿಯಲ್ಲಿ ಬಿದ್ದು ನಾಯಕನೇ ಎಲ್ಲಕ್ಕೂ ಶುಭಂ ಹಾಡಬೇಕೆಂಬುದೇ ಆ ಸಿದ್ಧಭಿತ್ತಿ.

‘ವೀರಂ’ನಲ್ಲಿ ಅಜಿತ್ ತಲೆಗೂದಲು, ಗಡ್ಡಕ್ಕೆ ‘ಸಾಲ್ಟ್‌ ಅಂಡ್ ಪೆಪ್ಪರ್’ ಮೋಡಿ ಇತ್ತು. ದರ್ಶನ್ ಗಡ್ಡಕ್ಕೆ ಆ ರೀತಿ ಬಣ್ಣ ಬಳಿದುಕೊಳ್ಳಲು ಹೋಗಿಲ್ಲ. ನಿರ್ದೇಶಕ ಶ್ರೀಧರ್ ಚಿತ್ರಕಥೆ ತಮ್ಮದೇ ಎಂದು ಬರೆದುಕೊಂಡಿದ್ದರೂ ಅದರಲ್ಲಿನ ಭಿತ್ತಿ, ಆತ್ಮ ಶಿವ ಕಟ್ಟಿಕೊಟ್ಟಿರುವುದು.

ನಾಯಕನಿಗೆ ನಾಲ್ವರು ತಮ್ಮಂದಿರು. ಅವರಿಗಾಗಿ ಬಾಲಕಾರ್ಮಿಕನಾಗಿಯೇ ಆರಂಭಿಸಿದ ಬದುಕು ಈಗ ಹದಕ್ಕೆ ಬಂದಿದೆ. ಆಜನ್ಮ ಬ್ರಹ್ಮಚಾರಿಯಾಗಿ ಇದ್ದುಬಿಡಬೇಕು ಎನ್ನುವುದು ಅವನ ಸಂಕಲ್ಪ. ತಮ್ಮಂದಿರಿಗೂ ಅದೇ ಕಟ್ಟಳೆ. ಆದರೆ, ಕುದಿವಯಸು ಕೇಳಬೇಕಲ್ಲ? ಅವರಿಗೆ ಪ್ರೇಮಾಂಕುರವಾಗುತ್ತದೆ. ಹೀಗಾಗಿ ಅಗ್ರಜನಿಗೂ ಹುಡುಗಿಯ ಮೇಲೆ ಪ್ರೇಮ ಹುಟ್ಟುವ ಪ್ರಸಂಗಗಳನ್ನು ಸೃಷ್ಟಿಸುತ್ತಾರೆ. ಇವಿಷ್ಟೂ ಸಿನಿಮಾದ ಮೊದಲರ್ಧದ ‘ಟೆಂಪ್ಲೇಟ್’.

ಎರಡನೇ ಭಾಗದಲ್ಲಿ ತಿರುವು. ನಾಯಕಿಯ ತಂದೆ ಅಹಿಂಸಾವಾದಿ. ನಾಯಕನೋ ಹಿಂಸಾಮೋಹಿ. ನಾಯಕಿಗೂ ರಕ್ತವೆಂದರೆ ಆಗದು. ಇಂಥ ಅಹಿಂಸಾ ಪ್ರತಿಪಾದಕರ ಚಿನ್ನದಂಥ ಕುಟುಂಬದ ಮೇಲೂ ಅಪಾಯದ ಹದ್ದು. ಖಳ ರವಿಶಂಕರ್ ಆ ಪಾತ್ರದಲ್ಲಿ ರಾಕ್ಷಸನಂತೆಯೇ ನಟಿಸಿದ್ದಾರೆ. ಜಾತ್ರೆಯ ವೇಳೆಯಲ್ಲಿ ಆ ಹದ್ದಿನಿಂದ ನಾಯಕಿಯ ತುಂಬುಕುಟುಂಬವನ್ನು ರಕ್ಷಿಸುವುದರೊಂದಿಗೆ ನಾಯಕ ಅಕ್ಷರಶಃ ‘ಕಮರ್ಷಿಯಲ್ ಹೀರೊ’ ಆಗುತ್ತಾನೆ.

ಸಿನಿಮಾದ ಎಲ್ಲ ಪಾತ್ರಗಳೂ ನಾಯಕನನ್ನು ಅಡಿಗಡಿಗೂ ಕೊಂಡಾಡುತ್ತವೆ. ತಮ್ಮಂದಿರಂತೂ ಬಹುತೇಕ ಸಂಭಾಷಣೆಯನ್ನು ‘ಕೋರಸ್‌’ನಲ್ಲೇ ಒಪ್ಪಿಸುತ್ತಾರೆ. ಹೊಡೆದಾಟದ ನಡುವೆಯೂ ಸಂಭಾಷಣೆ ಹೇಳುವಷ್ಟು ವ್ಯವಧಾನ ಇರುವ ನಾಯಕ ಈತ. ಹೀಗಾಗಿ ಮನರಂಜನೆಯ ಬಗೆ ಬಗೆಯ ನಮೂನೆಗಳು ನೋಡುಗರಿಗೆ.

ದರ್ಶನ್ ಅಭಿನಯ ಸೂತ್ರಬದ್ಧ. ಹೊಡೆದಾಟದ ಸ್ಲೋಮೋಷನ್‌ಗಳಲ್ಲಿ ಅವರಿಗೆ ಶಿಳ್ಳೆ ಸಲ್ಲಲೂ ಅದೇ ಪ್ರೇರಣೆ. ಚಿಕ್ಕಣ್ಣ ಸಿನಿಮಾದ ಮೊದಲರ್ಧ ಆವರಿಸಿಕೊಳ್ಳುತ್ತಾರೆ. ಎರಡನೇ ಭಾಗದಲ್ಲಿ ಸಾಧು ಕೋಕಿಲಾ ಕಾಮಿಡಿ ಕಿಲಾಡಿಯಾಗಿ ಕುಲುಕಿಸುತ್ತಾರೆ. ಗರುಡನಂಥ ಮೂಗಿನ ನಾಯಕಿ ಸನಾ ತಿಮ್ಮಯ್ಯ ಅವರಿಂದ ಅಭಿನಯದ ಗಂಧ ಬಹು ದೂರ. ದೇವರಾಜ್ ಎಂದಿನಂತೆ ಗಂಭೀರ. ಕೃಷ್ಣಕುಮಾರ್ ಛಾಯಾಗ್ರಹಣ, ಹರಿಕೃಷ್ಣ ಹಿನ್ನೆಲೆ ಸಂಗೀತದ ಶ್ರಮದ ಕೆಲಸಕ್ಕೆ ದಟ್ಟ ಉದಾಹರಣೆಗಳುಂಟು.

ಐದು ವರ್ಷಗಳಷ್ಟು ಹಳೆಯ ‘ಟೆಂಪ್ಲೇಟ್‌’ನ ಸಿನಿಮಾಗಳೇ ಈಗಲೂ ಜನಪ್ರಿಯ ಹೌದಾ ಎಂಬ ಪ್ರಶ್ನೆ ಮಾತ್ರ ಸಿನಿಮಾ ಮುಗಿದ ಮೇಲೂ ಕಾಡುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT