ಸೋಮವಾರ, ಜನವರಿ 20, 2020
18 °C

ದಿಲ್‌ ಢೂಂಡ್ತಾ ಹೈ ಫಿರ್‌ ವಹೀ.. ‘ಶಾಯರಾನ’ ಸಂಗೀತ ಸಂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಂದು ಇಳಿ ಸಂಜೆಯಲ್ಲಿ ಶಾಹಿರಿ; ಗಜಲ್‌ಗಳನ್ನು ಕೇಳುತ್ತಾ ಮೈಮರೆಯುವುದು ಎಷ್ಟು ಚಂದ! ಅಂಥದೊಂದು ಅನುಭವ ಕಟ್ಟಿಕೊಡುವ ಆಲೋಚನೆಯೊಂದಿಗೆ ಇಲ್ಲೊಂದು ‘ಶಾಯರಾನ’ ಎನ್ನುವ ಹೊಸ ತಂಡ ಶನಿವಾರ (ಜ 11) ಸಂಗೀತ ಸಂಜೆ ಆಯೋಜಿಸಿದೆ.

ಸಾಹಿತ್ಯ–ಸಂಗೀತದ ರಸಾನುಭವ ಕಟ್ಟಿಕೊಡುವ ಹಂಬಲದ ‘ಶಾಯರಾನ’ ತಂಡ ಪ್ರತಿ ತಿಂಗಳು ಪ್ರಸಿದ್ಧ ಸಾಹಿತಿಗಳ ಹಾಗೂ ಗೀತೆ ರಚನೆಕಾರರ ಹಾಡುಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಅದರ ಮೊದಲ ಪ್ರಯತ್ನವೇ ‘ದಿಲ್‌ ಢೂಂಡ್ತಾ ಹೈ ಫಿರ್‌ ವಹೀ..’ ಎನ್ನುವ ಸಂಗೀತ ಸಂಜೆ. ಬಾಲಿವುಡ್‌ನ ಹೆಸರಾಂತ ಗೀತ ರಚನಾಕಾರ ಗುಲ್ಜಾರ್‌ ಅವರ ಗೀತೆಗಳನ್ನು ಸಂಭ್ರಮಿಸುವ, ಸವಿಯುವ ವಿನೂತನ ಕಾರ್ಯಕ್ರಮ ಇದಾಗಿದೆ ಎನ್ನುತ್ತಾರೆ ‘ಶಾಯರಾನ’ ತಂಡದ ರಾಮಚಂದ್ರ ಹಡಪದ್‌.

ರಂಗಭೂಮಿ, ಸಿನಿಮಾ ರಂಗದಲ್ಲಿ ತಮ್ಮ ಗಾಯನದ ಮೂಲಕ ಹೆಸರಾದ ಗಾಯಕ ರಾಮಚಂದ್ರ ಹಡಪದ್ ಅವರು ಗುಲ್ಜಾರ್‌ ಬರೆದ ಗೀತೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ‘ಶಾಯರಾನ’ ತಂಡದಲ್ಲಿ ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಒಲವಿರುವ ಹಲವು ಸಮಾನ ಮನಸ್ಕರಿದ್ದಾರೆ. ಇಂದಿಗೆ ತಂಡದಲ್ಲಿ ಒಟ್ಟು 110 ಜನರಿದ್ದಾರೆ. ಇವರೆಲ್ಲ ಸ್ವಂತ ಹಣ ಹಾಕಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.

‘ಈ ಕಾರ್ಯಕ್ರಮದಿಂದ ಯಾವುದೇ ಆರ್ಥಿಕ ಸಹಾಯ ನಾವು ಬಯಸಿಲ್ಲ. ನಮಗಿರುವ ಸಂಗೀತಾಸಕ್ತಿ ಅಭಿವ್ಯಕ್ತಿಗೆ ಈ ಕಾರ್ಯಕ್ರಮ ಮಾಡುತ್ತಿದ್ದೇವೆ’ ಎನ್ನುತ್ತಾರೆ ರಾಮಚಂದ್ರ ಹಡಪದ್.

ಪ್ರತಿ ತಿಂಗಳು ಒಂದೊಂದು ವಿಶೇಷ ಥೀಮ್‌ನೊಂದಿಗೆ ಗಾಯನ ಕಾರ್ಯಕ್ರಮವಿರುತ್ತದೆ. ಗೀತೆರಚನೆಕಾರರು, ನಾಯಕ, ನಾಯಕಿಯರ ಸಿನಿಮಾ ಗೀತೆ, ರಂಗಗೀತೆ, ಜನಪದಗೀತೆಗಳ ಗಾಯನವಿರುತ್ತದೆ. ಈ ಮೊದಲ ಯತ್ನದಲ್ಲಿ ‘ದಿಲ್‌ ಢೂಂಡ್ತಾ ಹೈ ಫಿರ್‌ ವಹೀ..’ ಎಂಬ ಗುಲ್ಜಾರ್‌ ಅವರ ಗೀತೆಗಳ ಗಾಯನ ಕಾರ್ಯಕ್ರಮವಿದೆ. ಗೀತೆಗಳ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಆಶಾ ಅವರು ನೀಡಲಿದ್ದಾರೆ. ಒಟ್ಟು ಮೂರು ಗಂಟೆ ಕಾರ್ಯಕ್ರಮವಿದು.

ಆರ್‌.ಡಿ. ಬರ್ಮನ್, ಖಯ್ಯಾಂ ಸಾಬ್ ಹಾಗೂ ಇತರರು ಈಗಾಲೇ ಸಂಗೀತ ಸಂಯೋಜನೆ ಮಾಡಿರುವ ಗುಲ್ಜಾರ್‌ ಅವರ ಹಳೆಯ ಹಾಡುಗಳನ್ನು ಮತ್ತಷ್ಟು ಚಂದವಾಗಿಸಿ ಈ ತಿಂಗಳ ಕಾರ್ಯಕ್ರಮದಲ್ಲಿ ಹಾಡುವ ಪ್ರಯತ್ನ ಮಾಡುತ್ತೇವೆ ಎಂದು ಹಡಪದ್ ವಿವರಿಸಿದರು.

ರಾಮಚಂದ್ರ ಹಡಪದ್ ಅವರೊಂದಿಗೆ ಗಾಯನದಲ್ಲಿ ಶ್ರುತಿ ವಿ.ಎಸ್. ಹಾಗೂ ಪ್ರತಿಭಾ ಕುಲಕರ್ಣಿ, ರಂಜನ್‌ ಕುಮಾರ್ (ಪೀಟಿಲು), ಜಲೀಲ್‌ ಪಾಶಾ (ತಬಲಾ), ಪ್ರಫುಲ್‌ (ಕೊಳಲು), ಶ್ರೀನಿವಾಸ್‌ (ಕೀಬೋರ್ಡ್‌), ಶಿವಮೊಲ್ಲು (ಢೋಲಕ್), ಕುಟ್ಟಿ (ರಿದಂ ಪ್ಯಾಡ್‌) ಸಾಥ್ ನೀಡಲಿದ್ದಾರೆ.

ಫೇಸ್‌ಬುಕ್ ಕವಿಗಳೂ ಇದ್ದಾರೆ: ಮುಂದಿನ ದಿನಗಳಲ್ಲಿ ಕನ್ನಡದ ಯುವ ಫೇಸ್‌ಬುಕ್‌ ಕವಿಗಳ ಆಯ್ದ ಕವನಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡುವ ಪ್ರಯತ್ನ ತಂಡದ್ದು. ‘ಹೊಸತಲೆಮಾರಿನ ಕವಿಗಳಿಗೂ ಸೂಕ್ತ ವೇದಿಕೆ ಸೃಷ್ಟಿಸುವುದು ನಮ್ಮ ಮತ್ತೊಂದು ಉದ್ದೇಶ’ ಎನ್ನುತ್ತಾರೆ ರಾಮಚಂದ್ರ ಹಡಪದ್.

‘ನಗರ ಬದುಕಿನ ಅವಸರಗಳ ನಡುವೆ ಸಂಗೀತ ಆಸ್ವಾದಕ್ಕೆ ಸಮಯ, ದಿನವನ್ನು ಹೊಂಚು ಹಾಕುವ ಕೆಲಸವನ್ನು ‘ಶಾಯರಾನ’ ತಂಡ ಮಾಡುತ್ತಿದೆ. ‘ಶಾಯರಾನ’ ಮುಖ್ಯ ಉದ್ದೇಶ ಸಂಗೀತ ಹಾಗೂ ಗೀತೆಗಾಯನದ ಸಂಸ್ಕೃತಿಯನ್ನು ಬೆಳೆಸುವುದು’ ಎನ್ನುತ್ತಾರೆ ‘ಶಾಯರಾನ’ ತಂಡದ ಸಂಧ್ಯಾರಾಣಿ. 

ಗುಲ್ಜಾರ್‌ ಅವರ 10ರಿಂದ 15 ಗೀತೆಗಳನ್ನು ಆಯ್ದು, ಕವಿತಾವಾಚನ ಹಾಗೂ ಕವಿ ಪರಿಚಯದ ಜೊತೆ ಹಾಡುವುದು ಈ ಕಾರ್ಯಕ್ರಮದ ವಿಶೇಷ.‌


ಕವಿ ಗುಲ್ಜಾರ್‌

‘ದಿಲ್‌ ಢೂಂಡ್ತಾ ಹೈ ಫಿರ್‌ ವಹೀ’ ಕವಿ ಗುಲ್ಜಾರ್ ಗೀತಗಾಯನ: ಸ್ಥಳ– ಡಾ ಸಿ. ಅಶ್ವಥ್ ಕಲಾಭವನ, ಎನ್.ಆರ್ ಕಾಲೊನಿ. ಶನಿವಾರ ಸಂಜೆ 6, ವಿವರಗಳಿಗಾಗಿ ಸಂಪರ್ಕಿಸಿ : 9945518184

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು