ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣಬೇಧ ನೀತಿ: ಜಾಗೃತಿಗಾಗಿ ಗಾಂಧಿ ಸಾಕ್ಷ್ಯಚಿತ್ರ ಬಿಡುಗಡೆ

Last Updated 11 ಜೂನ್ 2020, 11:06 IST
ಅಕ್ಷರ ಗಾತ್ರ

ಮಹಾತ್ಮಗಾಂಧೀಜಿ ಜಗತ್ತಿಗೆ ಬೋಧಿಸಿದ ಅಹಿಂಸೆ ಮತ್ತು ಸತ್ಯಾಗ್ರಹ ಎಲ್ಲ ಕಾಲಕ್ಕೂ ಪ್ರಸ್ತುತ. ಅಸಹಿಷ್ಣುತೆ, ಸಾಮೂಹಿಕ ಹೊಡಿಬಡಿ ಹತ್ಯೆ, ಜನಾಂಗೀಯ ಹತ್ಯೆಗಳು ಹವ್ಯಾಹತವಾಗಿ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಗಾಂಧಿಯ ಬದುಕು ಮತ್ತು ಅವರತತ್ವಗಳು ಹೆಚ್ಚು ಮುನ್ನೆಲೆಗೆ ಬರುತ್ತಿವೆ.

ಆಫ್ರಿಕನ್-ಅಮೆರಿಕನ್ ಕಪ್ಪುವರ್ಣೀಯ ಪ್ರಜೆ ಜಾರ್ಜ್ ಫ್ಲಾಯ್ಡ್‌ ಅವರು ಪೊಲೀಸ್‌ ಕಸ್ಟಡಿಯಲ್ಲಿ ಹತ್ಯೆಯಾದ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಈಗ ಆಕ್ರೋಶ ಭುಗಿಲೆದ್ದಿದೆ. ವರ್ಣಬೇಧ ನೀತಿಯ ವಿರುದ್ಧ ಗಾಂಧಿ ಮುನ್ನುಡಿ ಬರೆದ ಚಳವಳಿಯನ್ನು ನೆನಪಿಸಲು ಮತ್ತು ಗಾಂಧೀಜಿಯವರ ತತ್ವಬೋಧನೆಗಳ ಪ್ರಸ್ತುತತೆಯನ್ನು ಒತ್ತಿ ಹೇಳಲು ಭಾರತೀಯ ಮೂಲದ, ದಕ್ಷಿಣ ಆಫ್ರಿಕಾದ ಚಲನಚಿತ್ರ ನಿರ್ಮಾಪಕರು ಗಾಂಧಿ ಕುರಿತ ಹೊಸ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಮಹಾತ್ಮ ಗಾಂಧಿಯವರ 150ನೇ ಜನ್ಮ ವರ್ಷಾಚರಣೆಯ ನೆನಪಿಗಾಗಿ ರಮೇಶ್ ಶರ್ಮಾ ಅವರು ಬರೆದು ನಿರ್ದೇಶಿಸಿದ ‘ಅಹಿಂಸಾ - ಗಾಂಧಿ: ದಿ ಪವರ್ ಆಫ್ ದಿ ಪವರ್‌ಲೆಸ್’ ಸಾಕ್ಷ್ಯಚಿತ್ರವನ್ನು ಅಂತರರಾಷ್ಟ್ರೀಯ ಖ್ಯಾತಿಯ ದಕ್ಷಿಣ ಆಫ್ರಿಕಾದ ಭಾರತೀಯ ಚಲನಚಿತ್ರ ನಿರ್ಮಾಪಕ ಅನಂತ್ ಸಿಂಗ್ ಅವರ ಕಂಪನಿ ವಿಡಿಯೋವಿಷನ್ ನಿರ್ಮಾಣ ಮಾಡಿದೆ.

ಈ ಸಾಕ್ಷ್ಯಚಿತ್ರವನ್ನು ವಿಶ್ವದಾದ್ಯಂತ ನಡೆಯುವ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್‌19 ಜಾಗತಿಕವಾಗಿ ಹರಡಿದ ಕಾರಣಕ್ಕೆ ಚಲನಚಿತ್ರೋತ್ಸವಗಳು ರದ್ದಾಗಿವೆ. ಇದರಿಂದ ಈ ಸಾಕ್ಷ್ಯಚಿತ್ರ ಪ್ರದರ್ಶನವನ್ನೂ ಮುಂದೂಡಲಾಗಿದೆ. ಆದರೆ, ಟಿ.ವಿ ವಾಹಿನಿಗಳಲ್ಲಿ ಈ ಸಾಕ್ಷ್ಯಚಿತ್ರವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡಲು ಮಾತುಕತೆ ನಡೆಸುತ್ತಿದ್ದೇವೆ ಎಂದು ಸಿಂಗ್‌ ಹೇಳಿದ್ದಾರೆ.

‘ಈ ಸಾಕ್ಷ್ಯಚಿತ್ರದ ‘ಅಹಿಂಸಾ’ ಹಾಡಿನ ಸಾಹಿತ್ಯ ರಚನೆ ಮತ್ತು ಸಂಗೀತ ಸಂಯೋಜನೆ ಯು2 ಸಿಂಗರ್‌ ಬೊನೊ ಮತ್ತು ಎ.ಆರ್‌. ರೆಹಮಾನ್ ಅವರದು. ಈ ಹಾಡನ್ನು ಕೇಳಲು ನಾನು ಸಹ ತುಂಬಾ ಉತ್ಸುಕನಾಗಿದ್ದೇನೆ’ ಎಂದಿದ್ದಾರೆ ಸಿಂಗ್‌.

ದಕ್ಷಿಣ ಆಫ್ರಿಕಾದ ಪೀಟರ್‌ಮಾರಿಟ್ಜ್‌ಬರ್ಗ್ ನಿಲ್ದಾಣದಲ್ಲಿ1893ರ ಜೂನ್‌ 7ರಂದುಗಾಂಧೀಜಿಯವರನ್ನು ಬಿಳಿಯರಿಗೆ ಮೀಸಲಿಟ್ಟ ಬೋಗಿಗೆ ಹತ್ತಿದ ಕಾರಣಕ್ಕೆ ಹೊರದಬ್ಬಿ ಜನಾಂಗೀಯ ತಾರತಮ್ಯ ಮಾಡಲಾಗಿತ್ತು. ಆ ಘಟನೆಯು ಜನಾಂಗೀಯ ತಾರತಮ್ಯದ ವಿರುದ್ಧ ಗಾಂಧೀಜಿ ಆಜೀವ ಹೋರಾಟ ನಡೆಸಲು ಪ್ರೇರಣೆಯಾಯಿತು.ಬಿಳಿಯ ಪೊಲೀಸ್‌ ಅಧಿಕಾರಿಯೊಬ್ಬ ಕಪ್ಪುವರ್ಣೀಯ 46 ವರ್ಷದ ಜಾರ್ಜ್ ಫ್ಲಾಯ್ಡ್‌ ಕೈಗೆ ಕೋಳ ತೊಡಿಸಿ, ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಈ ಘಟನೆಯ ನಂತರ ಜಗತ್ತಿನಾದ್ಯಂತ ‘ನಮ್ಮ ಜೀವಕ್ಕೂ ಬೆಲೆಯಿದೆ’ ಎಂದು ಕಪ್ಪುವರ್ಣೀಯರು ವರ್ಣಬೇಧ ನೀತಿಯ ವಿರುದ್ಧ ಧ್ವನಿ ಎತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT