ಗುರುವಾರ , ಏಪ್ರಿಲ್ 9, 2020
19 °C

‘ಮನೆ ಪಾರ್ಟಿ’ ಈಗ ಟ್ರೆಂಡ್‌!

ರಜಿತಾ ಮೆನನ್‌ Updated:

ಅಕ್ಷರ ಗಾತ್ರ : | |

Prajavani

ಈಗ ನಗರದಲ್ಲಿ ‘ಮನೆ ಪಾರ್ಟಿ’ ಪರಿಕಲ್ಪನೆ ಹೆಚ್ಚಾಗುತ್ತಿದ್ದು, ಇದರಿಂದ ಅನೇಕ ಅನುಕೂಲಗಳೂ ಇವೆ ಎಂಬುದು ಪಾರ್ಟಿಪ್ರಿಯರ ಅಂಬೋಣ.

ಈಗ ನಗರದಲ್ಲಿ ಹೆಚ್ಚು ಹೆಚ್ಚು ಯುವಜನರು ಪಬ್‌ ಸಂಸ್ಕೃತಿಯಿಂದ ವಿಮುಖರಾಗಿದ್ದು, ಮನೆಯಲ್ಲಿಯೇ ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದು ಹೆಚ್ಚಾಗುತ್ತಿದೆ. ಪಬ್‌ಗಳಲ್ಲಿ ಲೈವ್‌ ಸಂಗೀತ ಕಾರ್ಯಕ್ರಮಗಳ ನಿಷೇಧ, ಪಾನೀಯ ಹಾಗೂ ಆಹಾರಗಳ ಬೆಲೆ ತೀರಾ ಹೆಚ್ಚಳ... ಇದಕ್ಕೆ ಕೆಲ ಕಾರಣಗಳು ಎನ್ನಲಾಗಿದೆ.

ಕಮ್ಯುನಿಕೇಶನ್ಸ್‌ ಉದ್ಯೋಗಿ ವಿಶಾಲ್‌ ಮುಧೋಳ್ಕರ್‌ ಅವರು ತಿಂಗಳಿಗೆ ಕನಿಷ್ಟ ಮೂರು ಬಾರಿಯಾದರೂ ಮನೆ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಪಾರ್ಟಿಗಳು ಬಹುತೇಕ ವಾರಾಂತ್ಯಗಳಲ್ಲಿ ನಡೆಯುತ್ತವೆ ಇಲ್ಲವೇ ಸಾಂದರ್ಭಿಕವಾಗಿ ಇವುಗಳನ್ನು ಆಯೋಜನೆ ಮಾಡಲಾಗಿರುತ್ತದೆ.

‘ಪಬ್‌ನಲ್ಲಿ ಅಥವಾ ಹೊರಗಿನ ಸ್ಥಳಗಳಲ್ಲಿ ಆಯೋಜನೆ ಮಾಡಿರುವ ಪಾರ್ಟಿಗಳಿಗೆ ಏಕಾಂಗಿಯಾಗಿ ಹೋದಾಗ ಅವು ತೀರಾ ವೆಚ್ಚದಾಯಕವಾಗಿರುತ್ತದೆ. ಆದರೆ ಮನೆಯಲ್ಲಿ ನಡೆಯುವ ಪಾರ್ಟಿಗಳು ಸುರಕ್ಷಿತವೂ, ಕಡಿಮೆ ವೆಚ್ಚದಾಯಕವೂ ಆಗಿರುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಪಬ್‌ಗಳಲ್ಲಿ ಜಗಳ, ಹೊಡೆದಾಟ ನಡೆಯುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಈಗ ಸ್ನೇಹಿತರ ಮನೆಯಲ್ಲಿ ಹಾಗೂ ನನ್ನ ಮನೆಯಲ್ಲಿ ಪಾರ್ಟಿ ಮಾಡುತ್ತೇವೆ. ಇಲ್ಲದಿದ್ದರೆ ಬಾಡಿಗೆ ಮನೆಗಳನ್ನು ಪಡೆದು ಅಲ್ಲಿ ಪಾರ್ಟಿ ಮಾಡಿ ಎಂಜಾಯ್‌ ಮಾಡುತ್ತೇವೆ’ ಎನ್ನುವುದು ವಿಶಾಲ್‌ ಅನುಭವ.

ಸಂಗೀತದ ಅಬ್ಬರ, ನೆರೆಹೊರೆಯವರ ದೂರು

‘ಮನೆಯಲ್ಲಿ ಪಾರ್ಟಿ ಮಾಡುವಾಗ ಕೆಲವೊಮ್ಮೆ ನೆರೆಹೊರೆಯವರ ಅನುಮತಿ ಪಡೆಯುತ್ತೇವೆ ಅಥವಾ ಅವರಿಗೆ ಮೊದಲೇ ಹೇಳಿರುತ್ತೇವೆ. ಒಂದು ವೇಳೆ ಅವರು ದೂರು ನೀಡಿದರೆ ನಾವು ಕ್ಷಮೆ ಕೇಳಿ, ಸಂಗೀತದ ಧ್ವನಿಯನ್ನು ಕಡಿಮೆ ಮಾಡುತ್ತೇವೆ’ ಎನ್ನುತ್ತಾರೆ ವಿಶಾಲ್‌.

‘ಮನೆ ಪಾರ್ಟಿ ಲಾಭದಾಯಕ ಹಾಗೂ ಅನುಕೂಲಕರ’ ಎಂಬುದು ಮತ್ತೊಬ್ಬ ಉದ್ಯೋಗಿ ಸ್ನೇಹಾ ಚಕ್ರವರ್ತಿಯ ಅಭಿಪ್ರಾಯ.

‘ಮನೆಪಾರ್ಟಿಯಲ್ಲಿ ಯಾವ ಬಗೆಯ ಡ್ರೆಸ್‌ ತೊಟ್ಟುಕೊಳ್ಳಲಿ ಎಂದು ಚಿಂತೆ ಮಾಡಬೇಕಿಲ್ಲ. ಏಕೆಂದರೆ ಎಲ್ಲರೂ ಒಬ್ಬರಿಗೊಬ್ಬರು ಪರಿಚಿತರೇ ಇರುತ್ತಾರೆ. ಒಬ್ಬೊಬ್ಬರ ಆಸಕ್ತಿಗನುಗುಣವಾಗಿ ಆಹಾರ ತಯಾರಿ ಮಾಡಿಕೊಳ್ಳಬಹುದು. ಮದ್ಯ ಸೇವನೆ ಮಾಡಬೇಕೇ ಬೇಡವೇ, ಮಾಡಿದರೆ ವಾಪಸ್‌ ಮನೆಗೆ ಹೋಗುವುದು ಹೇಗೆ ಎಂಬ ಬಗ್ಗೆ ಇಲ್ಲಿ ಚಿಂತಿಸಬೇಕಾಗಿಲ್ಲ’ ಎಂದು ಅನುಕೂಲತೆಗಳ ಪಟ್ಟಿ ಸಿದ್ಧಮಾಡುತ್ತಾರೆ.

ಫೋನ್‌ ನಿಷೇಧ

ಇಂತಹ ಪಾರ್ಟಿಗಳಲ್ಲಿ ನಮ್ಮ ಅಡುಗೆ ಕೌಶಲವನ್ನು ಸ್ನೇಹಿತರಿಗೆ ತೋರಿಸಬಹುದು. ಕಾರ್ಡ್‌ ಆಡುತ್ತಾ ಸ್ನೇಹಿತರ ಜೊತೆ ಕಾಲ ಕಳೆಯಬಹುದು. ‘ರುಚಿಯಾದ ಆಹಾರ ಹಾಗೂ ಸಂಗೀತ, ಪಾರ್ಟಿಯಲ್ಲಿ ಇದ್ದೇ ಇರಬೇಕು. ನಮ್ಮ ಪಾರ್ಟಿಗಳಲ್ಲಿ ಹೆಚ್ಚಾಗಿ ಮೊಬೈಲ್‌ ಫೋನ್‌ಗಳು ನಿಷೇಧವಾಗಿರುತ್ತದೆ’ ಎಂದು ಪಬ್ಲಿಕ್‌ ರಿಲೇಶನ್‌ ಉದ್ಯೋಗಿ ಸ್ನೇಹಾ ಜೇಮ್ಸ್‌ ಹೇಳುತ್ತಾರೆ.

ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಶ್ರೀಜಾ ಶ್ರೀಧರನ್‌ ಅವರಿಗೂ ಹೊರಗಿನ ಪಾರ್ಟಿಗಳೆಂದರೆ ಅಲರ್ಜಿ. ಮನೆಗಳಲ್ಲಿ ಪಾರ್ಟಿ ಮಾಡುವುದನ್ನು ಇಷ್ಟಪಡುತ್ತಾರೆ. ಮನೆ ಪಾರ್ಟಿಗಳಲ್ಲೂ ಸವಾಲುಗಳಿವೆ, ತೊಂದರೆಗಳಿವೆ ಎಂದು ಸೂಚ್ಯವಾಗಿ ನುಡಿಯುತ್ತಾರೆ.

‘ಇಂತಹ ಪಾರ್ಟಿಗಳನ್ನು ಆಯೋಜಿಸುವಾಗ ಸುತ್ತಲ ಪರಿಸರ ಮುಖ್ಯವಾಗುತ್ತದೆ. ನಾವು ಎಂತಹ ಸ್ಥಳದಲ್ಲಿದ್ದೇವೆ, ಪಾರ್ಟಿಗಳಿಂದ ನೆರೆಹೊರೆಯವರಿಗೆ ತೊಂದರೆಯಾಗುವುದಿಲ್ಲವೇ ಅಥವಾ ಸಂಗೀತ ಹಾಕಿದರೆ ಅವರಿಗೆ ಕಿರಿಯಾಗುತ್ತದೆಯೇ ಎಂದು ತಿಳಿದುಕೊಳ್ಳಬೇಕು. ಪಾರ್ಟಿಗಳಿಗೆ ಬರುವ ಅತಿಥಿಗಳು ಎಷ್ಟು ಮದ್ಯ ಸೇವನೆ ಮಾಡಬಹುದು ಎಂದು ಗೊತ್ತಿರುವುದಿಲ್ಲ. ಬಾರ್‌ ಅಥವಾ ಪಬ್‌ನಲ್ಲಿ ಹೆಚ್ಚು ಕುಡಿದಾಗ ಅಂತಹವರನ್ನು ಅವರೇ ಹೊರಗೇ ಕಳುಹಿಸುತ್ತಾರೆ. ಆದರೆ ಮನೆಗಳಲ್ಲಿ ನಾವೇ ಸ್ವಚ್ಛಮಾಡಬೇಕಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ಬರುವ ಅತಿಥಿಗಳು ಹೇಳದೇ ಕೇಳದೇ ತಮ್ಮೊಟ್ಟಿಗೆ ಮತ್ತೊಬ್ಬರನ್ನು ಕರೆದುಕೊಂಡು ಬರುವುದು ಮತ್ತೊಂದು ಬಗೆಯ ಸವಾಲು’ ಎನ್ನುತ್ತಾರೆ ಶ್ರೀಜಾ. ‘ಅಂತಹ ಸವಾಲು ಇಲ್ಲಿತನಕ ನನಗೆ ಎದುರಾಗಿಲ್ಲ’ ಎಂಬ ಸಮಾಧಾನ ಅವರದು. ಶ್ರೀಜಾ ಮನೆಯಲ್ಲಿ ನಾಯಿಗಳಿವೆ. ಪಾರ್ಟಿ ಸಂದರ್ಭದಲ್ಲಿ ಅತಿಥಿಗಳಿಗೆ ಕಿರಿಕಿರಿಯಾಗಬಾರದೆಂದು ಅವರು ಅದನ್ನು ಮನೆಯಿಂದ ಹೊರಗೆ ಕಟ್ಟುತ್ತಾರಂತೆ. ಪಾರ್ಟಿ ಮೆನು ಬಗ್ಗೆ ಅತಿಥಿಗಳಿಗೆ ಮೊದಲೇ ಅವರು ತಿಳಿಸಿರುತ್ತಾರೆ.

ಸಣ್ಣ ಮಕ್ಕಳ ತಂದೆತಾಯಿಯರಿಗೆ ಮನೆ ಪಾರ್ಟಿಗಳೇ ಸೂಕ್ತ. ಸುಲಭವಾಗಿ ಮಕ್ಕಳ ಊಟ, ನಿದ್ದೆ ಕಡೆಗೆ ಗಮನ ಹರಿಸಬಹುದು.

ಕಿರಿಕಿರಿ, ಒತ್ತಡ

ಪ್ರಯಾಣದ ಒತ್ತಡ ಹಾಗೂ ಶಬ್ದ ಕಿರಿಕಿರಿಗಳೇ ಮನಸ್ಸಿನ ಒತ್ತಡವನ್ನು ಹೆಚ್ಚು ಮಾಡುತ್ತವೆ. ಹಾಗಾಗಿ ಮನಸ್ಸು ಒತ್ತಡದಲ್ಲಿದ್ದಾಗ ಶಾಂತ ಸ್ಥಳವನ್ನು ಬಯಸುತ್ತದೆ. ಹಾಗಾಗಿ ಈಗ ಮನೆಪಾರ್ಟಿಗಳಲ್ಲಿ ಭಾಗವಹಿಸಲು ಜನ ಇಷ್ಟಪಡುತ್ತಾರೆ ಎಂದು ಮನೋವೈದ್ಯೆ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯ ಡಾ. ಸುಮಲತಾ ಹೇಳುತ್ತಾರೆ.

ಜನರು ಒತ್ತಡದಲ್ಲಿದ್ದಾಗ ಹೆಚ್ಚು ಸದ್ದಿರುವ ಸ್ಥಳಕ್ಕೆ ಹೋಗಲು ಇಷ್ಟಪಡುವುದಿಲ್ಲ. ಶಬ್ದ ಕಿರಿಕಿರಿಯು ಯಾವಾಗಲೂ ನಮ್ಮಲ್ಲಿ ನಕಾರಾತ್ಮಕ ಭಾವನೆಗಳನ್ನು ಉದ್ದೀಪಿಸುತ್ತದೆ. ಹೆಚ್ಚಿನ ಸ್ವರವು ಕಿರಿಕಿರಿ, ಯಾತನೆ, ಬಳಲಿಕೆಯನ್ನು ಹೆಚ್ಚು ಮಾಡುವುದರಿಂದ ಅಂತಹ ಸ್ಥಳದಿಂದ ತಪ್ಪಿಸಿಕೊಳ್ಳಲು ಜನರು ಇಷ್ಟಪಡುತ್ತಾರೆ ಎಂದು ಅವರು ಕಾರಣಗಳನ್ನು ವಿವರಿಸುತ್ತಾರೆ.

ಪಬ್‌, ರೆಸ್ಟೊರೆಂಟ್‌ಗಳಿಂದಲೂ ಮೆನು

ಈಗ ಹೌಸ್‌ ಪಾರ್ಟಿ ಟ್ರೆಂಡ್‌ ಆಗುತ್ತಿರುವುದರಿಂದ ನಗರದ ಅನೇಕ ಪಬ್‌ಗಳು ಹಾಗೂ ರೆಸ್ಟೊರೆಂಟ್‌ಗಳು ಹೌಸ್‌ ಪಾರ್ಟಿ ಮೆನುಗಳನ್ನು ಸಿದ್ಧಪಡಿಸುವಂತಹ ತಂತ್ರಗಳನ್ನು ಬಳಸುತ್ತಿವೆ. ಮನೆಪಾರ್ಟಿಗಳು ಈಗ ಗ್ಲೋಬಲ್‌ ಟ್ರೆಂಡ್‌ ಆಗುತ್ತಿವೆ ಎಂದು ಇಂಪ್ರೆಸರಿಯೊ ಎಂಟರ್‌ಟೇನ್‌ಮೆಂಟ್‌ ಅಂಡ್‌ ಹಾಸ್ಪಿಟಾಲಿಟಿ ಬುಸಿನೆಸ್‌ ಮುಖ್ಯಸ್ಥ ರಣವೀರ್‌ ಸಭಾನಿ ಗುರುತಿಸುತ್ತಾರೆ.

‘ಈಗ ಹೆಚ್ಚು ಹೆಚ್ಚು ಜನರು ಮನೆಯಲ್ಲಿಯೇ ನೆಟ್‌ಫ್ಲಿಕ್ಸ್‌ಗಳಲ್ಲಿ ಸಿನಿಮಾ ನೋಡಿಕೊಂಡು ಒಟ್ಟಿಗೆ ಕುಳಿತು ಊಟ ಮಾಡಲು ಇಷ್ಟಪಡುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.

ಇಂಪ್ರೆಸರಿಯೊ ನಗರದಲ್ಲಿ ಅನೇಕ ಪಬ್‌ಗಳನ್ನು ಹೊಂದಿದೆ. ಈಗ ಜನರು ಕಿಲೋ ಲೆಕ್ಕದಲ್ಲಿ ಆಹಾರ ಆರ್ಡರ್‌ ಮಾಡಿ ಮನೆಗೆ ತೆಗೆದುಕೊಂಡು ಹೋಗುತ್ತಾರಂತೆ. ‘500 ಗ್ರಾಂ, 750 ಗ್ರಾಂ ಅಥವಾ 1 ಕೆ.ಜಿ ಫುಡ್‌ ಪ್ಯಾಕ್‌ ಮಾಡಿಕೊಳ್ಳುತ್ತಾರೆ. ಆಂಧ್ರ ಮಟನ್‌ ಬಿರಿಯಾನಿಗೆ ಹೆಚ್ಚು ಬೇಡಿಕೆ’ ಎಂಬುದು ಅವರ ಅಭಿಪ್ರಾಯ.

‘ಮನೆ ಪಾರ್ಟಿಗೆ ಮ್ಯಾರಿನೇಟೆಡ್‌ ಐಟಂಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅಂತಹ ಪದಾರ್ಥಗಳು ನಮ್ಮಲ್ಲಿ ಜಾಸ್ತಿ ಇವೆ. ಅವರು ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಕರಿದರೆ ಆಯಿತು’ ಎನ್ನುತ್ತಾರೆ ಸ್ಮೂರ್‌ ಲಾಂಜ್‌ನ ಕಾಂಚನ್‌ ಅಚ್ಪಾಲ್‌.

ಮನೆ ಪಾರ್ಟಿ ಹೆಚ್ಚಾಗಲು ಕಾರಣ

*ಹಣ ಉಳಿತಾಯ: ಡ್ರಿಂಕ್ಸ್‌ ಹಾಗೂ ಸ್ನ್ಯಾಕ್ಸ್‌, ಕ್ಯಾಬ್‌ ದರ ಉಳಿತಾಯ. ಶೇಕಡ 28ರಷ್ಟು ಜಿಎಸ್‌ ಟಿ ಹಾಗೂ ಟಿಪ್ಸ್‌ ನೀಡಬೇಕು. ಫೈವ್‌ ಸ್ಟಾರ್‌ ರೆಸ್ಟೊರೆಂಟ್‌ಗಳಲ್ಲಿ ಶೇಕಡ 28ರಷ್ಟು ಜಿಎಸ್‌ಟಿ, ಎ.ಸಿ ಚಾರ್ಜ್‌ ನೀಡಬೇಕು

*ಮನೆ ಪಾರ್ಟಿಯಲ್ಲಿ ಇಷ್ಟದ ಸಂಗೀತ ಕೇಳಬಹುದು. ಪಬ್‌, ರೆಸ್ಟೊರೆಂಟ್‌ಗಳಲ್ಲಿ ಡಿಜೆ ಹಾಕಿದ ಸಂಗೀತವನ್ನೇ ಕೇಳಬೇಕಾಗುತ್ತದೆ.

*ಶಾಂತ ವಾತಾವರಣ:  ಮನೆ ಪಾರ್ಟಿಯಲ್ಲಿ ಸ್ನೇಹಿತರ ಜೊತೆ ಮಾತನಾಡುತ್ತಾ ಕಾಲ ಕಳೆಯಬಹುದು. ಗಾಸಿಪ್‌ ಮಾತನಾಡಬಹುದು. ಆದರೆ ಪಬ್‌ಗಳಲ್ಲಿ ಮಾತೇ ಕೇಳದಷ್ಟು ಜೋರಾಗಿ ಹಾಡು ಹಾಕಿರುತ್ತಾರೆ.

*ಸಮಯದ ನಿರ್ಬಂಧ ಇಲ್ಲ: ನೆರೆಹೊರೆಯವರಿಗೆ ತೊಂದರೆಯಾಗದಿದ್ದಲ್ಲಿ ಎಷ್ಟು ಸಮಯ ಬೇಕಾದರೂ ಮನೆಪಾರ್ಟಿ ಮಾಡಬಹುದು.

*ವಾಹನ ಚಲಾಯಿಸುವ ಟೆನ್ಶನ್‌ ಇಲ್ಲ: ಮದ್ಯ ಸೇವನೆ ಜಾಸ್ತಿ ಮಾಡಿದ್ದರೆ ಮತ್ತೊಬ್ಬ ಚಾಲಕನನ್ನು ಹುಡುಕಬೇಕಿಲ್ಲ. ಗೆಳೆಯರ ಮನೆಯಲ್ಲಿ ಉಳಿದುಕೊಂಡು ಬೆಳಿಗ್ಗೆ ಹೋಗಬಹುದು.

ಹಣ ಉಳಿತಾಯ

ಪಬ್‌ ಪಾರ್ಟಿಗಳಿಗೆ ₹20,000 ಹಣ ಖರ್ಚಾದರೆ ಮನೆ ಪಾರ್ಟಿಗೆ ₹6– 8 ಸಾವಿರ ಸಾಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು