ಭಾನುವಾರ, ಆಗಸ್ಟ್ 1, 2021
26 °C
ಸದ್ದು ಮಾಡುತ್ತಿದೆ ಅರಣ್ಯ ಇಲಾಖೆಯ ‘ಪರಿಸರ ಗೀತೆ’

ಟ್ರೆಂಡ್‌ ಆಯ್ತು ‘ಮನೆಗೊಂದು ಮರ, ಊರಿಗೊಂದು ವನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವ ಪರಿಸರ ದಿನದ ಅಂಗವಾಗಿ ಕರ್ನಾಟಕ ಅರಣ್ಯ ಇಲಾಖೆ ಜೂನ್‌ 5ರಂದು ತನ್ನ ಪೋರ್ಟಲ್‌ನಲ್ಲಿ ‘ಮನೆಗೊಂದು ಮರ, ಊರಿಗೊಂದ ವನ, ಬೆಳೆಸಿ ಬೆಳೆಸೋಣ’ ಎಂಬ ಪರಿಸರ ಗೀತೆ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಎರಡೇ ದಿನಗಳಲ್ಲಿ ಭಾರಿ ಜನಪ್ರಿಯಗಳಿಸಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಪರಿಸರ ಜಾಗೃತಿಯ ಈ ಹಾಡಿಗೆ ಬೆಂಗಳೂರಿನ ಜಾಲಹಳ್ಳಿಯ ಬಿಇಎಲ್‌ ಕಾಂಪೋಸಿಟ್‌ ಪಿಯು ಕಾಲೇಜಿನ ಎಲೆಕ್ಟ್ರಾನಿಕ್ಸ್‌ ವಿಭಾಗದ ಮುಖ್ಯಸ್ಥೆ ಗೀತಾ ಶಿಂಧೆ ಬೆಣಗಿ ಸಾಹಿತ್ಯ ರಚಿಸಿ, ರಾಗ ಸಂಯೋಜಿಸಿದ್ದಾರೆ. ಹಾಡನ್ನು ಸ್ವತಃ ಗೀತಾ, ಅವರ ಪುತ್ರಿ ಶ್ರದ್ಧಾ ಬೆಣಗಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿನಿಯರಾದ ಶಾಂತಲಾ ರಾವ್‌, ಸುಮ್ರಿತಾ ಡಿ. ಹಾಡಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಮತ್ತು ನೈತಿಕ ಮೌಲ್ಯಗಳನ್ನು ಬಿತ್ತುವ ಉದ್ದೇಶದಿಂದ ಬರೆಯಲಾಗಿದ್ದ ಈ ಹಾಡು ಸಮುದಾಯಕ್ಕೆ ತಲುಪಿದರೆ ಹೇಗೆ ಎಂಬ ಯೋಚನೆಯ ಫಲವಾಗಿ ಹುಟ್ಟಿಕೊಂಡಿದ್ದೆ ಈ ಹಾಡು. 

ಆರ್ಕ್‌ ಇನ್ ಸ್ಟುಡಿಯೊ ಮತ್ತು ಲೈಟ್‌ ಹೌಸ್ ಮೀಡಿಯಾದಲ್ಲಿ ಹಾಡು ರೆಕಾರ್ಡಿಂಗ್ ಆಯಿತು. ಅರಣ್ಯ ಇಲಾಖೆ ಹಾಡನ್ನು ಮೆಚ್ಚಿ ತನ್ನ ಪೋರ್ಟಲ್‌ನಲ್ಲಿ ಬಿಡುಗಡೆ ಮಾಡಿದ್ದು, ಎರಡೇ ದಿನಗಳಲ್ಲಿ ಭಾರಿ ಜನಪ್ರಿಯವಾಗಿದೆ. 

ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಮತ್ತು ಸೋಷಿಯಲ್‌ ಮೀಡಿಯಾ ಈಗ ಹೆಚ್ಚು ಜನಪ್ರಿಯ ಮಾಧ್ಯಮವಾಗು ತ್ತಿವೆ. ಹೊಸ ಟ್ರೆಂಡ್‌ ಹುಟ್ಟು ಹಾಕುತ್ತಿವೆ. ಸರ್ಕಾರಿ ಶಾಲೆಯ ಮಕ್ಕಳ ನಡುವೆ ಕಳೆದು ಹೋಗಬೇಕಿದ್ದ ಹಾಡು ಈಗ ಟ್ರೆಂಡ್‌ ಸೃಷ್ಟಿಸಿದೆ ಎಂದು ಗೀತಾ ಖುಷಿಯನ್ನು ಹಂಚಿಕೊಂಡರು.

ಲಾಕ್‌ಡೌನ್‌ನಲ್ಲಿ ಗೀತೆ ರಚನೆ

ಗೀತಾ ಅವರು ಲಾಕ್‌ಡೌನ್ ಸಮಯದಲ್ಲಿ ಹಸಿ ಮತ್ತು ಒಣ ಕಸ ವಿಂಗಡನೆ ಮತ್ತು ವಿಲೇವಾರಿ, ಸ್ವಚ್ಛ ಮಾಡುವ ಶಾಲೆ ಸ್ವಚ್ಛ ಮಾಡುವ, ಊರು ಸ್ವಚ್ಛ ಮಾಡುವ ದೇಶ ಸ್ವಚ್ಛ ಮಾಡುವ..ಹಾಡು ಸೇರಿದಂತೆ ಉತ್ತಮ ಸಂದೇಶ ಸಾರುವ ಒಟ್ಟು ಆರು ಹಾಡುಗಳನ್ನು ಬರೆದಿದ್ದಾರೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗಾಗಿ ಎಲೆಕ್ಟ್ರಾನಿಕ್ ರ‍್ಯಾಪ್‌‌ ಸಾಂಗ್‌ ರೆಕಾರ್ಡಿಂಗ್‌ ಆಗಿದೆ. ಇನ್ನು 10 ದಿನಗಳಲ್ಲಿ ಇದು ಬಿಡುಗಡೆಯಾಗಲಿದೆ ಎಂದರು. 

‘ಸಾಂಪ್ರದಾಯಿಕ ಕಲಿಕಾ ವಿಧಾನದ ಬದಲು ಹಾಡು, ನೃತ್ಯಗಳಂತಹ ಸೃಜನಾತ್ಮಕ ಮಾರ್ಗಗಳ ಮೂಲಕ ಮಕ್ಕಳು ಬೇಗ ಕಲಿಯುತ್ತಾರೆ’ ಎನ್ನುವುದು ಗೀತಾ ತಮ್ಮ ಹಲವು ವರ್ಷಗಳ ಅನುಭವದಿಂದ ಕಂಡುಕೊಂಡ ಸತ್ಯ.

ಟ್ರೆಂಡ್ ಸೃಷ್ಟಿಸಿದ ಹಾಡುಗಳು 

ಬೋಧನೆ ಜತೆಗೆ ವಿಮೋವ್‌ ಎನ್‌ಜಿಒ, ಬಿಇಎಲ್ ಸಂಸ್ಥೆ ಮತ್ತು ಉತ್ತರ ಕರ್ನಾಟಕ ಬಳಗ ಸೇರಿದಂತೆ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಗೀತಾ ತೊಡಗಿಸಿಕೊಂಡಿದ್ದಾರೆ.

ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಕಿಸಿಕೊಡಲು ರೂಪದರ್ಶಿಗಳಿಗೆ ಇಳಕಲ್‌ ಸೀರೆ ಮತ್ತು ಗುಳೇದಗುಡ್ಡದ ಕಣ ತೊಡಿಸಿ ರ‍್ಯಾಂಪ್‌ ವಾಕ್‌ ಮಾಡಿಸಿದ್ದರು. ಈ ಮೊದಲು ಗ್ರಾಮಸ್ಫೂರ್ತಿ, ಕೌದಿ, ಬೆಳಕು ಭಾವಗೀತೆ ಕೂಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಟ್ರೆಂಡ್‌ ಸೃಷ್ಟಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು