ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಕ್ಸಟ್ಟೆ ಲೈಫಿ’ನಲ್ಲಿ ಬದುಕಿನ ಸಿದ್ಧಾಂತ

Last Updated 24 ಸೆಪ್ಟೆಂಬರ್ 2021, 13:32 IST
ಅಕ್ಷರ ಗಾತ್ರ
ಸಿನಿಮಾ: ಪುಕ್ಸಟ್ಟೆ ಲೈಫು
ನಿರ್ದೇಶನ: ಅರವಿಂದ್ ಕುಪ್ಳೀಕರ್
ನಿರ್ಮಾಪಕ: ನಾಗರಾಜ್ ಸೋಮಯಾಜಿ
ತಾರಾಗಣ: ಸಂಚಾರಿ ವಿಜಯ್, ಮಾತಂಗಿ ಪ್ರಸನ್ನ, ಅಚ್ಯುತ್‌ಕುಮಾರ್, ರಂಗಾಯಣ ರಘು
ಸಂಗೀತ: ವಾಸು ದೀಕ್ಷಿತ್, ಹಿನ್ನೆಲೆ ಸಂಗೀತ: ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ: ಅದ್ವೈತ್ ಗುರುಮೂರ್ತಿ
ಸಂಕಲನ: ಸುರೇಶ್ ಆರ್ಮುಗಂ

ಹುಟ್ಟಿದ ಮೇಲೆ ಹೇಗಾದರೂ ಬದುಕಲೇಬೇಕಾದದ್ದು ವಾಸ್ತವ ತತ್ವ. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ಎಂದು ಕನಕದಾಸರು ಹಾಡಿದರೆ, ‘ಕಳಬೇಡ, ಕೊಲಬೇಡ’ ಎಂದು ಬಸವಣ್ಣ ನುಡಿದರು. ಎರಡೂ ಸಾಲುಗಳಿಂದ ಸಮ್ಮಿಳಿತಗೊಂಡ ಬದುಕಿನ ಸಿದ್ಧಾಂತವನ್ನು ತಮ್ಮ ‘ಪುಕ್ಸಟ್ಟೆ ಲೈಫಿ’ನೊಳಗೆ ಪ್ರೇಕ್ಷಕರ ಮುಂದಿಟ್ಟವರು ನಿರ್ದೇಶಕ ಅರವಿಂದ್ ಕುಪ್ಳೀಕರ್.

ಬಹುಮುಖಿ ಸಮಾಜದ ಸಾಮಾನ್ಯರ ಬದುಕಿನ ಸುತ್ತ ಹೆಣಿದಿರುವ ಕಥೆಯಲ್ಲಿ, ವಾಸ್ತವದ ಬಿಂಬಗಳನ್ನು ನಿರ್ದೇಶಕರು ರಂಜನೀಯವಾಗಿಯೇ ತೆರೆದಿಟ್ಟಿದ್ದಾರೆ. ಬದುಕು ಮತ್ತು ವ್ಯವಸ್ಥೆಯನ್ನು ಪರಸ್ಪರ ಮುಖಾಮುಖಿಯಾಗಿಸುತ್ತಲೇ, ನಮ್ಮ ಅಕ್ಕಪಕ್ಕದಲ್ಲೇ ನಡೆಯುತ್ತಿರುವ ಘಟನೆ ಇದೇನೋ ಎಂಬ ಆಪ್ತತೆಯನ್ನು ಕಥೆಯುದ್ದಕ್ಕೂ ಕಟ್ಟಿ ಕೊಟ್ಟಿದ್ದಾರೆ.

ಭ್ರಷ್ಟ ವ್ಯವಸ್ಥೆಯ ಸುಳಿಗೆ ಅನಿವಾರ್ಯವಾಗಿ ಸಿಲುಕುವ ಬಡ ಯುವಕನ ಬದುಕಿನ ತೊಳಲಾಟ ಸಿನಿಮಾದ ಕಥಾವಸ್ತು. ತಿಳಿ ಹಾಸ್ಯ, ನವೀರು ಪ್ರೇಮ, ಕೌತುಕದ ಜೊತೆಗೆ ಭಾವುಕತೆಯ ಸ್ಪರ್ಶ ಇಲ್ಲಿದೆ. ಸಿನಿಮಾ ಮುಗಿಯುವವರೆಗೆ ಕುರ್ಚಿಯಿಂದ ಕದಲದಂತೆ ಮಾಡುವ ಲವಲವಿಕೆಯ ಗಟ್ಟಿ ನಿರೂಪಣೆ ಮೂಲಕ, ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಭರವಸೆ ಹುಟ್ಟಿಸಿದ್ದಾರೆ.

ನಕಲಿ ಕೀ ತಯಾರಿಸುವ ಬಡ ಶಹಜಹಾನ್ ಎಂಬ ಯುವಕನ ಪಾತ್ರವನ್ನು ಸಂಚಾರಿ ವಿಜಯ್ ಜೀವಿಸಿದ್ದಾರೆ. ತೆರೆ ಮೇಲೆ ಅವರ ಮನೋಜ್ಞ ನಟನೆಯನ್ನು ಕಣ್ತುಂಬಿಕೊಂಡವರಿಗೆ ವಿಜಯ್ ಈಗ ನಮ್ಮೊಂದಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗಬಹುದು. ಸಿನಿಮಾದ ಕೊನೆಯಲ್ಲೂ ಶಹಜಹಾನ್ ಇನ್ನಿಲ್ಲವಾಗುವುದು ಪ್ರೇಕ್ಷಕನಿಗೆ ಕಾಕತಾಳೀಯವೆನಿಸದೆ ಇರದು.

ವಕೀಲೆ ಶಾರದಾ (ಮಾತಂಗಿ ಪ್ರಸನ್ನ), ‘ಸಿಂಗಂ’ ಇನ್‌ಸ್ಪೆಕ್ಟರ್ ಬೋರೇಗೌಡ (ಅಚ್ಯುತ್‌ಕುಮಾರ), ಲಾಕಪ್ ಕಳ್ಳ ವಿನಯ್ ಮಲ್ಯ (ಅರವಿಂದ್ ಕುಪ್ಳೀಕರ್), ಅಯ್ಯಪ್ಪ ಮಾಲಾಧಾರಿ ತನಿಖಾಧಿಕಾರಿ (ರಂಗಾಯಣ ರಘು), ಹೆಡ್ ಕಾನ್‌ಸ್ಟೆಬಲ್ ದೊಡ್ಡಪ್ಪ, ಕಾನ್‌ಸ್ಟೆಬಲ್ ಪಾತ್ರಗಳು ನಾಯಕನ ಪಾತ್ರದಷ್ಟೇ ತೂಕವಾಗಿವೆ. ಎಲ್ಲರೂ ತಮ್ಮ ಪಾತ್ರಗಳನ್ನು ಅವಾಹಿಸಿಕೊಂಡು ನಟಿಸಿದ್ದಾರೆ.

ಹಾಡಾಗಿರುವ ಕನಕದಾಸರ ಕೀರ್ತನೆ, ಬಸವಣ್ಣನ ವಚನದ ಆಲಾಪ ಬದುಕಿನ ದರ್ಶನ ಮಾಡಿಸುವಂತಿವೆ. ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಹಾಗೂ ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಕಥೆಗೆ ಮೆರುಗು ತಂದಿದೆ. ಮಧ್ಯಮ ವರ್ಗದ ಬದುಕನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಜೊತೆಗೆ, ಕಥೆಗೆ ವ್ಯಾಲ್ಯೂ ಆ್ಯಡ್ ಎನಿಸುವಂತಹ ಛಾಯಾಗ್ರಹಣ ಅದ್ವೈತ್ ಗುರುಮೂರ್ತಿ ಅವರದು. ಯಾವುದೂ ಅತಿ–ಕಡಿಮೆ ಎನಿಸದಂತೆ ಸುರೇಶ್ ಆರ್ಮುಗಂ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT